Belagavi: ಮಳೆಯಿಂದ 255 ಕೋಟಿ ಹಾನಿ: ಮಳೆಯಿಂದ ಧರೆಗುರುಳುತ್ತಿರುವ ಮ‌ನೆಗಳು

By Govindaraj S  |  First Published Aug 11, 2022, 12:58 AM IST

• ಬೆಳಗಾವಿಯಲ್ಲಿ ಕಳೆದೊಂದು ವಾರದಿಂದ ಧಾರಾಕಾರ ಮಳೆ
• ಭೂತರಾಮನಹಟ್ಟಿ ಗ್ರಾಮದಲ್ಲಿ ಮನೆಗೋಡೆ ಕುಸಿತ, ಬಾಣಂತಿ ಮಗು ಸೇರಿ ಕುಟುಂಬಸ್ಥರ ಪರದಾಟ
• ಬೆಳಗಾವಿ ಜಿಲ್ಲೆಯಲ್ಲಿ ಮಳೆಯಿಂದ ಈವರೆಗೆ 255 ಕೋಟಿ ರೂ. ಹಾನಿ


ವರದಿ: ಮಹಾಂತೇಶ ಕುರಬೇಟ್, ಏಷ್ಯಾನೆಟ್ ಸುವರ್ಣನ್ಯೂಸ್, ಬೆಳಗಾವಿ

ಬೆಳಗಾವಿ (ಆ.11): ಜಿಲ್ಲೆಯಲ್ಲಿ ಜೂನ್ ತಿಂಗಳದ ಈಚೆಗೆ ಸುರಿದ ಧಾರಾಕಾರ ಮಳೆಗೆ ಅಪಾರ ಹಾನಿಯಾಗಿದೆ. ಕಳೆದ ಒಂದು ವಾರದಿಂದ ಬೆಳಗಾವಿಯಲ್ಲಿ ನಿರಂತರ ಧಾರಾಕಾರ ಮಳೆ ಆಗುತ್ತಿದೆ. ಅದರಲ್ಲೂ ಬೆಳಗಾವಿ ನಗರ ಸೇರಿ ಜಿಲ್ಲೆಯ ವಿವಿಧೆಡೆ ಹಳೆಯ ಮನೆಗಳು ಧರೆಗುರುಳುತ್ತಿದ್ದು, ಬಡ ಕುಟುಂಬಗಳು ಕಂಗಾಲಾಗಿವೆ. ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿ ಮನೆ ಗೋಡೆ ಕುಸಿದು ಬಾಣಂತಿ, ಮಗು ಸೇರಿ ಕುಟುಂಬಸ್ಥರು ಬಚಾವ್ ಆಗಿದ್ದಾರೆ.‌ ಇನ್ನು ಇಂದು ಮಳೆಹಾನಿ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸಭೆ ನಡೆಸಿದ್ದಾರೆ. 

Tap to resize

Latest Videos

ಬೆಳಗಾವಿ ಜಿಲ್ಲೆಯಲ್ಲಿ ಕಳೆದೊಂದು ತಿಂಗಳಿಂದ ಧಾರಾಕಾರ ಮಳೆ ಆಗುತ್ತಿದೆ. ಮಹಾಳೆಯಿಂದ ಬೆಳಗಾವಿ ಜಿಲ್ಲೆಯಲ್ಲಿ ಕೃಷ್ಣಾ, ವೇದಗಂಗಾ, ಧೂದಗಂಗಾ, ಮಲಪ್ರಭಾ, ಘಟಪ್ರಭಾ ನದಿಗಳ ಒಳಹರಿವು ಹೆಚ್ಚಳವಾಗಿದೆ. ಇದರಿಂದ ನಿಪ್ಪಾಣಿ, ಚಿಕ್ಕೋಡಿ, ಗೋಕಾಕ, ಮೂಡಲಗಿ ತಾಲೂಕಿನ 12 ಕ್ಕೂ ಅಧಿಕ ಕೆಳಹಂತದ ಸೇತುವೆಗಳು ಜಲಾವೃತಗೊಂಡಿದೆ. ಇನ್ನು ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ದತ್ತ ಮಂದಿರ ಜಲಾವೃತ ಆಗಿದ್ದರಿಂದ ದೇವಸ್ಥಾನದಲ್ಲಿನ ದೇವರ ಮೂರ್ತಿಯನ್ನೇ ರಾತ್ರೋರಾತ್ರಿ ಅರ್ಚಕರು ಸ್ಥಳಾಂತರ ಮಾಡಿದ್ದಾರೆ. 

ಬೆಳಗಾವಿಯ ಗಾಲ್ಫ್ ಮೈದಾನದಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ: ಸಿಸಿಟಿವಿಯಲ್ಲಿ ಸೆರೆ!

ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿ ಗ್ರಾಮದ ಲಕ್ಷ್ಮೀ ಗಲ್ಲಿಯ ಭೀಮರಾಯ ಪಾಟೀಲ್ ಎಂಬುವರ ಮನೆ ಗೋಡೆ ಬಿದ್ದಿದ್ದು, ಮನೆಯಲ್ಲಿದ್ದ ಬಾಣಂತಿ, ಒಂದು ತಿಂಗಳ ಮಗು ಸೇರಿ ಕುಟುಂಬಸ್ಥರು ಅದೃಷ್ಟವಶಾತ್ ಬಚಾವ್ ಆಗಿದ್ದಾರೆ. ಆದ್ರೆ ಗೋಡೆ ಕುಸಿದ ಮನೆಗೆ ಟಾರ್ಪಲ್ ಕಟ್ಟಿ ಕುಟುಂಬಸ್ಥರು ವಾಸಿಸುತ್ತಿದ್ದು ಬಾಣಂತಿ ಮಗು ಸೇರಿ ಕುಟುಂಬಸ್ಥರು ಪರದಾಡುವಂತಾಗಿದೆ‌. ಮನೆ ಮಾಲೀಕ ಭೀಮರಾಯ ಪಾಟೀಲ್ ಬೆನ್ನುಮೂಳೆ ಶಸ್ತ್ರಚಿಕಿತ್ಸೆ ಆಗಿದ್ದು, ಯಾವುದೇ ಕೆಲಸ ಮಾಡಲು ಬರಲ್ಲ. ಕಳೆದ ಕೆಲ ತಿಂಗಳ ಹಿಂದೆ ಹೆರಿಗೆಗೆ ಎಂದು ತವರು ಮನೆಗೆ ಬಂದ ಮಗಳ ಸ್ಥಿತಿ ನೋಡಿ ತಂದೆ ಭೀಮರಾಯ ಕಣ್ಣೀರಿಡುತ್ತಿದ್ದಾರೆ. ತಮಗೆ ಸೂಕ್ತ ಸಹಾಯ ಮಾಡುವಂತೆ ಸರ್ಕಾರಕ್ಕೆ ಕುಟುಂಸ್ಥರು ಮನವಿ ಮಾಡಿದ್ದಾರೆ.

ಮನೆಗೆ ನೀರು ನುಗ್ಗಿದ್ರೆ 24 ಗಂಟೆಯಲ್ಲಿ ಪರಿಹಾರಕ್ಕೆ ಸಚಿವರ ಸೂಚನೆ: ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಅತಿವೃಷ್ಟಿಯಿಂದ ಆದ ಹಾನಿ ಹಾಗೂ ಪರಿಹಾರ ಕ್ರಮಗಳ ಕುರಿತು ಸಭೆ ನಡೆಸಿ ಮಾಹಿತಿ ಪಡೆದರು. ಸಭೆಯಲ್ಲಿ ರಸ್ತೆಗಳು, ಮನೆ ಹಾಗೂ ಬೆಳೆ ಹಾನಿ ಬಗ್ಗೆ ಅಧಿಕಾರಿಗಳು ಸಚಿವರಿಗೆ ಮಾಹಿತಿ ನೀಡಿದ್ರು. ಇದೇ ಸಂದರ್ಭದಲ್ಲಿ ಈವರೆಗೂ ಮಳೆಯಿಂದ 255 ಕೋಟಿ ಹಾನಿಯಾಗಿದೆ ಎಂದು ಅಂದಾಜು ಮಾಡಲಾಗಿದೆ ಎಂದು ಡಿಸಿ ನಿತೇಶ್ ಪಾಟೀಲ್ ಸಚಿವರ ಗಮನಕ್ಕೆ ತಂದರು. ಅತಿವೃಷ್ಟಿಯಿಂದ ಮನೆಹಾನಿ ಅಥವಾ ಮನೆಗಳಿಗೆ ನೀರು ನುಗ್ಗಿದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬಗಳಿಗೆ 24 ಗಂಟೆಗಳಲ್ಲಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ ನೀಡಿದ್ದಾರೆ. ಯಾವುದೇ ಕುಟುಂಬಗಳು 2019 ರ ನಂತರ ಮನೆ ಬಿಟ್ಟು ಬೇರೆ ಕಡೆ ಇದ್ದಾಗಲೂ ಅಂತಹ ಖಾಲಿ ಮನೆಗಳು ಬಿದ್ದರೂ ಕೂಡ ಅಂತಹ ಕುಟುಂಬಗಳಿಗೂ ಮನೆಹಾನಿ ಪರಿಹಾರವನ್ನು ಬಿಡುಗಡೆಗೊಳಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಂಡರೆ ಕೂಡಲೇ ಸಂಪರ್ಕ ಕಲ್ಪಿಸಬೇಕೆಂದು ನಿರ್ದೇಶನ ನೀಡಿದ್ದಾರೆ.

