ವಂಚಿಸಿದ್ದ ಹಣ ಕೇಳಿದ್ದಕ್ಕೆ ಐಟಿಗೆ ದೂರು!

By Web DeskFirst Published May 27, 2019, 8:29 AM IST
Highlights

ಸಿವಿಲ್‌ ಗುತ್ತಿಗೆದಾರನ ಬಳಿ ಕೆಲಸಕ್ಕಿದ್ದ ಆರೋಪಿಯೊಬ್ಬ 3 ಕೋಟಿ ವಂಚಿಸಿದಲ್ಲದೆ, ವಂಚನೆಯ ಹಣ ವಾಪಸ್‌ ಕೇಳಿದ್ದಕ್ಕೆ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ್ದಾರೆ. 

ಬೆಂಗಳೂರು :  ‘ಉಂಡು ಹೋದ, ಕೊಂಡು ಹೋದ’ ಎಂಬ ಗಾದೆಯಂತೆ ಸಿವಿಲ್‌ ಗುತ್ತಿಗೆದಾರನ ಬಳಿ ಕೆಲಸಕ್ಕಿದ್ದ ಆರೋಪಿಯೊಬ್ಬ 3 ಕೋಟಿ ವಂಚಿಸಿದಲ್ಲದೆ, ವಂಚನೆಯ ಹಣ ವಾಪಸ್‌ ಕೇಳಿದ್ದಕ್ಕೆ ಬೇನಾಮಿ ಆಸ್ತಿ ಹೊಂದಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಗೆ ಗುತ್ತಿಗೆದಾರನ ವಿರುದ್ಧವೇ ದೂರು ಕೊಟ್ಟಿರುವ ಅಪರೂಪದ ಪ್ರಕರಣ ಬೆಳಕಿಗೆ ಬಂದಿದೆ.

ಇತ್ತ ಸಿವಿಲ್‌ ಗುತ್ತಿಗೆದಾರನಿಗೆ ಐಟಿ ಇಲಾಖೆ ನೋಟಿಸ್‌ ನೀಡುತ್ತಿದ್ದಂತೆ, ಆರೋಪಿಗಳ ವಿರುದ್ಧ ಸರ್ಕಾರಿ ಸಿವಿಲ್‌ ಗುತ್ತಿಗೆದಾರ ಸುರೇಶ್‌ (48) ಎಂಬುವರು ಚಂದ್ರಲೇಔಟ್‌ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಸಹೋದರರಾದ ಮಲ್ಲತ್‌ಹಳ್ಳಿ ನಿವಾಸಿಗಳಾದ ಎಂ.ಆರ್‌.ಶಿವರಾಂ(30) ಹಾಗೂ ಎಂ.ಆರ್‌.ಸಂತೋಷ್‌(28) ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಚಂದ್ರಲೇಔಟ್‌ ನಿವಾಸಿಯಾಗಿರುವ ಸುರೇಶ್‌ ಅವರು ಸುಮಾರು ಹತ್ತು ವರ್ಷಗಳಿಂದ ಸರ್ಕಾರಿ ಸಿವಿಲ್‌ ಗುತ್ತಿಗೆದಾರರಾಗಿದ್ದಾರೆ. ಚಂದ್ರಲೇಔಟ್‌ ಮುಖ್ಯರಸ್ತೆಯಲ್ಲಿ ಕಚೇರಿಯನ್ನು ಹೊಂದಿದ್ದಾರೆ. ಸುರೇಶ್‌ ಅವರ ಕಚೇರಿಯ ವ್ಯವಹಾರ ನೋಡಿಕೊಳ್ಳಲು ಸೂಕ್ತ ಕೆಲಸಗಾರನಿಗಾಗಿ ಹುಡುಕಾಟ ನಡೆಸುತ್ತಿದ್ದರು. ಈ ವೇಳೆ ತಮಗೆ ಪರಿಚಯವಿರುವ ಹರೀಶ್‌ ಎಂಬಾತನ ಮೂಲಕ ಬಿ.ಕಾಂ ಪದವೀಧರನಾಗಿರುವ ಶಿವರಾಂನನ್ನು 2009ರಲ್ಲಿ ಕೆಲಸಕ್ಕೆ ನಿಯೋಜಿಸಿಕೊಂಡಿದ್ದರು.

