ಆರ್ಥಿಕ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೊಟ್ಟಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಇವುಗಳ ಸದ್ಬಳಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ತಿಪಟೂರು:ಆರ್ಥಿಕ ಶಕ್ತಿ ಇಲ್ಲದವರಿಗೆ ಶಕ್ತಿ ತುಂಬುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೊಟ್ಟಮಾತಿನಂತೆ ಐದು ಗ್ಯಾರಂಟಿ ಯೋಜನೆಗಳನ್ನು ಹಂತ ಹಂತವಾಗಿ ಜಾರಿಗೆ ತರಲಾಗುತ್ತಿದೆ. ಇವುಗಳ ಸದ್ಬಳಕೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕೆಂದು ಶಾಸಕ ಕೆ. ಷಡಕ್ಷರಿ ತಿಳಿಸಿದರು.
ನಗರದ ಬೆಸ್ಕಾಂ ಉಪ ವಿಭಾಗ ಕಚೇರಿಯ ಆವರಣದಲ್ಲಿ ಶನಿವಾರ ಯೋಜನೆಯನ್ನು 200 ಯುನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡಿದ ಗ್ರಾಹಕರಿಗೆ ಜೀರೋ ವಿದ್ಯುತ್ ಬಿಲ್ ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ರಾಜ್ಯದಾದ್ಯಂತ ಏಕಕಾಲದಲ್ಲಿ ಗೃಹಜ್ಯೋತಿಗೆ ಚಾಲನೆ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆ ನೀಡಿದ್ದು ಅದರಂತೆ ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಚಾಲನೆ ನೀಡಲಾಗುತ್ತಿದೆ. ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಪಕ್ಷ ಹೇಳಿದಂತೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದ್ದು, ಅನ್ನಭಾಗ್ಯ, ಶಕ್ತಿ ಯೋಜನೆ, ಗೃಹಲಕ್ಷ್ಮೀ ಮತ್ತು ಗೃಹಜ್ಯೋತಿಗಳಿಗೆ ಚಾಲನೆ ನೀಡಿದ್ದು, ಮುಂದಿನ ದಿನಗಳಲ್ಲಿ ಯುವನಿಧಿಗೆ ಚಾಲನೆ ನೀಡಲಾಗುವುದು. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿಯ ಕೊರತೆಯಿಂದ ಹಣವನ್ನು ಖಾತೆಗಳಿಗೆ ವರ್ಗಾವಣೆ ಮಾಡಿದ್ದು ಮೂರು ತಿಂಗಳ ನಂತರ 10 ಕೆ.ಜಿ. ಅಕ್ಕಿಯನ್ನು ನೀಡಲಾಗುವುದು. ಬಿಜೆಪಿ ಸರ್ಕಾರ ಅಕ್ಕಿ ವಿಷಯದಲ್ಲಿ ರಾಜಕೀಯ ಮಾಡಿ ಬಡವರ ಹಸಿವಿನ ಜೊತೆ ಆಟವಾಡುತ್ತಿದ್ದರೂ ನಮ್ಮ ಸರ್ಕಾರ ಬೇರೆ ರಾಜ್ಯಗಳಿಂದ ಅಕ್ಕಿಯನ್ನು ತರಿಸಿಕೊಂಡು ಹೇಳಿದಂತೆ ಅಕ್ಕಿಯನ್ನು ನೀಡಲು ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
ಬೆಸ್ಕಾಂ ಕಾರ್ಯನಿರ್ವಾಹಕ ಎಂಜಿನಿಯರ್ ಸೋಮಶೇಖರಗೌಡ ಮಾತನಾಡಿ, ರಾಜ್ಯದೆಲ್ಲೆಡೆ ಗೃಹಜ್ಯೋತಿಗೆ ಚಾಲನೆ ನೀಡಲಾಗಿದ್ದು, ತಾಲೂಕಿನಲ್ಲಿ 68,586 ಗೃಹಬಳಕೆದಾರರಿದ್ದು ಅದರಲ್ಲಿ 200 ಯುನಿಟ್ ಬಳಕೆಗಾಗಿ ಸುಮಾರು 68,128 ಗ್ರಾಹಕರು ಯೋಜನೆ ವ್ಯಾಪ್ತಿಗೆ ಬರುತ್ತಾರೆ. 