ಬೆಂಗಳೂರು: ಕುಡಿದ ಮತ್ತಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿ, ಓರ್ವ ಸಾವು

By Kannadaprabha News  |  First Published Jan 9, 2024, 6:49 AM IST

ಮನೋರಾಯನಪಾಳ್ಯದ ಮುನೇಶ್ವರ ಲೇಔಟ್‌ ನಿವಾಸಿ ರಾಜು ಮೃತ ಪ್ರಯಾಣಿಕ. ಕಾರು ಚಾಲಕ ರವಿಕುಮಾರ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಾನುವಾರ ರಾತ್ರಿ 7.50ರ ಸುಮಾರಿಗೆ ದಿಣ್ಣೂರು ಮುಖ್ಯರಸ್ತೆ ಸಮೀಪದ ದೇವೇಗೌಡ ಮುಖ್ಯರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ಈ ಅಪಘಾತ ಸಂಭವಿಸಿದೆ.


ಬೆಂಗಳೂರು(ಜ.09):  ಪಾನಮತ್ತ ಕಾರು ಚಾಲಕ ಅತಿವೇಗವಾಗಿ ಕಾರು ಚಾಲನೆ ಮಾಡಿದ ಪರಿಣಾಮ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಪ್ರಯಾಣಿಕ ಮೃತಪಟ್ಟಿರುವ ಘಟನೆ ಆರ್‌.ಟಿ.ನಗರ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಮನೋರಾಯನಪಾಳ್ಯದ ಮುನೇಶ್ವರ ಲೇಔಟ್‌ ನಿವಾಸಿ ರಾಜು(44) ಮೃತ ಪ್ರಯಾಣಿಕ. ಕಾರು ಚಾಲಕ ರವಿಕುಮಾರ್‌ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಭಾನುವಾರ ರಾತ್ರಿ 7.50ರ ಸುಮಾರಿಗೆ ದಿಣ್ಣೂರು ಮುಖ್ಯರಸ್ತೆ ಸಮೀಪದ ದೇವೇಗೌಡ ಮುಖ್ಯರಸ್ತೆಯ ಇಂಡಿಯನ್‌ ಆಯಿಲ್‌ ಪೆಟ್ರೋಲ್‌ ಬಂಕ್‌ ಬಳಿ ಈ ಅಪಘಾತ ಸಂಭವಿಸಿದೆ.

Tap to resize

Latest Videos

ತುಮಕೂರು: ದ್ವಿಚಕ್ರವಾಹನಗಳಿಗೆ ಕಾರು ಡಿಕ್ಕಿ, ಇಬ್ಬರು ವಿದ್ಯಾರ್ಥಿಗಳ ಸಾವು

ಮೃತ ರಾಜು, ಸ್ನೇಹಿತರಾದ ಮಂಜುನಾಥ್‌ ಹಾಗೂ ರವಿಕುಮಾರ್‌ ಜತೆಗೆ ಭಾನುವಾರ ಸಂಜೆ ಕಾವಲ ಭೈರಸಂದ್ರದ ಬಾರ್‌ವೊಂದರಲ್ಲಿ ಮದ್ಯ ಸೇವಿಸಿದ್ದಾರೆ. ಬಳಿಕ ಕಾರು ಚಾಲಕ ರವಿಕುಮಾರ್‌, ರಾಜುನನ್ನು ಕಾರಿನ ಹಿಂಬದಿ ಸೀಟಿನಲ್ಲಿ ಕೂರಿಸಿಕೊಂಡು ಶಿವಾಜಿನಗರ ಕಡೆಯಿಂದ ಜಯಮಹಲ್‌ ಮುಖ್ಯರಸ್ತೆಯಲ್ಲಿ ಬಂದು ದೇವೇಗೌಡ ಮುಖ್ಯರಸ್ತೆಯಲ್ಲಿ ಬರುವಾಗ ನಿಯಂತ್ರಣ ತಪ್ಪಿದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತ್ತಿದ್ದ ರಾಜು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಸ್ಥಳೀಯರು ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರೀಕ್ಷಿಸಿದ ವೈದ್ಯರು ರಾಜು ಮಾರ್ಗ ಮಧ್ಯೆಯೇ ಮೃತಪಟ್ಟಿರುವುದಾಗಿ ದೃಢಪಡಿಸಿದ್ದಾರೆ.

ಪಾನಮತ್ತ ಕಾರು ಚಾಲಕ ರವಿಕುಮಾರ್‌ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಸಂಬಂಧ ರವಿಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!