ಬೆಂಗಳೂರಲ್ಲಿ ಗರಿಷ್ಠ 29 ಸಾವು, 1447 ಮಂದಿಗೆ ಸೋಂಕು, 1003 ಮಂದಿ ಡಿಸ್ಚಾರ್ಜ್

By Kannadaprabha NewsFirst Published Jul 11, 2020, 10:22 AM IST
Highlights

ರಾಜ್ಯದಲ್ಲಿ ಕೊರೋನಾ ಸಾವು-ಸೋಂಕಿನ ಆರ್ಭಟ ಮುಂದುವರಿದಿದೆ. ಶುಕ್ರವಾರ ದಿನವೊಂದರಲ್ಲಿ ಇದುವರೆಗಿನ ಅತಿ ಹೆಚ್ಚು ಅಂದರೆ 57 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಲ್ಲಿ ದಾಖಲೆಯ 1447 ಜನರು ಸೇರಿದಂತೆ 2313 ಮಂದಿಗೆ ಸೋಂಕು ದೃಢಪಟ್ಟಿದೆ. ಸಮಾಧಾನದ ವಿಚಾರವೆಂದರೆ ಒಂದೇ ದಿನ ದಾಖಲೆಯ 1003 ಮಂದಿ ಗುಣಮುಖರಾಗಿದ್ದಾರೆ.

ಬೆಂಗಳೂರು(ಜು.11): ರಾಜ್ಯದಲ್ಲಿ ಕೊರೋನಾ ಸಾವು-ಸೋಂಕಿನ ಆರ್ಭಟ ಮುಂದುವರಿದಿದೆ. ಶುಕ್ರವಾರ ದಿನವೊಂದರಲ್ಲಿ ಇದುವರೆಗಿನ ಅತಿ ಹೆಚ್ಚು ಅಂದರೆ 57 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ. ಇನ್ನು ಬೆಂಗಳೂರಲ್ಲಿ ದಾಖಲೆಯ 1447 ಜನರು ಸೇರಿದಂತೆ 2313 ಮಂದಿಗೆ ಸೋಂಕು ದೃಢಪಟ್ಟಿದೆ. ಸಮಾಧಾನದ ವಿಚಾರವೆಂದರೆ ಒಂದೇ ದಿನ ದಾಖಲೆಯ 1003 ಮಂದಿ ಗುಣಮುಖರಾಗಿದ್ದಾರೆ.

ಜು.8ರಂದು ಒಂದೇ ದಿನ 54 ಮಂದಿ ಸೋಂಕಿತರು ಸಾವನ್ನಪ್ಪಿದ್ದೇ ಈ ವರೆಗಿನ ಏಕದಿನದ ದಾಖಲೆಯಾಗಿತ್ತು. ಇದನ್ನು ಮೀರಿ ಶುಕ್ರವಾರ ಬೆಂಗಳೂರಿನಲ್ಲೇ ದಾಖಲೆಯ 29 ಮಂದಿ ಸೇರಿ ರಾಜ್ಯದಲ್ಲಿ 57 ಜನ ಸಾವನ್ನಪ್ಪಿದ್ದಾರೆ.

'ಮೋದಿ ಸರ್ಕಾರ ಕೋವಿಡ್‌ ನಿಯಂತ್ರಣದ ಜತೆಗೆ ದೇಶದ ಅಭಿವೃದ್ಧಿಗೆ ಒತ್ತು ನೀಡಿದೆ'

ಕರೋನಾ ಸೋಂಕಿನಿಂದ ಗುಣಮುಖರಾದವರು ಹಾಗೂ ಮೃತಪಟ್ಟವರು ಆಸ್ಪತ್ರೆಯಲ್ಲಿ ಕಳೆದಿರುವ ದಿನಗಳ ಅಂದಾಜಿನ ಮೇಲೆ ಶುಕ್ರವಾರದಿಂದ ಐದು ದಿನ ರಾಜ್ಯದಲ್ಲಿ ಸಾವಿನ ಸಂಖ್ಯೆ ವಿಪರೀತ ಹೆಚ್ಚಾಗುತ್ತದೆ ಎಂದು ತಜ್ಞರು ಅಂದಾಜಿಸಿರುವ ಬಗ್ಗೆ ‘ಕನ್ನಡಪ್ರಭ’ ಶುಕ್ರವಾರ ಮುಖಪುಟದಲ್ಲಿ ವರದಿ ಮಾಡಿತ್ತು.

