ಇಂದು ಬೆಳಗ್ಗೆ ಪುಳಿಯೊಗರೆ ಸೇವಿಸಿದ ಮೇಲೆ ಅಸ್ವಸ್ಥರಾಗಿದ್ದಾರು. ಕೂಡಲೇ ಅಸ್ವಸ್ಥಗೊಂಡ 38 ಮಕ್ಕಳನ್ನು ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಗಂಭೀರವಾಗಿ ಅಸ್ವಸ್ಥರಾಗಿ ಆರು ಜನ ಮಕ್ಕಳನ್ನು ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ: ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋವಿಂದರಾಜು
ವರದಿ: ವರದರಾಜ್
ದಾವಣಗೆರೆ(ಸೆ.06): ವಿಷಪೂರಿತ ಆಹಾರ ಸೇವಿಸಿ 38 ಮಕ್ಕಳು ಅಸ್ವಸ್ಥರಾಗಿರುವ ಘಟನೆ ತಾಲೂಕಿನ ಮಾಯಕೊಂಡ ಸರ್ಕಾರಿ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಇಂದು(ಬುಧವಾರ) ನಡೆದಿದೆ.
ಕಳೆದ ರಾತ್ರಿ ಮಕ್ಕಳು ಕೊಳೆತಿರುವ ನವೀಲು ಕೋಸ್, ಮುಳುಗಾಯಿ, ಟೊಮೆಟೊ ಸೇರಿದಂತೆ ತರಕಾರಿ ಹಾಕಿದ ಬೇಳೆ ಸಾರು, ರಾಗಿ ಮುದ್ದೆ, ಅನ್ನ ಊಟ ಮಾಡಿದ್ದರು ಎನ್ನಲಾಗಿದೆ. ಅಲ್ಲದೇ ಇಂದು ಬೆಳಗ್ಗೆ ಪುಳಿಯೊಗರೆ ಸೇವಿಸಿದ ಮೇಲೆ ಅಸ್ವಸ್ಥರಾಗಿದ್ದಾರು. ಕೂಡಲೇ ಅಸ್ವಸ್ಥಗೊಂಡ 38 ಮಕ್ಕಳನ್ನು ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆಯನ್ನು ನೀಡಲಾಗಿದೆ. ಗಂಭೀರವಾಗಿ ಅಸ್ವಸ್ಥರಾಗಿ ಆರು ಜನ ಮಕ್ಕಳನ್ನು ದಾವಣಗೆರೆ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು, ಎಲ್ಲಾ ಮಕ್ಕಳು ಆರೋಗ್ಯವಾಗಿದ್ದಾರೆ ಎಂದು ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋವಿಂದರಾಜು ತಿಳಿಸಿದ್ದಾರೆ.
ಅಶ್ಲೀಲ ವಿಡಿಯೋ ಬೆದರಿಕೆಗೆ ಯುವತಿ ಸೂಸೈಡ್: ಅಪ್ರಾಪ್ತೆ ಬಲಿ ಪಡೆದ ಕಿರಾತಕರು !
ಆಸ್ಪತೆಗೆ ಭೇಟಿ ನೀಡಿ ಆರೋಗ್ಯ ವಿಚಾರಣೆ
ಮಕ್ಕಳು ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ತಿಳಿದ ತಕ್ಷಣವೇ ಶಾಸಕ ಕೆ.ಎಸ್.ಬಸವಂತಪ್ಪ ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿ ಮಕ್ಕಳಿಗೆ ಮತ್ತು ಪೋಷಕರಿಗೆ ಧೈರ್ಯ ತುಂಬಿದರು. ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಗೋವಿಂದರಾಜು ಅವರ ಎಷ್ಟು ಮಕ್ಕಳು ಅಸ್ವಸ್ಥರಾಗಿದ್ದಾರೆ. ಎಷ್ಟು ಮಕ್ಕಳು ಆರೋಗ್ಯವಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಪಡೆದರು. ಈ ಘಟನೆ ನಡೆದರೂ ಆರೋಗ್ಯ ಇಲಾಖೆಯ ಮೇಲಧಿಕಾರಿಗಳು ಭೇಟಿ ನೀಡಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಶಾಸಕರು ಭೇಟಿ ನೀಡಿದ್ದಾರೆ ಎಂಬ ವಿಷಯ ತಿಳಿದ ತಕ್ಷಣವೇ ಅಪರ ಜಿಲ್ಲಾಧಿಕಾರಿ ಪಿ.ಎನ್.ಲೋಕೇಶ್, ತಹಸೀಲ್ದಾರ್ ಡಾ. ಅಶ್ವತ್, ಉಪವಿಭಾಗಾಧಿಕಾರಿ ದುರ್ಗಾಶ್ರೀ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಜಿ.ಡಿ.ರಾಘವನ್, ಡಿಎಚ್ ಒ ಷಣ್ಮುಖಪ್ಪ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ನಾಗರಾಜ್, ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ಬಸರಗಿ, ಮಾಯಕೊಂಡ ಪಿಎಸ್ ಐ ಅಜ್ಜಪ್ಪ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಭೇಟಿ ನೀಡಿ ಮಕ್ಕಳ ಯೋಗಕ್ಷೇಮ ವಿಚಾರಿಸಿದರು.
