Davanagere: 300 ಲೋಡು ಅಕ್ರಮ ಗಣಿಗಾರಿಕೆ ಮಣ್ಣು ಸಂಗ್ರಹ: ಅರಣ್ಯ ಅಧಿಕಾರಿಗಳು ಶಾಮೀಲಾಗಿರುವ ಶಂಕೆ

By Govindaraj S  |  First Published May 4, 2022, 8:07 PM IST

ಜಗಳೂರು ತಾಲೂಕಿನ ಜಮ್ಮಾಪುರ ಮತ್ತು ಅರಿಶಿಣಗುಂಡಿ ಗ್ರಾಮಗಳ ಮಧ್ಯೆ ಇರುವ ಪ್ರಾದೇಶಿಕ ವಲಯ ಅರಣ್ಯ ಇಲಾಖೆಗೆ ಸೇರಿರುವ ಶ್ರೀಸೋಮೇಶ್ವರ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ ರಾತ್ರಿ ಹೊತ್ತು ಅವ್ಯಾಹತವಾಗಿ ನಡೆಯುತ್ತಿದೆ.


ವರದಿ: ವರದರಾಜ್, ದಾವಣಗೆರೆ 

ದಾವಣಗೆರೆ (ಮೇ.04): ಜಗಳೂರು ತಾಲೂಕಿನ ಜಮ್ಮಾಪುರ ಮತ್ತು ಅರಿಶಿಣಗುಂಡಿ ಗ್ರಾಮಗಳ ಮಧ್ಯೆ ಇರುವ ಪ್ರಾದೇಶಿಕ ವಲಯ ಅರಣ್ಯ ಇಲಾಖೆಗೆ ಸೇರಿರುವ ಶ್ರೀಸೋಮೇಶ್ವರ ಬೆಟ್ಟದಲ್ಲಿ ಅಕ್ರಮ ಗಣಿಗಾರಿಕೆ (Illegal Mining) ರಾತ್ರಿ ಹೊತ್ತು ಅವ್ಯಾಹತವಾಗಿ ನಡೆಯುತ್ತಿದೆ. ಪ್ರಾದೇಶಿಕ ವಲಯ ಅರಣ್ಯ ಇಲಾಖೆಯವರು ಅರಣ್ಯ ಇಲಾಖೆಯ (Forest Department) ಮೂಗಿನ ಕೆಳಗೆ ಈ ಅಕ್ರಮ ನಡೆಯುತ್ತಿದ್ದರೂ ಇದು ನಮಗೆ ಗೊತ್ತೇ ಇಲ್ಲ ಎಂದು ಹಾರಿಕೆ ಉತ್ತರಕ್ಕೆ ಜಮ್ಮಾಪುರ ಗ್ರಾಮಸ್ಥರು ಐರಾಣ್ಯಾಗಿದ್ದಾರೆ. ಜಮ್ಮಾಪುರ ಗ್ರಾಮಸ್ಥರು ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿಗಳು ಶ್ಯಾಮೀಲಾಗಿರುವ ಬಗ್ಗೆ ಗಂಭೀರ ಆರೋಪ ಮಾಡಿದ್ದಾರೆ.

Tap to resize

Latest Videos

ಜಗಳೂರು ತಾಲೂಕಿನ ಮಲೆನಾಡಿನ ಗ್ರಾಮ ಎಂದೇ ಖ್ಯಾತವಾಗಿರುವ ಹತ್ತು ಹಲವು ವೈವಿಧ್ಯಮಯ ಬೆಟ್ಟ ಎಂದೇ ಖ್ಯಾತಿಯಾಗಿರುವ ಜಮ್ಮಾಪುರದಲ್ಲಿ ಅಂದಾಜು 500 ಕ್ಕೂ ಹೆಚ್ಚು ಲಾರಿ ಲೋಡು ಮಣ್ಣನ್ನು ರಾತ್ರಿಹೊತ್ತು ಗಣಿ ಮಾಫಿಯಾ ಮಂದಿ ಗುಡ್ಡದ ಒಡಲನ್ನು ಬಗೆದು ಎಗ್ಗಿಲ್ಲದೇ ಸಾಗಿಸಿದ್ದಾರೆ. ಇದರಿಂದ ಪರಿಸರಕ್ಕೆ ಧಕ್ಕೆಯಾಗುತ್ತಿದೆ ಎಂದು ಸುತ್ತಮುತ್ತಲ ಗ್ರಾಮಸ್ಥರು ಆಕ್ರೋಶ ಹೊರಹಾಕಿದ್ದಾರೆ. 

