ಹುಡುಗಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ 41 ಲಕ್ಷ ರುಪಾಯಿ ವಂಚಿಸಿದ್ದ ಯುವಕನನ್ನು ರಾಮನಗರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ರಾಮನಗರ : ಹುಡುಗಿ ಹೆಸರಿನಲ್ಲಿ ವ್ಯಕ್ತಿಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿ 41 ಲಕ್ಷ ರುಪಾಯಿ ವಂಚಿಸಿದ್ದ ಯುವಕನನ್ನು ರಾಮನಗರ ಸಿಇಎನ್ ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ದಾಸರಹಳ್ಳಿಯ ರವಿಕುಮಾರ್(24) ಬಂಧಿತ ಆರೋಪಿ. ಮೂಲತಃ ಕುಣಿಗಲ್ ತಾಲೂಕಿನ ಕಗ್ಗೇರಿಯವನು. ಬೆಂಗಳೂರಿನಲ್ಲಿ ನೆಲೆಸಿದ್ದ ಆರೋಪಿ, ದ್ವಿತೀಯ ಪಿಯುಸಿ ಓದಿದ್ದಾನೆ. ಖಾಸಗಿ ಡಾಟಾ ಬೇಸ್ ಕಂಪನಿಯಲ್ಲಿ ಕೆಲಸ ಮಾಡಿದ್ದ ಆತ ತಂತ್ರಜ್ಞಾನದಲ್ಲಿ ನಿಪುಣನಾಗಿದ್ದನಲ್ಲದೆ, ಹೆಣ್ಣಿನ ಧ್ವನಿಯಲ್ಲಿ ಮಾತನಾಡುವ ಕಲೆ ಕರಗತ ಮಾಡಿಕೊಂಡಿದ್ದನು.
ಈ ಎರಡು ಕೌಶಲ್ಯಗÜಳನ್ನು ಬಳಸಿಕೊಂಡು ಪುರುಷರನ್ನು ಬಲೆಗೆ ಬೀಳಿಸಿಕೊಂಡು, ಬ್ಲ್ಯಾಕ್‌ಮೇಲ್ ಮಾಡಿ ಹಣ ಸುಲಿಗೆ ಮಾಡುತ್ತಿದ್ದನು. ಈ ಕೃತ್ಯಕ್ಕಾಗಿ ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಗೀತಾ ಸೆಕ್ಸಿ ಎಂಬ ಹೆಸರಿನಲ್ಲಿ ಖಾತೆ ತೆರೆದಿದ್ದನು. ಪುರುಷರಿಗೆ ತಾನೇ ರಿಕ್ವೆಸ್ಟ್ ಕಳುಹಿಸಿ ಸ್ನೇಹಿತರನ್ನಾಗಿ ಮಾಡಿಕೊಳ್ಳುತ್ತಿದ್ದನು. ಯುವತಿ ಹೆಸರಿನಲ್ಲಿ ಪುರುಷರೊಂದಿಗೆ ಸೆಕ್ಸ್ ಚಾಟಿಂಗ್ ಮಾಡುತ್ತಿದ್ದ ಈತ, ನಂತರ ಅವರ ಮೊಬೈಲ್ ಸಂಖ್ಯೆ ಪಡೆದು ಹೆಣ್ಣಿನ ಧ್ವನಿಯಲ್ಲಿ ಗಂಟೆಗಟ್ಟಲೆ ಮಾತನಾಡುತ್ತಿದ್ದನು. ವಿವಿಧ ಕಾರಣಗಳನ್ನು ಹೇಳಿ ಹಣ ಕೀಳುತ್ತಿದ್ದನು. ಅದೇ ರೀತಿ, ದೂರುದಾರ ಹಾರೋಹಳ್ಳಿಯ ರಾಜೇಶ್ ಅವರನ್ನು ಸ್ನೇಹಿತರನ್ನಾಗಿ ಮಾಡಿಕೊಂಡಿದ್ದ ಆರೋಪಿ ರವಿಕುಮಾರ್, ಅವಿವಾಹಿತರಾಗಿದ್ದ ಅವರನ್ನು ಮದುವೆಯಾಗುವುದಾಗಿ ನಂಬಿಸಿದ್ದನು.
