ದೀಪಾವಳಿ ವೇಳೆ ನಿಗದಿತ ಸಮಯದಲ್ಲಿ ಹಸಿರು ಪಟಾಕಿ ಸಿಡಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ: ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರು(ಅ.20): ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ 200 ಮೈದಾನದಲ್ಲಿ ಪಟಾಕಿ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ದೀಪಾವಳಿ ವೇಳೆ ನಿಗದಿತ ಸಮಯದಲ್ಲಿ ಹಸಿರು ಪಟಾಕಿ ಸಿಡಿಸಲು ಷರತ್ತುಬದ್ಧ ಅನುಮತಿ ನೀಡಲಾಗಿದೆ. ಆದರೆ, ಯಾವ ಸ್ಥಳಗಳಲ್ಲಿ ಪಟಾಕಿ ಮಾರಾಟ ಮಾಡಬೇಕೆಂಬ ಬಗ್ಗೆ ಪಾಲಿಕೆಯ 8 ವಲಯಗಳಲ್ಲಿ 200 ಸ್ಥಳಗಳನ್ನು ಗುರುತಿಸಿ ಪೊಲೀಸ್ ಇಲಾಖೆಗೆ ಪಟ್ಟಿಯನ್ನು ನೀಡಲಾಗಿದೆ ಎಂದರು.
ಯಾವ ಮಾದರಿಯ ಪಟಾಕಿಗಳನ್ನು ಮಾರಾಟ ಮಾಡಬೇಕು ಹಾಗೂ ಅನಧಿಕೃತವಾಗಿ ಪಟಾಕಿ ಮಾರಾಟ ಮಳಿಗೆಗಳನ್ನು ನಿಯಂತ್ರಣ ಮಾಡುವ ಬಗ್ಗೆ ಪೊಲೀಸ್ ಇಲಾಖೆ ನಿಗಾವಹಿಸಲಿದೆ. ಅದೇ ರೀತಿ ಪಾಲಿಕೆಯೂ ತನ್ನ ವ್ಯಾಪ್ತಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಸೂಚನೆಗಳನ್ನು ಪಾಲಿಸಲಿದೆ ಎಂದು ವಿವರಿಸಿದರು.
ದೀಪಾವಳಿಗೆ ಪಟಾಕಿ ಸಿಡಿಸಿದರೆ 6 ತಿಂಗಳು ಜೈಲು, ಮಾರಾಟ ಮಾಡಿದರೂ ಶಿಕ್ಷೆ!
ಐಸಿಸಿಸಿ ಕಾಮಗಾರಿ ಪೂರ್ಣ
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬೆಂಗಳೂರು ಸ್ಮಾರ್ಟ್ ಸಿಟಿ ಲಿ. ವತಿಯಿಂದ ಐಸಿಸಿಸಿ ಕೇಂದ್ರ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ, ಬೀದಿ ದೀಪ, ಕಸ ಸಂಗ್ರಹ ಆಟೋಗಳ ಸಂಚಾರ, ಉದ್ಯಾನಗಳು ಹಾಗೂ ರಸ್ತೆ ನಿರ್ವಹಣೆ ಸೇರಿ 5 ವಿಭಾಗಗಳು ಇದರಡಿ ಕಾರ್ಯ ನಿರ್ವಹಿಸಲಿವೆ. ಜತೆಗೆ, ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಸಂಚಾರ ಪೊಲೀಸ್ ಇಲಾಖೆಗಳು ಐಸಿಸಿಸಿ ಮೇಲ್ವಿಚಾರಣೆ ವ್ಯಾಪ್ತಿಗೆ ಒಳಪಡಲಿವೆ. ಸಾರ್ವಜನಿಕರು ದೂರು ನೀಡಿದಲ್ಲಿ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ರವಾನಿಸಿ ಪರಿಹಾರ ಕೈಗೊಳ್ಳಲು ನೆರವಾಗಲಿದೆ ಎಂದು ತುಷಾರ್ ತಿಳಿಸಿದರು.