ಕೊರೋನಾ ಸಂಕಷ್ಟದ ಕಾಲದಲ್ಲೂ ಹೊಸ ಉದ್ದಿಮೆ ಆರಂಭ..!

By Kannadaprabha News  |  First Published Sep 28, 2020, 7:57 AM IST

ಬೆಂಗಳೂರಿನ ಮಹದೇವಪುರ ವಲಯದಲ್ಲಿಯೇ ಅತೀ ಹೆಚ್ಚು ಲೈಸೆನ್ಸ್‌| ಫೆ.1ರಿಂದ ಫೆ.29ರ ಒಳಗೆ ಶುಲ್ಕ ಪಾವತಿಸಿ ಉದ್ದಿಮೆ ಪರವಾನಗಿಗೆ ಅರ್ಜಿ ಸಲ್ಲಿಸಿದರೆ ದಂಡ ವಿಧಿಸಿಲ್ಲ| ಮಾ.1ರಿಂದ ಮಾ.31ರವರೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡುವವರಿಗೆ ಶೇ.25 ರಷ್ಟು ದಂಡ| 


ವಿಶ್ವನಾಥ ಮಲೇಬೆನ್ನೂರು

ಬೆಂಗಳೂರು(ಸೆ.28): ಕೊರೋನಾ ಆರ್ಥಿಕ ಸಂಕಷ್ಟದಲ್ಲಿ ಅದೆಷ್ಟೋ ಉದ್ದಿಮೆಗಳ ನೆಲಕಚ್ಚಿ ನಷ್ಟದ ಸುಳಿಗೆ ಸಿಲುಕಿ ನರಳಾಡುತ್ತಿರುವ ಈ ಸಂದರ್ಭದಲ್ಲಿ ಬೆಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಹೊಸ ಉದ್ದಿಮೆ ಶುರುವಾಗುತ್ತಿವೆ!

Latest Videos

undefined

ಕೊರೋನಾದಿಂದ ಇಡೀ ಆರ್ಥಿಕ ವ್ಯವಸ್ಥೆಯೇ ಬುಡ ಮೇಲಾಗಿದೆ. ದೊಡ್ಡ ದೊಡ್ಡ ಉದ್ದಿಮೆಗಳೇ ನಷ್ಟದ ಸುಳಿಗೆ ಸಿಲುಕಿ ಶಾಶ್ವಾತವಾಗಿ ಮುಚ್ಚುವ ಹಂತಕ್ಕೆ ಹೋಗಿವೆ. ಸಿಬ್ಬಂದಿ ಹಾಗೂ ವೇತನ ಕಡಿತ ಗೊಳಿಸುವ ಕಠಿಣ ತೀರ್ಮಾನ ತೆಗೆದುಕೊಂಡಿವೆ. ಸಹಸ್ರಾರು ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ನಗರದ ಮಾಲ್‌, ಸೂಪರ್‌ ಮಾರುಕಟ್ಟೆಗಳು ಗ್ರಾಹಕರು ಇಲ್ಲದೇ ಬಿಕೋ ಎನ್ನುತ್ತಿವೆ. ಹೀಗಿದ್ದರೂ ಬೆಂಗಳೂರಿನಲ್ಲಿ ಸುಮಾರು ನಾಲ್ಕು ಸಾವಿರ ಹೊಸ ಉದ್ದಿಮೆ ಆರಂಭಿಸುವುದಕ್ಕೆ ಉದ್ಯಮಿಗಳು ಮುಂದಾಗಿದ್ದಾರೆ.

