ಬಳ್ಳಾರಿ: ಗುಜರಾತ್‌ನಿಂದ ಬಂದ ಕೊರೋನಾ ಪಾಸಿಟಿವ್‌ ವ್ಯಕ್ತಿ ಕೂಡ್ಲಿಗಿಯವನಲ್ಲ

By Kannadaprabha News  |  First Published May 31, 2020, 8:52 AM IST

ಸೋಂಕಿತ ಕೂಡ್ಲಿಗಿ ವಿಳಾಸ ಕೊಟ್ಟಿ​ದ್ದ​ರಿಂದ ಜನ​ರಲ್ಲಿ ಆತಂಕ| ಕೊರೋನಾ ಪಾಸಿಟಿವ್‌ ಬಂದಿದ್ದರಿಂದ ಸೋಂಕಿತ ಓಡಾಡಿದ ಸ್ಥಳದಲ್ಲಿ ರಾಸಾಯನಿಕ ಸಿಂಪಡಣೆ| ಕೊರೋನಾ ಸೋಂಕಿತ ಕೂಡ್ಲಿಗಿ ತಾಲೂಕಿನಲ್ಲಿ ಎಲ್ಲಿಯೂ ತಿರುಗಾಡಿಲ್ಲ ಎಂಬುದೇ ಸಮಾಧಾನದ ಸಂಗತಿ|


ಕೂಡ್ಲಿಗಿ(ಮೇ.31): ಬಳ್ಳಾರಿಯಲ್ಲಿ ಶನಿವಾರ ಕೊರೋನಾ ಪಾಸಿಟಿವ್‌ ಬಂದಿರುವ ವ್ಯಕ್ತಿಗಳಲ್ಲಿ ಒಬ್ಬ ರೋಗಿಯ ವಿಳಾಸ ಕೂಡ್ಲಿಗಿ ಎಂತಿದೆ. ಆದರೆ ಈ ವ್ಯಕ್ತಿ ಮೂಲತಃ ಕೂಡ್ಲಿಗಿಯವರಲ್ಲ ಎಂಬುದು ತಿಳಿದು ಬಂದಿದೆ.

34 ಜನರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು ಇವರಲ್ಲಿ ಒಬ್ಬ ವ್ಯಕ್ತಿಯ ವಿಳಾಸ ಕೂಡ್ಲಿಗಿ ಕೊಟ್ಟಿದ್ದರಿಂದ ಕೂಡ್ಲಿಗಿ ತಾಲೂಕಿನ ಜನತೆಯ ಆತಂಕಕ್ಕೆ ಕಾರಣವಾಗಿತ್ತು. ಆದರೆ ಈ ವ್ಯಕ್ತಿ ಬಳ್ಳಾರಿ ಮೂಲದವರಾಗಿದ್ದು, ಆರು ವರ್ಷಗಳ ಹಿಂದೆ ಕೂಡ್ಲಿಗಿಯಲ್ಲಿ ಮದುವೆಯಾಗಿದ್ದಾರೆ. ಅವರು ಬಟ್ಟೆ ವ್ಯಾಪಾರಿಯಾಗಿದ್ದು ಗುಜರಾತ್‌ನ ಅಹಮದಬಾದ್‌ನಲ್ಲಿ ಗಾರ್ಮೆಂಟ್ಸ್‌ ನಲ್ಲಿ ಕೆಲಸ ಮಾಡುತ್ತಿದ್ದರು. ಹೆಂಡತಿ 7 ತಿಂಗಳ ಗರ್ಭಿಣಿಯಾಗಿದ್ದು, ಅವರು ತವರು ಮನೆ ಕೂಡ್ಲಿಗಿಯಲ್ಲಿದ್ದರು. ಇಡೀ ದೇಶವೇ ಲಾಕ್‌ಡೌನ್‌ ಆಗಿದ್ದಾಗ ಈ ವ್ಯಕ್ತಿ ಅಹಮದಾಬಾದ್‌ನಲ್ಲಿಯೇ ಉಳಿದುಕೊಂಡಿದ್ದಾರೆ. ಅವರ ಮಾವ ಕೂಡ್ಲಿಗಿಯಲ್ಲಿ ಇತ್ತೀಚೆಗೆ ಮೃತಪಟ್ಟಿದ್ದು, ಮಾವನ ಅಂತ್ಯಕ್ರಿಯೆಗೆ ಬರಲು ಲಾಕ್‌ಡೌನ್‌ ಅಡ್ಡಿಯಾಗಿತ್ತು.

