ಜಾತ್ರೆಯ ಮಹಾದಾಸೋಹದಲ್ಲಿ ಸೇರಿದಂತೆ ಎಲ್ಲಿಯೂ ಸಹ ಇಷ್ಟೊಂದು ರೊಟ್ಟಿಗಳನ್ನು ಭಕ್ತರು ಮಾಡಿಕೊಂಡು ತಂದು ಅರ್ಪಿಸುವ ಉದಾಹರಣೆ ಇಲ್ಲ. ಹೀಗಾಗಿ, ಇದು ನಾಡಿನ ಅಷ್ಟೇ ಅಲ್ಲ, ದೇಶದ ಜಾತ್ರೆಗಳ ಪರಂಪರೆಯಲ್ಲಿಯೇ ದಾಖಲೆ ಸಂಖ್ಯೆಯ ರೊಟ್ಟಿ ಬರುವ ಜಾತ್ರೆಯಾಗಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ(ಜ.29): ಈ ವರ್ಷದ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವ ಮಹಾದಾಸೋಹದಲ್ಲಿ ಇದುವರೆಗೂ ಭಕ್ತರು ನೀಡಿರುವ ರೊಟ್ಟಿಗಳ ಸಂಖ್ಯೆ ಬರೋಬ್ಬರಿ 20 ಲಕ್ಷಕ್ಕೂ ಅಧಿಕ. ಇನ್ನೂ ಬರುತ್ತಲೇ ಇದ್ದು, ದಾಸೋಹದಲ್ಲಿ ನಿತ್ಯವೂ ರೊಟ್ಟಿ ಬಳಕೆಯಾಗುತ್ತಿದೆ. ಇಷ್ಟಾದರೂ ರೊಟ್ಟಿಗಳು ಇನ್ನೂ ಉಳಿದಿದ್ದು, ಎರಡು ಮೂರು ದಿನಗಳ ಕಾಲ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ.
ಕಳೆದ ವರ್ಷ ಜಾತ್ರಾ ಮಹೋತ್ಸವದುದ್ದಕ್ಕೂ ಬರೋಬ್ಬರಿ 17-18 ಲಕ್ಷ ರೊಟ್ಟಿಗಳು ಬಂದು, ಬಳಕೆಯಾಗಿದ್ದವು. ಈ ವರ್ಷ ತನ್ನ ದಾಖಲೆಯನ್ನು ತಾನೇ ಮುರಿದಿರುವ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವ ಮಹಾದಾಸೋಹದಲ್ಲಿ 20 ಲಕ್ಷಕ್ಕೂ ಅಧಿಕ ರೊಟ್ಟಿಗಳನ್ನು ಸುತ್ತಮುತ್ತಲಿನ ನೂರಾರು ಗ್ರಾಮಗಳ ಸಗ್ಭಕ್ತರು ನೀಡಿರುವುದು ಹಾಗೂ ಅದು ದಾಸೋಹದಲ್ಲಿ ಬಳಕೆ ಆಗಿರುವುದು ದಾಖಲೆಯೇ ಸರಿ.
ಮೊಮ್ಮಗಳ ಮೇಲೆ ಆಣೆ ಮಾಡ್ತೀನಿ, ನಾನು ಜಾತಿ ಮಾಡಲ್ಲ: ಸಚಿವ ಜಮೀರ್ ಅಹ್ಮದ್
ಮಹಾದಾಸೋಹಕ್ಕೆ ಬಹುತೇಕ ಗ್ರಾಮಸ್ಥರು ಹತ್ತಾರು ಸಾವಿರ ಸಂಖ್ಯೆಯಲ್ಲಿ ರೊಟ್ಟಿಗಳನ್ನು ತಂದು ಕೊಡುತ್ತಾರೆ. ಹಟ್ಟಿ ಗ್ರಾಮದಿಂದ ಹತ್ತಾರು ಸಾವಿರ ರೊಟ್ಟಿಗಳನ್ನು ಭಕ್ತರು ಪ್ರತಿ ವರ್ಷ ತಂದು ಕೊಡುತ್ತಾರೆ. ಘಟರಡ್ಡಿಹಾಳ ಗ್ರಾಮದಿಂದ ಹತ್ತು ಸಾವಿರ ರೊಟ್ಟಿಗಳು, ಕಿನ್ನಾಳ ಗ್ರಾಮದಿಂದ ಈ ವರ್ಷ ಹತ್ತು ಸಾವಿರ ರೊಟ್ಟಿಗಳನ್ನು ತಂದು ಕೊಟ್ಟಿದ್ದಾರೆ. ಹೀಗೆ ನೂರಾರು ಗ್ರಾಮಗಳಿಂದ ಹತ್ತಾರು ಸಾವಿರ ಸಂಖ್ಯೆಯಲ್ಲಿ ರೊಟ್ಟಿಗಳನ್ನು ತಂದು ಕೊಡಲಾಗುತ್ತದೆ. ಇನ್ನು ಸಾವಿರ ಲೆಕ್ಕದಲ್ಲಿ, ನೂರರ ಲೆಕ್ಕದಲ್ಲಿ ಕೊಡುವವರ ಸಂಖ್ಯೆ ಸಾವಿರಕ್ಕೂ ಅಧಿಕ ಇದೆ. ಹೀಗಾಗಿ, ಹೀಗೆ ಬಂದಿರುವ ಲೆಕ್ಕಾಚಾರದ ಆಧಾರದಲ್ಲಿ ಬರೋಬ್ಬರಿ 20 ಲಕ್ಷಕ್ಕೂ ಅಧಿಕ ರೊಟ್ಟಿಗಳು ಈ ವರ್ಷ ಜಾತ್ರೆಯ ಮಹಾದಾಸೋಹಕ್ಕೆ ಬಂದಿವೆ ಎನ್ನುತ್ತಾರೆ ದಾಸೋಹ ಉಸ್ತುವಾರಿ ನೋಡಿಕೊಳ್ಳುವ ರಾಮನಗೌಡ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದರೆ ಬರೋಬ್ಬರಿ ಇದರ ಸಂಖ್ಯೆ 2-3 ಲಕ್ಷಕ್ಕೂ ಅಧಿಕವಾಗಿದೆ ಎನ್ನುತ್ತಾರೆ.