3,828 ಹೊಸ ಉದ್ದಿಮೆ ಪರವಾನಗಿ

ಬಿಬಿಎಂಪಿಯ ವ್ಯಾಪ್ತಿಯಲ್ಲಿ ಉದ್ದಿಮೆ ಆರಂಭಿಸುವುದಕ್ಕೆ ಪರವಾನಗಿ ಪಡೆಯಬೇಕು. ಈ ವರ್ಷ ನಗರದಲ್ಲಿ (ಫೆ.1 ರಿಂದ ಸೆ.22) ಹೋಟೆಲ್‌, ರೆಸ್ಟೋರೆಂಟ್‌, ಜ್ಯೂಸ್‌ ಸ್ಟಾಲ್‌, ಬೇಕರಿ, ಕ್ಲಿನಿಕ್ಸ್‌, ಮೆಡಿಕಲ್‌ ಶಾಪ್‌, ದಿನಸಿ ಅಂಗಡಿ ಸೇರಿದಂತೆ ಮತ್ತಿತರ 3,828 ಹೊಸ ಉದ್ದಿಮೆಗಳನ್ನು ಆರಂಭಿಸುವುದಕ್ಕೆ ಉದ್ದಿಮೆ ಪರವಾನಗಿ ಪಡೆಯಲಾಗಿದೆ ಎಂದು ಬಿಬಿಎಂಪಿಯ ಆರೋಗ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಅಂಕಿ ಅಂಶ ನೀಡಿದ್ದಾರೆ.

ಬೆಂಗಳೂರಲ್ಲಿ ಹೊಸ ದಾಖಲೆ ಬರೆದ ಕೊರೋನಾ..!

ಅದರಲ್ಲಿಯೂ ಐಟಿ-ಬಿಟಿ ಕಂಪನಿಗಳು ಹೆಚ್ಚಾಗಿರುವ ಮಹದೇವಪುರ ವಲಯದಲ್ಲಿ ನಗರದ ಕೇಂದ್ರ ಭಾಗಕ್ಕಿಂತ ಹೆಚ್ಚಿನ ಉದ್ದಿಮೆಗಳನ್ನು ಆರಂಭಿಸುವುದಕ್ಕೆ ಪರವಾನಗಿ ಪಡೆಯಲಾಗಿದೆ. ನಗರದ ಕೇಂದ್ರ ಭಾಗದ ಬಿಬಿಎಂಪಿ ದಕ್ಷಿಣ ವಲಯಲ್ಲಿ 606, ಪೂರ್ವ ವಲಯದಲ್ಲಿ 638, ಪಶ್ಚಿಮ ವಲಯದಲ್ಲಿ 460 ಹಾಗೂ ಬೊಮ್ಮನಹಳ್ಳಿ ವಲಯದಲ್ಲಿ 506 ಹೊಸ ಉದ್ದಿಮೆ ಆರಂಭಿಸುವುದಕ್ಕೆ ಪರವಾನಗಿ ಪಡೆಯಲಾಗಿದೆ. ಆದರೆ, ಮಹದೇವಪುರ ಒಂದೇ ವಲಯದಲ್ಲಿಯೇ 703 ಹೊಸ ಉದ್ದಿಮೆ ಆರಂಭಿಸಲು ಪರವಾನಗಿ ಪಡೆಯಲಾಗಿದೆ.

35 ಸಾವಿರ ಪರವಾನಗಿ ನವೀಕರಣ:

