ಶಿವಮೊಗ್ಗ (ನ.7) : ಜಿಲ್ಲೆಯ ನೆಟ್‌ವರ್ಕ್ ಸಮಸ್ಯೆ ನಿವಾರಣೆಗೆ ಕೇಂದ್ರ ಸರ್ಕಾರವು 54 ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್ಗಳನ್ನು ಮಂಜೂರು ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಪ್ರಾಣ ರಕ್ಷಣೆ ಮಾಡುವ ವೈದ್ಯರಿಗೆ ಆಭಾರಿ: ಸಂಸದ ಬಿ.ವೈ.ರಾಘವೇಂದ್ರ
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಿವಮೊಗ್ಗದಲ್ಲಿ ನೆಟ್‌ವರ್ಕ್ ಸಮಸ್ಯೆಯಿಂದಾಗಿ ಹಲವು ಗ್ರಾಮಗಳ ಜನರಿಗೆ ಸಾಕಷ್ಟುತೊಂದರೆಯಾಗಿದೆ. ವಿದ್ಯಾರ್ಥಿಗಳು ನೆಟ್‌ವರ್ಕ್ ಸಮಸ್ಯೆಯಿಂದ ಬಳಲಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಸಲುವಾಗಿ ದೂರಸಂಪರ್ಕ ವ್ಯವಸ್ಥೆಯಿಂದ ವಂಚಿತವಾದ 96 ಗ್ರಾಮಗಳನ್ನು ಗುರುತಿಸಿ, ಆ ಗ್ರಾಮಗಳಿಗೆ ತುರ್ತಾಗಿ ದೂರಸಂಪರ್ಕ ವ್ಯವಸ್ಥೆ ಕಲ್ಪಿಸುವಂತೆ ಕಳೆದ ಆಗಸ್ಟ್‌ನಲ್ಲಿ ಕೇಂದ್ರ ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಮನವಿ ಸಲ್ಲಿಸಲಾಗಿತ್ತು. ತಮ್ಮ ಮನವಿಗೆ ಸ್ಪಂದಿಸಿರುವ ಸಚಿವರು 54 ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್ಗಳನ್ನು ಮಂಜೂರು ಮಾಡಿದ್ದಾರೆ ಎಂದು ತಿಳಿಸಿದರು.
ಆತ್ಮನಿರ್ಭರ ಭಾರತದ 4ಜಿ ಟೆಕ್ನಾಲಜಿ ಯೋಜನೆಯಡಿ ದೇಶದಾದ್ಯಂತ ನೆಟ್ವರ್ಕ್ ಇಲ್ಲದ ಕುಗ್ರಾಮಗಳಿಗೆ ಅತ್ಯಾಧುನಿಕ ದೂರಸಂಪರ್ಕ ನೀಡಲು 26,136 ಕೋಟಿ ವೆಚ್ಚದ 4ಜಿ ಮೊಬೈಲ್ ಸರ್ವಿಸ್ ಯೋಜನೆ ಮಂಜೂರು ಮಾಡಲಾಗಿದೆ. ಈ ಯೋಜನೆಯಡಿ ದೇಶದ 24,680 ಕುಗ್ರಾಮಗಳಿಗೆ 4ಜಿ ಮೊಬೈಲ್ ಸರ್ವಿಸ್ ನೀಡಲಾಗುವುದು. ಆತ್ಮನಿರ್ಭರ ಭಾರತ ಯೋಜನೆಯ ಯೂನಿವರ್ಸಲ್ ಸರ್ವಿಸ್ ಆಬ್ಲಿಗೇಷನ್ ಫಂಡ್(ಯುಎಸ್‌ಒಎಫ್) ನಿಂದ ಬಿಎಸ್‌ಎನ್‌ಎಲ್ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಿವರಿಸಿದರು.
ಮೊದಲ ಹಂತದಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 54 ಅತ್ಯಾಧುನಿಕ ದೂರಸಂಪರ್ಕ ವ್ಯವಸ್ಥೆಯಾದ 4ಜಿ ಟವರ್ಗಳನ್ನು ಮಂಜೂರು ಮಾಡಲಾಗಿದೆ. ಹೊಸನಗರ-24, ಸಾಗರ-12, ಶಿವಮೊಗ್ಗ-3, ತೀರ್ಥಹಳ್ಳಿ-11 ಮತ್ತು ಬೈಂದೂರು-4 ಒಟ್ಟು 54 ಟವರ್‌ಗಳನ್ನು ಮಂಜೂರು ಮಾಡಲಾಗಿದೆ. ಇನ್ನುಳಿದ ಗ್ರಾಮಗಳನ್ನು ಅತೀ ಶೀಘ್ರದಲ್ಲಿ ಈ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳುವುದಾಗಿ ಕೇಂದ್ರದ ಸಚಿವರು ಭರವಸೆ ನೀಡಿದ್ದಾರೆ ಎಂದು ಹೇಳಿದರು.
