5 ಲಕ್ಷ ವಂಚನೆ ಪ್ರಕರಣ: ತುಮಕೂರು ಅಂಚೆ ಇಲಾಖೆ ಉದ್ಯೋಗಿ ಬಂಧನ

By Kannadaprabha NewsFirst Published Dec 25, 2023, 9:23 AM IST
Highlights

ಅನ್‌ಲೈನ್‌ ಒಟಿಪಿ ದುರ್ಬಳಕೆ ಮೂಲಕ 5.28 ಲಕ್ಷ ರು. ವಂಚನೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಇಲ್ಲಿನ ನ್ಯಾಯದಗುಂಟೆ ವಿಭಾಗದ ಅಂಚೆ ಇಲಾಖೆಯ ಉದ್ಯೋಗಿಯೊಬ್ಬರನ್ನು ಶನಿವಾರ ತುಮಕೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

  ಪಾವಗಡ :  ಅನ್‌ಲೈನ್‌ ಒಟಿಪಿ ದುರ್ಬಳಕೆ ಮೂಲಕ 5.28 ಲಕ್ಷ ರು. ವಂಚನೆ ಪ್ರಕರಣದಲ್ಲಿ ತಲೆಮರಿಸಿಕೊಂಡಿದ್ದ ಇಲ್ಲಿನ ನ್ಯಾಯದಗುಂಟೆ ವಿಭಾಗದ ಅಂಚೆ ಇಲಾಖೆಯ ಉದ್ಯೋಗಿಯೊಬ್ಬರನ್ನು ಶನಿವಾರ ತುಮಕೂರು ಸೈಬರ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಆಂಧ್ರಪ್ರದೇಶದ ಕಡಪ ಜಿಲ್ಲೆಯ ರಾಯಚೋಟಿ ತಾಲೂಕಿನ ಸಂಬೆಪಲ್ಲಿ ಮೂಲದ ಮುಂಗಾರ ವಂಸಿಕೃಷ್ಣ (28) ಬಂಧಿತ ಆರೋಪಿ. ಈತ ಪಾವಗಡ ತಾಲೂಕಿನ ನ್ಯಾಯದಗುಂಟೆ ಉಪ ಅಂಚೆ ಕಚೇರಿಯಲ್ಲಿ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದು, 2019ರ ಜುಲೈ 11ರಿಂದ 2019 ಆಗಸ್ಟ್ 26ರವರೆಗೆ ಅಂಚೆ ಕಚೇರಿಯಿಂದ ತನಗೆ ನೀಡಿದ್ದ ಅಧಿಕಾರ ದುರ್ಬಳಕೆ ಮಾಡಿಕೊಳ್ಳುವ ಮೂಲಕ ಐಪಿಪಿಬಿ (ಇಂಡಿಯನ್ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ) ಖಾತೆಗಳ ಮೂಲಕ ಗ್ರಾಹಕರ ಖಾತೆಗಳಿಗೆ ವರ್ಗಾಯಿಸಿ, ಅಲ್ಲಿಂದ ಒಟಿಪಿಯ ಮೂಲಕ 5 ಲಕ್ಷಕ್ಕಿಂತ ಹೆಚ್ಚು ಹಣ ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದರೆನ್ನಲಾಗಿದೆ.

Latest Videos

ಈ ಸಂಬಂಧ 5.28 ಲಕ್ಷ ರು. ವಂಚಿಸಿರುವುದಾಗಿ 2021ರ ಜುಲೈನಲ್ಲಿ ಶಿರಾ ಉಪ ವಿಭಾಗದ ನಿರೀಕ್ಷಕಿ ಪಾವಗಡ ತಾಲೂಕಿನ ಅರಸೀಕೆರೆ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು.

ಈ ಸಂಬಂಧ ಸೈಬರ್‌ ವಿಭಾಗದ ಜಿಲ್ಲಾ ಪೊಲೀಸ್‌ ವರಿಷ್ಟಾಧಿಕಾರಿ ಕೆ.ವಿ. ಅಶೋಕ್ ವಿ. ಮರಿಯಪ್ಪ ಹಾಗೂ ತುಮಕೂರು ಉಪ ವಿಭಾಗದ ಡಿವೈಎಸ್‌ಪಿ ಕೆ.ಆರ್. ಚಂದ್ರಶೇಖರ್ ಮಾರ್ಗದರ್ಶನದಲ್ಲಿ ಸಿಇಎನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ ತನಿಖೆ ಕೈಗೊಂಡು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ತಾಲೂಕಿನ ಆರಸೀಕೆರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಆರೋಪಿ ಮುಂಗಾರ ವಂಸಿಕೃಷ್ಣ ಹಣ ವಂಚಿಸಿ ದುಬೈಗೆ ತೆರಳಿದ್ದು, ಜಿಲ್ಲಾ ಸೈಬರ್‌ ಕ್ರೈಂ ವಿಭಾಗದ ಅಧಿಕಾರಿಗಳು ಆತನ ಪತ್ತೆಗಾಗಿ ಶೋಧ ಕೈಗೊಂಡಿದ್ದರು. ಅಲ್ಲಿಂದ ವಾಪಸ್ಸಾಗಿರುವ ಖಚಿತ ಮಾಹಿತಿ ಮೇರೆಗೆ ತನಿಖೆ ಚುರುಕುಗೊಳಿಸಿದ ಪೊಲೀಸರು, ಕೆಲಸದ ನಿಮಿತ್ತ ಪಾವಗಡಕ್ಕೆ ಆಗಮಿಸಿದ್ದ ಆತನಿಗೆ ಬಲೆ ಬಿಸಿ ಹೆಡೆಮುರಿ ಕಟ್ಟಿದ್ದಾರೆ.

click me!