ಹೀಗೆ ಶಿವರಾಂ 2009ರಿಂದ 2013ರವರೆಗೆ ಶಿವರಾಂ ಅವರ ಬಳಿ ಕೆಲಸ ಮಾಡಿದ್ದ. ನಂಬಿಕಸ್ಥ ಹುಡುಗನಂತೆ ಇದ್ದ ಕಾರಣ ಶಿವರಾಂ ಬ್ಯಾಂಕ್‌ ಸೇರಿದಂತೆ ತಮ್ಮ ಎಲ್ಲಾ ಹಣಕಾಸಿನ ವ್ಯವಹಾರಗಳನ್ನು ಆರೋಪಿಗೆ ವಹಿಸಿದ್ದರು. ಅಲ್ಲದೆ, ಸುರೇಶ್‌ ಯಾವುದೇ ಗುತ್ತಿಗೆ ಪಡೆದರೂ ಅದರ ಕೆಲಸವನ್ನು ಶಿವರಾಂ ನೋಡಿಕೊಳ್ಳುತ್ತಿದ್ದ. ಹೀಗಿರುವಾಗ 2010ರಿಂದ 12ರ ಅವಧಿಯಲ್ಲಿ ಸುರೇಶ್‌, ಆರೋಪಿಯನ್ನು ನಂಬಿ ಸಹಿ ಮಾಡಿದ ಹಲವು ಚೆಕ್‌ ಬುಕ್‌ಗಳನ್ನು ಕೊಟ್ಟಿದ್ದರು. ಆತನೇ ಬ್ಯಾಂಕಿನಲ್ಲಿ ಹಣ ಡ್ರಾ ಮಾಡಿ ಕೆಲಸಗಾರರಿಗೆ ಮತ್ತು ಕೆಲಸಕ್ಕೆ ಬೇಕಾದ ಸಾಮಾಗ್ರಿಗಳನ್ನು ಪೂರೈಸುತ್ತಿದ್ದ.

ಆರ್‌ಪಿಸಿ ಲೇಔಟ್‌ನಲ್ಲಿರುವ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಸುರೇಶ್‌ ಖಾತೆ ಹೊಂದಿದ್ದಾರೆ. ಈ ಖಾತೆಯಿಂದ 17.88 ಕೋಟಿಯನ್ನು ಡ್ರಾ ಮಾಡಿದ್ದ. ಈ ಹಣದಲ್ಲಿ ಕೆಲಸಕ್ಕೆ ಬೇಕಾದ ಸಾಮಾಗ್ರಿ ಖರೀದಿ ಹಾಗೂ ಕೆಲಸಗಾರರಿಗೆ ವೇತನ ನೀಡಬೇಕಿತ್ತು. ಆದರೆ ಶಿವರಾಂ ಕೆಲಸಗಾರರ ವೇತನ ಹಾಗೂ ಸಾಮಾಗ್ರಿ ಪೂರೈಸಿದವರಿಗೆ ಹಣ ಕೊಡದೆ 1.60 ಕೋಟಿಯನ್ನು ತನ್ನ ಖಾತೆಗೆ ಜಮೆ ಮಾಡಿಕೊಂಡಿದ್ದ. ಜತೆಗೆ ತನ್ನ ಸಹೋದರ ಸಂತೋಷ್‌ ಹೆಸರಿನಲ್ಲಿ ಬ್ಯಾಂಕ್‌ ಖಾತೆಯಲ್ಲಿ 1.30 ಕೋಟಿ ಠೇವಣಿ ಇರಿಸಿದ್ದ. ಲೆಕ್ಕ ಪರಿಶೋಧನೆ ವೇಳೆ ಆರೋಪಿ ಒಟ್ಟಾರೆ ಸುಮಾರು 3 ಕೋಟಿ ವಂಚನೆ ಮಾಡಿರುವುದು ಬೆಳಕಿಗೆ ಬಂದಿತ್ತು.

