ಚಿಕ್ಕಮಗಳೂರು: ಕಾಡಾನೆ ದಾಳಿಗೆ ಮತ್ತೊಂದು ಬಲಿ, ಭುಗಿಲೆದ್ದ ಜನರ ಆಕ್ರೋಶ

By Girish GoudarFirst Published Nov 20, 2022, 8:00 PM IST
Highlights

ಗದ್ದೆಯಲ್ಲಿ ಹುಲ್ಲುಕೊಯ್ಯಲು ತೆರಳಿದ್ದಾಗ ಕಾಡಾನೆ ದಾಳಿಯಿಂದ ಮಹಿಳೆ ಸಾವು, 45 ವರ್ಷದ ಶೋಭಾ ಸ್ಥಳದಲ್ಲೇ ಸಾವು, ಮೂಡಿಗೆರೆ ತಾಲೂಕಿನ ಹುಲ್ಲೇಮನೆ ಗ್ರಾಮದಲ್ಲಿ ನಡೆದ ಘಟನೆ. 
 

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ನ.20):  ಮಲೆನಾಡಿನ ಜನರಲ್ಲಿ ಪ್ರಾಣ ಭಯದಲ್ಲಿ ಬದುಕುವ ಸ್ಥಿತಿ ನಿರ್ಮಾಣವಾಗಿದೆ. ಇನ್ನೇನ್ ಮಾಡೋದು. ಆನೆ ದಾಳಿಗೆ ತಿಂಗಳಿಗೊಂದು ಹೆಣ ಬೀಳ್ತಿದೆ. ಸರ್ಕಾರ ಅತ್ತ ಆನೆಗಳನ್ನೂ ಹಿಡೀತಿಲ್ಲ. ಇತ್ತ ಪ್ರಾಣ ಹೋಗೋದ್ನು ನಿಲ್ಲುಸ್ತಿಲ್ಲ. ಮಲೆನಾಡಿಗರು ಮಾತ್ರ ದಿನ ಎಣಿಸಿಕೊಂಡು ಬದುಕುವಂತಾಗಿದೆ. ಇಂದು ಕೂಡ ಹುಲ್ಲು ಕೊಯ್ಯುವಾಗ 35 ಮಹಿಳೆ ಆನೆ ದಾಳಿಗೆ ಬಲಿಯಾಗಿದ್ದಾರೆ.

ಅರಣ್ಯಾಧಿಕಾರಿಗಳ ವಿರುದ್ದ ಆಕ್ರೋಶ

ಕಳೆದ ಮೂರು ತಿಂಗಳಿಂದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಆನೆ ದಾಳಿಯಿಂದ ಒಂದಿಲ್ಲೊಂದು ಹಳ್ಳಿಯಲ್ಲಿ ಜನರ ಪ್ರಾಣಿ ಪಕ್ಷಿ ಹಾರಿಹೋಗುತ್ತಿದೆ. ಆನೆ ದಾಳಿಗೆ ತಿಂಗಳಿಗೊಂದು ಹೆಣ ಬೀಳ್ತಿದೆ. ಇಂದು ಹುಲ್ಲೆಹಳ್ಳಿ-ಕುಂದೂರು ಗ್ರಾಮದ ಸರದಿ. ಕುಂದೂರಿನ ಮಹಿಳೆ ಶೋಭಾ ರಸ್ತೆ ಬದಿಯ ತೋಟದಲ್ಲಿ ಹುಲ್ಲು ಕೊಯ್ಯುವಾಗ ಆನೆ ದಾಳಿಗೆ ಬಲಿಯಾಗಿದ್ದಾಳೆ. ತೋಟದಲ್ಲಿ ಆನೆ ನೋಡಿದ ಕೂಡಲೇ ರಸ್ತೆಯಲ್ಲಿದ್ದವರು ಕೂಗಾಡಿದ್ದಾರೆ. ಶೋಭಾ ಗಂಡ ಓಡು ಎಂದು ಓಡಿಸಿದ್ದಾರೆ. ಆದರೆ, ಮಿಂಚಿನ ವೇಗದಲ್ಲಿ ಬಂದ ಕಾಡಾನೆ ದಾಳಿಗೆ ಶೋಭಾ  ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ತಮ್ಮ ಇಡುವಳಿ ತೋಟದಲ್ಲಿ ಘಟನೆ ನಡೆದಿದ್ದು, ಇಷ್ಟು ದಿನ ಆನೆ ದಾಳಿಯಾದಾಗ ಕಾಡಿನಲ್ಲಿ ಅವರಿಗೇನು ಕೆಲಸ ಅನ್ನುತ್ತಿದ್ದ ಅರಣ್ಯ ಅಧಿಕಾರಿಗಳಿಗೆ ಸ್ಥಳಿಯರು ಸಖತ್ತಾಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾ ವಿವಾದ: ಆಡಳಿತ ಮಂಡಳಿ ರಚನೆಗೆ ವಿರೋಧ

