* 22 ರಸ್ತೆಗಳ ನವೀಕರಣಕ್ಕೆ ಹಸಿರು ನಿಶಾನೆ
* ಸಿಎಂ ವಿಶೇಷ ಅನುದಾನದಡಿ 30 ಕೋಟಿ ಮಂಜೂರು
* ಗ್ರಾಮ-ಗ್ರಾಮಗಳ ನಡುವಿನ ಸಂಪರ್ಕದ ಈ ರಸ್ತೆಗಳಿಗೆ ನವೀಕರಣದ ಶುಕ್ರದೆಸೆ
ರವಿ ಕಾಂಬಳೆ
ಹುಕ್ಕೇರಿ(ಜು.13): ಸುಗಮ ಸಂಚಾರಕ್ಕೆ ಮಾನವನ ನರನಾಡಿಗಳಂತಿರುವ ರಸ್ತೆಗಳು ಅಭಿವೃದ್ಧಿ ಹೊಂದಬೇಕಿರುವುದು ಅತ್ಯಗತ್ಯ. ಈ ದಿಸೆಯಲ್ಲಿ ಹುಕ್ಕೇರಿ ವಿಧಾನಸಭಾ ಕ್ಷೇತ್ರದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ 22 ರಸ್ತೆಗಳನ್ನು ಪುನರುಜ್ಜೀವನಗೊಳಿಸುವ ಸುಯೋಗ ಇದೀಗ ಒದಗಿ ಬಂದಿದೆ. ಕಾರಣ, ರಾಜ್ಯ ಸರ್ಕಾರ ಅಗತ್ಯ ಅನುದಾನ ಬಿಡುಗೊಳಿಸುವ ಮೂಲಕ ಹಸಿರು ನಿಶಾನೆ ತೋರಿದೆ. 2022-23ನೇ ಸಾಲಿನ ಮುಖ್ಯಮಂತ್ರಿ ವಿಶೇಷ ಮಂಜೂರಾತಿ ಕಾರ್ಯಕ್ರಮ 5054 ಲೆಕ್ಕ ಶೀರ್ಷಿಕೆಯಡಿ ಹುಕ್ಕೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ರಸ್ತೆ ಕಾಮಗಾರಿಗಳನ್ನು ಅಭಿವೃದ್ಧಿಪಡಿಸಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಇದಕ್ಕಾಗಿ ಸಲ್ಲಿಸಿದ್ದ 30 ಕೋಟಿ ವೆಚ್ಚದ ವಿಶೇಷ ಪ್ರಸ್ತಾವನೆಗೆ ಅನುದಾನವೂ ಮಂಜೂರಾಗಿದೆ.
ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆಯು ಕಾಮಗಾರಿಗಳ ಅನುಷ್ಠಾನದ ಜವಾಬ್ದಾರಿ ಹೊತ್ತುಕೊಂಡಿದೆ. ಈ ಎಲ್ಲ 22 ಕಾಮಗಾರಿಗಳ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದ್ದು ಡಿಪಿಆರ್ ಸಮೀಕ್ಷೆ ನಡೆಸಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಶೀಘ್ರವೇ ತಾಂತ್ರಿಕ ಅನುಮೋದನೆ ಪಡೆದುಕೊಂಡು ಭರದಿಂದ ಕಾಮಗಾರಿ ಆರಂಭಿಸಲು ಸರ್ಕಾರ ಸೂಚಿಸಿದೆ.
ಬೆಳಗಾವಿ ಏರ್‌ಪೋರ್ಟಲ್ಲಿ ದೇಶದ ಮೊದಲ ಸ್ಥಳೀಯ ಉತ್ಪನ್ನ ಮಳಿಗೆ
ಹೊಸ ಸ್ವರೂಪ-ಹೊಳಪು ಪಡೆಯಲಿರುವ ಈ ರಸ್ತೆಗಳಿಂದ ಸಂಪರ್ಕ-ಸಂಚಾರದ ಕಾಲಮಿತಿ ಮತ್ತಷ್ಟು ಸಲೀಸಲಾಗಲಿದೆ. ಗ್ರಾಮ-ಗ್ರಾಮಗಳ ನಡುವಿನ ಸಂಪರ್ಕದ ಈ ರಸ್ತೆಗಳಿಗೆ ನವೀಕರಣದ ಶುಕ್ರದೆಸೆಯಿಂದ ವಾಹನ ಸವಾರರ ಮೊಗದಲ್ಲಿ ಸಹಜವಾಗಿ ಹರ್ಷ ಮೂಡಿದೆ.
