ಜಿಲ್ಲಾದ್ಯಂತ ಬರೋಬ್ಬರಿ 37 ಸಾವಿರಕ್ಕೂ ಅಧಿಕ ರೈತರು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಹೊರಗೆ ಉಳಿದಿರುವುದು ಕಂಡು ಬಂದಿದೆ.
ಕಾಗತಿ ನಾಗರಾಜಪ್ಪ.
ಚಿಕ್ಕಬಳ್ಳಾಪುರ : ಜಿಲ್ಲಾದ್ಯಂತ ಬರೋಬ್ಬರಿ 37 ಸಾವಿರಕ್ಕೂ ಅಧಿಕ ರೈತರು ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಹೊರಗೆ ಉಳಿದಿರುವುದು ಕಂಡು ಬಂದಿದೆ.
ಪಿಎಂ ಕಿಸಾನ್ ಸಮ್ಮಾನ್ ಕಾರ್ಯಕ್ರಮ ಕಳೆದ 2019-20ನೇ ಸಾಲಿನಿಂದ ಜಾರಿಗೆ ಬಂದಿದ್ದರೂ ಇಲ್ಲಿವರೆಗೂ ಪೂರ್ಣ ಪ್ರಮಾಣದಲ್ಲಿ ಜಿಲ್ಲೆಯ ರೈತರಿಗೆ ಅದರ ಲಾಭ ಸಿಗದೇ ಇರುವುದು ಎದ್ದು ಕಾಣುತ್ತಿದ್ದು ಜಿಲ್ಲೆಯ ಒಟ್ಟಾರೆ ರೈತರಲ್ಲಿ ಶೇ.33 ರಷ್ಟು ಪಿಎಂ ಕಿಸಾನ್ ಸಮ್ಮಾನ್ ನಿಧಿ ಸಿಕ್ಕಿಲ್ಲ ಎನ್ನುವುದು ಕೃಷಿ ಇಲಾಖೆ ಅಂಕಿ, ಅಂಶಗಳಿಂದ ದೃಢಪಟ್ಟಿವೆ.
ಕಳೆದ 2019ರ ಫೆಬ್ರವರಿ ತಿಂಗಳಿಂದ ಜಿಲ್ಲೆಯಲ್ಲಿ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಅನುಷ್ಠಾನಗೊಂಡ್ಡಿದ್ದು ಇಲ್ಲಿಯವರೆಗೆ 1,27,832 ರೈತರು ನೊಂದಾಯಿಸಿದ್ದು ಕೇಂದ್ರ ಸರ್ಕಾರದಿಂದ ಒಟ್ಟು 238.0 ಕೋಟಿ ಮತ್ತು ದಿಂದ 101.43 ಕೋಟಿ ರು, ಸೇರಿ ಒಟ್ಟು ಇಲ್ಲಿವರೆಗೂ 339.72 ಕೋಟಿ ರೈತರ ಖಾತೆಗೆ ನೇರ ನಗದು ವರ್ಗಾವಣೆ ಮೂಲಕ 12 ಮತ್ತು 6 ಕಂತುಗಳಲ್ಲಿ ಕ್ರಮವಾಗಿ ಪಾವತಿಯಾಗಿದೆ. ಈಗ 12ನೇ ಕಂತು ಬಿಡುಗಡೆಯಾಗಿದ್ದು ರೈತರ ಖಾತೆಗೆ ವರ್ಗಾವಣೆಯಾಗುವ ಪ್ರಕ್ರಿಯೆಯಲ್ಲಿದೆ. ಆದರೆ ವಿವಿಧ ಕಾರಣಗಳಿಗೆ ಜಿಲ್ಲೆಯಲ್ಲಿ 37,954 ರೈತರು ಕೇಂದ್ರ ಸರ್ಕಾರದ ಈ ಯೋಜನೆಯಿಂದ ಹೊರಗೆ ಉಳಿದಿದ್ದು ಅದರಲ್ಲೂ ಬಹುತೇಕ ಸಣ್ಣ, ಅತಿ ಸಣ್ಣ ಹಾಗೂ ಮಧ್ಯಮ ವರ್ಗದ ರೈತರಿಗೆ ಈ ಸೌಲಭ್ಯ ಸಿಗದೇ ಇರುವುದು ಎದ್ದು ಕಾಣುತ್ತಿದೆ.
ಸಮಸ್ಯೆ ಏನು?
ಬಹಳಷ್ಟುರೈತರು ಇ-ಕೈವೈಸಿ ಹೊಂದಿಲ್ಲ. ಜೊತೆಗೆ ಕೆಲ ರೈತರ ಬಳಿ ಆ್ಯಂಡ್ರಾಯ್ಡ್ ಪೋನ್ ಇಲ್ಲದೇ ಇರುವುದು, ರೈತರು ಮೃತಪಟ್ಟಿದ್ದರೂ ಅವರ ವಾರಸುದಾರರಿಗೆ ಪೌತಿ ಖಾತೆ ಆಗದೇ, ಆಧಾರ್ ಜೋಡಣೆ ಸಮರ್ಪಕವಾಗಿ ಆಗದ ಕಾರಣ ಹಾಗೂ ಕೆಲವು ರೈತರ ಆಧಾರ್‌ಕಾರ್ಡ್‌ನಲ್ಲಿ ಮೊಬೈಲ್ ಸಂಖ್ಯೆ ನಮೂದಾಗದಿರುವುದು, ನಮೂದಾಗಿರುವ ಮೊಬೈಲ್ ಸಂಖ್ಯೆ ತಪ್ಪಾಗಿರುವುದು, ಅಸ್ತಿತ್ವ ಕಳೆದುಕೊಂಡ ನಂಬರ್‌ಗಳು ಇರುವುದರಿಂದ ಸಮಸ್ಯೆಯಾಗಿ ಜಿಲ್ಲಾದ್ಯಂತ ಒಟ್ಟು 37,954 ರೈತರಿಗೆ ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಲಾಭ ಸಿಗುತ್ತಿಲ್ಲ. ಇನ್ನೂ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ಈಗಾಗಲೆ ನೋಂದಾಯಿಸಿರುವ ರೈತರು ಗ್ರಾವå ಒನ್ ಸೇವಾ ಕೇಂದ್ರಗಳ ಮೂಲಕ, ಹತ್ತಿರದ ಪೋಸ್ಟಲ್ ಬ್ಯಾಂಕ್‌ಗಳಲ್ಲಿ ಇ-ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ಕಲ್ಪಿಸಲಾಗಿದೆ. ಆದರೂ ಕೆಲ ತಾಂತ್ರಿಕ ದೋಷಗಳ ಪರಿಣಾಮ ಚಿಂತಾಮಣಿ, ಗೌರಿಬಿದನೂರು ತಾಲೂಕುಗಳಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ರೈತರಿಗೆ ಪಿಎಂ ಕಿಸಾನ್ ಸಮ್ಮಾನ್ ನಿಧಿ ಪಡೆಯಲು ಸಾಧ್ಯವಾಗಿಲ್ಲ.
ತಾಲೂಕುವಾರು ಪಿಎಂ ಕಿಸಾನ್ ನಿಧಿ ವಂಚಿತ ರೈತರು
ಬಾಗೇಪಲ್ಲಿ 7149
ಚಿಕ್ಕಬಳ್ಳಾಪುರ 6785
ಚಿಂತಾಮಣಿ 7625
ಗೌರಿಬಿದನೂರು 7877
ಗುಡಿಬಂಡೆ 2565
ಶಿಡ್ಲಘಟ್ಟ 5953
ಒಟ್ಟು 37,954