ರಾಮಕೃಷ್ಣ ದಾಸರಿ
ರಾಯಚೂರು (ಡಿ.15) : ₹5 ಕುರುಕುರೆ ಪ್ಯಾಕೇಟ್‌ನಲ್ಲಿ ಗರಿಗರಿ ರು.500 ನೋಟು ಕಂಡು ಗ್ರಾಮಸ್ಥರು ಅಚ್ಚರಿಕೊಂಡಿರುವ ಘಟನೆ ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹೂನೂರಿನಲ್ಲಿ ನಡೆದಿದೆ.
undefined
ಹೂನೂರು ಗ್ರಾಮದಲ್ಲಿರುವ 4 ಕಿರಾಣಿ ಅಂಗಡಿಯ ಪೈಕಿ ಒಂದರಲ್ಲಿ ಕಳೆದ ಎರಡ್ಮೂರು ದಿನಗಳ ಹಿಂದೆ ಸ್ಥಳೀಯ ಬಾಲಕ 5ರು. ನೀಡಿ ಮ್ಯಾಕ್ಸವಿಟ್ ಕಂಪನಿಯ ಕುರುಕುರೆ (ಚಾಟ್ ಮಸಾಲ)ಯನ್ನು ಖರೀದಿಸಿ ಮನೆಗೆ ಹೋಗಿ ನೋಡಿದಾಗ ಅದರಲ್ಲಿ ರು.500 ಮುಖ ಬೆಲೆಯ ಎರಡು ನೋಟ್ ಪತ್ತೆಯಾಗಿದ್ದು, ಇದನ್ನು ಕಂಡ ಕುಟುಂಬಸ್ಥರು ಕಿರಾಣಿ ಅಂಗಡಿಗೆ ಹೋಗಿ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಕುರುಕುರೆ ಪ್ಯಾಕೇಟ್‌ಗಳನ್ನು ಖರೀದಿಸಿದ್ದಾರೆ.
ಈ ವಿಷಯ ಅರಿತ ನೆರೆಯ ನಿವಾಸಿಗಳು ಸಹ ಪ್ಯಾಕೇಟ್‌ಗಳನ್ನು ಖರೀದಿಸಿ, ಒಂದು ಪ್ಯಾಕೇಟ್‌ನಲ್ಲಿ 1 ರಿಂದ 5 ವರೆಗೆ ರು.500 ನೋಟು ಸಿಕ್ಕಿವೆ. ಒಬ್ಬರಿಗೆ ಸಾವಿರ-ಎರಡು ಸಾವಿರ ರು. ಸಿಕ್ಕರೇ ಮತ್ತೊಬ್ಬರಿಗೆ ಬರೋಬ್ಬರಿ ರು.12,500 ಹೀಗೆ ಒಟ್ಟಾರೆ 30 ರಿಂದ 35 ಸಾವಿರ ರು.ಗಳಷ್ಟು 500 ರು. ಮುಖಬೆಲೆಯ ನೋಟುಗಳು ಪತ್ತೆಯಾಗಿವೆ. ಆರಂಭದಲ್ಲಿ ಕುರುಕುರೆ ಕಂಪನಿಯವರು ಮಕ್ಕಳು ಆಡುವಂತಹ ನಕಲಿ ನೋಟುಗಳನ್ನಿಟ್ಟಿದ್ದಾರೆ ಎಂದು ಭಾವಿಸಿದ್ದ ಜನರು ನಂತರ ಪರಿಶೀಲನೆ ನಡೆಸಿದಾಗ ನಿಜವಾದ ನೋಟುಗಳೇ ಪ್ಯಾಕೇಟ್‌ನಲ್ಲಿ ಬಂದಿರುವುದನ್ನು ಖಚಿತಪಡಿಸಿಕೊಂಡಿದ್ದಾರೆ.
ಬೆಂಗ್ಳೂರಲ್ಲಿ 5.8 ಕೋಟಿ ಮೊತ್ತದ ಜೆರಾಕ್ಸ್ ನೋಟು ಪತ್ತೆ..!
