21 ಪಿಯು ಕಾಲೇಜುಗಳಲ್ಲಿ ಕನ್ನಡದಲ್ಲಿ ವಿಜ್ಞಾನ ಬೋಧನೆ

By Sujatha NR  |  First Published Jan 23, 2020, 11:00 AM IST

ಮುಂದಿನ ಶೈಕ್ಷಣಿಕ ವರ್ಷದಿಂದ ಜಿಲ್ಲೆಯ 21 ಕಾಲೇಜುಗಳಲ್ಲಿ ವಿಜ್ಞಾನ ವಿಷಯವನ್ನು ಕನ್ನಡದಲ್ಲಿಯೇ ಹೇಳಿಕೊಡಲಾಗಿತ್ತದೆ ಎಂದು ಜಿಲ್ಲಾಧಿಕಾರಿ ವಿನೋತ್ ಪ್ರಿಯಾ ಹೇಳಿದ್ದಾರೆ. 


ಚಿತ್ರದುರ್ಗ [ಜ.23]:  ಮುಂದಿನ ಶೈಕ್ಷಣಿಕ ವರ್ಷದಿಂದ ಚಿತ್ರದುರ್ಗ ಜಿಲ್ಲೆಯ 21 ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ವಿಜ್ಞಾನ ವಿಷಯವನ್ನು ಕನ್ನಡದಲ್ಲಿಯೇ ಬೋಧನೆ ಮಾಡಲು ಪದವಿ ಪೂರ್ವ ಶಿಕ್ಷಣ ಇಲಾಖೆ ಸಜ್ಜಾಗಿದೆ. ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಈ 21 ಕಾಲೇಜುಗಳಲ್ಲಿ ಇನ್ಮೇಲೆ ಭೌತಶಾಸ್ತ್ರ, ಜೀವಶಾಸ್ತ್ರ, ರಸಾಯನಶಾಸ್ತ್ರ ವಿಷಯಗಳನ್ನು ಕನ್ನಡದಲ್ಲಿಯೇ ವಿದ್ಯಾರ್ಥಿಗಳಿಗೆ ಮನನ ಮಾಡಿಕೊಡಲಾಗುತ್ತದೆ.

ಹೊಸ ವರ್ಷದಂದು ವಿಜ್ಞಾನ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡುವ ಕುರಿತು ಘೋಷಿಸಿದ್ದ ಜಿಲ್ಲಾಧಿಕಾರಿಗಳು ಮುಂದುವರಿದ ಭಾಗವಾಗಿ ಸಭೆ ಕರೆದಿದ್ದರು. ಸೈನ್ಸ್‌ ವಿಷಯವನ್ನು ಕನ್ನಡದಲ್ಲಿ ವಿದ್ಯಾರ್ಥಿಗಳಿಗೆ ಸರಳವಾಗಿ ಬೋಧನೆ ಮಾಡಲು ಇರುವ ಸಾಧ್ಯತೆ ಕುರಿತಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಹಾಗೂ ಎಲ್ಲ ತಾಲೂಕುಗಳ ಪಿಯು ಕಾಲೇಜಿನ ಪ್ರಮುಖ ಪ್ರಾಂಶುಪಾಲರ ಸಭೆ ಕರೆದು ಚರ್ಚಿಸಿದರು.