ಕಳೆದ ಮೂರು ತಿಂಗಳಲ್ಲಿ ಮೂರನೇ ಬಲಿ

ಅಂದಾಗೆ ಇದು ಈ ಭಾಗದಲ್ಲಿ ಕಳೆದ ಮೂರು ತಿಂಗಳಲ್ಲಿ ಮೂರನೇ ಬಲಿ. ಎರಡು ತಿಂಗಳ ಹಿಂದೆಯಷ್ಟೇ ಈ ಗ್ರಾಮದ ಪಕ್ಕದ ಹಾರ್ಗೋಡು ಎಂಬಲ್ಲಿ ಆನಂದ್ ದೇವಾಡಿಗ ಎಂಬುವರನ್ನ ಕಾಡಾನೆ ಬಲಿ ಪಡೆದಿತ್ತು. ಆ ಬಳಿಕ ಊರುಬಗೆ ಗ್ರಾಮದಲ್ಲಿ ಅರ್ಜುನ್ ಎಂಬುವವನ್ನ ಕಾಡಾನೆ ಕೊಂದು ಹಾಕಿತ್ತು. ಇದೀಗ ಮೂರು ತಿಂಗಳು ಕಳೆಯುವಷ್ಟರಲ್ಲಿ ಶೋಭಾ ಎಂಬುವವರು ಬಲಿಯಾಗಿದ್ದಾರೆ. ಇಷ್ಟಾದ್ರೂ ಕಾಡಾನೆಯನ್ನ ಸ್ಥಳಾಂತರ ಮಾಡಲು ಅರಣ್ಯ ಇಲಾಖೆ ಮುಂದಾಗುತ್ತಿಲ್ಲ ಅಂತಾ ಆರೋಪಿಸಿ ಜನರು ಆಕ್ರೋಶ ವ್ಯಕ್ತಪಡಿಸಿದ್ದರು.  ಸ್ಥಳಕ್ಕೆ ತಡವಾಗಿ ಬಂದ ಡಿಎಫ್ಒ ಕ್ರಾಂತಿ ವಿರುದ್ದ ಕೆಂಡಾಮಂಡಲವಾದ್ರು, ಮೃತದೇಹವನ್ನ ನೋಡಲು ಬಂದ ಎಎಫ್ಓರನ್ನ ತಡೆದು ಸುತ್ತಲು ಮಹಿಳೆಯರು ಕುಳಿತು ದಿಗ್ಬಂಧನ ಹಾಕಿದ್ರು. ಕೆಲಕಾಲ ಸ್ಥಳದಲ್ಲಿ ಬಿಗುವಿನ ವಾತವರಣ ನಿರ್ಮಾಣವಾಯ್ತು, ಗಲಾಟೆಯ ಮುನ್ಸೂಚನೆ ಅರಿತಿದ್ದ ಅರಣ್ಯ ಇಲಾಖೆ ಬಿಗಿ ಪೊಲೀಸ್ ಬಂದ್ ಬಸ್ತನ್ನ ಹಾಕಿಕೊಂಡಿದ್ರು.

ಶಾಸಕ ಕುಮಾರಸ್ವಾಮಿ ವಿರುದ್ಧ ಜನರ ಆಕ್ರೋಶ, ಪ್ರತಿಭಟನೆ 

ಸುತ್ತಮತ್ತಲಿನ ಸಾವಿರಾರು ಜನರು ಹುಲ್ಲೇಮನೆ ಕುಂದೂರಿಗೆ ಆಗಮಿಸಿ ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಸ್ಥಳಕ್ಕೆ ಆಗಮಿಸಿದ ಶಾಸಕ ಎಂ.ಪಿ ಕುಮಾರಸ್ವಾಮಿ ವಿರುದ್ಧವೂ  ಜನರು ಕೆಂಡಾಮಂಡಲವಾದ್ರು. ಮೃತರ ಕುಟುಂಬಕ್ಕೆ ಶಾಶ್ವತ ಪರಿಹಾರ ನೀಡಬೇಕು, ಇದೇ ಕೊನೆಯ ಸಾವಾಗಬೇಕು. ಮುಂದೆಂದೂ ಇಂತಹ ಘಟನೆ ಮರಕಳಿಸಬಾರದು ಅಂತಾ ಅರಣ್ಯ ಇಲಾಖೆಗೆ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ರು. ಅರಣ್ಯ ಇಲಾಖೆಯೂ ನಿಷ್ಟ್ರಯೋಜಕವಾಗಿದ್ದೂ ಕಾಡಾನೆಗಳನ್ನ ಹಿಮ್ಮೆಟ್ಟಿಸಲು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಅಂತಾ ಜನರು ರೊಚ್ಚಿಗೆದ್ದಿದ್ರು. ನಿಮಗೆ ಕಾಡಾನೆ ಹಾವಳಿಯನ್ನ ನಿಯಂತ್ರಣ ಮಾಡಲು ಸಾಧ್ಯವಿಲ್ಲದಿದ್ರೆ ನಾವೇ ನಿಯಂತ್ರಿಸುತ್ತೇವೆ ಅಂತಾ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ರು. ವೈಜ್ಞಾನಿಕವಾಗಿ ಕಾಡಾನೆಗಳನ್ನ ಹಿಮ್ಮೆಟ್ಟಿಸುವಲ್ಲಿ ಅರಣ್ಯ ಇಲಾಖೆ ಸಾಲು ಸಾಲು ವೈಫಲ್ಯ ಅನುಭವಿಸ್ತಾ ಇರೋದು ಜನಸಾಮಾನ್ಯರ ಟೀಕೆಗೆ ಗುರಿಯಾಗಿದೆ. 

ಒಟ್ಟಿನಲ್ಲಿ ಕಾಫಿನಾಡಿನಲ್ಲಿ ಕಾಡಾನೆ-ಮಾನವ ಸಂಘರ್ಷ ಮುಂದುವರಿದಿದ್ದು, ಅಮಾಯಕ ಮಹಿಳೆಯ ಪ್ರಾಣಪಕ್ಷಿ ಹಾರಿ ಹೋಗುವಂತಗಿರೋದು ನಿಜಕ್ಕೂ ದುರಂತ. 
 

click me!