ಖಾತೆಯಲ್ಲಿತ್ತು ಕೋಟಿ ಹಣ

ವಂಚನೆ ತಿಳಿದ ಕೂಡಲೇ ಸುರೇಶ್‌ ಅವರು ಬ್ಯಾಂಕ್‌ನವರ ಸಹಾಯದಿಂದ ಆರೋಪಿ ಬ್ಯಾಂಕ್‌ ಖಾತೆ ಪರಿಶೀಲಿಸಿದಾಗ ಕೋಟ್ಯಂತರ ರುಪಾಯಿ ಇರುವುದನ್ನು ಕಂಡು ಅಚ್ಚರಿಗೊಳಗಾಗಿದ್ದರು. ಆರೋಪಿಯನ್ನು ಕೆಲಸದಿಂದ ತೆಗೆದು ಹಾಕಿದ್ದ ಗುತ್ತಿಗೆದಾರ ಹಣ ವಾಪಸ್‌ ನೀಡುವಂತೆ ಶಿವರಾಂಗೆ ಸೂಚಿಸಿದ್ದರು. ಆದರೆ ಹಣ ಕೊಡದೆ ಆರೋಪಿ ಸತಾಯಿಸುತ್ತಿದ್ದ.

ಗುತ್ತಿಗೆದಾರ ದೂರಿನಲ್ಲಿ ಹೇಳಿರುವ  2.90 ಕೋಟಿ ಹಣದ ಬಗ್ಗೆ ದಾಖಲೆ ಕೇಳಲಾಗಿದೆ. ಐಟಿ ಇಲಾಖೆ ಕೇಳಿರುವ ನೋಟಿಸ್‌ ಬಗ್ಗೆ ಐಟಿ ಇಲಾಖೆಗೆ ಗುತ್ತಿಗೆದಾರರ ಉತ್ತರ ನೀಡಲಿದ್ದಾರೆ. ಆರೋಪಿಗಳು ಸಿಕ್ಕ ಬಳಿಕ ಹಣದ ಬಗ್ಗೆ ಮಾಹಿತಿ ಲಭ್ಯವಾಗಲಿದೆ ಎಂದು ಚಂದ್ರಲೇಔಟ್‌ ಠಾಣೆ ಪೊಲೀಸರು ಮಾಹಿತಿ ನೀಡಿದರು.

ಜೀವ ಬೆದರಿಕೆ ಹಾಕಿದ್ದ!

ಹಣ ಕೊಡುವಂತೆ ಸುರೇಶ್‌ ಒತ್ತಡ ಹೇರಿದಾಗ ಆರೋಪಿ ಪ್ರಾಣ ಬೆದರಿಕೆ ಹಾಕಿದ್ದ. ಹಣ ಕೊಡದಿದ್ದರೆ ಪೊಲೀಸ್‌ ಠಾಣೆಗೆ ದೂರು ಕೊಡುವುದಾಗಿ ಸುರೇಶ್‌ ಹೆದರಿಸಿದ್ದರು. ನೀನು ದೂರು ನೀಡಿದರೆ ಬೇನಾಮಿ ಆಸ್ತಿ ಎಂದು ಆದಾಯ ತೆರಿಗೆ ಇಲಾಖೆಗೆ ದೂರು ಕೊಡುವುದಾಗಿ ಶಿವರಾಂ, ಗುತ್ತಿಗೆದಾರನಿಗೆ ಬೆದರಿಕೆವೊಡ್ಡಿದ್ದ. ಕೊನೆಗೆ ಹೇಳಿದಂತೆ ಆರೋಪಿ ಐಟಿ ಇಲಾಖೆಗೆ ದೂರು ದಾಖಲಿಸಿದ್ದ. ಆದಾಯ ತೆರಿಗೆ ಇಲಾಖೆ .2.90 ಕೋಟಿ ಬಗ್ಗೆ ಗುತ್ತಿಗೆದಾರನಿಗೆ ನೋಟಿಸ್‌ ನೀಡಿದ್ದರು.

ಹಣ ವಾಪಸ್‌ ನೀಡುವಂತೆ ಕೇಳಿದ್ದಕ್ಕೆ ಐಟಿ ಇಲಾಖೆಗೆ ಆರೋಪಿ ದೂರು ನೀಡಿದ್ದಾನೆ. ನನ್ನ ಹಣ ಕದ್ದು ನನ್ನ ವಿರುದ್ಧವೇ ಐಟಿ ಇಲಾಖೆಗೆ ಸುಳ್ಳು ದೂರು ನೀಡಿದ್ದಾನೆ. ಆರೋಪಿಗಳನ್ನು ಬಂಧಿಸಿ ಕ್ರಮಕೈಗೊಳ್ಳಬೇಕೆಂದು ಗುತ್ತಿಗೆದಾರ ದೂರು ನೀಡಿದ್ದಾರೆ. ಈ ದೂರಿನನ್ವಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು

ವರದಿ : ಎನ್‌.ಲಕ್ಷ್ಮಣ್‌

click me!