Bengaluru: ಬಿಎಂಟಿಸಿ ಬಸ್‌ ಹರಿದು ಬೈಕ್‌ ಸವಾರ ಸ್ಥಳದಲ್ಲೇ ಸಾವು

Published : May 24, 2022, 06:48 AM IST
Bengaluru: ಬಿಎಂಟಿಸಿ ಬಸ್‌ ಹರಿದು ಬೈಕ್‌ ಸವಾರ ಸ್ಥಳದಲ್ಲೇ ಸಾವು

ಸಾರಾಂಶ

*    ದ್ವಿಚಕ್ರ ವಾಹನಗಳ ಮುಖಾಮುಖಿ ಡಿಕ್ಕಿ ವೇಳೆ ರಸ್ತೆಗೆ ಬಿದ್ದ ಸವಾರ *   ಅಪಘಾತದ ಬಳಿಕ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿ *  ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಬೆಂಗಳೂರು(ಮೇ.24):  ಎರಡು ದ್ವಿಚಕ್ರ ವಾಹನಗಳ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ವೇಳೆ ರಸ್ತೆಗೆ ಬಿದ್ದ ಸವಾರನ ಮೇಲೆ ಬಿಎಂಟಿಸಿ ಬಸ್‌ ಚಕ್ರ ಹರಿದು ಆತ ಸ್ಥಳದಲ್ಲೇ ಮೃತಪಟ್ಟಿರುವ ದಾರುಣ ಘಟನೆ ಪೀಣ್ಯ ಸಂಚಾರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಸುಂಕದಕಟ್ಟೆ ನಿವಾಸಿ ಮಂಜುನಾಥ್‌(23) ಮೃತ ಸವಾರ. ಗದಗ ಮೂಲದ ಈತ ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಭಾನುವಾರ ರಾತ್ರಿ ಸ್ನೇಹಿತನನ್ನು ಜಾಲಹಳ್ಳಿ ಕ್ರಾಸ್‌ಗೆ ಡ್ರಾಪ್‌ ಮಾಡಿ ಸುಂಕದಕಟ್ಟೆಯ ಮನೆಗೆ ವಾಪಸಾಗುವಾಗ ಮಾರ್ಗ ಮಧ್ಯೆ ರಾತ್ರಿ 9.30ರ ಸುಮಾರಿಗೆ ಈ ದುರ್ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮದುವೆ ದಿಬ್ಬಣದ ವಾಹನ ಹಾಗೂ ಕಾರಿನ ನಡುವೆ ಅಪಘಾತ, ಕಾಂಗ್ರೆಸ್ ನಾಯಕನ ಸಾವು!

ಪೀಣ್ಯ ಕೈಗಾರಿಕಾ ಪ್ರದೇಶದ ಆಕಾಶ್‌ ಅಲ್ಯೂಮಿನಿಯಂ ಕಾರ್ಖಾನೆ ಬಳಿ ಮಂಜುನಾಥ್‌ ದ್ವಿಚಕ್ರ ವಾಹನದಲ್ಲಿ ಹೋಗುವಾಗ ಎದುರಿನಿಂದ ವೇಗವಾಗಿ ಬಂದ ದ್ವಿಚಕ್ರ ವಾಹನ ಏಕಾಏಕಿ ಮಂಜುನಾಥನ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಮಂಜುನಾಥ ದ್ವಿಚಕ್ರ ವಾಹನ ಸಹಿತ ರಸ್ತೆಗೆ ಬಿದ್ದಿದ್ದಾನೆ. ಇದೇ ಸಮಯಕ್ಕೆ ಹಿಂದಿನಿಂದ ಬರುತ್ತಿದ್ದ ಬಿಎಂಟಿಸಿ ಚಕ್ರ ಮಂಜುನಾಥನ ತಲೆ ಮೇಲೆ ಉರುಳಿದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಎದುರಿನಿಂದ ಬಂದು ಡಿಕ್ಕಿ ಹೊಡೆದ ದ್ವಿಚಕ್ರ ವಾಹನ ಸವಾರ ಘಟನೆ ಬಳಿಕ ಸ್ಥಳದಲ್ಲೇ ದ್ವಿಚಕ್ರ ವಾಹನ ಬಿಟ್ಟು ಪರಾರಿಯಾಗಿದ್ದಾನೆ. ಆತನ ಬಂಧನಕ್ಕೆ ಬಲೆ ಬೀಸಲಾಗಿದೆ. ಬಿಎಂಟಿಸಿ ಬಸ್‌ ಚಾಲಕನನನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿದೆ. ಈ ಸಂಬಂಧ ಪೀಣ್ಯ ಸಂಚಾರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
 

PREV
Read more Articles on
click me!

Recommended Stories

ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಮುಗಿಸಿ ಬೈಕ್‌ನಲ್ಲಿ ತೆರಳುತ್ತಿದ್ದ ಜೋಡಿಗೆ ಲಾರಿ ಡಿಕ್ಕಿ, ಸ್ಥಳದಲ್ಲೇ ಸಾವು
ಕಾಂಗ್ರೆಸ್ ಸರ್ಕಾರ ಶೇ.60ರಷ್ಟು ಭ್ರಷ್ಟಾಚಾರದಲ್ಲಿ ಮುಳುಗಿದೆ: ಮಾಜಿ ಸಚಿವ ಬಿ.ಸಿ.ಪಾಟೀಲ್ ಆರೋಪ