ದೇಗುಲಗಳಿಗೆ ಮುಸ್ಲಿಮನಿಂದ ಉಚಿತ ಬೋರ್‌ವೆಲ್‌!

Published : May 27, 2019, 08:04 AM IST
ದೇಗುಲಗಳಿಗೆ ಮುಸ್ಲಿಮನಿಂದ ಉಚಿತ ಬೋರ್‌ವೆಲ್‌!

ಸಾರಾಂಶ

ದೇಗುಲಗಳಿಗೆ ಮುಸ್ಲಿಮನಿಂದ ಉಚಿತ ಬೋರ್‌ವೆಲ್‌!| ದೇವಸ್ಥಾನ, ಗುರುದ್ವಾರ, ಜೈನ ಮಂದಿರ, ಚಚ್‌ರ್‍, ಮಸೀದಿಗಳ ದಾಹ ಇಂಗಿಸುತ್ತಿರುವ ಹುಬ್ಬಳ್ಳಿಯ ಬಾಷಾ| ಮುಸ್ಲಿಂ ಆಗಿದ್ದರೂ ಕಂಪನಿಗೆ ‘ವೆಂಕಟೇಶ್ವರ’ನ ಹೆಸರು!

ಮಯೂರ ಹೆಗಡೆ, ಕನ್ನಡಪ್ರಭ

ಹುಬ್ಬಳ್ಳಿ[ಮೇ.27]: ಪುಣ್ಯ ಕ್ಷೇತ್ರಗಳಲ್ಲಿ ದಾಸೋಹಕ್ಕೂ ನೀರಿಲ್ಲ, ಗರ್ಭಗುಡಿಗಳಲ್ಲಿ ಅಭಿಷೇಕಕ್ಕೂ ಜಲವಿಲ್ಲ ಎಂಬಂತಹ ಪರಿಸ್ಥಿತಿ ಉದ್ಭವಿಸಿರುವ ಇಂದಿನ ದಿನಗಳಲ್ಲಿ ದೇವರನ್ನು ತಂಪಾಗಿಡುವ ಕೆಲಸವನ್ನು ಇಲ್ಲೊಬ್ಬರು ಕಳೆದ 30 ವರ್ಷಗಳಿಂದ ಮಾಡುತ್ತಿದ್ದಾರೆ. ಧರ್ಮದ ಗಡಿ ಮೀರಿ ದೇವಸ್ಥಾನ, ಚಚ್‌ರ್‍, ಮಸೀದಿ, ಗುರುದ್ವಾರ, ಜೈನ ಮಂದಿರಗಳಲ್ಲಿ ಉಚಿತವಾಗಿ ಬೋರ್‌ವೆಲ್‌ ಕೊರೆಸಿ ನೀರಿನ ಸಮಸ್ಯೆ ನೀಗಿಸಿದ್ದಾರೆ.