ಅದರಂತೆಯೇ ಸಾವಿನ ಸರಣಿ ಆರಂಭಗೊಂಡಿದ್ದು, ತನ್ಮೂಲಕ ಶುಕ್ರವಾರಕ್ಕೆ ಕರೋನಾಗೆ ಬಲಿಯಾದವರ ಒಟ್ಟು ಸಂಖ್ಯೆ ಐನೂರರ ಗಡಿ ದಾಟಿ 543 ತಲುಪಿದೆ. ಇದರಲ್ಲಿ 206 ಸಾವು ಬೆಂಗಳೂರಿನಲ್ಲೇ ಸಂಭವಿಸಿವೆ.

2313 ಮಂದಿಗೆ ಸೋಂಕು:

ಇದರ ನಡುವೆ ಶುಕ್ರವಾರವೂ ರಾಜ್ಯದಲ್ಲಿ ದಾಖಲೆ ಸಂಖ್ಯೆಯಲ್ಲಿ ಸ್ಪೋಟಗೊಂಡಿರುವ ಕೊರೋನಾ ಸೋಂಕು, ಒಂದೇ ದಿನ 2313 ಮಂದಿಗೆ ಹರಡಿದೆ. ಈ ಪೈಕಿ ರಾಜಧಾನಿ ಬೆಂಗಳೂರಿನಲ್ಲೇ ದಾಖಲೆಯ 1447 ಮಂದಿಗೆ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಬೆಂಗಳೂರಿನ ಒಟ್ಟು ಸೋಂಕಿತರ ಸಂಖ್ಯೆ 15,329ಕ್ಕೆ, ರಾಜ್ಯದ ಒಟ್ಟು ಸೋಂಕಿತರ ಸಂಖ್ಯೆ 33418ಕ್ಕೆ ಏರಿಕೆಯಾಗಿದೆ.

ಗುರುವಾರ ರಾಜ್ಯದಲ್ಲಿ 2228 ಮಂದಿಗೆ, ಬೆಂಗಳೂರಿನಲ್ಲಿ 1373 ಮಂದಿಗೆ ಒಂದೇ ದಿನ ಸೋಂಕು ತಗುಲಿದ್ದೇ ರಾಜ್ಯ ಮತ್ತು ರಾಜಧಾನಿಯ ಈ ವರೆಗಿನ ಏಕದಿನದ ದಾಖಲೆಯಾಗಿತ್ತು.

17ರಂದು ರಾಜ್ಯದ ಹಿಂದಿನ ಏಳು ಶಿಕ್ಷಣ ಸಚಿವರ ಸುರೇಶ್‌ ಕುಮಾರ್ ಮಹತ್ವದ ಸಭೆ

ಉಳಿದಂತೆ ದಕ್ಷಿಣ ಕನ್ನಡದಲ್ಲಿ 139, ವಿಜಯಪುರ 89, ಬಳ್ಳಾರಿ 66, ಕಲಬುರಗಿ 58, ಯಾದಗಿರಿ ಮೈಸೂರು ತಲಾ 51, ಧಾರವಾಡ 50, ಹಾವೇರಿ 42, ಉಡುಪಿ 34, ಉತ್ತರ ಕನ್ನಡ, ಕೊಡಗು ತಲಾ 33, ಮಂಡ್ಯ 31, ರಾಯಚೂರು 25, ರಾಮನಗರ 23, ದಾವಣಗೆರೆ 21, ಬೀದರ್‌, ಗದಗ ತಲಾ 19, ಬೆಳಗಾವಿ 15, ಚಿಕ್ಕಬಳ್ಳಾಪುರ 12, ತುಮಕೂರು 10, ಕೋಲಾರ, ಚಾಮರಾಜನಗರ ತಲಾ 9, ಕೊಪ್ಪಳ 7, ಹಾಸನ, ಶಿವಮೊಗ್ಗ, ಬಾಗಲಕೋಟೆ ತಲಾ 6, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ.

19 ಸಾವಿರ ದಾಟಿದ ಸಕ್ರಿಯ ಕೇಸು:

ಶುಕ್ರವಾರ 1003 ಮಂದಿ ಗುಣಮುಖರಾಗಿದ್ದಾರೆ. ಇದರ ಜತೆ ಹೊಸ ಪ್ರಕರಣಗಳೊಂದಿಗೆ ಒಟ್ಟು ಸಕ್ರಿಯ ಸೋಂಕಿತರ ಸಂಖ್ಯೆ 19035ಕ್ಕೆ ಏರಿಕೆಯಾಗಿದೆ. ಈ ಪೈಕಿ 472 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಾಲ್ಕು ಅನ್ಯ ಕಾರಣದ ಸಾವು ಸೇರಿ ಈ ವರೆಗಿನ ಒಟ್ಟು ಸಾವಿನ ಸಂಖ್ಯೆ 547ಕ್ಕೆ ಏರಿಕೆಯಾಗಿದೆ. ಶುಕ್ರವಾರ 19228 ಸ್ಯಾಂಪಲ್‌ಗಳನ್ನು ಪರೀಕ್ಷಿಸಲಾಗಿತ್ತು.