ಈ ರಸ್ತೆಗಳ ಸ್ಥಿತಿಗತಿ ಅರಿತ ಕ್ಷೇತ್ರದ ಶಾಸಕರೂ ಆಗಿರುವ ಸಚಿವ ಉಮೇಶ ಕತ್ತಿ ಅವರು ಪಿಆರ್‌ಇಡಿ ಇಲಾಖೆಗೆ ವಿಶೇಷ ಪ್ರಸ್ತಾವನೆ ಸಿದ್ಧಪಡಿಸುವಂತೆ ಸೂಚಿಸಿ ಕೇಂದ್ರ ಕಚೇರಿಗೆ ವಿಸ್ತೃತ ವರದಿ ಸಲ್ಲಿಸಿದರು. ಬಳಿಕ ಕಾಲ ಕಾಲಕ್ಕೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಿ ಈ ವಿಶೇಷ ಪ್ರಸ್ತಾವನೆಗೆ ಸರ್ಕಾರದಿಂದ ಅನುಮೋದನೆ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಯಾವ್ಯಾವ ರಸ್ತೆ?:
ಅಮ್ಮಣಗಿ-ಮುಗಳಿ, ಕುರಣಿ ಗೋಶಾಲೆಯಿಂದ ನಿಡಸೋಸಿ ಆಲೂರ ಕೆಎಂ, ರಾಷ್ಟ್ರೀಯ ಹೆದ್ದಾರಿ-4 ಹೈವೆದಿಂದ ಹರಗಾಪುರಗಡ ಆಲೂರ ಕೆಎಂ, ಯಾದಗೂಡ-ಬೆನ್ನೋಳಿ, ಬೆಳವಿ-ಕರಗಾಂವ, ಮದಿಹಳ್ಳಿ-ಬೆಣಿವಾಡ, ಕಣಗಲಾ ವಸತಿ ನಿಲಯದಿಂದ ಬೈರಾಪುರ, ಶಿರಗಾಂವ-ಹುಕ್ಕೇರಿ, ಸೊಲ್ಲಾಪುರ-ಚಂಪಾಹೊಸೂರ, ಹೊನ್ನಿಹಳ್ಳ-ಚಂಪಾಹೊಸೂರ, ಹುಕ್ಕೇರಿ-ಮದಮಕ್ಕನಾಳ, ಶೇಲಾಪುರ-ಚಿಕ್ಕೋಡಿ, ಗುಡಸ-ಬೆಲ್ಲದ ಬಾಗೇವಾಡಿ, ಅವರಗೋಳ-ಕಾರಿಮಟ್ಟಿ, ಹೊಸೂರ ಡೈಕ್ ರಸ್ತೆ, ಯರಗಟ್ಟಿಡೈಕ್ ರಸ್ತೆ, ಅಮ್ಮಣಗಿಯಿಂದ ಚಿಕ್ಕೋಡಿ ಗೋಟೂರ ಕೂಡು ರಸ್ತೆ, ಬಸ್ತವಾಡ ಮದಮಕ್ಕನಾಳದಿಂದ ಯರನಾಳವರೆಗೆ, ಇಂಗಳಿ-ಘಟಪ್ರಭಾ, ಸುಲ್ತಾನಪುರ ವೃತ್ತದಿಂದ ನದಿವರೆಗೆ, ಕರಜಗಾ-ಹರಗಾಪುರ ರಸ್ತೆಗಳು ಅಭಿವೃದ್ಧಿಯಾಗಲಿವೆ.
ಮಹಾರಾಷ್ಟ್ರ, ಬೆಳಗಾವಿಯಲ್ಲಿ ಮಳೆಯ ಅಬ್ಬರ: ಕೃಷ್ಣಾ ಮಟ್ಟ ಹೆಚ್ಚಳ
ಜನ ಹಾಗೂ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಕ್ಷೇತ್ರ ವ್ಯಾಪ್ತಿಯಲ್ಲಿ ಸುಮಾರು 30 ಕೋಟಿ ವೆಚ್ಚದ 22 ಗ್ರಾಮೀಣ ರಸ್ತೆಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಸಲ್ಲಿಸಲಾಗಿದ್ದ ವಿಶೇಷ ಪ್ರಸ್ತಾವನೆಗೆ ಮಂಜೂರಾತಿ ಸಿಕ್ಕಿದೆ ಅಂತ ಸಚಿವ ಉಮೇಶ ಕತ್ತಿ ತಿಳಿಸಿದ್ದಾರೆ.
ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ ಈ ಎಲ್ಲ ಕಾಮಗಾರಿಗಳ ಅನುಷ್ಠಾನದ ಜವಾಬ್ದಾರಿ ಹೊತ್ತುಕೊಂಡಿದೆ. ಬರುವ ಒಂದು ವಾರದೊಳಗೆ ಟೆಂಡರ್ ಕರೆದು ಕೂಡಲೇ ಕಾಮಗಾರಿಗಳನ್ನು ಆರಂಭಿಸಲಾಗುವುದು ಅಂತ ಪಿಆರ್‌ಇಡಿ ಎಇಇ ಎ.ಬಿ. ಪಟ್ಟಣಶೆಟ್ಟಿ ಹೇಳಿದ್ದಾರೆ.