ಆಸ್ಪತ್ರೆಯ ಭೇಟಿ ನಂತರ ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಗೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ಮತ್ತು ಅಧಿಕಾರಿಗಳು, ಅಡುಗೆ ತಯಾರು ಮಾಡುವ ಕೊಠಡಿ, ಸಾಮಗ್ರಿಗಳ ಕೊಠಡಿ, ಶೌಚಾಲಯ ಸೇರಿದಂತೆ ವಸತಿ ಕೊಠಡಿಗಳನ್ನು ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಅಡುಗೆಗೆ ಬಳಸುವ ಕೊಳೆತ ತರಕಾರಿ, ಹುಳುಗಳು ಬಿದ್ದಿದ್ದ ಬೇಳೆ, ಮುಗ್ಗು ಬಂದಿದ್ದ ಅಕ್ಕಿ ಮತ್ತು ಅಡುಗೆ ಸಾಮಗ್ರಿಗಳು, ಗಬ್ಬುನಾರುವ ಶೌಚಾಯಲಯ, ಪಾಚಿ ಕಟ್ಟಿದ ಸ್ನಾನ ಗೃಹ, ಟುಕ್ಕು ಹಿಡಿದ ಬೀಸಿ ನೀರಿನ ಗಿಜರ್ ಕಂಡು ವಾರ್ಡನ್, ಅಡುಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಸ್ಥಳದಲ್ಲೇ ಇದ್ದ ಅಧಿಕಾರಿಗಳಿಗೆ ಕೊಳೆತ ತರಕಾರಿ, ಹುಳುಗಳು ಬಿದ್ದ ಅಡುಗೆ ಸಾಮಗ್ರಿಗಳು, ಸುರಕ್ಷಿತ ಇಲ್ಲದ ವಸತಿ ಕೊಠಡಿಗಳನ್ನು ತೋರಿಸಿ ನಿಮ್ಮ ಮಕ್ಕಳಿಗೆ ಇಂತಹ ಊಟ, ಇಂತಹ ವಸತಿ ಕೊಠಡಿಗಳನ್ನು ಕೊಡ್ತೀರಾ ಎಂದು ಪ್ರಶ್ನಿಸಿದರು.
ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಮಕ್ಕಳಿಗೆ ಸಾಕಷ್ಟು ಸೌಲಭ್ಯ ಕೊಡುತ್ತದೆ. ಆದರೆ ಅಧಿಕಾರಿಗಳು ಮಕ್ಕಳಿಗೆ ಸರಿಯಾಗಿ ತಲುಪಿಸುವುದಿಲ್ಲ. ಕೂಡಲೇ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು.