ಸಾವು ಎಲ್ಲೆಲ್ಲಿ?:

14 ಮಹಿಳೆಯರು ಸೇರಿ 57 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಈ ಪೈಕಿ ಬೆಂಗಳೂರಿನಲ್ಲೇ 29 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಉಳಿದಂತೆ ದಕ್ಷಿಣ ಕನ್ನಡದಲ್ಲಿ 8, ಮೈಸೂರು 4, ಬೀದರ್‌ 3, ಗದಗ, ಕಲಬುರಗಿ, ಧಾರವಾಡ, ಚಿಕ್ಕಬಳ್ಳಾಪುರದಲ್ಲಿ ತಲಾ 2, ಬಳ್ಳಾರಿ, ಚಿಕ್ಕಮಗಳೂರು, ಉತ್ತರ ಕನ್ನಡ, ರಾಯಚೂರು ಮತ್ತು ಹಾವೇರಿ ಜಿಲ್ಲೆಗಳಲ್ಲಿ ತಲಾ ಒಬ್ಬರು ಸೋಂಕಿತರು ಸಾವನ್ನಪ್ಪಿದ್ದಾರೆ. ಈ ಪೈಕಿ 51 ಮಂದಿ ಐಎಲ್‌ಐ (ವಿಷಮಶೀತ ಜ್ವರ) ಮತ್ತು ಸಾರಿ (ಉಸಿರಾಟ ತೊಂದರೆ) ಹಾಗೂ ಇತರೆ ಕೆಲ ಪೂರ್ವ ಅನಾರೋಗ್ಯ ಹಿನ್ನೆಲೆಯುಳ್ಳವರು. ಜೊತೆಗೆ ಪೂರ್ವ ಅನಾರೋಗ್ಯದಿಂದ ಬಳಲುತ್ತಿದ್ದ ಮೂವರು ‘ಅಸಿಮ್ಟಮ್ಯಾಟಿಕ್‌’ (ಸೋಂಕು ಲಕ್ಷಣ ಇಲ್ಲದ) ಸೋಂಕಿತರೂ ಮೃತಪಟ್ಟಿದ್ದಾರೆ. ಇನ್ನು ಮೂವರ ಸಾವಿಗೆ ಕಾರಣ ಪತ್ತೆ ಹಚ್ಚಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಜ್ಞರು ಸಾವಿನ ಅಂದಾಜು ಮಾಡಿದ್ದು ಹೇಗೆ?

‘ರಾಜ್ಯದಲ್ಲಿ ಜುಲೈ 2 ರಿಂದ 7ರ ವರೆಗೆ 10,862 ಸೋಂಕು ಪ್ರಕರಣಗಳು ವರದಿಯಾಗಿದ್ದು, 452 ಐಸಿಯು ಪ್ರಕರಣ ಸೇರಿ ಹೈರಿಸ್ಕ್‌ ಪ್ರಕರಣಗಳ ಸಂಖ್ಯೆ 2977ಕ್ಕೆ ಏರಿಕೆಯಾಗಿತ್ತು ಗುಣಮುಖರಾಗುತ್ತಿರುವ ಸರಾಸರಿ ದಿನಗಳು (12.3 ದಿನ) ಹಾಗೂ ಸಾವನ್ನಪ್ಪಿರುವ ಸೋಂಕಿತರು ಆಸ್ಪತ್ರೆಯಲ್ಲಿದ್ದ ಸರಾಸರಿ ದಿನಗಳನ್ನು (5 ದಿನ) ಅಂದಾಜಿಸಿದರೆ ಹೊಸ ಪ್ರಕರಣಗಳ ಫಲಿತಾಂಶ ಶುಕ್ರವಾರದಿಂದ ನಾಲ್ಕೈದು ದಿನಗಳಲ್ಲಿ ಹೊರಬರದಲಿದೆ. ಇದರಿಂದ ಮುಂದಿನ ಐದು ದಿನಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ’ ಎಂದು ತಜ್ಞರು ಅಂದಾಜಿಸಿದ್ದರು.

click me!