Latest Videos

undefined

ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜ್‌ ಹಾಲಿ ಅನುದಾನಿತ ಹಾಗೂ ಅನುದಾನ ರಹಿತ ಕಾಲೇಜುಗಳನ್ನು ಬಿಟ್ಟು ವಿಜ್ಞಾನ ಬೋಧಿಸುವ 21 ಸರ್ಕಾರಿ ಪಿಯು ಕಾಲೇಜುಗಳಿವೆ. ಈ ಕಡೆ ನಾವು ವಿಜ್ಞಾನ ವಿಷಯ ಬೋಧಿಸಬಹುದಾಗಿದೆ. ಈಗಾಗಲೇ ಪ್ರಶ್ನೆ ಪತ್ರಿಕೆಗಳನ್ನು ಕನ್ನಡದಲ್ಲಿ ಪೂರೈಕೆ ಮಾಡುವುದರಿಂದ ಹಾಗೂ ಕನ್ನಡದಲ್ಲಿ ವಿಜ್ಞಾನ ಬೋಧಿಸುವ ನುರಿತ ಉಪನ್ಯಾಸಕರು ಇರುವುದರಿಂದ ಶೈಕ್ಷಣಿಕ ವರ್ಷದಿಂದಲೇ ಈ ಪ್ರಯತ್ನ ಮಾಡಬಹುದು. ಮೈಸೂರಿನ ನೃಪತುಂಗ ಕಾಲೇಜು ಹಾಗೂ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಸಂಕ ಗ್ರಾಮದಲ್ಲಿರುವ ಗುರುಬಸವೇಶ್ವರ ವಿದ್ಯಾಮಂದಿರದಲ್ಲಿ ವಿಜ್ಞಾನದ ವಿಷಯವನ್ನು ಕನ್ನಡದಲ್ಲಿ ಬೋಧನೆ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಹುಷಾರು..! ಇನ್ಮೇಲೆ ಎಲ್ಲೆಂದರಲ್ಲಿ ಸಿಗರೇಟ್‌ ಸೇದ್ಬೇಡಿ...

ಈ ಮಾತಿಗೆ ಪ್ರತಿಕ್ರಿಯಿಸಿದ ಕೆಲವು ಪ್ರಾಂಶುಪಾಲರು ವಿಜ್ಞಾನದ ವಿಷಯವನ್ನು ಹಲವು ಕಾಲೇಜುಗಳಲ್ಲಿ ಉಪನ್ಯಾಸಕರು ಇಂಗ್ಲೀಷ್‌ನಲ್ಲಿ ಬೋಧನೆ ಮಾಡುತ್ತಿದ್ದಾರೆ. ಅಂತಹವರಿಗೆ ಕನ್ನಡದಲ್ಲಿ ಪಾಠ ಮಾಡುವುದು ಕಷ್ಟವಾಗಬಹುದೆಂಬ ರಾಗವೆಳೆದರು.

ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ, ಮಾತೃಭಾಷೆಯಲ್ಲಿ ವಿಜ್ಞಾನ ಬೋಧನೆ ಮಾಡುವುದು ಕಷ್ಟದ ಕೆಲಸವಲ್ಲ. ತಮಿಳುನಾಡಿನಲ್ಲಿ ನಾವೆಲ್ಲ ತಮಿಳಿನಲ್ಲೇ ವಿಜ್ಞಾನ ಕಲಿತಿದ್ದೇವೆ. ತಾಂತ್ರಿಕ ಜ್ಞಾನ ಕನ್ನಡದಲ್ಲೇ ಲಭ್ಯವಿರುವುದರಿಂದ ಬೋಧನೆಗೆ ಉದಾಸೀನ ತೋರಬಾರದು. ರಷ್ಯಾ, ಜಪಾನ್‌ನಲ್ಲಿ ಇಂಗ್ಲೀಷ್‌ ಇದೆಯೇ ಎಂದು ಪ್ರಶ್ನಿಸಿದ ಅವರು ಅಲ್ಲೂ ವಿದ್ಯಾರ್ಥಿಗಳು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಅಭ್ಯಾಸ ಮಾಡುತ್ತಿಲ್ಲವೇ ಎಂದು ಪ್ರಶ್ನಿಸಿದರು.