ವಸತಿ ನಿಲಯದಲ್ಲಿ ಅಧಿಕಾರಿಗಳ ಸಭೆ
ಸರ್ಕಾರಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಪ್ರತಿಭಾನ್ವಿತ ಬಾಲಕಿಯರ ವಸತಿ ಪ್ರೌಢಶಾಲೆಯಲ್ಲಿ ಸಭೆ ನಡೆಸಿದ ಶಾಸಕರು, ಈ ವಸತಿಯಲ್ಲಿ ಶಾಲೆಯಲ್ಲಿ ಸರಿಯಾದ ಸೌಲಭ್ಯ ಇಲ್ಲ. ಮಕ್ಕಳಿಗೆ ಗುಣಮಟ್ಟದ ಆಹಾರ ಕೊಡುತ್ತಿಲ್ಲ. ಇದಕ್ಕೆ ನೀವುಗಳೇ ಕಣ್ಣಾರೆ ಕಂಡಿರುವ ಸಾಕ್ಷಿ ಇದೆ. ಅಲ್ಲದೇ ನಾನು ಆಗಸ್ಟ್ 15 ರಂದು ಶಾಲೆಗೆ ಭೇಟಿ ನೀಡಿ ಇಲ್ಲಿನ ಅವ್ಯವಸ್ಥೆ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೆ. ವಸತಿ ಶಾಲೆಗೆ ಭೇಟಿಯ ಪುಸ್ತಕದಲ್ಲಿ ಈ ಬಗ್ಗೆ ಬರೆದು ಹೋಗಿದ್ದೆ. ಅಲ್ಲದೇ ಆಸ್ಪತ್ರೆಯ ಆರೋಗ್ಯ ನಿರೀಕ್ಷಣಾಧಿಕಾರಿ ವಿನಾಯಕ ಸೆ.4ರಂದು ವಸತಿ ಶಾಲೆಗೆ ಭೇಟಿ ನೀಡಿ ಊಟ ಸರಿಯಿಲ್ಲ. ಅನ್ನ, ಸಾಂಬಾರು ಸರಿಯಿಲ್ಲ. ಅಡುಗೆ ಸಾಮಾಗ್ರಿಗಳನ್ನು ಮುಚ್ಚಿಟ್ಟಿಲ್ಲ. ಈ ಬಗ್ಗೆ ಕ್ರಮ ತೆಗೆದುಕೊಳ್ಳುವಂತೆ ವಸತಿ ನಿಲಯದ ರಿಜಿಸ್ಟರ್ ನಲ್ಲಿ ಬರೆದು ಬಂದಿದ್ದಾರೆ. ಆದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ತನಿಖೆ ನಡೆಸಿ ಈ ಪ್ರಕರಣದಲ್ಲಿ ತಪ್ಪಿತಸ್ಥರಾದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾ ಸಮಾಜ ಕಲ್ಯಾಣ ಉಪನಿರ್ದೇಶಕ ನಾಗರಾಜ್ ಅವರಿಗೆ ಸೂಚನೆ ನೀಡಿದರು.
ಪಿಎಂ, ಸಿಎಂಗೆ ಭದ್ರತೆ ನೀಡಿದ್ದ ಸ್ಫೋಟಕ ಪತ್ತೆದಾರಿ ದಾವಣಗೆರೆ ಪೊಲೀಸ್ ಶ್ವಾನ ಸೌಮ್ಯ ಇನ್ನಿಲ್ಲ!
ಹಾಸ್ಟಲ್ ಅವ್ಯವಸ್ಥೆಗೆ ಪೋಷಕರ ಆಕ್ರೋಶ
ಊಟ ಸೇವಿಸಿ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬ ಸುದ್ದಿ ತಿಳಿದು ಆಸ್ಪತ್ರೆಗೆ ಧಾವಿಸಿದ್ದ ಮಕ್ಕಳ ಪೋಷಕರು ಆಧಿಕಾರಿಗಳು, ಶಾಲೆಯ ವಾರ್ಡನ್, ಅಡುಗೆ ಸಿಬ್ಬಂದಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಮಕ್ಕಳಿಗೆ ಏನಾದರೂ ಸಮಸ್ಯೆಯಾದರೆ ನಾವು ಸುಮ್ಮನೆ ಇರುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಕುಡಿಯುವ ನೀರು ಯೋಗ್ಯವಲ್ಲ- ವೈದ್ಯರ ವರದಿ
ವಸತಿ ಶಾಲೆಯಲ್ಲಿ ಉಪಯೋಗಿಸುವ ಕುಡಿಯುವ ನೀರು, ತಯಾರಿಸಿದ್ದ ಆಹಾರವನ್ನು ಪರೀಕ್ಷೆಗೆ ಪ್ರಯೋಗಾಲಯಕ್ಕೆ ಕಳುಹಿಸಿಲಾಗಿದೆ. ಕುಡಿಯುವ ನೀರು ಕುಡಿಯಲು ಯೋಗ್ಯವಿಲ್ಲ ಎಂದು ವರದಿ ಬಂದಿದೆ. ಇನ್ನೂ ಆಹಾರದ ವರದಿ ಬಂದಿಲ್ಲ ಎಂದು ಮಾಯಕೊಂಡ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಗೋವಿಂದರಾಜು ತಿಳಿಸಿದ್ದಾರೆ.