
ಮೈಸೂರು(ಜ.29): ಕೇರಳದಿಂದ ಮೆಡಿಕಲ್ ತ್ಯಾಜ್ಯ ತುಂಬಿಕೊಂಡು ಕರ್ನಾಟಕಕ್ಕೆ ಬರುತ್ತಿದ್ದ ಎರಡು ಲಾರಿಗಳನ್ನು ಮೈಸೂರು ಜಿಲ್ಲೆ ನಂಜನಗೂಡು ಪೊಲೀಸರು ಮಂಗಳವಾರ ವಶಕ್ಕೆ ಪಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಅಫ್ಜಲ್ ಮತ್ತು ಸೈಯದ್ ಮಹಮದ್ ಬಂಧಿತರು. ಕೇರಳದ ಮೆಡಿಕಲ್ ವೇಸ್ಟ್ ಅನ್ನು ಅಕ್ರಮವಾಗಿ ಕರ್ನಾಟಕಕ್ಕೆ ತಂದು ಸುರಿಯುತ್ತಿರುವುದರಿಂದ ಮಾಲಿನ್ಯ ಪ್ರಮಾಣ ಹೆಚ್ಚಾಗಿದೆ. ಮಂಗಳವಾರ ಬೆಳಗಿನ ಜಾವ ನಂಜನಗೂಡಿನ ಅಡಕನಹಳ್ಳಿಹುಂಡಿ ಕೈಗಾರಿಕಾ ಪ್ರದೇಶದಲ್ಲಿ ಪೊಲೀಸರು ಗಸ್ತಿನಲ್ಲಿದ್ದಾಗ ತ್ಯಾಜ್ಯ ತುಂಬಿಕೊಂಡು ಹೋಗುತ್ತಿದ್ದ 2 ಲಾರಿಗಳಿಂದ ಕೆಟ್ಟವಾಸನೆ ಬರುತ್ತಿತ್ತು. ಈ ವೇಳೆ ಲಾರಿಗಳನ್ನು ನಿಲ್ಲಿಸಿ ಪೊಲೀಸರು ಪರಿಶೀಲಿಸಿದಾಗ ಐದಾರು ಮಂದಿ ಪರಾರಿಯಾಗಿದ್ದಾರೆ. ಇಬ್ಬರು ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ ಎಂದು ಮೈಸೂರು ಎಸ್ಪಿ ಸಿ.ಬಿ. ರಿಷ್ಯಂತ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬೀದರ್‌ನಲ್ಲಿ ಮಹಿಳೆಯರ ರೌದ್ರಾವತಾರ: ತಂತಿ ಬೇಲಿ ಕಿತ್ತೆಸೆದ ನಾರಿಯರು!
ಕೇರಳದಿಂದ ಮೆಡಿಕಲ್ ತ್ಯಾಜ್ಯ ತಂದು ಸುರಿಯುತ್ತಿರುವುದಾಗಿ ಆರೋಪಿ ಅಫ್ಜಲ್ ಒಪ್ಪಿಕೊಂಡಿದ್ದು, ಪರಾರಿಯಾದ ಶೋಹೆಬ್, ತನ್ವೀರ್, ಶ್ರೀಕಂಠ ಮತ್ತು ಇತರರಿಗಾಗಿ ಶೋಧ ಮುಂದುವರೆಸಲಾಗಿದೆ ಎಂದು ಅವರು ಹೇಳಿದ್ದಾರೆ. ನಂಜನಗೂಡು ಗ್ರಾಮಾಂತರ ಠಾಣೆಯ ಎಸ್‌ಐ ಸತೀಶ ಮತ್ತು ಸಿಬ್ಬಂದಿ ಸುರೇಶ, ರಮೇಶ ಈ ಪತ್ತೆ ಮಾಡಿದ್ದಾರೆ.