
ಬೆಂಗಳೂರು(ನ.04): ರಸ್ತೆಯಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಹಾಕಿರುವ ರಂಬ್ಲರ್ಸ್ (ಹಳದಿ ಪಟ್ಟಿಗಳು) ಅನ್ನು ಗಮನಿಸಿ ತನ್ನ ಬೈಕ್ ವೇಗ ಕಡಿಮೆಗೊಳಿಸುತ್ತಿದ್ದಂತೆ ಬಿಎಂಟಿಸಿ ಬಸ್ ಡಿಕ್ಕಿಯಾಗಿ ಖಾಸಗಿ ಕಂಪನಿ ಉದ್ಯೋಗಿಯೊಬ್ಬ ಸಾವನ್ನಪ್ಪಿರುವ ದಾರುಣ ಘಟನೆ ನಾಗರಬಾವಿ ಹೊರವರ್ತುಲ ರಸ್ತೆಯ ಮಂತ್ರ ಭವನ ಸಮೀಪ ನಡೆದಿದೆ.
ಲಗ್ಗೆರೆ ನಿವಾಸಿ ಪ್ರಮೋದ್ ಕುಮಾರ್ (24) ಮೃತ ದುರ್ದೈವಿ. ಈ ಅವಘಡ ಸಂಬಂಧ ಬಿಎಂಟಿಸಿ ಬಸ್ ಚಾಲಕನನ್ನು ಕಾಮಾಕ್ಷಿಪಾಳ್ಯ ಸಂಚಾರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ಬುಧ ವಾರ ರಾತ್ರಿ ಪ್ರಮೋದ್ ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ರೇಣುಕಾಚಾರ್ಯ ಸಹೋದರನ ಪುತ್ರನ ಸಾವಿನ ಹಿಂದೆ ಹಲವು ಅನುಮಾನ, ಕಣ್ಣೀರಿಟ್ಟ ಶಾಸಕ!
ಖಾಸಗಿ ಕಂಪನಿಯಲ್ಲಿ ಎಲೆಕ್ಟ್ರಿಕಲ್ ಸೂಪರ್ ವೈಸರ್ ಆಗಿ ಮೃತ ಪ್ರಮೋದ್ ಕೆಲಸ ಮಾಡುತ್ತಿದ್ದರು. ಕೆಲಸ ಮುಗಿಸಿಕೊಂಡು ಬೈಕ್‌ನಲ್ಲಿ ರಾತ್ರಿ 10 ಗಂಟೆಗೆ ಸುಮಾರಿಗೆ ಪ್ರಮೋದ್ ಮನೆಗೆ ಮರಳುತ್ತಿದ್ದರು. ಅದೇ ವೇಳೆ ಸುಮ್ಮನಹಳ್ಳಿ ಕಡೆಯಿಂದ ಲಗ್ಗೆರೆ ಕಡೆಗೆ ಹೊರಟಿದ್ದ ಬಿಎಂಟಿಸಿ ಬಸ್, ನಾಗರಬಾವಿ ಹೊರ ವರ್ತುಲ ರಸ್ತೆಯ ಚೌಡೇಶ್ವರಿ ನಗರದ ಮಂತ್ರ ಭವನ ಸಮೀಪ ಪ್ರಮೋದ್ ಬೈಕ್‌ಗೆ ಹಿಂದಿನಿಂದ ಗುದ್ದಿದೆ. ಆಗ ಕೆಳಗೆ ಬಿದ್ದ ಆತನ ಮೇಲೆ ಬಸ್‌ನ ಚಕ್ರಗಳು ಹರಿದಿವೆ. ಕೂಡಲೇ ಗಾಯಾಳುವನ್ನು ಸಮೀಪ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ತೀವ್ರ ರಕ್ತಸ್ರಾವದಿಂದ ಪ್ರಮೋದ್ ಮಾರ್ಗಮಧ್ಯೆಯೇ ಕೊನೆಯುಸಿ ರೆಳೆದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ರಂಬ್ಲರ್ಸ್ ಗಮನಿಸಿ ವೇಗ ತಗ್ಗಿಸಿದ ಬೈಕ್ ಸವಾರ
ನಾಗರಬಾವಿ ಹೊರ ವರ್ತುಲ ರಸ್ತೆಯಲ್ಲಿ ತಿರುವು ಅಥವಾ ಜನ ಸಂಚಾರ ಪ್ರದೇಶಗಳ ಸೂಚಕವಾಗಿ ವಾಹನಗಳಿಗೆ ವೇಗ ನಿಯಂತ್ರಿಸಲು ರಂಬ್ಲರ್ಸ್ (ಹಳದಿ ಪಟ್ಟಿಗಳು) ಹಾಕಲಾಗಿದೆ. ಈ ಹಳದಿ ಪಟ್ಟಿ ಗಮನಿಸಿ ಚೌಡೇಶ್ವರಿ ನಗರದ ಮಂತ್ರ ಭವನ ಬಳಿ ತನ್ನ ಬೈಕ್‌ನ ವೇಗವನ್ನು ಪ್ರಮೋದ್ ಕಡಿಮೆಗೊಳಿಸುತ್ತಿದ್ದಾನೆ. ಆಗ ಆತನ ಬೈಕ್‌ಗೆ ಹಿಂದಿನಿಂದ ಅತಿ ವೇಗವಾಗಿ ಬಂದ ಬಿಎಂಟಿಸಿ ಡಿಕ್ಕಿ ಹೊಡೆದಿದೆ. ರಂಬ್ಲರ್ಸ್ ಗಮನಿಸಿ ಬಸ್ ಚಾಲಕ ವೇಗ ಮಿತಿಗೊಳಿಸದೆ ಅಜಾಗೂರಕನಾಗಿ ಚಾಲನೆ ಮಾಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.