ಜಿಲ್ಲಾದ್ಯಂತ ಜಾತ್ರೆಗೆ ಬರುವ ಭಕ್ತರು ಬರಿಗೈಯಿಂದ ಬರುವುದಿಲ್ಲ. ದಾಸೋಹಕ್ಕೆ ತಮ್ಮ ಮನೆಯಲ್ಲಿ ಕೈಲಾದಷ್ಟು ಮಾಡಿಕೊಂಡು ಬಂದು ಮಹಾದಾಸೋಹಕ್ಕೆ ಕೊಟ್ಟು ಹೋಗುತ್ತಾರೆ. ಇದೆಲ್ಲವನ್ನು ಲೆಕ್ಕ ಹಾಕುವುದು ಕಷ್ಟದ ಕೆಲಸವಾಗಿದೆ.
ವಿಶ್ವಕ್ಕೆ ತೊಗಲುಗೊಂಬೆಯಾಟ ಪರಿಚಯಿಸಿದ 96 ವರ್ಷದ ಕೊಪ್ಪಳದ ಭೀಮವ್ವಳಿಗೆ ಪದ್ಮಶ್ರೀ ಗರಿ!
ಜಾತ್ರಾ ಪರಂಪರೆಯಲ್ಲಿಯೇ ದಾಖಲೆ:
ಜಾತ್ರೆಯ ಮಹಾದಾಸೋಹದಲ್ಲಿ ಸೇರಿದಂತೆ ಎಲ್ಲಿಯೂ ಸಹ ಇಷ್ಟೊಂದು ರೊಟ್ಟಿಗಳನ್ನು ಭಕ್ತರು ಮಾಡಿಕೊಂಡು ತಂದು ಅರ್ಪಿಸುವ ಉದಾಹರಣೆ ಇಲ್ಲ. ಹೀಗಾಗಿ, ಇದು ನಾಡಿನ ಅಷ್ಟೇ ಅಲ್ಲ, ದೇಶದ ಜಾತ್ರೆಗಳ ಪರಂಪರೆಯಲ್ಲಿಯೇ ದಾಖಲೆ ಸಂಖ್ಯೆಯ ರೊಟ್ಟಿ ಬರುವ ಜಾತ್ರೆಯಾಗಿದೆ ಎಂದು ಹೇಳಲಾಗುತ್ತದೆ.
ಹೀಗೆ ಬರುವ ರೊಟ್ಟಿಗಳನ್ನು ಹತ್ತಾರು ಕಡೆ ಸಂಗ್ರಹ ಮಾಡಲಾಗುತ್ತದೆ. ರೊಟ್ಟಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇರುವುದರಿಂದ ರೊಟ್ಟಿ ಸಂಗ್ರಹಕ್ಕಾಗಿಯೇ ಪ್ರತ್ಯೇಕ ಶೆಡ್ ನಿರ್ಮಾಣ ಮಾಡಿ, ಸಂಗ್ರಹಿಸಲಾಗುತ್ತದೆ. ಅಷ್ಟೇ ಅಲ್ಲ, ಭಕ್ತರು ಸಹ ತಾವು ರೊಟ್ಟಿ ತರುವ ದಿನಾಂಕವನ್ನು ಶ್ರೀಮಠದಲ್ಲಿ ಕೇಳಿಯೇ ತರುತ್ತಾರೆ. ಹೀಗಾಗಿ, ಜಾತ್ರೆಯ ಮಹಾದಾಸೋಹದುದ್ದಕ್ಕೂ ಹದಿನೈದು ದಿನಗಳ ಕಾಲವೂ ನಿತ್ಯವೂ ಸಾವಿರಾರು ಸಂಖ್ಯೆಯ ರೊಟ್ಟಿಗಳನ್ನು ಭಕ್ತರು ಮೆರವಣಿಗೆಯಲ್ಲಿ ತಂದು ಕೊಡುತ್ತಾರೆ.