ಬೆಳಗಾವಿ ನಗರದಲ್ಲಿನ ನಾಲಾಗಳ ನಿರ್ವಹಣೆ ಹೊಣೆ ಮಹಾನಗರ ಪಾಲಿಕೆಗೆ: ಬೆಳಗಾವಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿನ ಬಳ್ಳಾರಿ ನಾಲಾ ನಿರ್ವಹಣೆಯನ್ನು ಪಾಲಿಕೆ ಹಾಗೂ ಉಳಿದ ಕಡೆಗಳಲ್ಲಿ ನೀರಾವರಿ ಇಲಾಖೆಯ ವತಿಯಿಂದ ನಿರ್ವಹಿಸಬೇಕೆಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 35 ಕಿ.ಮೀ. ಹರಿವು ಇರುತ್ತದೆ. ಅದನ್ನು ಪಾಲಿಕೆ ನಿರ್ವಹಿಸಲು ಕ್ರಮ ಕೈಗೊಳ್ಳಬೇಕು. ನಾಲಾ ಅಕ್ಕಪಕ್ಕದ ಮನೆಗಳಿಗೆ ಹಾಗೂ ಬೆಳೆಗಳಿಗೆ ಹಾನಿಯಾಗದಂತೆ ನೋಡಿಕೊಳ್ಳಬೇಕು. ನಾಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಹಿಡಿಯಲು ಅನುಕೂಲವಾಗುವಂತೆ ಸಮಗ್ರ ಯೋಜನಾ ವರದಿ(ಡಿಪಿಆರ್) ರೂಪಿಸುವಂತೆ ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಸಭೆಯಲ್ಲಿ ಸೂಚನೆ ನೀಡಲಾಗಿದೆ.

ಕಳಪೆ ಕಾಮಗಾರಿಯಾದರೆ ಸಂಬಂಧಿಸಿದವರೆ ಹೊಣೆ: ಸತೀಶ್‌ ಜಾರಕಿಹೊಳಿ

ಅತಿವೃಷ್ಟಿಯಿಂದ ಬೆಳಗಾವಿ ಜಿಲ್ಲೆಯಲ್ಲಿ 255 ಕೋಟಿ ಹಾನಿ: ಸಭೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, 'ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ, ಅತಿವೃಷ್ಠಿಯಿಂದ 255 ಕೋಟಿ ರೂಪಾಯಿ ಹಾನಿಯಾಗಿದೆ. ಜಿಲ್ಲೆಯಲ್ಲಿ 1,264 ಕಿಲೋ ಮೀಟರ್ ರಸ್ತೆ ಹಾನಿಯಾಗಿದ್ದು 21 ಸೇತುವೆಗಳಿಗೆ ಹಾನಿಯಾಗಿದೆ. 987 ಸರ್ಕಾರಿ ಶಾಲಾ ಕಟ್ಟಡಗಳು, 804 ಅಂಗನವಾಡಿ ಕೇಂದ್ರಗಳಿಗೆ ಮಳೆಯಿಂದ  ಹಾನಿಯಾಗಿದೆ. 1344 ವಿದ್ಯುತ್ ಕಂಬಗಳು , 160 ಟಿಸಿಗಳು, 10 ಕಿಲೋಮೀಟರ್  ಕೇಬಲ್ ಹಾನಿಯಾಗಿದೆ. 18,328 ಎಕರೆ ಕೃಷಿ ಬೆಳೆ, 66 ಹೆಕ್ಟೇರ್ ತೋಟಗಾರಿಕೆ ಬೆಳೆ ನಷ್ಟವಾಗಿದ್ದು ಬೆಳಗಾವಿ ಜಿಲ್ಲೆಯಲ್ಲಿ 685 ಮನೆಗಳಿಗೆ ಮಳೆಯಿಂದ ಹಾನಿ ಸಂಭವಿಸಿದೆ. ಮನೆ ಹಾನಿಯನ್ನು ಎ, ಬಿ, ಸಿ ವರ್ಗಗಳಾಗಿ ವಿಂಗಡನೆ ಮಾಡಿ, ಎ ಕೆಟಗರಿ ಮನೆ ಹಾನಿ 5 ಲಕ್ಷ ಪರಿಹಾರ, ಬಿ ಕೆಟಗರಿ ಮನೆ ಹೊಸದಾಗಿ ನಿರ್ಮಿಸಿದ್ರೆ 3 ಲಕ್ಷ ಬದಲಾಗಿ 5 ಲಕ್ಷ ಪರಿಹಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.

click me!