ಬೆಂಗ್ಳೂರು ಮಳೆ: 691 ಕುಟುಂಬಗಳಿಗೆ 25,000 ಪರಿಹಾರ

Published : May 24, 2022, 04:38 AM IST
ಬೆಂಗ್ಳೂರು ಮಳೆ: 691 ಕುಟುಂಬಗಳಿಗೆ 25,000 ಪರಿಹಾರ

ಸಾರಾಂಶ

*  ದಾವೋಸ್‌ನಿಂದ ವಿಡಿಯೊ ಕಾನ್ಫರೆನ್ಸ್‌ ಸಭೆ ನಡೆಸಿದ ಸಚಿವ ಅಶ್ವತ್ಥನಾರಾಯಣ *  ಪೂರ್ವ ವಲಯದ ಕಾರ್ಯಪಡೆಗೆ ಸೂಚನೆ *  ಮಹದೇವಪುರ ವಲಯಕ್ಕೆ 110 ಕೋಟಿ ಅನುದಾನ  

ಬೆಂಗಳೂರು(ಮೇ.24):   ಮೂರು ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದ ಬೆಂಗಳೂರಿನ ಪೂರ್ವ ವಲಯದಲ್ಲಿ 691 ಮನೆಗಳಿಗೆ ನೀರು ನುಗ್ಗಿ ನಷ್ಟವಾಗಿದ್ದು, ಈ ಕುಟುಂಬಗಳಿಗೆ ಎರಡು ದಿನಗಳೊಳಗೆ ತಲಾ 25 ಸಾವಿರ ರು. ಪರಿಹಾರ ನೀಡಬೇಕು ಎಂದು ಬಿಬಿಎಂಪಿಗೆ ಪೂರ್ವ ವಲಯ ಕಾರ್ಯಪಡೆ ಮುಖ್ಯಸ್ಥ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಸೂಚನೆ ನೀಡಿದ್ದಾರೆ.

ಮಳೆಯಿಂದ ಉಂಟಾಗುವ ಸಮಸ್ಯೆಗಳ ನಿರ್ವಹಣೆಗೆ ಬೆಂಗಳೂರು ಪೂರ್ವ ವಲಯದ ಕಾರ್ಯಪಡೆ ಮುಖ್ಯಸ್ಥರಾಗಿ ನೇಮಕಗೊಂಡಿರುವ ಅವರು ಸ್ವಿಜರ್‌ಲ್ಯಾಂಡಿನ ದಾವೋಸ್‌ನಿಂದಲೇ ವಿಡಿಯೊ ಕಾನ್ಫರೆನ್ಸ್‌ ಮೂಲಕ ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು.

Bengaluru Rains: ಬೆಂಗ್ಳೂರಲ್ಲಿ 77 ವರ್ಷದಲ್ಲೇ ಕನಿಷ್ಠ ತಾಪಮಾನ..!

ಮಳೆಪೀಡಿತ ಪ್ರದೇಶಗಳಿಗೆ ತಲಾ 25 ಸಾವಿರ ರು.ಗಳಂತೆ ದವಸ ಧಾನ್ಯ ನಷ್ಟದಂತಹ ಸಮಸ್ಯೆಗಳನ್ನು ಎದುರಿಸಿರುವ 691 ಕುಟುಂಬಗಳಿಗೆ ಒಟ್ಟು ಪರಿಹಾರದ ಮೊತ್ತ 1.73 ಕೋಟಿ ರು. ಆಗುತ್ತದೆ. ಸಂಬಂಧಿಸಿದ ದಾಖಲೀಕರಣವನ್ನು ಮಂಗಳವಾರ ಮುಗಿಸಿ ಬುಧವಾರ ಸಂಬಂಧಿಸಿದವರ ಬ್ಯಾಂಕ್‌ ಖಾತೆಗಳಿಗೆ ನೇರವಾಗಿ ವರ್ಗಾವಣೆ (ಡಿಬಿಟಿ) ಮಾಡಬೇಕು ಎಂದು ಅವರು ಕಾಲಮಿತಿ ನಿಗದಿಗೊಳಿಸಿದರು.