Tap to resize

Latest Videos

ಕೊರೋನಮ್ಮ ನಮ್ಮ ಊರಿಗೆ ಬರಬೇಡಮ್ಮ: ಗ್ರಾಮಸ್ಥರಿಂದ ವಿಶಿಷ್ಟ ಆಚರಣೆ

ಇತ್ತೀಚೆಗೆ ಲಾಕ್‌ಡೌನ್‌ ಸಡಿಲಾಗಿದ್ದರಿಂದ ಮೇ 24ರಂದು ಗುಜರಾತ್‌ನಿಂದ ನೇರವಾಗಿ ಕೂಡ್ಲಿಗಿಗೆ ಹೆಂಡತಿಯನ್ನು ನೋಡಲು ಬಂದಿದ್ದಾರೆ. ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಸ್ಕ್ರೀನ್‌ ಟೆಸ್ಟ್‌ ಮಾಡಿ ಅಲ್ಲಿಂದ ಕ್ವಾರಂಟೈನ್‌ಗೆ ಆ ವ್ಯಕ್ತಿಯನ್ನು ಕಳುಹಿಸಲಾಗಿತ್ತು. ಈ ವ್ಯಕ್ತಿಗೆ ಶುಕ್ರವಾರ ಕೊರೋನಾ ಪಾಸಿಟಿವ್‌ ಇರುವುದು ದೃಢವಾಗಿದ್ದರಿಂದ ಶನಿವಾರ ಬೆಳಗ್ಗೆಯಿಂದ ಕೂಡ್ಲಿಗಿ, ಕೊಟ್ಟೂರು ತಾಲೂಕುಗಳಲ್ಲಿ ಜನತೆಯಲ್ಲಿ ಆತಂಕ ಶುರುವಾಗಿದೆ. ಆದರೆ ಈ ವ್ಯಕ್ತಿ ಕೂಡ್ಲಿಗಿ ಪಟ್ಟಣಕ್ಕೆ ಬಂದು ಆಸ್ಪತ್ರೆಗೆ ಹೋಗಿದ್ದಾರೆ, ಮುಂಜಾಗ್ರತಾ ಕ್ರಮವಾಗಿ ಅವರ ಹೆಂಡತಿ ಮನೆಯವರನ್ನು ಅಧಿಕಾರಿಗಳು ಮನೆಯಲ್ಲಿಯೇ ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ಸೂಚಿಸಿದ್ದಾರೆ. ಅವರು ತಾಲೂಕಿನಲ್ಲಿ ಎಲ್ಲಿಯೂ ತಿರುಗಾಡಿಲ್ಲ ಎಂಬುದೇ ಸಮಾಧಾನದ ಸಂಗತಿಯಾಗಿದೆ. ಅಲ್ಲದೇ ಕೂಡ್ಲಿಗಿ ತಾಲೂಕಿನ ವ್ಯಕ್ತಿಯಲ್ಲ ಎಂಬುದು ಅಧಿಕಾರಿಗಳಿಂದ ಸ್ಪಷ್ಟವಾಗಿದೆ.

ಶುಕ್ರವಾರ ಕೊರೋನಾ ಪಾಸಿಟಿವ್‌ ಬಂದವರಲ್ಲಿ ಬಳ್ಳಾರಿ ಮೂಲದ ಒಬ್ಬ ವ್ಯಕ್ತಿ ಕೂಡ್ಲಿಗಿಯ ವಿಳಾಸವನ್ನು ಸೇವಾ ಸಿಂಧು ಆಪ್‌ನಲ್ಲಿ ನೀಡಿದ್ದು, ಗುಜರಾತ್‌ನಲ್ಲಿ ಕೆಲಸ ಮಾಡುತ್ತಿದ್ದ ಈ ವ್ಯಕ್ತಿ ಕೂಡ್ಲಿಗಿಯಲ್ಲಿ ಮದುವೆಯಾಗಿದ್ದರಿಂದ ಕೂಡ್ಲಿಗಿ ವಿಳಾಸ ನೀಡಿದ್ದಾರೆ. ಹೆಂಡತಿ ನೋಡಲು ಗುಜರಾತ್‌ನಿಂದ ಕಳೆದ ಭಾನುವಾರ ಕೂಡ್ಲಿಗಿಗೆ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿಯೇ ವಾಹನದಿಂದ ಇಳಿದುಕೊಂಡು ಹೆಂಡತಿ ಗರ್ಭಿಣಿ ಇದ್ದುದರಿಂದ ಹೆಂಡತಿ ಮನೆಗೆ ಹೋಗದೇ ಸೀದಾ ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಗೆ ತಪಾಸಣೆಗೆ ಬಂದಿದ್ದಾರೆ. ಅಲ್ಲಿ ಅವರನ್ನು ತಪಾಸಣೆ ಮಾಡಿ ಆನಂತರ ಕುರುಗೋಡಿಗೆ ಕ್ವಾರಂಟೈನ್‌ಗೆ ಕಳುಹಿಸಲಾಗಿದೆ ಎಂದು ಕೂಡ್ಲಿಗಿ ತಾಲೂಕು ವೈದ್ಯಾಧಿಕಾರಿಡಾ. ಷಣ್ಮುಖನಾಯ್ಕ ಅವರು ಹೇಳಿದ್ದಾರೆ. 

ಕೂಡ್ಲಿಗಿ ಪಟ್ಟಣಕ್ಕೆ ಹೆಂಡತಿ ನೋಡಲು ಗುಜರಾತ್‌ನಿಂದ ಬಂದ ಬಳ್ಳಾರಿ ಮೂಲದ ವ್ಯಕ್ತಿ ಕೂಡ್ಲಿಗಿಯಲ್ಲಿ ಮದುವೆಯಾಗಿದ್ದು, ಈಗ ಈ ವ್ಯಕ್ತಿಗೆ ಕೊರೋನಾ ಪಾಸಿಟಿವ್‌ ಬಂದಿದ್ದರಿಂದ ಈತ ಓಡಾಡಿದ ಸ್ಥಳದಲ್ಲಿ ಕೂಡ್ಲಿಗಿಯ ಸ್ಥಳೀಯ ಆಡಳಿತ ಶನಿವಾರ ರಾಸಾಯನಿಕ ಸಿಂಪಡಿಸುವ ಮೂಲಕ ಮುಂಜಾ​ಗ್ರ​ತಾ ಕ್ರಮಕೈಗೊಂಡರು.
 

click me!