ಕನ್ನಡದಲ್ಲಿಯೇ ಪಠ್ಯಪುಸ್ತಕಗಳನ್ನು ಸರ್ಕಾರ ಪೂರೈಕೆ ಮಾಡುತ್ತಿದೆ. ಕೆಲವು ಕಾಲೇಜುಗಳಲ್ಲಿ ವಿಜ್ಞಾನದ ವಿಷಯವನ್ನು ಕನ್ನಡದಲ್ಲೇ ಬೋಧನೆ ಮಾಡಿ ನಂತರ ಇಂಗ್ಲೀಷ್‌ನಲ್ಲಿ ನೋಟ್ಸ್‌ ಕೊಡಲಾಗುತ್ತಿದೆ. ಹಾಗಾಗಿ, ಕನ್ನಡದಲ್ಲಿ ವಿಜ್ಞಾನ ವಿಷಯ ಬೋಧನೆ ಮಾಡುವುದು ಅಷ್ಟಾಗಿ ತೊಂದರೆಯಾಗದು. ಈ ನಿಟ್ಟಿನಲ್ಲಿ ಗಂಭೀರ ಪ್ರಯತ್ನಗಳನ್ನು ಮಾಡಲಾಗುವುದು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗರಾಜ್‌ ಸಮಜಾಯಿಷಿ ನೀಡಿದರು.

ಮುಂದಿನ ಶೈಕ್ಷಣಿಕ ವರ್ಷದಿಂದಲೇ 21 ಕಾಲೇಜುಗಳಲ್ಲಿ ವಿಜ್ಞಾನವನ್ನು ಕನ್ನಡದಲ್ಲಿ ಬೋಧಿಸುವ ಕೆಲಸವಾಗಬೇಕು. ಇದಕ್ಕಾಗಿ ಪ್ರತಿ ಕಾಲೇಜಿನಲ್ಲಿ ಒಂದು ಸೆಕ್ಷನ್‌ ಮೀಸಲಿಡಬೇಕು. ಆಸಕ್ತ ವಿದ್ಯಾರ್ಥಿಗಳು ಪ್ರವೇಶ ಪಡೆಯಲು ಈಗಿನಿಂದಲೇ ಪ್ರಚಾರ ಕೈಗೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಹಂತದಲ್ಲೇ ಈ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಕೆಲಸವಾಗಬೇಕೆಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಸೂಚಿಸಿದರು.

ಚಿತ್ರದುರ್ಗ: 5 ನಿಮಿಷದಲ್ಲಿ ಮೂರು ಕರುಗಳಿಗೆ ಜನ್ಮ ನೀಡಿದ ಗೋಮಾತೆ...

ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಸುಧಾಕರ್‌, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ರವಿಶಂಕರರೆಡ್ಡಿ ಸೇರಿ ಸರ್ಕಾರಿ ಪಿಯು ಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ಉಪಸ್ಥಿತರಿದ್ದರು.

ಮಾತೃಭಾಷೆಯಲ್ಲಿ ವಿಜ್ಞಾನ ಬೋಧನೆ ಮಾಡುವುದು ಕಷ್ಟದ ಕೆಲಸವಲ್ಲ. ತಮಿಳುನಾಡಿನಲ್ಲಿ ನಾವೆಲ್ಲ ತಮಿಳಿನಲ್ಲೇ ವಿಜ್ಞಾನ ಕಲಿತಿದ್ದೇವೆ. ತಾಂತ್ರಿಕ ಜ್ಞಾನ ಕನ್ನಡದಲ್ಲೇ ಲಭ್ಯವಿರುವುದರಿಂದ ಬೋಧನೆಗೆ ಉದಾಸೀನ ತೋರಬಾರದು. ರಷ್ಯಾ, ಜಪಾನ್‌ನಲ್ಲಿ ಇಂಗ್ಲೀಷ್‌ ಇದೆಯೇ ಎಂದು ಪ್ರಶ್ನಿಸಿದ ಅವರು ಅಲ್ಲೂ ವಿದ್ಯಾರ್ಥಿಗಳು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷಣ ಅಭ್ಯಾಸ ಮಾಡುತ್ತಿಲ್ಲವೇ?

- ವಿನೋತ್‌ ಪ್ರಿಯಾ ಜಿಲ್ಲಾಧಿಕಾರಿ

click me!