ಹುಬ್ಬಳ್ಳಿ ನಿವಾಸಿ, ಮೂಲತಃ ಬಳ್ಳಾರಿ ಜಿಲ್ಲೆ ಹೊಸಪೇಟೆಯವರಾದ ಅಲ್‌ಹಾಜ್‌ ಸಿ.ಎಸ್‌. ಮಹಬೂಬ ಬಾಷಾ ಇಂತಹ ಸಮಾಜಮುಖಿ ಕಾರ್ಯ ನಡೆಸುತ್ತಿರುವವರು. ಇಲ್ಲಿನ ಓಲ್ಡ್‌ ಕೋರ್ಟ್‌ ಸರ್ಕಲ್‌ ಬಳಿಯಿರುವ ತಮ್ಮ ಕಂಪನಿಗೆ ವೆಂಕಟೇಶ್ವರ ರಾಕ್‌ ಡ್ರಿಲ್ಸ್‌ ಎಂಬ ಹೆಸರಿಟ್ಟಿದ್ದಾರೆ. ಬೋರ್‌ವೆಲ್‌ ಕೊರೆಸುವ, ವಿವಿಧ ಕಂಪನಿಗಳ ಪಂಪ್‌ಸೆಟ್‌ ಡಿಸ್ಟ್ರಿಬ್ಯೂಟರ್‌ ಡೀಲರ್‌ ಆಗಿ ಇವರ ಕಂಪನಿ ಕೆಲಸ ಮಾಡುತ್ತಿದೆ. ನೀರೊದಗಿಸುವುದು ನಮ್ಮ ವೃತ್ತಿಯೂ ಹೌದು, ಸೇವಾ ಮಾರ್ಗವೂ ಹೌದು ಎನ್ನುವ ಬಾಷಾ ಅವರ ನಾಲಿಗೆ ತುದಿಯಲ್ಲಿ ವೆಂಕಟೇಶ್ವರ, ಗಣಪತಿ ರಾಘವೇಂದ್ರ ಸ್ವಾಮೀಜಿ ಸ್ತೋತ್ರಗಳಿವೆ. ಗುರುನಾನಕರ ಬೋಧನೆಗಳು, ಬಸವಣ್ಣನ ವಚನಗಳು, ವೇಮನರ ತೆಲುಗಿನ ಬೋಧನೆಗಳ ಬಗ್ಗೆ ನಿರರ್ಗಳವಾಗಿ ಮಾತನಾಡುತ್ತಾರೆ.

ಜೀವ ಜಗತ್ತಿನ ಮೂಲವಾಗಿರುವ ನೀರು ಶುದ್ಧತೆಯ ಪ್ರತೀಕ. ನೀರಿಗೆ ಜಾತಿ- ಧರ್ಮಗಳ ಬೇಧವಿಲ್ಲ. ಹೀಗಿರುವಾಗ ಕೇವಲ ನಮ್ಮ ಮಸೀದಿಗಳಲ್ಲಿ ಉಂಟಾಗುವ ನೀರಿನ ಸಮಸ್ಯೆ ನೀಗಿಸಿದರೆ ದೇವರು ಮೆಚ್ಚುತ್ತಾನಾ? ಹೀಗಾಗಿ ಎಲ್ಲ ಪ್ರಾರ್ಥನಾ ಮಂದಿರಗಳಿಗೂ ನೀರು ನೀಡುವ ಕಾರ್ಯ ಮಾಡುತ್ತಿದ್ದೇವೆ ಎಂದು ಬಾಷಾ ಹೇಳುತ್ತಾರೆ.

ನೀರಿನ ಸೇವೆ:

ಹೊಸಪೇಟೆಯಲ್ಲಿ ಮೊದಲು ನಾವು ಚಿಕ್ಕದಾಗಿ ಕಂಪನಿ ಆರಂಭಿಸಿದ್ದೆವು. ಅಲ್ಲಿನ ಮಸೀದಿಯೊಂದರಲ್ಲಿ ನೀರಿನ ಸಮಸ್ಯೆ ಇರುವುದು ಗಮನಕ್ಕೆ ಬಂದಿತ್ತು. ಆ ವೇಳೆ ಶೇ.10 ಬಡ್ಡಿದರದಲ್ಲಿ . 10 ಸಾವಿರ ಸಾಲ ಮಾಡಿ ಮಸೀದಿಗೆ ಪಂಪ್‌ ಸೆಟ್‌ ಒದಗಿಸಿ ನೀರಿನ ಸಮಸ್ಯೆ ನೀಗಿಸುವ ಪ್ರಯತ್ನ ಮಾಡಿದೆವು. ಅದಾದ ಬಳಿಕ ನಮ್ಮ ವ್ಯವಹಾರವೂ ಉನ್ನತಿಗೇರಿತು. ದೇವರ ಸೇವೆಯಿಂದಲೇ ವ್ಯಾಪಾರ ಅಭಿವೃದ್ಧಿಯಾಗಿದೆ ಎಂಬ ಭಾವನೆ ನನ್ನಲ್ಲಿ ಮೂಡಿತು. ಬಳಿಕ 1989ರಲ್ಲಿ ಹುಬ್ಬಳ್ಳಿಗೆ ಬಂದು ವೆಂಕಟೇಶ್ವರನ ಹೆಸರಲ್ಲಿ ಬೋರ್‌ವೆಲ್‌ ಕಂಪನಿ ಆರಂಭಿಸಿದ್ದೇವೆ. ಇದಕ್ಕೆ ನಮ್ಮಲ್ಲೇ ಕೆಲವರು ಆಕ್ಷೇಪಿಸಿದ್ದೂ ಇದೆ. ಆದರೆ, ಅದಕ್ಕೆಲ್ಲ ಸೊಪ್ಪು ಹಾಕುವುದಿಲ್ಲ ಎನ್ನುತ್ತಾರೆ ಬಾಷಾ.

