* ಕಾರ್ಯಾಚರಣೆಗೆ ಇಳಿದ ಎಸ್ಪಿ, ಡಿವೈಎಸ್ಪಿ
* ಪರಾರಿಯಾಗಿದ್ದು ದರೋಡೆಕೋರರ ಗ್ಯಾಂಗ್ ಇರಬಹುದಾ?
* ಕಂತೆ ಕಂತೆ ನೋಟು ಯಾರಿಗೆ ಸೇರಿದ್ದು?
ಕೊಪ್ಪಳ(ಆ.06): ವ್ಯಕ್ತಿಯೋರ್ವ ಪೊಲೀಸ್ ತಪಾಸಣೆ ವೇಳೆ ಸುಮಾರು 20 ಲಕ್ಷ ಹಣವಿದ್ದ ಬ್ಯಾಗ್ ಮತ್ತು ಬೈಕ್ ಬಿಟ್ಟು ಪರಾರಿಯಾಗಿರುವ ಘಟನೆ ತಾಲೂಕಿನ ಅಳವಂಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದಿದೆ!
ಇದನ್ನು ಶೋಧಿಸಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ. ಪೊಲೀಸರು ಬೈಕ್ ದಾಖಲಾತಿ ತಪಾಸಣೆ ಮಾಡುತ್ತಿದ್ದ ವೇಳೆಯಲ್ಲಿ ಮೂರು ಬೈಕ್‌ನಲ್ಲಿ ಬಂದ ಆರು ಜನರು ತಪ್ಪಿಸಿಕೊಂಡು ಹೋಗಲು ಯತ್ನಿಸಿದ್ದಾರೆ. ಎರಡು ಬೈಕ್‌ನಲ್ಲಿ ಇದ್ದವರು ತಪ್ಪಿಸಿಕೊಂಡು ಹೋಗಿದ್ದಾರೆ. ಇನ್ನೊಂದು ಬೈಕ್‌ನವರಿಗೆ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದಾಗ ಅಲ್ಲಿಯೇ ಬೈಕ್ ಬಿಟ್ಟು ಪರಾರಿಯಾಗಿದ್ದಾರೆ.
undefined
ಪರಾರಿಯಾಗಿದ್ದ ಬೈಕ್‌ನಲ್ಲಿ ಇದ್ದ ಬ್ಯಾಗ್ ತೆಗೆದು ನೋಡಿದಾಗ ಬರೋಬ್ಬರಿ 20 ಲಕ್ಷ ಪತ್ತೆಯಾಗಿವೆ. ಬೈಕ್‌ನಲ್ಲಿ 20 ಲಕ್ಷ ಪತ್ತೆಯಾಗುತ್ತಿದ್ದಂತೆ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಮತ್ತು ಡಿವೈಎಸ್ಪಿ ಗೀತಾ ಅವರು ಸ್ಥಳಕ್ಕೆ ಆಗಮಿಸಿ, ಪರಾರಿಯಾದ 2 ಬೈಕ್, ನಾಪತ್ತೆಯಾದ ಆರು ಜನರ ಪತ್ತೆಗೆ ಕಾರ್ಯಾಚರಣೆ ನಡೆಸಿದ್ದಾರೆ.
ಗಂಗಾವತಿ: ಅಂಜನಾದ್ರಿ ಸುತ್ತ ನಿಷೇಧಾಜ್ಞೆ ಬಿಸಿ..!
ಆಗಿದ್ದೇನು?
ಅಳವಂಡಿ ಸಮೀಪ ಬೈಕ್ ದಾಖಲಾತಿಗಳನ್ನು ಪರಿಶೀಲನೆ ಮಾಡಲಾಗುತ್ತಿತ್ತು. ಈ ಸಂದರ್ಭದಲ್ಲಿ ಏಕಕಾಲಕ್ಕೆ ಮೂರು ಬೈಕ್‌ನಲ್ಲಿ ಆರು ಜನರು ವೇಗವಾಗಿ ಆಗಮಿಸಿದರು. ಇವರನ್ನು ತಡೆಯುವ ಪ್ರಯತ್ನ ಮಾಡಲಾಯಿತು.
ಒಂದು ಬೈಕ್ ನಿಲ್ಲಿಸಿದರು, ಇನ್ನೆರಡು ಬೈಕ್‌ನಲ್ಲಿ ಇದ್ದವರು ವೇಗವಾಗಿ ಮುಂಡರಗಿ ಕಡೆಗೆ ಹೋಗಿಯೇ ಬಿಟ್ಟರು. ಸಿಕ್ಕಿದ್ದ ಒಂದು ಬೈಕ್ ದಾಖಲಾತಿ ಮಾಡುವ ಮುನ್ನವೇ ಇಬ್ಬರು ಬೈಕ್ ಅಲ್ಲಿಯೇ ಬಿಟ್ಟು ಪರಾರಿಯಾದರು. ಪರಿಶೀಲಿಸಿದಾಗ ಅದರಲ್ಲಿ 20ಲಕ್ಷ ರು. ಪತ್ತೆಯಾಗಿವೆ. ತಕ್ಷಣ ಮಾಹಿತಿ ಪಡೆದ ಪೊಲೀಸ್ ವರಿಷ್ಠಾಧಿಕಾರಿ ಟಿ. ಶ್ರೀಧರ ಹಾಗೂ ಡಿವೈಎಸ್ಪಿ ಗೀತಾ ಅವರ ನೇತೃತ್ವದಲ್ಲಿ ಸುಮಾರು 100ಕ್ಕೂ ಹೆಚ್ಚು ಸಿಬ್ಬಂದಿ ಆಗಮಿಸಿ, ಸುತ್ತಮುತ್ತಲ ಹೊಲಗದ್ದೆಗಳಲ್ಲಿ ಹುಡುಕಾಟ ನಡೆಸಿದರು. ಶ್ವಾನದಳದ ಮೂಲಕವೂ ಪತ್ತೆ ಕಾರ್ಯ ನಡೆದಿದ್ದು, ಯಾವುದೇ ಸುಳಿವು ಸಿಗಲೇ ಇಲ್ಲ. ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಯಾರ ದುಡ್ಡು?
ದಾಖಲೆಯೇ ಇಲ್ಲದ ಈ ಹಣ ಯಾರದು? ಎನ್ನುವುದೇ ಈಗಿರುವ ಜಿಜ್ಞಾಸೆ. ದರೋಡೆಕೋರರು ಹಣವನ್ನು ಸಾಗಿಸುತ್ತಿದ್ದರೇ ಎನ್ನುವ ಅನುಮಾನ ಇದೆ. ಅಥವಾ ಹಣ ಸಾಗಿಸುವ ಗ್ಯಾಂಗ್ ಇದಾಗಿಯೇ ಎನ್ನುವುದು ಇನ್ನೂ ನಿಗೂಢವಾಗಿದೆ. ಇವರ ಹಿಂದೆ ದೊಡ್ಡ ತಂಡ ಹಾಗೂ ಹಿನ್ನೆಲೆ ಇರಬೇಕೆಂಬುದು ಪೊಲೀಸರ ಅನುಮಾನ.