ಶುಕ್ರವಾರ ಒಂದೇ ದಿನ 36 ಜನರಿಗೆ ಕೊರೋನಾ ವೈರಸ್| 402ಕ್ಕೇರಿದ ಬಳ್ಳಾರಿ ಜಿಲ್ಲೆಯ ಸೋಂಕಿತರ ಸಂಖ್ಯೆ| ಶುಕ್ರವಾರ ಒಟ್ಟು 463 ಜನರಿಗೆ ಗಂಟಲುದ್ರವ ಪರೀಕ್ಷೆಗೆ ರವಾನೆ| ಸೋಂಕು ಇರುವ 308 ಜನರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ|
ಬಳ್ಳಾರಿ(ಜೂ.20): ಕೊರೋನಾ ಮಹಾಮಾರಿ ಜಿಂದಾಲ್ ಕಾರ್ಖಾನೆಯಲ್ಲಿ ವ್ಯಾಪಕವಾಗಿ ಹಬ್ಬುತ್ತಿದ್ದು ಶುಕ್ರವಾರ ಮತ್ತೆ 36 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಒಟ್ಟಾರೆ 244 ಜನ ಕೋವಿಡ್-19 ರೋಗಕ್ಕೆ ತುತ್ತಾಗಿದ್ದಾರೆ ಎಂದು ಜಿಲ್ಲಾಡಳಿತ ಖಚಿತಪಡಿಸಿದೆ. ಜಿಲ್ಲೆಯಲ್ಲಿ ಒಟ್ಟಾರೆ 65 ಪ್ರಕರಣ ದಾಖಲಾಗಿದೆ.
ಸೀಲ್‌ಡೌನ್ ಸೇರಿದಂತೆ ವ್ಯಾಪಕ ಮುಂಜಾಗ್ರತಾ ಕ್ರಮ ಹಾಗೂ ಕಟ್ಟೆಚ್ಚರದ ನಡುವೆಯೂ ಜಿಂದಾಲ್‌ನಲ್ಲಿ ದಿನದಿಂದ ದಿನಕ್ಕೆ ಸೋಂಕು ಹೆಚ್ಚುತ್ತಿರುವುದು ತೀವ್ರ ಆತಂಕ ಹಾಗೂ ಭಯಕ್ಕೆ ಕಾರಣವಾಗಿದೆ. ಸುತ್ತಮುತ್ತಲಿನ ಗ್ರಾಮಗಳ ಜನರೂ ಸಹ ಇದೀಗ ಕೊರೋನಾದ ಕುರಿತು ಕಂಗಾಲಾಗಿದ್ದು ಅಗತ್ಯ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಇದುವರೆಗೆ 402 ಜನರಿಗೆ ಸೋಂಕು ಹರಡಿದಂತಾಗಿದೆ.
ಮಧ್ಯಾಹ್ನ ಒಟ್ಟು 27 ಪ್ರಕರಣ ಕಾಣಿಸಿಕೊಂಡಿದ್ದವು. ಇದರಲ್ಲಿ 10 ಪ್ರಕರಣಗಳು ಜಿಂದಾಲ್‌ಗೆ ಸೇರಿದ್ದವಾಗಿದ್ದವು. ಸಂಜೆ ಹೊರ ಬಿದ್ದ ಹೆಲ್ತ್ ಬುಲಿಟೆನ್‌ನಲ್ಲಿ ಜಿಲ್ಲೆಯ 38 ಪ್ರಕರಣಗಳಲ್ಲಿ 26 ಪ್ರಕರಣಗಳು ಜಿಂದಾಲ್‌ನವಾಗಿದ್ದವು. ಜಿಂದಾಲ್‌ನ ಎಲ್ಲ ಪ್ರಕರಣಗಳು ಪ್ರಥಮ ಹಾಗೂ ದ್ವಿತೀಯ ಸಂಪರ್ಕದಿಂದ ಬಂದಿವೆ.
ಕೊರೋನಾ ದೃಢ: ಹೊಸಪೇಟೆಯ RTO ಕಚೇರಿ ಸೀಲ್‌ಡೌನ್
ಶುಕ್ರವಾರ ಸೋಂಕು ಕಾಣಿಸಿಕೊಂಡವರಲ್ಲಿ ಹೊಸಪೇಟೆಯ 4 ತಿಂಗಳ ಮಗು ಹಾಗೂ ಬಳ್ಳಾರಿಯ 2 ವರ್ಷದ ಮಗು ಸಹ ಸೇರಿದೆ. ಸಿರುಗುಪ್ಪದ 65 ವರ್ಷದ ವೃದ್ಧರಿಗೂ ಸೋಂಕು ತಗುಲಿದೆ. ವೈರಸ್ ಸೋಂಕಿತರನ್ನು ಒಪಿಜೆ ಜಿಂದಾಲ್ ಹಾಗೂ ಜಿಲ್ಲಾಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಶುಕ್ರವಾರ ಬಳ್ಳಾರಿಯ 14, ಸಿರುಗುಪ್ಪ 2, ಹೊಸಪೇಟೆಯ 13, ಹಡಗಲಿ 1 ಹಾಗೂ ಹಗರಿಬೊಮ್ಮನಹಳ್ಳಿಯ 3 ಪ್ರಕರಣಗಳು ಕಂಡು ಬಂದಿದ್ದು, ಮಧ್ಯಪ್ರದೇಶ, ಆಂಧ್ರಪ್ರದೇಶದ ಗುಂತಕಲ್ಲು, ಪಾಮಿಡಿ ಕಡೆಯಿಂದ ಬಂದ ಟ್ರಾವೆಲ್ ಹಿಸ್ಟ್ರಿ ಇದೆ. ಸಿರುಗುಪ್ಪ, ಸಂಡೂರು, ಹೊಸಪೇಟೆ ಹಾಗೂ ಹಗರಿಬೊಮ್ಮನಹಳ್ಳಿಯ ಪ್ರಕರಣಗಳು ಐಎಲ್‌ಐನಿಂದ ಕೂಡಿವೆ.
402 ಜನರಿಗೆ ಸೋಂಕು
ಶುಕ್ರವಾರ ಹೊರ ಬಿದ್ದ ಸೋಂಕು ಪ್ರಕರಣಗಳಿಂದ ಜಿಲ್ಲೆಯ 402 ಜನರಿಗೆ ಸೋಂಕು ಹರಡಿದಂತಾಗಿದೆ. ಈ ವರೆಗೆ 92 ಜನರು ಗುಣಮುಖರಾಗಿದ್ದಾರೆ. ಶುಕ್ರವಾರ ಒಟ್ಟು 463 ಜನರಿಗೆ ಗಂಟಲುದ್ರವ ತೆಗೆದು ವೈದ್ಯಕೀಯ ಪರೀಕ್ಷೆಗೆ ಕಳಿಸಿಕೊಡಲಾಗಿದೆ. ಸೋಂಕು ಇರುವ 308 ಜನರು ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು 715 ಜನರ ವೈದ್ಯಕೀಯ ವರದಿ ಬರಬೇಕಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.