ನಗರದಲ್ಲಿ 3,828 ಹೊಸ ಉದ್ದಿಮೆ ಆರಂಭದ ಪರವಾನಗಿ ಪಡೆದುಕೊಳ್ಳವುದರ ಜೊತೆಗೆ 35 ಸಾವಿರ ಸದ್ಯ ಇರುವ ಉದ್ದಿಮೆಗಳನ್ನು ತಮ್ಮ ಉದ್ದಿಮೆ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳಲಾಗಿದೆ. ಪಶ್ಚಿಮ ವಲಯದಲ್ಲಿ ಅತಿ ಹೆಚ್ಚು 9 ಸಾವಿರ ಉದ್ದಿಮೆ ಪರವಾನಗಿ ನವೀಕರಣ ಮಾಡಿಕೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಶೇ.50 ರಿಂದ 60 ರಷ್ಟು ಆರ್ಥಿಕತೆ ತೆರೆದುಕೊಂಡಿದೆ. ಸಣ್ಣ ಮತ್ತು ಗುಡಿ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ. ಬಿಬಿಎಂಪಿಯಲ್ಲಿ ಈ ವರ್ಷ ಹೊಸದಾಗಿ ಉದ್ದಿಮೆ ಪರವಾನಗಿ ಪಡೆದವರು ನಿಜಕ್ಕೂ ಉದ್ದಿಮೆ ಆರಂಭಿಸಿದರೆ ಬಿಬಿಎಂಪಿ ಮತ್ತು ಸರ್ಕಾರಕ್ಕೆ ಆದಾಯ ಬರಲಿದೆ. ಆರ್ಥಿಕತೆ ಚೇತರಿಕೆಯಾಗಲಿದೆ ಎಂದು ಆರ್ಥಿಕ ತಜ್ಞ ಬಿ.ಟಿ.ಮನೋಹರ್‌ ಅವರು ತಿಳಿಸಿದ್ದಾರೆ. 

ಮೊದಲ ಬಾರಿಗೆ ಆನ್‌ಲೈನ್‌ ಲೈಸೆನ್ಸ್‌

ಬಿಬಿಎಂಪಿಯು 2015ರಲ್ಲಿಯೇ ಆನ್‌ಲೈನ್‌ ಮೂಲಕ ಉದ್ದಿಮೆ ಪರವಾನಗಿ ನೀಡುವ ವ್ಯವಸ್ಥೆ ಜಾರಿಗೊಳಿಸುವುದಕ್ಕೆ ಆದೇಶಿಸಲಾಗಿತ್ತು. ಆದರೆ, ಜಾರಿ ಮಾಡಿರಲಿಲ್ಲ. ಪ್ರಸಕ್ತ ವರ್ಷ ಜಾರಿ ಮಾಡಲಾಗಿದೆ. ಸೆ.22ರವರೆಗೆ ಹೊಸ ಮತ್ತು ನವೀಕರಣ ಸೇರಿದಂತೆ ಒಟ್ಟು 38,677 ಉದ್ದಿಮೆ ಪರವಾನಗಿಯನ್ನು ಬಿಬಿಎಂಪಿ ಆರೋಗ್ಯ ವಿಭಾಗದ ಆನ್‌ಲೈನ್‌ ಮೂಲಕ ನೀಡಿದೆ. ಇದರಿಂದ ಬಿಬಿಎಂಪಿಗೆ ಬರೋಬ್ಬರಿ 48.63 ಕೋಟಿ ಶುಲ್ಕ ಸಂಗ್ರಹವಾಗಿದೆ.

ಫೆ.1ರಿಂದ ಫೆ.29ರ ಒಳಗೆ ಶುಲ್ಕ ಪಾವತಿಸಿ ಉದ್ದಿಮೆ ಪರವಾನಗಿಗೆ ಅರ್ಜಿ ಸಲ್ಲಿಸಿದರೆ ದಂಡ ವಿಧಿಸಿಲ್ಲ. ಮಾ.1ರಿಂದ ಮಾ.31ರವರೆಗೆ ಅರ್ಜಿ ಸಲ್ಲಿಸಿ ಶುಲ್ಕ ಪಾವತಿ ಮಾಡುವವರಿಗೆ ಶೇ.25 ರಷ್ಟು ದಂಡ ವಿಧಿಸಲಾಗಿದೆ. ಏ.1ರ ನಂತರ ಉದ್ದಿಮೆ ಪರವಾನಗಿಗೆ ಅರ್ಜಿ ಸಲ್ಲಿಸುವವರು ದುಪಟ್ಟು ದಂಡ ಪಡೆದು ಪರವಾನಗಿ ನೀಡಲಾಗುತ್ತಿದೆ.
 

click me!