
ದಾವಣಗೆರೆ (ಸೆ.27): ನನಗೂ 2028ರಲ್ಲಿ ಮುಖ್ಯಮಂತ್ರಿ ಆಸೆ ಇದೆ. ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರಾ ಎಂದು ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಪ್ರಶ್ನಿಸಿದ್ದಾರೆ. ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಕಾಂಗ್ರೆಸ್ಸಿನಲ್ಲಿ 2028ರ ಸಿಎಂ ಹುದ್ದೆಗೆ ಭಾರೀ ಪೈಪೋಟಿ ಇದೆಯೆಂಬ ಮಾಧ್ಯಮಗಳ ಪ್ರಶ್ನೆಗೆ, 2028ಕ್ಕೆ ನಾನೂ ಸಿಎಂ ಅಭ್ಯರ್ಥಿ ಅಂದ್ರೆ ಮಾಡುತ್ತಾರಾ ಎಂದರು.
ನನಗೂ ಇನ್ನೊಂದು 25 ವರ್ಷಕ್ಕೆ ಮುಖ್ಯಮಂತ್ರಿ ಆಗಬೇಕೆಂಬ ಆಸೆ ಇದೆ. ಆಗಿ ಹೋಗ್ತೀನಾ? ಮುಂದೆಯೂ ತಾವೇ ಸಿಎಂ ಎಂಬ ಡಿಕೆಶಿಯವರ ಹೇಳಿಕೆ ಬಗ್ಗೆ 2 ಪೋಸ್ಟ್ ಕ್ರಿಯೇಟ್ ಮಾಡುವ ಸಾಧ್ಯತೆ ಇದ್ದರೆ ನೋಡಬೇಕು. ನನಗೆ ಡಿಕೆ ಸಾಹೇಬರನ್ನು ಸಿಎಂ ಆಗಿ ನೋಡಬೇಕು, ಸಿದ್ದರಾಮಯ್ಯರನ್ನೂ ಸಿಎಂ ಆಗಿ ನೋಡಬೇಕು. ಇಬ್ಬರೂ ನನ್ನ ಕಣ್ಣಿದ್ದಂತೆ. ನಾನು ಯಾರನ್ನೂ ಬಿಟ್ಟು ಕೊಡಲ್ಲ ಎಂದು ಅವರು ಹೇಳಿದರು.
ಹೈಕಮಾಂಡ್ ತೀರ್ಮಾನವೇ ಅಂತಿಮ. ಡಿಕೆ ಸಾಹೇಬರು ಕಾಲೇಜು ಕಟ್ಟಲು ನನಗೆ 2 ಎಕರೆ ಜಾಗ ಕೊಟ್ಟಿದ್ದಾರೆ. ಡಿಕೆಶಿ ಸಾಹೇಬರೆ ಕರೆದು, ಮೈಸೂರು ರಸ್ತೆಯ ಪ್ರೈಮ್ ಏರಿಯಾದಲ್ಲಿ ಬಿಡಿಎದಿಂದ ಸಿಎ ಸೈಟ್ ಕೊಟ್ಟಿದ್ದಾರೆ. ಪ್ರೀತಿ ಇಲ್ಲದೇ, ಇದನ್ನು ಕೊಟ್ಟಿದ್ದಾರಾ? ಕುಮಾರಣ್ಣಗೂ ಗೊತ್ತಿದೆ. ಕುಮಾರಣ್ಣ ಏನೂ ಟ್ವೀಟ್ ಮಾಡುವ ಅಗತ್ಯವಿಲ್ಲ. ಸಿದ್ದರಾಮಯ್ಯ ಸಾಹೇಬರು ನನ್ನನ್ನು ಓಬಿಸಿ ಹುಡುಗ ಅಂತಾ ಬೆಳೆಸುತ್ತಿದ್ದಾರೆ. ನನಗೆ ಸಿದ್ದರಾಮಯ್ಯ ಸಾಹೇಬರು, ಡಿಕೆಶಿ ಸಾಹೇಬರು ಇಬ್ಬರೂ ಬೇಕು ಎಂದು ಅವರು ಹೇಳಿದರು.
