* ಬಹಳಷ್ಟು ಅನಾಥ ಮಕ್ಕಳ ಹೆಸರು ಬಿಟ್ಟು ಹೋಗಿರುವುದರಿಂದ ಮರುಸರ್ವೆ
* ಅನಾಥ ಮಕ್ಕಳ ಪೋಷಕರಿಗೆ ಪ್ರತಿ ತಿಂಗಳು 3500 ರು.
* ಹೆಣ್ಣು ಮಕ್ಕಳಿದ್ದಲ್ಲಿ 18 ವರ್ಷದ ನಂತರ 1 ಲಕ್ಷ ಮೊತ್ತ ನೀಡಲಾಗುವುದು
ಗದಗ/ಕೊಪ್ಪಳ(ಜೂ.11): ಕೋವಿಡ್ ಸೋಂಕಿನ 2ನೇ ಅಲೆಯಿಂದಾಗಿ ತಂದೆ- ತಾಯಿಯನ್ನು ಕಳೆದುಕೊಂಡು ರಾಜ್ಯದಲ್ಲಿ ಒಟ್ಟು 32 ಮಕ್ಕಳು ಅನಾಥರಾಗಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಮಾಹಿತಿ ನೀಡಿದ್ದಾರೆ.
ಇದೇ ವೇಳೆ ಈ ರೀತಿ ರಾಗಿರುವ ಮಕ್ಕಳ ಪಟ್ಟಿಯಿಂದ ಬಿಟ್ಟು ಹೋಗಿರುವ ಬಗ್ಗೆ ಮಾಹಿತಿ ಬರುತ್ತಿರುವ ಹಿನ್ನೆಲೆಯಲ್ಲಿ ಮರುಸರ್ವೇ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಕೋವಿಡ್ ಅನಾಥ ಮಕ್ಕಳಿಗೆ ಎಲ್ಲೆಲ್ಲಿ ಏನೇನು ಅಭಯ?
ಗದಗ ಮತ್ತು ಕೊಪ್ಪಳ ನಗರಗಳಲ್ಲಿ ಗುರುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಈಗಾಗಲೇ ಅನಾಥರಾಗಿರುವ ಮಕ್ಕಳ ಸರ್ವೆಯಾಗಿದ್ದರೂ ಇನ್ನೂ ಬಿಟ್ಟು ಹೋಗಿರುವ ಮಕ್ಕಳ ಬಗ್ಗೆ ಮಾಹಿತಿ ಬರುತ್ತಿದೆ. ಹೀಗಾಗಿ, ಅವರನ್ನು ಮರು ಸರ್ವೇ ಮಾಡುವಂತೆ ಸೂಚಿಸಲಾಗಿದೆ. ಸಿಂಗಲ್ ಪೇರೆಂಟ್ಸ್ ಮಕ್ಕಳ ಸರ್ವೆಯನ್ನೂ ಮತ್ತೆ ಮಾಡಲಾಗುತ್ತದೆ ಎಂದರು.
ಕೋವಿಡ್ ಸೋಂಕಿಗೆ ಮೃತಪಟ್ಟು ತಬ್ಬಲಿಯಾದ ಮಕ್ಕಳಿಗೆ ರಾಜ್ಯ ಸರ್ಕಾರದಿಂದ ‘ಬಾಲಸೇವಾ ಯೋಜನೆ’ ಜಾರಿ ತರಲಾಗಿದೆ. ಅನಾಥ ಮಕ್ಕಳ ಪೋಷಕರಿಗೆ ಪ್ರತಿ ತಿಂಗಳು 3500 ನೀಡಲಾಗುವುದು. 10 ನೇ ತರಗತಿ ವರೆಗೆ ಉಚಿತ ಶಿಕ್ಷಣ, ಉನ್ನತ ಶಿಕ್ಷಣಕ್ಕೆ ಲ್ಯಾಪ್‌ಟಾಪ್ ಒದಗಿಸಲಾಗುವುದು. ಜೊತೆಗೆ ಹೆಣ್ಣು ಮಕ್ಕಳಿದ್ದಲ್ಲಿ 18 ವರ್ಷದ ನಂತರ .1 ಲಕ್ಷ ಮೊತ್ತವನ್ನು ನೀಡಲಾಗುವುದು. ಜೊತೆಗೆ ಅನಾಥರಾಗುವ ಮಕ್ಕಳ ಭವಿಷ್ಯ ರೂಪಿಸಲು ದತ್ತು ನಿಯಮ ಕಾನೂನು ಅನುಸಾರ ದಾನಿಗಳು ಸಂಘ ಸಂಸ್ಥೆಗಳು, ಶೈಕ್ಷಣಿಕ ಸಂಸ್ಥೆಗಳು ಅವರ ಶಿಕ್ಷಣ ಮತ್ತು ಉದ್ಯೋಗಕ್ಕೆ ಅವಕಾಶ ಕಲ್ಪಿಸಿ ಭದ್ರ ಭವಿಷ್ಯ ನಿರ್ಮಾಣಕ್ಕೆ ಮುಂದೆ ಬಂದಲ್ಲಿ ದತ್ತು ನಿಯಮ ಪ್ರಕಾರ ಅವರಿಗೆ ಸರ್ಕಾರದಿಂದ ಸಹಕಾರ ನೀಡಲಾಗುವುದು ಎಂದರು.