ಲಾಲ್‌ಬಾಗ್‌ ಫಲಪುಷ್ಪ ಪ್ರದರ್ಶನದಲ್ಲಿ ಒಂದೇ ದಿನ 2 ದಾಖಲೆ

By Kannadaprabha NewsFirst Published Aug 16, 2019, 9:15 AM IST
Highlights

ಲಾಲ್ ಬಾಗ್ ಫ್ಲವರ್ ಶೋ ಒಂದೇ ದಿನ ಎರೆಡೆರಡು ದಾಖಲೆಗಳನ್ನು ಬರೆದಿದೆ. ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಒಂದೆ 2 ಲಕ್ಷದಷ್ಟು ಜನರು ಭೇಟಿ ನೀಡಿದ್ದಾರೆ. 

ಬೆಂಗಳೂರು [ಆ.16]:  ಲಾಲ್‌ಬಾಗ್‌ನಲ್ಲಿ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನಕ್ಕೆ ಒಂದೇ ದಿನ 1,72,100 ಮಂದಿ ಭೇಟಿ ನೀಡಿದ್ದು, ಹೊಸ ದಾಖಲೆ ನಿರ್ಮಿಸಿದೆ. ಜತೆಗೆ ಹೆಚ್ಚು ಟಿಕೆಟ್‌ ಶುಲ್ಕ 80.70 ಲಕ್ಷ ರು. ಒಂದೇ ದಿನ ಸಂಗ್ರಹವಾಗಿರುವುದು ಕೂಡ ಮತ್ತೊಂದು ದಾಖಲೆಯಾಗಿದೆ.

ಜಯಚಾಮರಾಜ ಒಡೆಯರ್‌ ಜನ್ಮ ಶತಮಾನೋತ್ಸವ ಅಂಗವಾಗಿ ಒಡೆಯರ್‌ ಜೀವನ ಚರಿತ್ರೆಗೆ ಸಂಬಂಧಿಸಿದ ಈ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯುವಲ್ಲಿ ಸಂಪೂರ್ಣ ಯಶಸ್ವಿಯಾಗಿದೆ. ದಿನದಿಂದ ದಿನಕ್ಕೆ ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಬರುವವರ ಸಂಖ್ಯೆಯೂ ಹೆಚ್ಚುತ್ತಿದ್ದು, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಮೈಸೂರು ಉದ್ಯಾನ ಕಲಾಸಂಘದ ಪದಾಧಿಕಾರಿಗಳ ಮೊಗದಲ್ಲಿ ಮಂದಹಾಸ ಮೂಡಿಸಿದೆ.

ಆ.9ರಿಂದ ಆ.15ರವರೆಗೆ ಸುಮಾರು 3.61 ಲಕ್ಷಕ್ಕೂ ಅಧಿಕ ಮಂದಿ ಫಲಪುಷ್ಪ ಪ್ರದರ್ಶನಕ್ಕೆ ಭೇಟಿ ನೀಡಿದ್ದು, ಅವರಲ್ಲಿ 2.79 ಲಕ್ಷ ವಯಸ್ಕರು, 82,750 ಮಂದಿ ಮಕ್ಕಳು ಪ್ರದರ್ಶನ ವೀಕ್ಷಿಸಿದ್ದಾರೆ. ಆರು ದಿನಗಳಲ್ಲಿ 1.63 ಕೋಟಿ ರು. ಗೂ ಅಧಿಕ ಟಿಕೆಟ್‌ ಶುಲ್ಕ ಸಂಗ್ರಹವಾಗಿದೆ. ಈ ಹಿಂದೆ ಪುಷ್ಪಗಳಲ್ಲಿ ತಾಜ್‌ಮಹಲ್‌ ಪ್ರತಿಕೃತಿ ವಿನ್ಯಾಸ ಮಾಡಿದ್ದಾಗ 1.05 ಲಕ್ಷ ಮಂದಿ ಒಂದೇ ದಿನ ಆಗಮಿಸಿದ್ದು ಈವರೆಗಿನ ದಾಖಲೆ ಆಗಿತ್ತು ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಡಾ.ಜಗದೀಶ್‌ ಮಾಹಿತಿ ನೀಡಿದ್ದಾರೆ.