ಸಂಬಂಧಿಸಿದ ಗುತ್ತಿಗೆದಾರರಿಗೆ ತಕ್ಷಣವೇ ನೋಟಿಸ್‌ ಕೊಟ್ಟು ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು. ಜೊತೆಗೆ, 20 ದಿನದಲ್ಲಿ ಡೀಸಿಲ್ಟಿಂಗ್‌ ಮಾಡಿಸಿ ಚರಂಡಿಗಳಲ್ಲಿ ನೀರು ಅಡೆತಡೆ ಇಲ್ಲದಂತೆ ಹರಿಯುವಂತೆ ಮಾಡಬೇಕು ಎಂದು ಆದೇಶಿಸಿದರು.

ಪೂರ್ವ ವಲಯದ ನೀಲಸಂದ್ರ, ಫ್ರೇಜರ್‌ ಟೌನ್‌, ಸಂಜಯನಗರ ಸೇರಿದಂತೆ 22 ಸ್ಥಳಗಳನ್ನು ‘ರೆಡ್‌ ಜೋನ್‌’ ಎಂದು ಗುರುತಿಸಲಾಗಿದೆ. ಇದನ್ನು ಗಮನದಲ್ಲಿರಿಸಿಕೊಂಡು ಅಧಿಕಾರಿಗಳು ತಗ್ಗಿನ ಪ್ರದೇಶಕ್ಕೆ ನೀರು ನುಗ್ಗಬಹುದಾದ ಸಾಧ್ಯತೆಯನ್ನು ನಿರ್ವಹಿಸಲು ಸ್ಥಳಾಂತರಕ್ಕಾಗಿ ಮೊದಲೇ ಯೋಜನೆ ಹಾಕಿಕೊಳ್ಳಬೇಕು. ಇದಕ್ಕಾಗಿ ಹತ್ತಿರದ ಶಾಲೆ ಮತ್ತಿತರ ಕಡೆಗಳಲ್ಲಿ ವ್ಯವಸ್ಥೆಗೆ ಸಿದ್ಧತೆ ಮಾಡಿಕೊಳ್ಳಬೇಕು. ಅಧಿಕಾರಿಗಳು ರೆಡ್‌ ಜೋನ್‌ಗಳಲ್ಲಿ ವಾಸಿಸುತ್ತಿರುವ ಜನರ ಜೊತೆ ಸಂಪರ್ಕದಲ್ಲಿದ್ದು ಹವಮಾನ ಮುನ್ಸೂಚನೆ ಆಧಾರಿತವಾಗಿ ತಯಾರಿ ಮಾಡಿಕೊಂಡು ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಸಭೆಯಲ್ಲಿ ಪೂರ್ವ ವಲಯ ಆಯಕ್ತ ರವೀಂದ್ರ, ಜಂಟಿ ಆಯುಕ್ತೆ ಶಿಲ್ಪಾ ಹಾಗೂ ಮುಖ್ಯ ಎಂಜಿನಿಯರ್‌ ಮೋಹನ್‌ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.

ಮಹದೇವಪುರ ವಲಯಕ್ಕೆ 110 ಕೋಟಿ ಅನುದಾನ

ನಗರದ ಸುರಿದ ಮಳೆಯಿಂದಾಗಿ ಸಂಭವಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಸಹಾಯವಾಣಿ ಪ್ರಾರಂಭಿಸಲಾಗಿದ್ದು, ಸಹಾಯವಾಣಿ ಉಸ್ತುವಾರಿಗಾಗಿ ಅಧಿಕಾರಿಯೊಬ್ಬರನ್ನು ನಿಯೋಜಿಸಲಾಗಿದೆ. ಸಾರ್ವಜನಿಕರು ಕರೆ ಮಾಡಿದರೆ ಸಂಬಂಧಪಟ್ಟಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ ಎಂದು ಮಹದೇವಪುರ ವಲಯದ ಉಸ್ತುವಾರಿ ಸಚಿವ ಬೈರತಿ ಬಸವರಾಜ ತಿಳಿಸಿದ್ದಾರೆ.

