ಚಿಕ್ಕಬಳ್ಳಾಪುರ (ನ.08): ಜಿಲ್ಲೆಯ 38 ಸಾವಿರ ಕುಟುಂಬಗಳಿಗೆ ಒಂದು ವರ್ಷದೊಳಗೆ ವಸತಿ ಭಾಗ್ಯ (House) ಕಲ್ಪಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಹಾಗೂ ಆರೋಗ್ಯ ಸಚಿವ ಡಾ.ಕೆ. ಸುಧಾಕರ್ (Dr K Sudhakar) ಹೇಳಿದರು.
ಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಗ್ರಾಮಗಳ ಕಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಡವರಿಗೆ ವಸತಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸುಮಾರು 834 ಎಕರೆ ಸರ್ಕಾರಿ ಜಮೀನು (Govt land) ಗುರುತಿಸಿದೆ. ನಿವೇಶನ ಹಂಚಿಕೆ ಕಾರ್ಯ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿದೆ ಎಂದರು.
ಜಿಲ್ಲಾಧಿಕಾರಿ ಆರ್.ಲತಾ (R Latha) ಮಾತನಾಡಿ, ಸರ್ಕಾರದ ಯೋಜನೆಗಳ ಬಗ್ಗೆ ಅರಿವು ಮೂಡಿಸಿದರು. ಅಧಿಕಾರಿಗಳ ಜತೆ ಸಚಿವ ಡಾ.ಕೆ. ಸುಧಾಕರ್ ಸಹ ಗ್ರಾಮದಲ್ಲೇ ಶನಿವಾರ ರಾತ್ರಿ ವಾಸ್ತವ್ಯ ಹೂಡಿದ್ದರು.
ಎಬಿಆರ್‌ಕೆ ಕಾರ್ಡ್ ವಿತರಣೆ
ಕಾರ್ಯಕ್ರಮದಲ್ಲಿ 700 ಫಲಾನುಭವಿಗಳಿಗೆ ಎಬಿಆರ್‌ಕೆ (ABRK) ಕಾರ್ಡ್ ವಿತರಿಸಲಾಯಿತು. ಆರೋಗ್ಯ ತಪಾಸಣೆ (Health Checkup) ಶಿಬಿರ ಹಾಗೂ ರಕ್ತದಾನ ಶಿಬಿರಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕೋವಿಡ್-19ಗೆ (Covid 19) ಸಂಬಂಧಿಸಿದಂತೆ ಜನರಲ್ಲಿ ಅರಿವು ಮೂಡಿಸಲಾಯಿತು. 10 ಮಕ್ಕಳಿಗೆ ಉಚಿತವಾಗಿ ಕನ್ನಡಕ, ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ 4 ರೈತರಿಗೆ ಕಾರ್ಯಾದೇಶ, 122 ಫಲಾನುಭವಿಗಳಿಗೆ ಪಿಎಂ ಕಿಸಾನ್ (PM Kissan) ಮಂಜೂರಾತಿ ಆದೇಶ, 10 ಮಂದಿಗೆ ಕೃಷಿ ಉಪಕರಣ, 178 ಫಲಾಭವಿಗೆ ತೋಟಗಾರಿಕೆ ಇಲಾಖೆಯ (Horticulture department) ವಿವಿಧ ಯೋಜನೆಯಡಿ ಸೌಲಭ್ಯ, 212 ಜನರಿಗೆ ಭಾಗ್ಯಲಕ್ಷ್ಮೀ ಬಾಂಡ್ (Bhagyalakshmi Bond), ಅಪೌಷ್ಟಿಕ ಮಗುವಿಗೆ ಕಿಟ್ (Kit) ವಿತರಣೆ ಸೇರಿದಂತೆ ಒಟ್ಟು 2916 ಫಲಾನುಭವಿಗಳಿಗೆ ಸೌಲಭ್ಯ ಒದಗಿಸಲಾಯಿತು. ಒದಗಿಸಿದ ಜತೆಗೆ, ಸ್ಮಶಾನಕ್ಕೆ ರಸ್ತೆ ಕಾಮಗಾರಿ, ವಸತಿ ನಿವೇಶನಕ್ಕೆ ಹೋಗುವ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.
