ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ 50 ಸಾವಿರ ಪುರಸ್ಕಾರ

By Kannadaprabha NewsFirst Published Sep 22, 2019, 10:28 AM IST
Highlights

ಅಂತಿಮ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ತಲಾ 50 ಸಾವಿರ ರು. ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ

ಬೆಂಗಳೂರು [ಸೆ.22]: ಬಿಬಿಎಂಪಿ ಕಾಲೇಜುಗಳ ಅಂತಿಮ ಪದವಿಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗುವ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ತಲಾ 50 ಸಾವಿರ ರು. ಪ್ರತಿಭಾ ಪುರಸ್ಕಾರ ನೀಡಲಾಗುವುದು ಎಂದು ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಇಮ್ರಾನ್‌ ಪಾಷಾ ಘೋಷಿಸಿದ್ದಾರೆ.

ಬಿಬಿಎಂಪಿ ಶಿಕ್ಷಣ ಸ್ಥಾಯಿ ಸಮಿತಿ ವತಿಯಿಂದ ಗುರುವಂದನಾ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಬಿಬಿಎಂಪಿ ಶಾಲಾ, ಕಾಲೇಜುಗಳಲ್ಲಿ ಅಭ್ಯಾಸ ಮಾಡುವವರು ಬಡವ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಾಗಿರುತ್ತಾರೆ. ಅವರ ಸಾಧನೆಯನ್ನು ಪ್ರಶಂಶಿಸುವುದು ನಮ್ಮ ಕರ್ತವ್ಯ. ಹೀಗಾಗಿ ಅವರ ಪ್ರತಿಭೆಯನ್ನು ನೋಡಿ ಪ್ರೋತ್ಸಾಹಿಸಬೇಕಾಗುತ್ತದೆ ಎಂದರು.

ಮೊದಲನೆಯದಾಗಿ ಗುರುಗಳ ಮೌಲ್ಯಗಳ ಬಗ್ಗೆ ಮಾತನಾಡಿದ ಅವರು, ಸಾವಿತ್ರಿ ಬಾಯಿ ಪುಲೆ ಅವರು ಬಡವರು ಮತ್ತು ಹಿಂದುಳಿದವರಿಗೆ ಶಿಕ್ಷಣ ನೀಡಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟವರು. ಅಂಥವರ ಶ್ರಮ ನಮ್ಮೆಲ್ಲರಿಗೂ ದಾರಿ ದೀಪ ಎಂದರು. ಹಾಗೆಯೇ ಶಿಕ್ಷಣ ಕ್ಷೇತ್ರಕ್ಕೆ ಸರ್ವಪಲ್ಲಿ ರಾಧಾಕೃಷ್ಣ ಅವರ ಕೊಡುಗೆಯನ್ನೂ ಸ್ಮರಿಸಿದರು. ನನ್ನ ಅಧಿಕಾರ ಅವಧಿಯಲ್ಲಿ ಅಂದುಕೊಂಡಂತೆ ಸಾಧ್ಯವಾದಷ್ಟು ಬದಲಾವಣೆಗಳನ್ನು ತರಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಉತ್ತಮ ಸಮವಸ್ತ್ರ ಭಾಗ್ಯ, ಶಾಲಾ-ಕಾಲೇಜುಗಳ ದುರಸ್ತಿ, ಶಾಲಾ-ಕಾಲೇಜುಗಳಲ್ಲಿ ನೀರಿನ ಸಮಸ್ಯೆ, ಶೌಚಾಲಯಗಳ ತೊಂದರೆಗಳನ್ನು ನಿವಾರಿಸಲಾಗಿದೆ. ಹಾಗೆಯೇ ಅತಿಥಿ ಉಪನ್ಯಾಸಕರ ಅಹವಾಲುಗಳನ್ನು ಪರಿಗಣಿಸಿ ಸಂಬಳ ಹೆಚ್ಚು ಮಾಡಿರುವುದು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಪ್ರೋತ್ಸಾಹ ಧನ ಹೆಚ್ಚು ಮಾಡಲಾಗಿದೆ ಎಂದು ಇಮ್ರಾನ್‌ ಪಾಷ ಹೇಳಿದರು. ಬಿಬಿಎಂಪಿಯಲ್ಲಿ ಇಂಥ ಹುದ್ದೆ ಅಲಂಕರಿಸಿ ಸೇವೆ ಮಾಡಲು ಅವಕಾಶ ನೀಡಿದ ಜೆಡಿಎಸ್‌ ವರಿಷ್ಠರಿಗೆ ಎಷ್ಟೇ ಧನ್ಯವಾದ ಹೇಳಿದರೂ ಸಾಲದು ಎಂದರು.

ಮೇಯರ್‌ ಗಂಗಾಂಬಿಕೆ ಮಲ್ಲಿಕಾರ್ಜುನ್‌, ಉಪ ಮೇಯರ್‌ ಭದ್ರೇಗೌಡ, ಜೆಡಿಎಸ್‌ ನಾಯಕಿ ನೇತ್ರಾ ನಾರಾಯಣ್‌ ಹಾಗೂ ಆಡಳಿತ ಪಕ್ಷದ ನಾಯಕ ವಾಜೀದ್‌ ಪಾಷ ಭಾಗವಹಿಸಿದ್ದರು.

click me!