ಹಸಿ ಕಸ ನಿರ್ವಹಣೆ: 45 ಗುತ್ತಿಗೆದಾರರಿಗೆ ಬಿಬಿಎಂಪಿ ಕಾರ್ಯಾದೇಶ

By Kannadaprabha NewsFirst Published Aug 11, 2020, 9:57 AM IST
Highlights

ಹಸಿ ಕಸ ಟೆಂಡರ್‌ ಮರು ಪರಿಶೀಲನೆಗೆ ಮೇಯರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ತೀರ್ಮಾನದಂತೆ ಈಗಾಗಲೇ ಅಂತಿಮಗೊಂಡ 45 ವಾರ್ಡ್‌ಗಳ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವುದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿದುಬಂದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ

ಬೆಂಗಳೂರು(ಆ.11): ಈ ಹಿಂದೆ ಮನೆ ಮನೆಯಿಂದ ಪತ್ಯೇಕವಾಗಿ ಹಸಿ ಕಸ ಸಂಗ್ರಹಿಸುವ ಟೆಂಡರ್‌ ವೇಳೆ ಅಂತಿಮಗೊಂಡ 45 ಮಂದಿ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವುದಕ್ಕೆ ಬಿಬಿಎಂಪಿ ಸರ್ವಾನುಮತದಿಂದ ಒಪ್ಪಿಗೆ ನೀಡಲಾಗಿದೆ ಎಂದು ಬಿಬಿಎಂಪಿ ಮೇಯರ್‌ ಗೌತಮ್‌ ಕುಮಾರ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಸಿ ಕಸ ಟೆಂಡರ್‌ ಮರು ಪರಿಶೀಲನೆಗೆ ಮೇಯರ್‌ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿತ್ತು. ಸಮಿತಿ ತೀರ್ಮಾನದಂತೆ ಈಗಾಗಲೇ ಅಂತಿಮಗೊಂಡ 45 ವಾರ್ಡ್‌ಗಳ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡುವುದಕ್ಕೆ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಇನ್ನು ಹೈಕೋರ್ಟ್‌ ಮೊರೆ ಹೋದ ಈ 45 ಗುತ್ತಿಗೆದಾರರ ಪೈಕಿ 39 ಗುತ್ತಿಗೆದಾರರಿಗೆ ಕಾರ್ಯಾದೇಶ ಸಹ ನೀಡಲಾಗಿದೆ. ಆರು ಮಂದಿ ಮಾತ್ರ ಕಾರ್ಯಾದೇಶ ನೀಡುವುದು ಬಾಕಿ ಎಂದು ಅಧಿಕಾರಿಗಳು ಮಾಹಿತಿ ನೀಡಿರುವುದಾಗಿ ತಿಳಿಸಿದರು.

ಯಲಚೇನಹಳ್ಳಿ-ಅಂಜನಾಪುರ ಮೆಟ್ರೋ: ಶೀಘ್ರದಲ್ಲೇ ಸಂಚಾರ ಆರಂಭ

ಇನ್ನುಳಿದಂತೆ 105 ವಾರ್ಡ್‌ಗಳಲ್ಲಿ ವಾರ್ಡ್‌ಗಳಲ್ಲಿ ಟೆಂಡರ್‌ಗೆ ಗುತ್ತಿಗೆದಾರರು ಸಲ್ಲಿಸಿರುವ ಬಿಡ್‌ ಮೊತ್ತ ಮತ್ತು ದಾಖಲೆ ಪರಿಶೀಲನೆ ಮಾಡಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. 18 ವಾರ್ಡ್‌ಗಳಲ್ಲಿ ಯಾವುದೇ ಗುತ್ತಿಗೆದಾರರ ಟೆಂಡರ್‌ ಪ್ರಕ್ರಿಯೆಲ್ಲಿ ಭಾಗವಹಿಸಿಲ್ಲ. ಆ ವಾರ್ಡ್‌ಗಳಲ್ಲಿ ಅಲ್ಪಾವಧಿ ಟೆಂಡರ್‌ ಆಹ್ವಾನಿಸುವುದಕ್ಕೆ ಸೂಚನೆ ನೀಡಲಾಗಿದೆ. ಇನ್ನು ಎಂಎಸ್‌ಜಿಪಿಗೆ ನೀಡಲಾದ 30 ವಾರ್ಡ್‌ಗಳ ಟೆಂಡರ್‌ ಅನ್ನು ಮರು ಪರಿಶೀಲನೆ ನಡೆಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಪ್ರಮುಖ ನಿರ್ಣಯಗಳು:

* ಬಸವೇಶ್ವರ ವೃತ್ತದಲ್ಲಿ ನಿರ್ಮಾಣವಾಗುತ್ತಿರುವ ಅಶ್ವಾರೂಢ ಬಸವೇಶ್ವರ ಪ್ರತಿಮೆ ಹಾಗೂ ಉದ್ಯಾನದ ನಿರ್ವಹಣೆ 5 ವರ್ಷ ಬಸವ ಸಮಿತಿಗೆ

* ಆಸ್ತಿ ಘೋಷಣೆ ಮಾಡದ 34 ಪಾಲಿಕೆ ಸದಸ್ಯರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಸರ್ಕಾರಕ್ಕೆ ಪತ್ರ

* ವಿಧಾನಸೌಧ ಸುತ್ತ ಶೌಚಗೃಹ ನಿರ್ಮಾಣಕ್ಕೆ ರೌಂಡ್‌ ಟೇಬಲ್‌ ಇಂಡಿಯಾ, ಲೇಡಿಸ್‌ ಟೇಬಲ್‌ ಇಂಡಿಯಾ ಸಂಸ್ಥೆಗೆ ಅನುಮತಿ

* ಪಾಲಿಕೆ ಕೇಂದ್ರ ಕಚೇರಿ ಆವರಣದಲ್ಲಿ ಮೊಬೈಲ್‌ ಕ್ಯಾಂಟೀನ್‌ ನಡೆಸಲು ಮೆ. ಬಟರ್‌ ಸ್ಟೊರೀಸ್‌ ಹಾಸ್ಪಟಾಲಿಟಿ ಸಂಸ್ಥೆಗೆ ಅನುಮತಿ
 

click me!