ಪ್ರತಿ ವರ್ಷ ರಂಜಾನ್‌ ಮಾಸದಲ್ಲಿ ಈ ರೀತಿ ಉಚಿತವಾಗಿ ಬೋರ್‌ವೆಲ್‌ ಕೊರೆಸುತ್ತಿರುವ ಇವರು, ಇಲ್ಲಿವರೆಗೆ ದೇವಸ್ಥಾನ, ಚಚ್‌ರ್‍, ಮಸೀದಿ, ಗುರುದ್ವಾರ, ಜೈನ್‌ ಮಂದಿರ ಸೇರಿ ಸುಮಾರು 35ಕ್ಕೂ ಹೆಚ್ಚಿನ ಪ್ರಾರ್ಥನಾಲಯಗಳಲ್ಲಿ ನೀರಿನ ಸೇವೆ ನೀಡಿದ್ದಾರೆ. ಕೆಲವೆಡೆ ನೀರಿನ ತೊಟ್ಟಿ, ಪೈಪ್‌ ಸಂಪರ್ಕಗಳನ್ನೂ ಒದಗಿಸಿದ್ದಾರೆ. ಹುಬ್ಬಳ್ಳಿಯ ಪ್ರಸಿದ್ಧವಾದ ಫತೇಷಾವಲಿ ದರ್ಗಾ, ಸಿದ್ಧಾರೂಢ ಮಠದಲ್ಲಿ ನೀರಿನ ಸಮಸ್ಯೆ ಉಂಟಾದಾಗ ಮಂಡಳಿಯ ಕೋರಿಕೆಯಂತೆ ಉಚಿತವಾಗಿ ಬೋರ್‌ವೆಲ್‌ ಕೊರೆಸಿದ್ದಾರೆ.

ಇಲ್ಲಿನ ರಾಘವೇಂದ್ರ ಸ್ವಾಮಿ ಮಠ, ಹಜರತ್‌ ಮೋದಿನ್‌ ದರ್ಗಾ, ಆನಂದ ನಗರದ ಸಿ.ಎಸ್‌ಐ. ಅಬ್ರಾಹಂ ಚಚ್‌ರ್‍, ಗೋಕುಲದಲ್ಲಿನ ಜೈನ ಮಂದಿರ, ವೆಂಕಟೇಶ್ವರ ದೇವಸ್ಥಾನ, ಕಳೆದ ವಾರ ಇಲ್ಲಿನ ಗುರುನಾನಕ ಗುರುದ್ವಾರಕ್ಕೆ ಬೋರ್‌ವೆಲ್‌ ಒದಗಿಸಿ ಬರುವ ಭಕ್ತರಿಗೆ ಅನುಕೂಲ ಮಾಡಿದ್ದಾರೆ.

PREV
click me!

Recommended Stories

ನೇತ್ರದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಲಲಿತಮ್ಮ
ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?