Charmadi Ghat: 45 ಭೂಕುಸಿತ, ಚಾರ್ಮಾಡಿ ಘಾಟಿ ರಾಷ್ಟ್ರಿಯ ಹೆದ್ದಾರಿ ವಿಸ್ತರಣೆಗೆ ಹಿನ್ನಡೆ

Published : Nov 05, 2026, 01:39 PM IST
Charmadi ghat

ಸಾರಾಂಶ

ಚಾರ್ಮಾಡಿ ಘಾಟಿಯ 11 ಕಿ.ಮೀ. ರಸ್ತೆ ವಿಸ್ತರಣೆ ಯೋಜನೆಗೆ 7,540 ಮರಗಳ ತೆರವು ಮತ್ತು ಪರಿಸರ ಹಾನಿಯ ಕಾರಣದಿಂದ ಕೇಂದ್ರ ಸರ್ಕಾರ ಪ್ರಶ್ನೆಗಳನ್ನೆತ್ತಿದೆ. ಹುಲಿ ಕಾರಿಡಾರ್ ಮತ್ತು 45 ಭೂಕುಸಿತಗಳ ಹಿನ್ನೆಲೆಯಲ್ಲಿ ಪರಿಸರವಾದಿಗಳು ಈ ಬೃಹತ್ ಯೋಜನೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಳ್ತಂಗಡಿ: ಚಾರ್ಮಾಡಿ ಘಾಟಿಯ ಸುಮಾರು 11 ಕಿ.ಮೀ. ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆ ಕೈಗೊಳ್ಳಲು 343.74 ಕೋಟಿ ರೂ. ವೆಚ್ಚದ ಯೋಜನೆ ರೂಪಿಸಲಾಗಿದೆ. ಆದರೆ ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣೆಗೆ ಕೇಂದ್ರದ ಮಟ್ಟದಲ್ಲಿ ತಾತ್ಕಾಲಿಕ ಹಿನ್ನಡೆ ಎದುರಾಗಿದೆ. ಘಾಟಿಯ ರಸ್ತೆ ಅಭಿವೃದ್ಧಿಗಾಗಿ 39 ಎಕರೆ ಅರಣ್ಯ ಭೂಮಿ ಬಳಕೆ ಹಾಗೂ 7,540 ಮರಗಳ ತೆರವಿಗೆ ಸಂಬಂಧಿಸಿದ ಪ್ರಸ್ತಾವನೆಯ ಕುರಿತು ಕೇಂದ್ರವು ಹಲವು ಪ್ರಶ್ನೆ ಎತ್ತಿದ್ದು, ಯೋಜನೆಯ ಮುಂದಿನ ಹಂತದ ಬಗ್ಗೆ ಅನಿಶ್ಚಿತತೆ ಮೂಡಿದೆ. ರಸ್ತೆ ಅಭಿವೃದ್ಧಿಗಾಗಿ ಅರಣ್ಯ ಪ್ರದೇಶವನ್ನು ಬಳಸುವ ಪ್ರಸ್ತಾವನೆಗೆ ಪರಿಸರ ಮತ್ತು ವನ್ಯಜೀವಿ ಸಂರಕ್ಷಣೆಯ ದೃಷ್ಟಿಯಿಂದ ಹಲವು ಆಕ್ಷೇಪಗಳು ಎದುರಾಗಿವೆ.