ನೇರವಾಗಿ ಭೇಟಿಯಾದರೆ ತನ್ನ ಗುರುತು ಸಿಗುತ್ತದೆ ಎಂದು ಭೇಟಿಗೆ ನಿರಾಕರಿಸುತ್ತಿದ್ದನು. ತಮ್ಮ ಕುಟುಂಬದಲ್ಲಿ ಸಮಸ್ಯೆ ಇದೆ ಎಂದು ಸುಳ್ಳು ಹೇಳಿ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಇದನ್ನು ನಂಬಿದ ರಾಜೇಶ್, ಹಂತಹಂತವಾಗಿ ಫೋನ್ ಪೇ ಮತ್ತು ಗೂಗಲ್ ಪೇ ಮೂಲಕ ಹಣ ಪಾವತಿಸುತ್ತಿದ್ದರು. ಮತ್ತಷ್ಟುಹಣಕ್ಕೆ ಬೇಡಿಕೆ ಇಟ್ಟಾಗ ರಾಜೇಶ್ ನಿರಾಕರಿಸಿದ್ದರು. ಆಗ ರವಿಕುಮಾರ್, ಆ್ಯಪ್‌ವೊಂದರಲ್ಲಿ ರಾಜೇಶ್ ಅವರ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ವಾಟ್ಸ್‌ಪ್‌ಗೆ ಕಳುಹಿಸಿದ್ದನು. ಹಣ ಕೊಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಮರ್ಯಾದೆ ಕಳೆಯುವುದಾಗಿ ಬ್ಲ್ಯಾಕ್‌ಮೇಲ್ ಮಾಡಲಾರಂಭಿಸಿದ್ದನು. ಈ ರೀತಿ ಆರು ತಿಂಗಳಲ್ಲಿ 41 ಲಕ್ಷ ವಸೂಲಿ ಮಾಡಿದ್ದನು. ಆತನ ಕಾಟಕ್ಕೆ ಬೇಸತ್ತ ರಾಜೇಶ್ ರಾಮನಗರ ಸಿಇಎನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ರಾಜೇಶ್ ಅವರೊಂದಿಗೆ ಆರೋಪಿ ಮಾತನಾಡುತ್ತಿದ್ದ ಮೊಬೈಲ್ ಸಂಖ್ಯೆಯ ಕರೆ ವಿವರ ಮತ್ತು ವಾಟ್ಸ್‌ಪ್ ಚಾಟಿಂಗ್ ಸಂಖ್ಯೆಯ ಜಾಡು ಹಿಡಿದು ಆತನ ಪತ್ತೆಗೆ ಕಾರ್ಯಾಚರಣೆಗೆ ಸಿಇಎನ್ ಪೊಲೀಸರು ಇಳಿದರು. ಕೊನೆಗೆ ದಾಸರಹಳ್ಳಿಯ ಮೆಟ್ರೊ ಸ್ಟೇಷನ್ ಬಳಿಯ ಪೇಯಿಂಗ್ ಗೆಸ್ಟ್‌ನಲ್ಲಿದ್ದ ಆರೋಪಿಯನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾದರು.
ಅಕ್ರಮ ಸಂಪಾದನೆ
ಆರೋಪಿ ರವಿಕುಮಾರ್‌ನಲ್ಲಿ ಹೆಣ್ಣಿನ ಭಾವನೆಗಳು ಹೆಚ್ಚಾಗಿದ್ದವು. ಇದರಿಂದ ಮುಜುಗರಕ್ಕೀಡಾಗಿದ್ದ ಕುಟುಂಬದವರು ಆತನನ್ನು ಮನೆಯಿಂದ ಹೊರ ಹಾಕಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ್ದ ಆತ, ಅದನ್ನು ಬಿಟ್ಟು ಬ್ಲ್ಯಾಕ್‌ಮೇಲ್ ಮಾಡಿ ಹಣ ಸಂಪಾದಿಸುವ ಕೃತ್ಯಕ್ಕೆ ಕೈ ಹಾಕಿದ್ದನ್ನು ವಿಚಾರಣೆ ಸಂದರ್ಭದಲ್ಲಿ ಬಾಯ್ಬಿಟ್ಟಿದ್ದಾನೆ.
ಸುಂದರ ಯುವತಿಯರ ಫೋಟೋ ಬಳಕೆ
ಫೇಸ್‌ಬುಕ್‌ನಲ್ಲಿ ಪರಿಚಯವಾಗುತ್ತಿದ್ದ ಪುರುಷರಿಗೆ ಆರೋಪಿ ರವಿಕುಮಾರ್, ಗೂಗಲ್‌ನಲ್ಲಿ ಸಿಗುತ್ತಿದ್ದ ಸುಂದರ ಯುವತಿಯವರ ಫೋಟೊಗಳನ್ನು ಕಳುಹಿಸಿ ಅದು ತಾನೇ ಎಂದು ನಂಬಿಸುತ್ತಿದ್ದನು. ಸುಂದರಿಯ ಮೋಹಕ್ಕೆ ಮಾರು ಹೋದವರು, ಆತನ ಬ್ಲಾಕ್‌ಮೇಲ್ ಜಾಲಕ್ಕೆ ಬೀಳುತ್ತಿದ್ದರು. ಈ ರೀತಿ ಬಂದ ಹಣದಲ್ಲಿ ರವಿಕುಮಾರ್ ಯುವಕರೊಂದಿಗೆ ಟ್ರಿಪ್ ಹೋಗಿ ಮೋಜು, ಮಸ್ತಿ ಮಾಡುತ್ತಿದ್ದನು.