ಕಬ್ಬಿಣ ಮತ್ತು ಮ್ಯಾಂಗನೀಸ್ ಮಿಶ್ರಿತ ಮಣ್ಣು ಅಕ್ರಮ ಸಂಗ್ರಹಣೆ: ಕಳೆದ ಏಪ್ರಿಲ್ 29 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಜಗಳೂರು ಭೇಟಿಯ ಮೂರು ದಿನಗಳ ಮುಂಚೆ ಅಂದರೆ ಏ.26, 27 ಮತ್ತು 28 ರಂದು ರಾತ್ರಿ 10 ಗಂಟೆಯಿಂದ  ಬೆಳಿಗ್ಗೆ 6 ಗಂಟೆಯವರೆಗೆ ಒಂದು ಜೆಸಿಬಿ ಮತ್ತು 10ಕ್ಕೂ ಹೆಚ್ಚು ಟ್ರ‍್ಯಾಕ್ಟರ್‌ಗಳು ನಿರಂತರವಾಗಿ ಗಣಿಗಾರಿಕೆ ಮಾಡಿದ್ದಾರೆ. ಇದಕ್ಕೂ ಎರಡು ತಿಂಗಳ ಹಿಂದೆಯು 300 ಲೋಡ್ ಅಕ್ರಮವಾಗಿ ಸಂಗ್ರಹಿಸಿ ರಾತ್ರೋ ರಾತ್ರಿ ಸಾಗಣಿ ಮಾಡಿದ್ದರು ಎಂದು ಜಮ್ಮಾಪುರ ಗ್ರಾಮದ ಬಾಲರಾಜ್ ಆರೋಪ ಮಾಡಿದ್ದಾರೆ. 

Davanagere: ನೂತನ ಮನೆಗೆ ನರೇಂದ್ರ ಮೋದಿ ಹೆಸರಿಟ್ಟ ಕಟ್ಟಾ ಅಭಿಮಾನಿ..!

ಅರಿಶಿಣಗುಂಡಿ, ತೋರಣಗಟ್ಟೆ, ಜಮ್ಮಾಪುರ, ಲಿಂಗಣ್ಣನಹಳ್ಳಿ, ಮರೇನಹಳ್ಳಿ, ಬೊಮ್ಮಕ್ಕನಹಳ್ಳಿ ಗ್ರಾಮಗಳಿಗೆ ಜಮ್ಮಾಪುರ ಗ್ರಾಮದ ಐತಿಹಾಸಿಕ ಕೆರೆಯಿಂದ ಅಂತರ್ಜಲ ವೃದ್ಧಿಯಾಗಿ ಅಂದಾಜು ಒಂದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸಮೃದ್ಧವಾದ ಅಡಕೆ ತೋಟಗಳು ತಲೆ ಎತ್ತಿವೆ. ಈ ಕೆರೆಯ ನೀರು ಸಾವಿರಾರು ಕುಟುಂಬಗಳಿಗೆ ಕುಡಿಯುವ ನೀರಿಗೆ ನೆರವಾಗಿದೆ. ಇದಕ್ಕೆ ಕೆರೆಯ ಪಕ್ಕದಲ್ಲಿರುವ ಈ ಬೆಟ್ಟವೇ ಕಾರಣ. ಅನೇಕ ಗ್ರಾಮಗಳಿಗೆ ರಕ್ಷಣೆಯಾಗಿ ನಿಂತಿರುವ ಈ ಬೆಟ್ಟದಲ್ಲಿ ಪ್ರಸ್ತುತ ಗಣಿ ಕಳ್ಳರು ರಾತ್ರಿಯಲ್ಲಾ ಮೇನ್ಸ್ ಗಣಿಗಾರಿಕೆಯಲ್ಲಿ ತೊಡಗಿರುವುದು ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ಬಂದರೂ ಕಣ್ಣು, ಕಿವಿ, ಬಾಯಿ ಮುಚ್ಚಿಕೊಂಡು ಕುಳಿತಿರುವುದು ಭ್ರಷ್ಟಾಚಾರದ ಪಾಲುದಾರಾಗಿದ್ದಾರೆ ಎನ್ನುವ ಅನುಮಾನ ವ್ಯಕ್ತವಾಗುತ್ತಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