ಯೋಜನೆಗಾಗಿ ಗುರುತಿಸಲಾಗಿರುವ 39 ಎಕರೆ ಅರಣ್ಯ ಭೂಮಿಯಲ್ಲಿ ಮರಗಳನ್ನು ತೆರವುಗೊಳಿಸುವುದರಿಂದ ಉಂಟಾಗುವ ಪರಿಸರ ಪರಿಣಾಮಗಳ ಬಗ್ಗೆ ಕೇಂದ್ರವು ಮಾಹಿತಿ ಕೇಳಿದೆ. ಕುದುರೆಮುಖ-ಪುಷ್ಪಗಿರಿ ಅರಣ್ಯ ಪ್ರದೇಶಗಳ ನಡುವಿನ ಹುಲಿ ಕಾರಿಡಾರ್‌ ಹಾಗೂ ವನ್ಯಜೀವಿಗಳ ಸಂಚಾರದ ಮೇಲೆ ಯೋಜನೆಯಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆಯೂ ಪರಿಶೀಲನೆ ಅಗತ್ಯವಾಗಿದೆ.ವನ್ಯಜೀವಿ ಇಲಾಖೆಯ ಅನುಮತಿ ಪ್ರಕ್ರಿಯೆ, ಅರಣ್ಯ ಭೂಮಿಯ ಬಳಕೆಗೆ ಸಂಬಂಧಿಸಿದ ಷರತ್ತುಗಳು ಹಾಗೂ ಪರಿಸರದ ಮೇಲಿನ ಪರಿಣಾಮಗಳನ್ನು ಸಮಗ್ರವಾಗಿ ವಿವರಿಸುವಂತೆ ಸೂಚಿಸಿರುವುದು ಯೋಜನೆಗೆ ಮತ್ತಷ್ಟು ಸವಾಲು ತಂದಿದೆ.

45 ಭೂಕುಸಿತಗಳ ಉಲ್ಲೇಖ

ಚಾರ್ಮಾಡಿ ಘಾಟಿಯಲ್ಲಿ ಹಿಂದಿನ ವರ್ಷಗಳಲ್ಲಿ ಸಂಭವಿಸಿರುವ ಭೂಕುಸಿತಗಳ ಹಿನ್ನೆಲೆಯಲ್ಲಿ ರಸ್ತೆ ವಿಸ್ತರಣೆಯ ಸುರಕ್ಷತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಹಿಂದಿನ ಕಾಮಗಾರಿಗಳ ಬಳಿಕ ಸುಮಾರು 45 ಭೂಕುಸಿತಗಳು ದಾಖಲಾಗಿರುವುದನ್ನು ಉಲ್ಲೇಖಿಸಿ, ಹೊಸ ಯೋಜನೆಯಿಂದ ಭೂಕುಸಿತದ ಅಪಾಯ ಹೆಚ್ಚಾಗುವ ಸಾಧ್ಯತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ.

ಪರಿಸರವಾದಿಗಳ ವಿರೋಧ

ಚಾರ್ಮಾಡಿ ಘಾಟಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಾಗ ಪರಿಸರದ ಸಮತೋಲನಕ್ಕೆ ಆದ್ಯತೆ ನೀಡಬೇಕೆಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಇನ್ನೊಂದೆಡೆ, ಘಾಟಿ ರಸ್ತೆಯ ವಿಸ್ತರಣೆ ಪೂರ್ಣಗೊಂಡರೆ ವಾಹನಗಳ ಸಂಚಾರ ಸುಗಮಗೊಳ್ಳುವುದರ ಜತೆಗೆ ಅಪಾಯಕಾರಿ ತಿರುವುಗಳಲ್ಲಿ ಸುರಕ್ಷತೆ ಹೆಚ್ಚುವ ನಿರೀಕ್ಷೆಯಿದೆ. ಹೀಗಾಗಿ, ಪರಿಸರ ಸಂರಕ್ಷಣೆ ಮತ್ತು ರಸ್ತೆ ಅಭಿವೃದ್ಧಿಯ ನಡುವಿನ ಸಮತೋಲನ ಕಾಯ್ದುಕೊಳ್ಳುವುದು ಅಧಿಕಾರಿಗಳಿಗೆ ಸವಾಲಾಗಿದೆ.