ಪ್ರತಾಪ ಸಿಂಹ ವಿರುದ್ಧ ಕಿಡಿ
ಮಸೀದಿ ಮುಂದೆ ಹೋಗಿ ಒಬ್ಬ ಮಾಜಿ ಸಂಸದ ಒಂದು ಪದ ಬಳಸಿದ. ಸಬ್ ಇನ್ಸಪೆಕ್ಟರ್ ಬಳಸಿದ ಪದ ತಪ್ಪಾದರೆ, ನೀನ್ಯಾಕೆ ಆ ಪದ ಬಳಸಿದೆ? ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸಾಹೇಬರ ಬಗ್ಗೆ ಮಾತನಾಡುವಾಗ ಅವರಪ್ಪ, ಇವರಪ್ಪ ಅಂತಾ ಕಲ್ಚರ್ ಬಿಲ್ಡ್ ಮಾಡಿದ್ದು ಯಾರು? ದಲಿತರ ಬಗ್ಗೆ ಶಾಲಿನ ಬಗ್ಗೆ ಮಾತನಾಡಿದ್ರು, ಬಾಬಾ ಸಾಹೇಬ್ ಅಂಬೇಡ್ಕರ್ ಬಗ್ಗೆ ಓದಿಕೊಂಡಿದ್ದಾರಾ ಅಂತೆಲ್ಲಾ ಮಾಜಿ ಸಂಸದರು ಕೇಳಿದ್ರು ಎಂದು ಮಾಜಿ ಸಂಸದ ಪ್ರತಾಪ ಸಿಂಹ ವಿರುದ್ಧ ಕಿಡಿಕಾರಿದರು.
ಬಾಬಾ ಸಾಹೇಬ್‌ರ ವಂಶಸ್ಥರು ರೀ ಅವ್ರು. ಅವರೇನು ಅಂಬೇಡ್ಕರ್ ಬಗ್ಗೆ ಏನು ಓದ್ಕೋಬೇಕು. ಅಂತಹವರ ರಕ್ತದಲ್ಲೇ ಅಂಬೇಡ್ಕರ್ ಇದ್ದಾರೆ. ದಲಿತ ಸಮುದಾಯ ರಕ್ತದಲ್ಲೇ ಅಂಬೇಡ್ಕರ್ ಇದ್ದಾರೆ. ಅಂತಹವರಿಗೆ ನೀನು ಪಾಠ ಮಾಡಬೇಕಾ? ಮೈಸೂರು ಮಾಜಿ ಸಂಸದರ ಬಗ್ಗೆ ಮಾತನಾಡುತ್ತೀರಲ್ಲ? ಮುಸ್ಲಿಮರು ನಮ್ಮ ದೇವಸ್ಥಾನದ ಮುಂದೆ ಪಟಾಕಿ ಹಚ್ಚಿ, ಕುಣಿದರೆ ನಮ್ಮ ಭಾವನೆಗೆ ಧಕ್ಕೆಯಾಗುತ್ತೋ, ಇಲ್ಲವೋ ಎಂದು ಅವರು ಪ್ರಶ್ನಿಸಿದರು.