ಗಣಿಗಾರಿಕೆ ಬಗ್ಗೆ ಜಮ್ಮಾಪುರ ಗ್ರಾಮಸ್ಥರ ಅಕ್ರೋಶ: ರಾತ್ರಿಯಲ್ಲ ಬಗೆದ ಮಣ್ಣನ್ನು ಜಮ್ಮಾಪುರದ ಗ್ರಾಮದ ಹಳ್ಳದ ಪಕ್ಕದಲ್ಲಿರುವ ಗೋಮಾಳ ಜಮೀನಿನಲ್ಲಿ ಶೇಖರಿಸಿದ್ದಾರೆ. ಜಮ್ಮಾಪುರ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಿದ್ದಂತೆ ಗುಡ್ಡೆಯಿಯಾಗಿ ಶೇಖರಿಸಿದ್ದ ಮ್ಯಾಂಗನೀಸ್ ಮಣ್ಣನ್ನು ಅದನ್ನು ಡೋಜರ್ ಯಂತ್ರ ಬಳಸಿ ಯಾರಿಗೂ ಅನುಮಾನ ಬಾರದಂತೆ ಮಟ್ಟ ಮಾಡಿದ್ದಾರೆ. ಗಣಿಗಾರಿಕೆ ಮಾಡಿರುವ ಆ ವ್ಯಕ್ತಿ ಚಿತ್ರದುರ್ಗ ಮೂಲದವರು. ಆ ವ್ಯಕ್ತಿಯ ಮುಖವನ್ನು ನಾವ್ಯಾರು ನೋಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು. 

ಅಕ್ರಮ ಚಟುವಟಿಕೆ ಬಗ್ಗೆ ಮಾಹಿತಿ ಸಂಗ್ರಹಿಸುವುದಾಗಿ ತಿಳಿಸಿದ ತಹಶೀಲ್ದಾರ್: ಈ ಅಕ್ರಮ ಚಟುವಟಿಕೆ ಸಂಬಂಧ ತಹಶೀಲ್ದಾರ್ ಸಂತೋಷ್‌ಕುಮಾರ್ ದೂರವಾಣಿಯ ಮೂಲಕ ಸಂಪರ್ಕಿಸಿದಾಗ ನಿನ್ನೆ ಜಮ್ಮಾಪುರ ಗ್ರಾಮದ ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ವಾಪ್ತಿಗೆ ಸೇರಿದ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ ಎಂಬ ಮಾಹಿತಿ ಸಿಕ್ಕ ತಕ್ಷಣವೇ ಪ್ರಾದೇಶಿಕ ವಲಯ ಅರಣ್ಯ ಅಧಿಕಾರಿ ಪ್ರಕಾಶ್‌ಗೆ ಸೂಚಿಸಿ ಸ್ಥಳಕ್ಕೆ ಭೇಟಿ ಮಾಡಿ ತಕ್ಷಣವೇ ಸೂಕ್ತ ಕ್ರಮಕೈಗೊಳ್ಳುವಂತೆ ಸೂಚಿಸಿದ್ದೇನೆ. ಪ್ರಾದೇಶಿಕ ವಲಯ ಅರಣ್ಯ ಇಲಾಖೆಯ ವಾಪ್ತಿ ಈ ಅಕ್ರಮ ನಡೆಯುತ್ತಿರುವ ಬಗ್ಗೆ ದೂರವಾಣಿ ಮಾಡಿದರೆ ಇದು ನಮಗೆ ಗೊತ್ತೇ ಇಲ್ಲ ಎಂಬಂತೆ ಹಾರಿಕೆ ಉತ್ತರ ಕೊಡುತ್ತಾರೆ ಜಗಳೂರು ಅರಣ್ಯ ಇಲಾಖೆಯ ಅಧಿಕಾರಿಗಳು. ಈ ಅಕ್ರಮ ಚಟುವಟಿಕೆ ಸಂಬಂಧ ಪ್ರಾದೇಶಿಕ ವಲಯ ಅರಣ್ಯ ಇಲಾಖೆ ಅಧಿಕಾರಿ ಪ್ರಕಾಶ್‌ಗೆ ದೂರವಾಣಿ ಮಾಡಿದರೆ ಕರೆಯನ್ನು ಸ್ವೀಕರಿಸಲಿಲ್ಲ.

ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ ರೇಣುಕಾಚಾರ್ಯ, ಡ್ಯಾಮೇಜ್ ಕಂಟ್ರೋಲ್‌ಗೆ ತಂತ್ರ

ವನ್ಯಜೀವಿ ಸೇರಿದಂತೆ ಅಮೂಲ್ಯ ನೈಸರ್ಗಿಕ ಸಂಪತ್ತುನ್ನು ಹೊಂದಿರುವ ಬೆಟ್ಟ ವೈವಿಧ್ಯತೆ: 582.33 ಹೆಕ್ಟೇರ್ ವ್ಯಾಪ್ತಿಯಿರುವ ಶ್ರೀಸೋಮೇಶ್ವರ ದೇವರ ಬೆಟ್ಟ ಅಥವಾ ಜಮ್ಮಾಪುರ ಗುಡ್ಡ ಎಂದೇ ಕರೆಯಲಾಗುವ ಈ ಬೆಟ್ಟದಲ್ಲಿ ವನ್ಯಜೀವಿಗಳಾದ ಚಿರತೆ, ಕರಡಿ, ಬಾವಲಿ, ನವಿಲುಗಳು, ಕವಜುಗಗಳು, ಚಿಟ್ಟುಕೋಳಿಗಳು, ಗೌಜುಗ, ಹೆಬ್ಬಾತುಗಳು, ಮರಕುಟುಕ, ಮಂಗಟ್ಟೆಹಕ್ಕಿಗಳು, ಕೆಂಬೂತಗಳು, ಗಿಳಿಗಳು ಸೇರಿದಂತೆ ನೂರಾರು ಬಗೆಯ ವೈವಿಧ್ಯಮಯ ಪ್ರಾಣಿ ಮತ್ತು ಪಕ್ಷಿಗಳ ನೆಲೆವೀಡಾಗಿದೆ. ಆದರೆ ಈ ಬೆಟ್ಟದಲ್ಲಿ ದೊಡ್ಡ ಮಟ್ಟದಲ್ಲಿ ರಾತ್ರೋ ರಾತ್ರಿ ಗಣಿ ಕಳ್ಳರು ಗುಡ್ಡವನ್ನು ಬಗೆದು ಕಬ್ಬಿಣ ಮತ್ತು ಮ್ಯಾಂಗನೀಸ್ ಮಿಶ್ರಿತ ಉತೃಷ್ಟವಾದ ಮಣ್ಣನ್ನು ಸಾಗಿಸುತ್ತಿರುವುದು ಜಮ್ಮಾಪುರ ಜನರ ಆಕ್ರೋಶಕ್ಕೆ ಕಾರಣವಾಗಿದೆ. 

ಶಾಸಕರ ಗಮನಕ್ಕೆ ಬಂದಿಲ್ಲ ಅಕ್ರಮ ಗಣಿಗಾರಿಕೆ: ಈ ಬಗ್ಗೆ ಪ್ರತಿಕ್ರಿಯಿಸಿರುವ ಜಗಳೂರು ಶಾಸಕ ಎಸ್ ವಿ ರಾಮಚಂದ್ರ ಈ ವಿಷಯ ನನ್ನ ಗಮನಕೆ ಬಂದಿಲ್ಲ. ತಕ್ಷಣವೇ ಅಕ್ರಮ ಗಣಿಗಾರಿಕೆ ತಡೆಯಲು ಪೊಲೀಸ್ ಇಲಾಖೆಗೆ ಆದೇಶ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಗಣಿಗಾರಿಕೆ ಮಾಡಲು ಬಿಡುವುದಿಲ್ಲ ಎಂದಿದ್ದಾರೆ.

click me!