ಗಾಜಿನಮನೆಯಲ್ಲಿ ಪ್ರತಿಷ್ಠಾಪಿಸಲಾಗಿರುವ ಜಯಚಾಮರಾಜ ಒಡೆಯರ್‌ ಪ್ರತಿಮೆ, ನಾಲ್ಕು ಬದಿಗಳಲ್ಲಿ ಹೂವಿನ ಪಿರಮಿಡ್ಡುಗಳು, ಇಂಡೋ ಅಮೆರಿಕನ್‌ ಹೈಬ್ರಿಡ್‌ ಸೀಡ್‌ ಕಂಪನಿಗಳ ಹೂವುಗಳ ಪ್ರದರ್ಶನ, ಒಡೆಯರ್‌ ಪ್ರತಿಮೆ ಹಿಂದೆ ಸಾಲಾಗಿ ನಿಲ್ಲಿಸಲಾಗಿರುವ ವಿವಿಧ ವಿನ್ಯಾಸದ ಉಡುಗೆ ತೊಟ್ಟಿರುವ ಸಣ್ಣ ಗಾತ್ರದ ಒಡೆಯರ್‌ ಪ್ರತಿಮೆಗಳು, ವರ್ಟಿಕಲ್‌ ಗಾರ್ಡನ್‌ ಮಾದರಿಗಳು, ಜಯಚಾಮರಾಜ ಒಡೆಯರ್‌ಗೆ ಸಂಬಂಧಿಸಿದ ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಮಾಹಿತಿ ಒಳಗೊಂಡ ನೂರಾರು ಅಪರೂಪದ ಛಾಯಾಚಿತ್ರಗಳು, ಮೈಸೂರು ರಾಜಮನೆತನ, ಒಡೆಯರ್‌ ಅವರ ಬಾಲ್ಯ, ರಾಜ್ಯಪಾಲರಾಗಿ ಪಾಲ್ಗೊಂಡಿದ್ದ ಹಲವು ಕಾರ್ಯಕ್ರಮಗಳು, ಗಣ್ಯರೊಂದಿಗಿನ ಛಾಯಾಚಿತ್ರ ಹೀಗೆ ನೂರಾರು ಛಾಯಾಚಿತ್ರಗಳು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ.

ಕೈತೋಟದಲ್ಲಿ ತರಕಾರಿ:

ಮುಖ್ಯವಾಗಿ ಸುಮಾರು 40ರಿಂದ 45 ಮಳಿಗೆಗಳಲ್ಲಿ ಅಲಂಕಾರಿಕ ವಸ್ತುಗಳು, ಸಾವಯವ ತಿಂಡಿ ತಿನಿಸು, ಕೈತೋಟಗಳಿಗೆ ಉಪಯುಕ್ತವಾದ ಗೊಬ್ಬರ, ಬೀಜ, ಪರಿಕರಗಳ ಮಳಿಗೆಗಳು, ವಿವಿಧ ತಳಿಗಳ ತರಕಾರಿ ಪ್ರದರ್ಶನ ಮಳಿಗೆ, ಕೈತೋಟದಲ್ಲಿಯೇ ಬೆಳೆಯಲಾದ ಟೊಮೆಟೋ, ಬದನೆ, ಹೀರೇಕಾಯಿ, ಪಡವಲಕಾಯಿ, ಮೂರು ಅಡಿ ಬೆಳೆದ ಬಾಳೆಗಿಡದಲ್ಲೆ ಗೊನೆ ಬಿಟ್ಟಿರುವಂತ ವಿಶಿಷ್ಠ ತಳಿಗಳ ಪ್ರದರ್ಶನ ಜನರ ಮೆಚ್ಚುಗೆಗೆ ಪಾತ್ರವಾಗಿವೆ.