ಈಗಿನ ಚಾರ್ಮಾಡಿ ಘಾಟಿಯ ಅಂದಕ್ಕೆ ಧಕ್ಕೆ ಬಾರದಂತೆ,ಪರಿಸರ, ವನ್ಯಜೀವಿಗಳಿಗೆ ತೊಂದರೆ ಉಂಟಾಗದಂತೆ ಅಭಿವೃದ್ಧಿ ಕಾಮಗಾರಿ ನಡೆಯಬೇಕು. ಬೇಕಾಬಿಟ್ಟಿ ಮರಗಳ ತೆರವುಗೊಳಿಸಿ ಕಾಮಗಾರಿ ನಡೆಸುವುದಕ್ಕಿಂತ ಅಗತ್ಯ ಕಡೆಗಳಲ್ಲಿ ಎರಡು-ಮೂರು ಮೀ.ರಸ್ತೆ ಅಗಲಗೊಳಿಸಿದರೆ ಸಾಕು. ಜತೆಗೆ ಶೌಚಾಲಯ, ಕುಡಿಯುವ ನೀರು, ಇತ್ಯಾದಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು.

ಸಚಿನ್ ಭಿಡೆ, ಪರಿಸರ ಪ್ರೇಮಿ ಬೆಳ್ತಂಗಡಿ.

ಕೇಂದ್ರಕ್ಕೆ ಸಲ್ಲಿಸಲಾಗಿರುವ ಪ್ರಸ್ತಾವನೆಗೆ ಸಂಬಂಧಿಸಿದಂತೆ ಕೆಲವು ಸ್ಪಷ್ಟೀಕರಣ ಹಾಗೂ ಪೂರಕ ಮಾಹಿತಿಗಳನ್ನು ಕೇಳಲಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯ ವತಿಯಿಂದ ಪರಿಶೀಲನೆ ನಡೆಸಲಾಗಿದೆ. ಕೇಂದ್ರ ಕೇಳಿರುವ ಪ್ರಶ್ನೆಗಳಿಗೆ ಉತ್ತರಗಳನ್ನು ಸಿದ್ಧಪಡಿಸಿ ಸಲ್ಲಿಸಲಾಗುವುದು. ಜತೆಗೆ, ಚಾರ್ಮಾಡಿ ಘಾಟಿ ರಸ್ತೆ ವಿಸ್ತರಣಾ ಯೋಜನೆಯ ಅವಶ್ಯಕತೆ ವರದಿಯನ್ನೂ ಸಲ್ಲಿಸಲು ಕ್ರಮ ಕೈಗೊಳ್ಳಲಾಗುವುದು. ಅಗತ್ಯ ದಾಖಲೆಗಳು ಮತ್ತು ಪೂರಕ ಮಾಹಿತಿಗಳನ್ನು ಒದಗಿಸುವ ಮೂಲಕ ಯೋಜನೆಗೆ ಸಂಬಂಧಿಸಿದ ಮುಂದಿನ ಪ್ರಕ್ರಿಯೆ ಸುಗಮವಾಗುವಂತೆ ಪ್ರಯತ್ನಿಸಲಾಗುವುದು

ಕೆ.ಟಿ. ಚಂದ್ರಶೇಖರ್, ಇ.ಇ., ರಾಷ್ಟ್ರೀಯ ಹೆದ್ದಾರಿ ಇಲಾಖೆ, ದ.ಕ.

PREV
Read more Articles on
click me!

Recommended Stories

ಗಿಜಿಗುಡುವ ಬೆಂಗಳೂರಿನಲ್ಲಿ ಪ್ರಶಾಂತ ಜೀವನ: ಯಲಹಂಕದಲ್ಲಿ ತಲೆ ಎತ್ತುತ್ತಿದೆ ವಿನೂತನ 'ಲೋ-ಡೆನ್ಸಿಟಿ' ವಸತಿ ಯೋಜನೆ
ಕರ್ನಾಟಕ ಹವಾಮಾನದಲ್ಲಿ ಮತ್ತೆ ಬದಲಾವಣೆ: ಮುಂದಿನ 7 ದಿನ ಈ ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ..!