458 ಗೃಹಬಳಕೆ ಗ್ರಾಹಕರು ಯೋಜನೆಗೆ ಅನ್ವಯವಾಗಲ್ಲ. ಕಳೆದ ವಾರ್ಷಿಕದ ಪ್ರತಿ ತಿಂಗಳ ವಿದ್ಯುತ್ ಬಿಲ್ ಪಾವತಿ ಮಾಡಿಲ್ಲದ ಕಾರಣ ಇವರಿಗೆ ಯೋಜನೆ ಅನ್ವಯಿಸುತ್ತಿಲ್ಲ. ಈಗಾಗಲೇ ಶೇ.84ರಷ್ಟುಗ್ರಾಹಕರು ಈ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದು ಉಳಿದವರು ನೋಂದಣಿಯಾಗಿÃಲ್ಲ. ನೋಂದಣಿಗೆ ಯಾವುದೇ ಅಂತಿಮ ದಿನಾಂಕವಿಲ್ಲ, ಯಾವಾಗಬೇಕಾದರೂ ನೋಂದಣಿ ಮಾಡಿಸಿಕೊಳ್ಳಬಹುದು. ತಾಲೂಕಿನಲ್ಲಿ 28 ಸಾವಿರದ 40 ಕೃಷಿ ಪಂಪ್‌ಸೆಟ್ ಬಳಕೆದಾರರಿದ್ದು, 2908 ಕೈಗಾರಿಕೆಗಳಿವೆ. ಉಪವಿಭಾಗದಲ್ಲಿ ಬಂಡವಾಳಶಾಹಿ ಕಾಮಗಾರಿಗಳು ನಡೆದಿದ್ದು ಸುಮಾರು 34 ಸಂಖ್ಯೆಯ ಹೊಸ ವಿದ್ಯುತ್ ಲೈನ್ ಎಳೆಯಲಾಗಿದ್ದು, 54 ಸಂಖ್ಯೆ ಫೀಡರ್‌ಗಳಿಗೆ ಹೊಸ ಕಂಡೆಕ್ಟರ್‌ಗಳನ್ನು ಅಳವಡಿಸಲಾಗಿದೆ. ಅಕ್ರಮ ಸಕ್ರಮ ಯೋಜನೆಯಲ್ಲಿ 3500 ರೈತರಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು ಬೆಸ್ಕಾಂ ಇಲಾಖೆ ಉತ್ತಮವಾಗಿ ಕೆಲಸ ನಿರ್ವಹಿಸಿಕೊಂಡು ಹೋಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಸುದರ್ಶನ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ, ಸ.ಕಾ.ನಿ. ಎಂಜಿನಿಯರ್ ಮನೋಹರ್, ಲೆಕ್ಕಾಧಿಕಾರಿ ಕುಮಾರಸ್ವಾಮಿ, ಆಂತರಿಕ ಪರಿಶೋಧನೆ ಲೆಕ್ಕಾಧಿಕಾರಿ ಪ್ರಕಾಶ್, ಕೆಪಿಟಿಸಿಎಲ್ ನೌಕರರ ಸಂಘದ ಕೇಂದ್ರ ಕಾರ್ಯಕಾರಿ ಸದಸ್ಯ ನರಸಿಂಹಮೂರ್ತಿ, ಕಂಪನಿ ಕಾರ್ಯದರ್ಶಿ ಹಾಗೂ ಪರಿಶಿಷ್ಟಜಾತಿ ಮತ್ತು ವರ್ಗಗಳ ಕಲ್ಯಾಣ ಸಂಸ್ಥೆಯ ರಾಜಶೇಖರಯ್ಯ, ಕೆಪಿಟಿಸಿಎಲ್ ನೌಕಕರ ಸಂಘದ ಅಧ್ಯಕ್ಷ ಮರುಳಸಿದ್ದಸ್ವಾಮಿ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ಗಳಾದ ಜಯಪ್ಪ, ಹರಿಹರಪ್ಪ, ಶಿವನಾಗೇಂದ್ರ, ಸೇರಿದಂತೆ ಎಲ್ಲಾ ಶಾಖಾ ಉಪವಿಭಾಗಗಳ ಸಿಬ್ಬಂದಿ, ಗ್ರಾಹಕರು ಮತ್ತು ಗುತ್ತಿಗೆದಾರರು ಭಾಗವಹಿಸಿದ್ದರು.
ಕೆಲವರು ಗ್ಯಾರಂಟಿ ಯೋಜನೆಗಳು ಕೆಲವು ದಿನಗಳವರೆಗೆ ಮಾತ್ರ ಎಂದು ಜನರಲ್ಲಿ ಅಪಪ್ರಚಾರ ಮಾಡುತ್ತಿದ್ದರೂ ನಮ್ಮ ಸರ್ಕಾರ 5 ವರ್ಷಗಳ ಕಾಲ ಯಾವುದೇ ಯೋಜನೆಗಳನ್ನು ನಿಲ್ಲಿಸುವುದಿಲ್ಲ. ಪೊಳ್ಳು ಮಾತಿಗೆ ಯಾರೂ ಕಿವಿಗೊಡದೆ ಸರ್ಕಾರ ನೀಡುತ್ತಿರುವ ಗ್ಯಾರಂಟಿ ಯೋಜನೆಗಳ ಫಲವನ್ನು ಪಡೆದುಕೊಳ್ಳಬೇಕು. ತಾಲೂಕಿಗೆ 60 ಮೆಗಾವ್ಯಾಟ್ ವಿದ್ಯುತ್ ಅವಶ್ಯಕತೆ ಇದ್ದು, ಈ ನಿಟ್ಟಿನಲ್ಲಿ ಸೋಲಾರ್ ಪ್ಲಾಂಟ್ ಅಳವಡಿಕೆ ಮಾಡುವ ಚಿಂತನೆ ಇದ್ದು ಈ ಬಗ್ಗೆ ಸಂಬಂಧಪಟ್ಟಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ವಿದ್ಯುತ್ ಜೊತೆ ಸೋಲಾರ್ ವಿದ್ಯುತ್ ಬಳಕೆ ಮಾಡಿಕೊಳ್ಳಬಹುದಾಗಿದ್ದು ರೈತರಿಗೆ ಹಾಗೂ ಗ್ರಾಹಕರಿಗೆ ಯಾವುದೇ ಕೊರತೆ ಬಾರದಂತೆ ಮುಂದಿನ ದಿನಗಳಲ್ಲಿ ವಿದ್ಯುತ್ ನೀಡಲಾಗುವುದು.