ವೇದಿಕೆಯಲ್ಲಿ ಹಾಡಿದ ಸಚಿವ ಸುಧಾಕರ್
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ (K Sudhakar) ವೇದಿಕೆಯಲ್ಲಿ ಹಾಡು ಹೇಳುವ ಮೂಲಕ ನೆರೆದಿದ್ದವರನ್ನು ರಂಜಿಸಿದರು. ಸಚಿವರಿಗೆ ಉಪವಿಭಾಗಾಧಿಕಾರಿ, ಎಸ್ಪಿ ಮತ್ತಿತರ ಅಧಿಕಾರಿಗಳು ಸಾಥ್ ನೀಡಿದ ಶನಿವಾರ ರಾತ್ರಿ ಪುರ ಗ್ರಾಮದಲ್ಲಿ ಉಳಿದಿದ್ದ ಸಚಿವರು, ಭಾನುವಾರ ಬೆಳಗ್ಗೆ 6ರಿಂದ ಗ್ರಾಮ ವೀಕ್ಷಿಸಿದರು. ಮನೆ, ಮನೆಗೆ ಭೇಟಿ ನೀಡಿದರು. ಅಲ್ಲದೆ, ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದರು. ಸಮಸ್ಯೆ ಆಲಿಸಿ, ಪರಿಹರಿಸಲು ಕ್ರಮ ಕೈಗೊಳ್ಳಲು ಸೂಚನೆ ನೀಡಿದರು. ಈ ವೇಳೆ ಅಧಿಕಾರಿಗಳು ಹಾಜರಿದ್ದರು.
ಜಿಲ್ಲಾಧಿಕಾರಿ ಆರ್.ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಜಿಲ್ಲಾ ಅರಣ್ಯಾಧಿಕಾರಿ ಅರಸಲನ್, ಪುರ ಗ್ರಾಪಂ ಅಧ್ಯಕ್ಷ ವಿರುಪಾಕ್ಷಗೌಡ, ಉಪಾಧ್ಯಕ್ಷೆ ಮಾಲಾಶ್ರೀ, ವ್ಯವಸಾಯ ಸೇವಾ ಸಹಕಾರ ಸಂಘದ ಅಧ್ಯಕ್ಷ ಟಿ.ಎನ್. ಜಗನ್ನಾಥ್, ಕೆಎಂಎಫ್ ನಿರ್ದೇಶಕ ಸುಬ್ಬಾರೆಡ್ಡಿ, ಗೌರಿಬಿದನೂರು ತಹಸೀಲ್ದಾರ್ ಶ್ರೀನಿವಾಸ ಇದ್ದರು.
ದಲಿತರ ಮನೆಯಲ್ಲಿ ಸಚಿವರ ಭೋಜನ
ಜಿಲ್ಲಾಧಿಕಾರಿ ನಡೆ ಗ್ರಾಮದ ಕಡೆ ಕಾರ್ಯಕ್ರಮದಲ್ಲಿ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಕೆ.ಸುಧಾಕರ್ ಅವರು ದಲಿತ ಗಂಗಾಧರ್ ಅವರ ಮನೆಯಲ್ಲಿ ಅಧಿಕಾರಿಗಳೊಂದಿಗೆ ಊಟ ಮಾಡಿದರು. ಜಿಲ್ಲಾಧಿಕಾರಿ ಆರ್. ಲತಾ, ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಜಿಲ್ಲಾ ಅರಣ್ಯಾಧಿಕಾರಿ ಅರಸಲನ್ ಮತ್ತಿತರರು ದಲಿತರ ಮನೆಯಲ್ಲಿ ಭೋಜನ ಸವಿದರು.
ಗೌರಿಬಿದನೂರು (Gouribidanuru)) ತಾಲೂಕಿನ ಪುರ ಗ್ರಾಮದಲ್ಲಿ ಸಚಿವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಚಿವ ಡಾ.ಕೆ.ಸುಧಾಕರ್ ಗ್ರಾಮಸ್ಥರಿಂದ ಹವಾಲು ಸ್ವೀಕರಿಸಿದರು. ಜಿಲ್ಲಾಧಿಕಾರಿ ಆರ್.ತಲಾ, ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಇದ್ದಾರೆ.