ಗಮನ ಸೆಳೆದ ಕಾರ್ಯಕ್ರಮ:

ಕೇಂದ್ರ ಸಚಿವ ದಿವಂಗತ ಅನಂತಕುಮಾರ್‌ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್‌ ನೇತೃತ್ವದಲ್ಲಿ ರಾಷ್ಟ್ರಧರ್ಮ ಸಂಸ್ಥೆಯ 60ಕ್ಕೂ ಹೆಚ್ಚು ಮಂದಿ ಬೀದಿನಾಟಕ ಮತ್ತು ಹಾಡುಗಾರಿಕೆ ಮೂಲಕ ಸ್ವಚ್ಛತೆ ಕುರಿತು ಅರಿವು ಮೂಡಿಸಿದರು. ಎಫ್‌ಎಂ ರೇಡಿಯೋ ಸಿಟಿ ಫಲಪುಷ್ಪ ಪ್ರದರ್ಶನ ಕುರಿತು ನೇರ ಕಾರ್ಯಕ್ರಮ ಪ್ರಸಾರ ಮಾಡಿತ್ತು. ಖಾಸಗಿ ಸುದ್ದಿವಾಹಿನಿಯೊಂದು ಜಯಚಾಮರಾಜ ಒಡೆಯರ್‌ ಅವರ ಜೀವನ ಚರಿತ್ರೆಯ ಸಾಕ್ಷ್ಯಾಚಿತ್ರವನ್ನು ಎರಡು ಎಲ್‌ಇಡಿ ಪರದೆಗಳಲ್ಲಿ ಪ್ರದರ್ಶಿಸಲಾಗುತ್ತಿದೆ. ಗುರುವಾರ ಸುಮಾರು 600 ಮಂದಿ ಸೈನಿಕರು ಪುಷ್ಪ ಪ್ರದರ್ಶನ ವೀಕ್ಷಿಸಿದ್ದು ವಿಶೇಷ.

ಕಳೆದ ಐದಾರು ವರ್ಷಗಳಿಂದ ಫಲಪುಷ್ಪ ಪ್ರದರ್ಶನ ವೀಕ್ಷಿಸುತ್ತಿದ್ದೇನೆ. ಪುಷ್ಪಗಳಲ್ಲಿ ಅರಳಿದ್ದ ತಾಜ್‌ಮಹಲ್‌, ಕುವೆಂಪು ಅವರ ಕುಪ್ಪಳ್ಳಿ ಇಷ್ಟವಾಗಿತ್ತು. ನಾಡಿಗೆ ಅನೇಕ ಕೊಡುಗೆ ನೀಡಿರುವ ಮೈಸೂರು ಅರಸ ಜಯಚಾಮರಾಜ ಒಡೆಯರ್‌ ಅವರ ಜನ್ಮ ಶತಮಾನೋತ್ಸವದಂದು ತೋಟಗಾರಿಕೆ ಇಲಾಖೆ ಈ ರೀತಿ ಗೌರವ ಸಲ್ಲಿಸಿರುವುದು ಶ್ಲಾಘನೀಯ.

-ಮಹೇಶ್‌ಕುಮಾರ್‌, ವಕೀಲ. ಜೆ.ಪಿ.ನಗರ

ಜಯಚಾಮರಾಜ ಒಡೆಯರ್‌ ಅವರ ಪ್ರತಿಮೆಗಳು ಸೆಳೆಯುತ್ತವೆ. ಇನ್ನು ಹೂವಿನ ಅಲಂಕಾರವಂತೂ ವರ್ಷದಿಂದ ವರ್ಷಕ್ಕೆ ಹೆಚ್ಚು ಆಕರ್ಷಿತವಾಗುತ್ತಿದೆ. ಪ್ಲಾಸ್ಟಿಕ್‌ ಮುಕ್ತ ಲಾಲ್‌ಬಾಗ್‌ಗೆ ಶ್ರಮಿಸಿದ ಅಧಿಕಾರಿಗಳಿಗೆ ಶಹಬಾಸ್‌ ಹೇಳಲೇಬೇಕು. ಆದರೆ, ಇಲ್ಲಿನ ತಿಂಡಿ, ತಿನಿಸುಗಳು ದುಬಾರಿ. ಒಂದು ಸೌತೇಕಾಯಿ .30 ಇದೆ.

-ಬೀನಾ ಮೋಹನ್‌, ಉಪನ್ಯಾಸಕಿ. ನಾಗರಬಾವಿ.

click me!