22 ಬ್ಯಾಟರಿ ಸೆಟ್ ಮಂಜೂರಾತಿ:
ಹಾಲಿ ಇರುವ ಬ್ಯಾಟರಿ ಬ್ಯಾಕ್‌ಅಪ್ ಇಲ್ಲದೇ ಆಗಾಗ ದೂರ ಸಂಪರ್ಕ ವ್ಯವಸ್ಥೆಯಲ್ಲಿ ಆಗುತ್ತಿರುವ ಅಡಚಣೆ ಕುರಿತು ಸಚಿವರ ಗಮನಕ್ಕೆ ತರಲಾಗಿತ್ತು. ಇದಕ್ಕಾಗಿ ಅವರು 22 ಬ್ಯಾಟರಿ ಸೆಟ್ಗಳ ಮಂಜೂರಾತಿ ನೀಡಿರುವುದಲ್ಲದೇ, ಇನ್ನುಳಿದಂತೆ ಇಡೀ ಜಿಲ್ಲೆಯಾದ್ಯಂತ ದೂರಸಂಪರ್ಕ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ 104 ಬ್ಯಾಟರಿ ಸೆಟ್‌ಗಳ ಮಂಜೂರಾತಿಗಾಗಿ ಕ್ರಮ ಕೈಗೊಂಡಿರುವುದಾಗಿ ಕೇಂದ್ರ ಸಚಿವರು ತಿಳಿಸಿದ್ದಾರೆ ಎಂದರು.
ಗ್ರಾಪಂ ವ್ಯಾಪ್ತಿಗೆ ಅಂತರ್ಜಾಲ ವ್ಯವಸ್ಥೆ:
ದೂರಸಂಪರ್ಕ ಕ್ಷೇತ್ರದಲ್ಲಿ ಹಲವಾರು ಸುಧಾರಣಾ ಕ್ರಮಗಳು ಜಾರಿಯಲ್ಲಿದ್ದು, ಭಾರತ್ ನೆಟ್ ವ್ಯವಸ್ಥೆಯಡಿಯಲ್ಲಿ ಪ್ರತಿ ಗ್ರಾಮ ಪಂಚಾಯಿತಿಗಳಿಗೂ ಅತ್ಯಂತ ಸುಧಾರಿತ ಅಂತರ್ಜಾಲ ಸಂಪರ್ಕ ಕಲ್ಪಿಸಲಾಗುತ್ತಿದ್ದು, ಈಗಾಗಲೇ 151 ಗ್ರಾಪಂಗಳಿಗೆ ನೀಡಲಾಗಿದೆ. ಉಳಿದ ಗ್ರಾ.ಪಂ ಗಳಿಗೂ ಆದಷ್ಟುಶೀಘ್ರವಾಗಿ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಪೈಲಟ್‌ಯೋಜನೆಗೆ ಸಾಗರ ಆಯ್ಕೆ:
ಮಲೆನಾಡಿನ ಪ್ರದೇಶವಾದ ಶಿವಮೊಗ್ಗ ಜಿಲ್ಲೆಯಲ್ಲಿನ ನೆಟ್‌ವರ್ಕ್ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದರೆ ಮೇರೆಗೆ ಕೇಂದ್ರ ಸರ್ಕಾರವು ಭಾರತ್‌ನೆಟ್ ಉದ್ಯಮಿ(ಬಿಎನ್‌ಯು) ಯೋಜನೆ ಅಡಿಯಲ್ಲಿ ದೇಶದ ನಾಲ್ಕು ಬ್ಲಾಕ್‌ಗಳಲ್ಲಿ ಪೈಲಟ್ ಯೋಜನೆಯಾಗಿ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕವನ್ನು ಬಿಎಸ್‌ಎನ್‌ಎಲ್ ವತಿಯಿಂದ ಕಾರ್ಯಗತಗೊಳಿಸಲು ತೀರ್ಮಾನಿಸಿದ್ದು, ಅದರಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರ ಬ್ಲಾಕ್ ಆಯ್ಕೆ ಮಾಡಲಾಗಿದೆ.
ವಿವಿಧ ಆಪರೇಟರ್‌ಗಳಿಂದ ಪಡೆಯಲಾದ ಲೆವಿ ಮೊತ್ತವನ್ನು ಯುಎಸ್‌ಒಎಫ್ ಅಡಿಯಲ್ಲಿ ವಿನಿಯೋಗಿಸಿ, ದೇಶದ ವಿವಿಧೆಡೆ ಹೈಸ್ಪೀಡ್ ಇಂಟರ್ನೆಟ್ ಸಂಪರ್ಕ ಕಲ್ಪಿಸಲಾಗುತ್ತಿದೆ. ಈ ಯೋಜನೆಯಡಿ ಸಂಪರ್ಕ ಪಡೆಯಲು ಯಾವುದೇ ವೆಚ್ಚ ಇರುವುದಿಲ್ಲ. ಉಚಿತವಾಗಿ ಮೊಡೆಮ್ ಒದಗಿಸಲಾಗುತ್ತದೆ. 200 ಎಂಬಿಪಿಎಸ್ ವರೆಗಿನ ಸ್ಪೀಡ್ ಲಭ್ಯವಿದ್ದು, ಮೊದಲ 75 ದಿನಗಳವರೆಗೆ ಉಚಿತವಾಗಿದ್ದು, ನಂತರ ಕೇವಲ 275 ರು. ಮಾತ್ರ ಶುಲ್ಕ ಪಡೆಯಲಾಗುವುದು. ಈ ಯೋಜನೆಯನ್ನು ಡಿಸೆಂಬರ್ ಅಂತ್ಯದೊಳಗೆ ಕಾರ್ಯಗತಗೊಳಿಸಲು ನಿರ್ಧರಿಸಲಾಗಿದೆ ಎಂದರು.
