ಹಾಸನದಲ್ಲಿ ಆರೋಗ್ಯ ಇಲಾಖೆ ಕಠಿಣ ಆದೇಶವಿದ್ದು, ಇದೇ ವೇಳೆ ನಾಲ್ವರು ವೈದ್ಯರು ಇಲ್ಲಿ ರಜೆ ಪಡೆದುಕೊಂಡಿದ್ದಾರೆ.
ಹಾಸನ [ಮಾ.15]: ಇಡೀ ರಾಜ್ಯ ಕೊರೋನಾ ವೈರಸ್ ಹಿನ್ನೆಲೆಯಲ್ಲಿ ವೈದ್ಯಕೀಯ ತುರ್ತು ಪರಿಸ್ಥಿತಿ ಎದುರಿಸುತ್ತಿರುವ ನಡುವೆ ತಾಲೂಕಿನ ಶಾಂತಿಗ್ರಾಮ ಸಮುದಾಯ ಅರೋಗ್ಯ ಕೇಂದ್ರದ ನಾಲ್ವರು ವೈದ್ಯರು ಸಾಮೂಹಿಕ ರಜೆ ಹಾಕಿದ್ದಾರೆ.
ಸರ್ಕಾರದ ಆದೇಶ ಉಲ್ಲಂಘನೆ ಮಾಡಿ ಕರ್ತವ್ಯಕ್ಕೆ ಗೈರಾಗಿದ್ದಾರೆ ಎಂದು ಹೇಳಲಾಗಿದ್ದು, ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಕಿರಣ್, ಮಕ್ಕಳ ತಜ್ಞ ಡಾ.ಹೊನ್ನೇಗೌಡ, ಹಿರಿಯ ವೈದ್ಯಾಧಿಕಾರಿ ಡಾ.ಪ್ರದೀಪ್, ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞೆ ಡಾ.ಕಿರಣಾ ಕರ್ತವ್ಯಕ್ಕೆ ಗೈರಾಗಿರುವ ವೈದ್ಯರು. ತುರ್ತು ಅನಿವಾರ್ಯದ ಹೊರತು ಯಾರೂ ರಜೆ ಪಡೆಯದಂತೆ ಇಲಾಖಾ ಆದೇಶವಿದ್ದರೂ ಈ ವೈದ್ಯರು ಕರ್ತವ್ಯಕ್ಕೆ ಗೈರಾಗಿದ್ದಾರೆ.
ವಿದೇಶದಿಂದ ಬಂದ ಇಬ್ಬರಿಗೆ ಕೊರೋನಾ ಶಂಕೆ: ಆತಂಕದಲ್ಲಿ ಜನತೆ...
ಶುಕ್ರವಾರ ರಾತ್ರಿ ಸರ್ಕಾರಿ ಆಸ್ಪತ್ರೆ ವೈದ್ಯರು ರಜೆ ಹಾಕುವಂತಿಲ್ಲ ಎಂಬ ಆದೇಶ ಬಂದಿದೆ. ಈ ನಾಲ್ವರು ವೈದ್ಯರು ಶನಿವಾರದಿಂದ ರಜೆ ಹೋಗಿದ್ದಾರೆ. ಈ ಬಗ್ಗೆ ಸೂಕ್ತ ಮಾಹಿತಿ ಪಡೆದ ನಂತರ ಸಂಬಂಧಪಟ್ಟವೈದ್ಯರಿಗೆ ನೋಟಿಸ್ ನೀಡಲಾಗುವುದು.
- ಡಾ. ಸತೀಶ್ ಮಲ್ಲಪ್ಪ, ಡಿಎಚ್‌ಒ