ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಹೆಸರಿನಲ್ಲಿ ಅಕ್ರಮ ವೆಬ್‌ಸೈಟ್ ಮೂಲಕ ಆನ್‌ಲೈನ್ ಸೇವೆ ಬುಕ್ ಮಾಡುತ್ತಿದ್ದ ಹಾಗೂ ಈಗ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಸಂಸ್ಥೆಗೆ ರಾಜ್ಯ ಸರ್ಕಾರ, ದೇವಸ್ಥಾನಗಳ ಆನ್‌ಲೈನ್ ಸೇವೆ ನಡೆಸಲು ಅವಕಾಶ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ಸುಬ್ರಹ್ಮಣ್ಯ(ಜೂ.20): ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಹೆಸರಿನಲ್ಲಿ ಅಕ್ರಮ ವೆಬ್‌ಸೈಟ್ ಮೂಲಕ ಆನ್‌ಲೈನ್ ಸೇವೆ ಬುಕ್ ಮಾಡುತ್ತಿದ್ದ ಹಾಗೂ ಈಗ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಸಂಸ್ಥೆಗೆ ರಾಜ್ಯ ಸರ್ಕಾರ, ದೇವಸ್ಥಾನಗಳ ಆನ್‌ಲೈನ್ ಸೇವೆ ನಡೆಸಲು ಅವಕಾಶ ನೀಡಿರುವುದು ಹೊಸ ವಿವಾದಕ್ಕೆ ಕಾರಣವಾಗಿದೆ.
ವ್ಯಕ್ತಿಯೊಬ್ಬರು ನಿರ್ವಹಿಸುತಿತರುವ ವೆಬ್‌ಸೈಟ್ ಸುಬ್ರಹ್ಮಣ್ಯದಲ್ಲಿ ನಡೆಸಲಾಗುತ್ತಿರುವ ಸೇವೆಗಳನ್ನು ಅಕ್ರಮವಾಗಿ ಬುಕ್ ಮಾಡಿ ದೇವಸ್ಥಾನಕ್ಕೆ ವಂಚನೆ ನಡೆಸುತ್ತಿದ್ದು, ಇದು ಸೇರಿದಂತೆ ಮೂರು ವೆಬ್‌ಸೈಟ್‌ಗಳ ವಿರುದ್ಧ ಈ ಹಿಂದೆ ಪ್ರಕರಣ ದಾಖಲಿಸಲಾಗಿತ್ತು.
ಕುಕ್ಕೆ ಸುಬ್ರಹ್ಮಣ್ಯದೇವರ ಮೂಲ ವಿಗ್ರಹ, ಗೋಪುರ, ಉತ್ಸವಾದಿಗಳ ಫೋಟೋಗಳನ್ನು ಬಳಸಿ ಈ ವೆಬ್‌ಸೈಟ್ ಮೂಲಕ ಭಕ್ತರಿಂದ ಸೇವೆಗಳನ್ನು ಪಡೆದುಕೊಳ್ಳಲಾಗುತ್ತಿತ್ತು ಎನ್ನುವ ಅಂಶವನ್ನು ದೂರಿನಲ್ಲಿ ದಾಖಲಿಸಲಾಗಿದೆ. 2018 ಅ.16ರಂದು ಕುಕ್ಕೆ ಸುಬ್ರಹ್ಮಣ್ಯದ ಕಾರ್ಯನಿರ್ವಹಣಾಧಿಕಾರಿ, ಸೈಬರ್ ಕ್ರೈಂ ವಿಭಾಗಕ್ಕೆ ಮೂರು ವೆಬ್‌ಸೈಟ್‌ಗಳ ವಿರುದ್ಧ ದೂರು ದಾಖಲಿಸಿದ್ದರು. ಪ್ರಕರಣ ಈಗ ಹೈಕೋರ್ಟ್‌ನಲ್ಲಿದ್ದು, ಆರೋಪಿ ಸ್ಥಾನದಲ್ಲಿರುವ ಅರ್ಜುನ್ ರಂಗಾ ವಿರುದ್ಧದ ಕ್ರಮಕ್ಕೆ ಕೋರ್ಟ್ ತಡೆಯಾಜ್ಞೆ ನೀಡಿದೆ.
ಆದರೆ ಈ ನಡುವೆ ಲಾಕ್‌ಡೌನ್ ಸಮಯದಲ್ಲಿ ಭಕ್ತರಿಗೆ ಪ್ರಮುಖ ಕ್ಷೇತ್ರಗಳ ದೇವರ ದರ್ಶನಕ್ಕೆ ಆನ್‌ಲೈನ್ ಮೂಲಕ ವ್ಯವಸ್ಥೆ ಮಾಡುವ ಯೋಜನೆ ಜಾರಿಗೆ ತಂದಿದ್ದು, ಈ ಆನ್‌ಲೈನ್ ವ್ಯವಸ್ಥೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಇದೇ ಕಂಪನಿಗೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.
ತೀವ್ರಗೊಂಡ ಕಡಲ್ಕೊರೆತ, 23 ಮತ್ತು 24ರಂದು ಭಾರೀ ಮಳೆ ಸಾಧ್ಯತೆ
ರಾಜ್ಯದ ಒಟ್ಟು 52 ಪ್ರಮುಖ ದೇವಸ್ಥಾನಗಳ ಸೇವೆಗಳನ್ನು ಆನ್‌ಲೈನ್ ಮೂಲಕ ನಿರ್ವಹಿಸಲು ಪ್ಯೂರ್ ಪ್ರೇಯರ್ ಸಂಸ್ಥೆಗೆ ಅವಕಾಶ ನೀಡಲಾಗಿದೆ. ಕುಕ್ಕೆ ಸುಬ್ರಹ್ಮಣ್ಯದಂತಹ ಹೆಸರಾಂತ ಕ್ಷೇತ್ರದ ಹೆಸರಿನಲ್ಲಿ ಅಕ್ರಮವಾಗಿ ಆನ್‌ಲೈನ್ ಸೇವೆಗಳನ್ನು ನೀಡುತ್ತಿದ್ದ ಈ ಸಂಸ್ಥೆಯ ವಿರುದ್ಧ ಸರ್ಕಾರವೇ ಪ್ರಕರಣ ದಾಖಲಿಸಿದ್ದು, ಈಗ ಅದೇ ಸಂಸ್ಥೆಗೆ ಆನ್‌ಲೈನ್ ಸೇವೆ ನಿರ್ವಹಿಸುವ ಜವಾಬ್ದಾರಿ ನೀಡಿರುವುದರ ವಿರುದ್ಧ ಅಪಸ್ವರಗಳೂ ಕೇಳಿ ಬರಲಾರಂಭಿಸಿದೆ ಎಂದು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಮಾಜಿ ಸದಸ್ಯ ಮಹೇಶ್ ಕರಿಕಳ ತಿಳಿಸಿದ್ದಾರೆ.