ಮೂಲ ನಿಗೂಢ:
ಹೂನೂರು ಗ್ರಾಮದಲ್ಲಿ ನಾಲ್ಕು ಕಿರಾಣಿ ಅಂಗಡಿಗಳಿವೆ. ಅಲ್ಲಿಗೆ ಮುದಗಲ್, ಕುಷ್ಟಗಿ ಹಾಗೂ ತಾವರೆಗೇರಾದಿಂದ ಸಗಟು ವ್ಯಾಪಾರಸ್ಥರು ಚುರುಚಲು ಪದಾರ್ಥಗಳನ್ನು ಟಂಟಂ ಆಟೋಗಳಲ್ಲಿ ತೆಗೆದುಕೊಂಡು ಬಂದು ಕಿರಾಣಿ ಅಂಗಡಿಗೆ ಹಾಕಿ ಹೋಗುತ್ತಾರೆ. ಇದರಿಂದಾಗಿ ಕುರುಕುರೆ ಪ್ಯಾಕೇಟ್‌ನಲ್ಲಿ ಸಿಕ್ಕ ನೋಟು ಎಲ್ಲಿಂದ ಬಂದಿದೆ ಎನ್ನುವ ಮೂಲ ಸಂಗತಿ ನಿಗೂಢವಾಗಿಯೇ ಉಳಿದಿದೆ.
ಮರುಳಾದ ಮಂದಿ:
ಪ್ಯಾಕೇಟ್‌ನಲ್ಲಿ ನೋಟು ಕಂಡವರು ಆರಂಭದಲ್ಲಿ ಯಾರಿಗೂ ತಿಳಿಯದೆಯೇ ಹೆಚ್ಚಿನ ಸಂಖ್ಯೆಯಲ್ಲಿ ಕುರುಕುರೆಗಳನ್ನು ಖರೀದಿಸಿದ್ದಾರೆ. ನಂತರ ನಿಧಾನವಾಗಿ ಸುದ್ದಿ ಹರಡುತ್ತಿದ್ದಂತೆ ಇಡೀ ಗ್ರಾಮಸ್ಥರು ಮರುಳಾಗಿ ಉಳಿದ ಎಲ್ಲ ಕಿರಾಣಿ ಅಂಗಡಿಗಳಿಗೆ ತೆರಳಿ ಮ್ಯಾಕ್ಸವಿಟ್ ಕಂಪನಿಯ ಜೊತೆಗೆ ವಿವಿಧ ಕಂಪನಿಗಳ ಕುರುಕುರೆ, ಚಾಟ್ ಮಸಾಲೆ ಪದಾರ್ಥಗಳ ಪೊಟ್ಟಣ ಖರೀದಿಸಿ ಹರಿದು ನೋಡಿದ್ದಾರೆ. ಅಲ್ಲದೇ ಅಕ್ಕ-ಪಕ್ಕದ ಹಳ್ಳಿಗಳಿಗೂ ಹೋಗಿ ಕುರುಕುರೆ ಪ್ಯಾಕೇಟ್‌ಗಳನ್ನು ಖರೀದಿಸಿ ಪರಿಶೀಲನೆ ಮಾಡಿದ್ದರಿಂದ ಹೂನೂರು ಸೇರಿ ಸುತ್ತಲಿನ ಹಳ್ಳಿಗಳಲ್ಲಿ ಕುರುಕುರೆ ಪ್ಯಾಕೇಟ್‌ಗಳೆ ಖಾಲಿಯಾಗಿವೆ.
ನಡುರಸ್ತೆಯಲ್ಲಿ 36 ಲಕ್ಷ ರೂ ನಗದು; ನೋಡಿದ ಜನರು ಮಾಡಿದ್ದೇನು ಗೊತ್ತಾ?
ಎರಡ್ಮೂರು ದಿನಗಳ ಹಿಂದೆ ಅಂಗಡಿಯೊಂದರಲ್ಲಿ ಕುರುಕುರೆ ಖರೀದಿಸಿದ ಬಾಲಕನು ಮನೆಗೆ ಹೋಗಿ ನೋಡಿದಾಗ ಪ್ಯಾಕೇಟ್‌ನಲ್ಲಿ 500 ರು. ಸಿಕ್ಕಿದೆ. ಹೀಗೆ ಹಲವರಿಗೆ ಸುಮಾರು 30 ರಿಂದ 35 ವರೆಗು 500ರು.ಗಳ ನೋಟು ದೊರಕಿದೆ. ಕಂಪನಿ ಮಾಲೀಕರು, ಎಲ್ಲಿ ಉತ್ಪನ್ನ ಮಾಡಿರುವುದು, ಸಗಟು ವ್ಯಾಪಾರಿಗಳ ಮಾಹಿತಿ ದೊರಕಿಲ್ಲ.
-ಬಸವರಾಜ ಪಾಟೀಲ್, ಕಿರಾಣಿ ವ್ಯಾಪಾರಿ, ಹೂನೂರು