ನೀನು ಮಸೀದಿ ಮುಂದೆ ಮೆರವಣಿಗೆ ಹೋಗುವುದಾದರೆ ಹೋಗು. ಮಸೀದಿ ಮುಂದೆ ನಿಲ್ಲಿಸಿ ಪಟಾಕಿ ಹಚ್ಚೋದು ಏನು? ಇಸ್ಲಾಂ ಧರ್ಮದವರು ಈ ದೇಶದಲ್ಲಿ ಬದುಕಬಾರದಾ? ಅವ್ರೆಲ್ಲಾ ಏನು ಹೇಳಿದರೂ ಸರಿ, ನಾವು ಕಾಂಗ್ರೆಸ್ಸಿನವರು ಏನು ಮಾತನಾಡಿದರೂ ತಪ್ಪು? ಅವನ್ಯಾರೋ ಮಾಜಿ ಎಂಪಿ ಹೇಳಿದಕ್ಕೆ ಏನು ಮಾತನಾಡುವುದಿಲ್ಲ. ನಾವು ಓಬಿಸಿಗಳು, ತುಳಿತಕ್ಕೊಳಪಟ್ಟಿದ್ದೇವೆ. ಒಬ್ಬ ಓಬಿಸಿ ಹುಡುಗನನ್ನೇ ಬಿಡಲಿಲ್ಲ. ದಲಿತರನ್ನು ಬಿಜೆಪಿಯವರು ಬಿಡುತ್ತಾರಾ ಎಂದು ಅವರು ಕುಟುಕಿದರು.
ಕೇಂದ್ರ ಚುನಾವಣಾ ಆಯೋಗದ ಜ್ಞಾನೇಶಕುಮಾರ ಯಾವುದಾದರೂ ರಾಜ್ಯಕ್ಕೆ ರಾಜ್ಯಪಾಲರಾಗುತ್ತಾರೆ. ನೋಡುತ್ತಾ ಇರಿ. ಜ್ಞಾನೇಶಕುಮಾರ ಇನ್ನೊಂದಿಷ್ಟು ಇಂಪ್ರೆಸ್ ಮಾಡಿದರೆ ವೈಸ್ ಪ್ರೆಸಿಡೆಂಟ್ ಆಗ್ತಾರೆ ಎಂದು ಶಾಸಕ ಪ್ರದೀಪ್ ಈಶ್ವರ್ ಹೇಳಿದರು.
ಛಲವಾದಿ ನಾರಾಯಣಸ್ವಾಮಿಗೆ ಮದುವೆಯಾಗಿ, 2-3 ಮಕ್ಕಳಾದರೂ ಹುಚ್ಚು ಕಡಿಮೆಯಾಗಿಲ್ಲ. ಸಿಎ ಸೈಟ್ ಪಡೆದು, ಯಾರೋ ಖಾಸಗಿಯವರಿಗೆ ಕೊಟ್ಟಿದ್ದಾರೆ. ಮದುವೆಯಾಗಿ ಹುಚ್ಚು ಕಡಿಮೆಯಾಗಿಲ್ಲವೆಂಬುದಕ್ಕೆ ಛಲವಾದಿ ನಾರಾಯಣಸ್ವಾಮಿ ಅಣ್ಣ ಉದಾಹರಣೆ. ನನಗೆ ಛಲವಾದಿ ನಾರಾಯಣಸ್ವಾಮಿ ಕಂಡರೆ ಇಷ್ಟ. ಏಕೆಂದರೆ, ಏನನ್ನೂ ಓದಿಕೊಳ್ಳದೇ, ಪ್ರೆಸ್ ಮೀಟ್ ಮಾಡ್ತಾರೆ. ನಮ್ಮ ಪಕ್ಷದಲ್ಲಿ 3 ದಶಕ ಕಾಲ ಖರ್ಗೆ ಸಾಹೇಬರಿಗೆ ಬಕೆಟ್ ಹಿಡಿದಿದ್ದರು. ಆಗ ಖರ್ಗೆ ಸಾಹೇಬರನ್ನು ಹೊಗಳಿದ್ದೇ ಹೊಗಳಿದ್ದು. ಈಗ ಮಾತೆತ್ತಿದರೆ ಪ್ರಿಯಾಂಕ್ ಖರ್ಗೆ ಸಾಹೇಬರ ಬಗ್ಗೆ ಛಲವಾದಿ ನಾರಾಯಣ ಸ್ವಾಮಿ ಮಾತನಾಡುತ್ತಾರೆ.
-ಪ್ರದೀಪ್ ಈಶ್ವರ್, ಕಾಂಗ್ರೆಸ್ ಶಾಸಕ