ಭಾರಿ ಮಳೆಯಿಂದಾಗಿ ನಗರದಲ್ಲಿ ಉಂಟಾದ ಸಮಸ್ಯೆಗಳನ್ನು ನಿವಾರಿಸುವ ಸಂಬಂಧ ಎಂಟು ವಲಯಗಳಿಗೆ ಉಸ್ತುವಾರಿ ಸಚಿವರ ನೇಮಕ ಮಾಡಿದ ಬೆನ್ನಲ್ಲೇ ನಗರಾಭಿವೃದ್ಧಿ ಸಚಿವ ಬೈರತಿ ಬಸವರಾಜ ಅವರು ಸೋಮವಾರ ವಿಧಾನಸೌಧದಲ್ಲಿ ಮಹದೇವಪುರ ವಲಯದ ಸಭೆ ನಡೆಸಿದರು. ಕೇವಲ ಅಧಿಕಾರಿಗಳ ಜತೆ ಸಭೆ ನಡೆಸಲಾಯಿತು.

ಬೆಂಗ್ಳೂರು ಮಳೆ ಮುನ್ಸೂಚನೆ ಇದ್ದರೂ ಕ್ಯಾರೇ ಎನ್ನದ ಸರ್ಕಾರ: ಎಚ್‌ಡಿಕೆ

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಮಹದೇವಪುರ ವಲಯಕ್ಕೆ ಸಹಾಯವಾಣಿ ತೆರೆಯಲಾಗಿದೆ. 080-28512300, 08028512301 ಸಂಖ್ಯೆಯನ್ನು ಸಹಾಯವಾಣಿಗಾಗಿ ಇಡಲಾಗಿದೆ. ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳ ಕುರಿತು ಮಾಹಿತಿ ನೀಡಿದರೆ, ಸಂಬಂಧಪಟ್ಟಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಮಹದೇವಪುರ ವಲಯದಲ್ಲಿ ಮಳೆಯಿಂದಾಗಿ ಉಂಟಾಗಿರುವ ಸಮಸ್ಯೆ ಕುರಿತು ಸಮಾಲೋಚನೆ ನಡೆಸಲಾಗಿದೆ. ಮುಖ್ಯಮಂತ್ರಿಗಳು ಈಗಾಗಲೇ .110 ಕೋಟಿ ಅನುದಾನ ನೀಡಿದ್ದಾರೆ. ಮುಖ್ಯಮಂತ್ರಿಗಳು ನೀಡಿರುವ ಅನುದಾನದಲ್ಲಿ ಸಮಸ್ಯೆಗಳನ್ನು ಬಗೆಹರಿಸುವಂತೆ ಸೂಚಿಸಲಾಗಿದೆ. ಸದ್ಯಕ್ಕೆ ಸ್ವಲ್ಪ ಪರಿಹಾರ ಹಣ ನೀಡಲಾಗಿದ್ದು, ಉಳಿದ ಹಣವನ್ನು 2-3 ದಿನದಲ್ಲಿ ಕೊಡಲಾಗುವುದು. ನಗರದಲ್ಲಿ ಮುಖ್ಯವಾಗಿ ಚರಂಡಿಗಳನ್ನು ಸ್ವಚ್ಛ ಮಾಡುತ್ತೇವೆ. ಪ್ರಸ್ತುತ ಇರುವ ಚರಂಡಿಗಳನ್ನು ಅಗಲ ಮಾಡಬೇಕಾಗಿದೆ. ಬೆಂಗಳೂರಲ್ಲಿ ಅರ್ಧದಷ್ಟುನೀರು ಮಹದೇವಪುರ ವಲಯಕ್ಕೆ ಬರುತ್ತದೆ. ಹೀಗಾಗಿ ವಲಯದಲ್ಲಿ ಸಮಸ್ಯೆ ಜಾಸ್ತಿ ಇದೆ. ಚರಂಡಿಗಳ ಅಗಲ ಹೆಚ್ಚಿಸಿದರೆ ನೀರು ಹೊರಹೋಗಲು ಸುಲಭವಾಗಲಿದೆ ಎಂದರು.
 

PREV
Read more Articles on
click me!

Recommended Stories

ವೈದ್ಯರ ವರದಿ ಬಳಿಕ ಜೈಲಿನಲ್ಲಿ ನಟ ದರ್ಶನ್‌ಗೆ ಫಿಸಿಯೋಥೆರಪಿ ಚಿಕಿತ್ಸೆ ಸ್ಥಗಿತ
ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಹಂತಕರನ್ನು ಸುಮ್ಮನೆ ಬಿಡಲ್ಲ: ಸಿಎಂ ಡಿಸಿಎಂ