ಈ ಯೋಜನೆಯಿಂದಾಗಿ ಮಲೆನಾಡಿನ ಗುಡ್ಡಗಾಡು ಮತ್ತು ಕುಗ್ರಾಮಗಳಲ್ಲಿ ತುಂಬಾ ದಿನಗಳಿಂದ ಕಂಡು ಬರುತ್ತಿದ್ದ ಇಂಟರ್ನೆಟ್ ಸಮಸ್ಯೆ ದೂರವಾಗಲಿದೆ. ಅಲ್ಲದೇ ಈ ಯೋಜನೆಯ ಯಶಸ್ವಿಯ ನಂತರ ಇದನ್ನು ಜಿಲ್ಲೆಯ ವಿವಿಧ ಬ್ಲಾಕ್‌ಗಳಿಗೂ ವಿಸ್ತರಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜನರಲ್ ಮ್ಯಾನೇಜರ್ ಧನಂಜಯಕುಮಾರ್ ತ್ರಿಪಾಠಿ, ಡೆಪ್ಯುಟಿ ಜನರಲ್ ಮ್ಯಾನೇಜರ್‌ಗಳಾದ ಕೃಷ್ಣ ಮೊಗೇರ್, ಎಚ್.ಎಸ್.ವೆಂಕಟೇಶ್, ಶೇಷಗಿರಿ ಇದ್ದರು.
-ಶಿವಮೊಗ್ಗದಲ್ಲಿ ಶೀಘ್ರದಲ್ಲೇ ವೆಲ್‌ನೆಸ್ ಸೆಂಟರ್
ಕೇಂದ್ರ ಸರ್ಕಾರಿ ಮತು ನಿವೃತ್ತಿ ಹೊಂದಿರುವ ನೌಕರರ ಆರೋಗ್ಯದ ದೃಷ್ಟಿಯಿಂದ ಶಿವಮೊಗ್ಗದಲ್ಲಿ ಸಿಜಿಹೆಚ್‌ಎಸ್ ಪ್ರಯೋಜನವನ್ನು ಪಡೆಯಲು ಅನುಕೂಲವಾಗುವಂತೆ ಒಂದು ವೆಲ್ ನೆಸ್ ಸೆಂಟರ್ ಪ್ರಾರಂಭಿಸಲು ಕೇಂದ್ರ ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವೀಯ ಅವರಿಗೆ ಮನವಿ ಸಲ್ಲಿಸಲಾಗಿದ್ದು, ಶೀಘ್ರದಲ್ಲೇ ಶಿವಮೊಗ್ಗದಲ್ಲಿ ವೆಲ್‌ನೆಸ್ ಸೆಂಟರ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಕೇಂದ್ರ ಆರೋಗ್ಯ ಸಚಿವರು ಭರವಸೆ ನೀಡಿದ್ದಾರೆ ಎಂದು ಸಂಸದರು ತಿಳಿಸಿದರು.
ಚುನಾವಣೆ ನಂತರ ರಾಜ್ಯದಲ್ಲೂ ಕಾಂಗ್ರೆಸ್ ಹೆಸರಿರಲ್ಲ; ಬಿ.ವೈ.ರಾಘವೇಂದ್ರ
ಈ ವೆಲ್‌ನೆಸ್ ಸೆಂಟರ್ ಪ್ರಾರಂಭಗೊಂಡರೆ ಬಿಎಸ್‌ಎನ್‌ಎಲ್‌ನ 950, ಪೋಸ್ಟಲ್‌ನ 1250, ಆದಾಯ ತೆರಿಗೆ ಇಲಾಖೆಯ 157, ಕೇಂದ್ರ ಅಬಕಾರಿಯ 72, ಆಹಾರ ನಿಗದ 163, ಇತರೆ ಕೇಂದ್ರ ಇಲಾಖೆ ಕಚೇರಿಯಿಂದ 762 ಸೇರಿದಂತೆ ಅಂದಾಜು 3354 ನೌಕರರಿಗ ವೈದ್ಯಕೀಯ ಸೌಲಭ್ಯ ಪಡೆಯಲು ಅನುಕೂಲವಾಗಲಿದೆ ಎಂದರು.