ಪತ್ನಿಯಿಂದ ದೂರಾಗಿದ್ದ ಆತ : ರಾತ್ರಿಪೂರ್ತಿ ಸ್ನೇಹಿತರ ಜೊತೆ ಕುಡಿದು ಬೆಳಗ್ಗೆ ಸುಟ್ಟು ಕರಕಲಾಗಿದ್ದರು

By Kannadaprabha NewsFirst Published Apr 4, 2021, 10:06 AM IST
Highlights

ಆತ ಪತ್ನಿಯಿಂದ ದೂರಾಗಿ ಮಗುವಿನ ಜೊತೆಗೆ ವಾಸವಾಗಿದ್ದ. ರಾತ್ರಿಪೂರ್ತಿ ಮನೆಗೆ ಬಂದ  ಸ್ನೇಹಿತರ ಜೊತೆಗೆ ಕುಡಿದು ಪಾರ್ಟಿ ಮಾಡಿದ್ದ. ಬೆಳಗಾಗುವುದರಲ್ಲಿ  ಅಲ್ಲಿದ್ದ ಜೀವಗಳೆರಡು ಸುಟ್ಟು ಕರಕಲಾಗಿದ್ದವು. 

ನಾಗಮಂಗಲ (ಏ.04):  ಅಗ್ನಿ ದುರಂತವೊಂದರಲ್ಲಿ ನಾಲ್ಕು ವರ್ಷದ ಮಗು ಸೇರಿ ಇಬ್ಬರು ಸಜೀವ ದಹನವಾಗಿ, ಮತ್ತೋರ್ವ ವ್ಯಕ್ತಿಗೆ ಗಂಭೀರ ಸ್ವರೂಪದ ಸುಟ್ಟಗಾಯಗಳಾಗಿರುವ ಘಟನೆ ತಾಲೂಕಿನ ಬೆಳ್ಳೂರು ಹೋಬಳಿಯ ಅಗಚಹಳ್ಳಿ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದೆ.

ಹಾಸನ ಮೂಲದ ದೀಪಕ್‌(33) ಹಾಗೂ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಭರತ್‌ ಎಂಬುವರ ಪುತ್ರ ತನ್ವಿಕ್‌(4) ಅಗ್ನಿ ದುರಂತದಲ್ಲಿ ಸಜೀವ ದಹನವಾಗಿರುವ ದುರ್ದೈವಿಗಳಾದರೆ, ಮಗುವಿನ ತಂದೆ ಭರತ್‌(40) ಗಂಭೀರ ಸ್ವರೂಪದ ಸುಟ್ಟಗಾಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳು.

8 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಸಂಸೆ ಗ್ರಾಮದ ಭರತ್‌ ಎಂಬಾತ ಪತ್ನಿಯೊಂದಿಗಿನ ಮನಸ್ತಾಪದ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ ಪೇಂಟಿಂಗ್‌ ಕೆಲಸ ಮಾಡಿಕೊಂಡು ತಾಲೂಕಿನ ಬೆಳ್ಳೂರು ಸಮೀಪದ ಅಗಚಹಳ್ಳಿಯ ಬಾಡಿಗೆ ಮನೆಯೊಂದರಲ್ಲಿ ತನ್ನ ನಾಲ್ಕು ವರ್ಷದ ಮಗನೊಂದಿಗೆ ವಾಸವಾಗಿದ್ದರು.

ಸ್ನೇಹಿತನೇ ಹಾಕಿದ್ನಾ ಬೆಂಕಿ?:

ಶುಕ್ರವಾರ ಸಂಜೆ ತನ್ನ ಸಂಬಂಧಿ ಹಾಸನ ಮೂಲದ ದೀಪಕ್‌ ಎಂಬುವರು ಸ್ನೇಹಿತರೊಬ್ಬರ ಜೊತೆಗೂಡಿ ಭರತ್‌ ಮನೆಗೆ ಬಂದಿದ್ದರು. ಈ ವೇಳೆ ರಾತ್ರಿ ಮೂವರೂ ಪಾನಗೋಷ್ಠಿ ನಡೆಸಿದ್ದರು. ನಂತರ ದೀಪಕ್‌ ಜೊತೆಯಲ್ಲಿ ಬಂದಿದ್ದ ಸ್ನೇಹಿತನೊಬ್ಬ ತಡರಾತ್ರಿ ಸಮಯದಲ್ಲಿ ಮನೆಯ ಮುಂಬಾಗಿಲಿಗೆ ಬೀಗ ಹಾಕಿಕೊಂಡು ಹೋಗಿದ್ದಾನೆ. ಈ ವೇಳೆ ಸಂಭವಿಸಿದ ಅಗ್ನಿ ದುರಂತದಲ್ಲಿ ಈ ಅವಘಡ ಸಂಭವಿಸಿದ್ದು, ದೀಪಕ್‌ ಜೊತೆಯಲ್ಲಿ ಬಂದಿದ್ದ ಸ್ನೇಹಿತನೇ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಹೋಗಿರಬಹುದೆಂಬ ಶಂಕೆ ವ್ಯಕ್ತವಾಗಿದ್ದು ಘಟನೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.

ಚೇಸಿಂಗ್.. ಖಾರದ ಪುಡಿ.. ಲಿಫ್ಟ್.. ಜತೆಗಿದ್ದವನೇ ಕೊಟ್ಟಿದ್ದ ಸುಳಿವು..!

ಅಗ್ನಿ ದುರಂತದಲ್ಲಿ ನಾಲ್ಕು ವರ್ಷದ ತನ್ನ ಮಗ ಸಜೀವ ದಹನವಾಗುತ್ತಿದ್ದನ್ನು ರಕ್ಷಿಸಲು ಮುಂದಾದ ಭರತ್‌ಗೆ ಶೇ.70ರಷ್ಟುಸುಟ್ಟಗಾಯಗಳಾಗಿದ್ದು, ಭರತ್‌ನ ಚೀರಾಟ ಕೇಳಿದ ಸ್ಥಳೀಯರು ಬಂದು ನೋಡಲಾಗಿ ಮಗು ಸೇರಿ ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿದ್ದರು.

ಸ್ಥಳಕ್ಕೆ ಪೊಲೀಸರ ಭೇಟಿ:

ಸುದ್ದಿತಿಳಿದು ಸ್ಥಳಕ್ಕಾಗಮಿಸಿದ ಬೆಳ್ಳೂರು ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದ ಬಳಿಕ ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಭರತ್‌ನನ್ನು ಸಮೀಪದ ಆದಿಚುಂಚನಗಿರಿ ಆಸ್ಪತ್ರೆಗೆ ದಾಖಲಿಸಿ ಇಬ್ಬರ ಮೃತದೇಹಗಳನ್ನು ಇದೇ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಿ ಮರಣೋತ್ತರ ಪರೀಕ್ಷೆಗೊಳಪಡಿಸಿದ್ದಾರೆ.

ಶನಿವಾರ ಬೆಳಗ್ಗೆ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಧನಂಜಯ, ಡಿವೈಎಸ್‌ಪಿ ನವೀನ್‌ಕುಮಾರ್‌, ವೃತ್ತ ನಿರೀಕ್ಷಕ ಸುಧಾಕರ್‌ ಮತ್ತು ಬೆಳ್ಳೂರು ಠಾಣೆಯ ಪಿಎಸ್‌ಐ ರಾಮಚಂದ್ರು ಘಟನಾ ಸ್ಥಳ ಮತ್ತು ಆಸ್ಪತ್ರೆಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡಿದ್ದಾರೆ. ಈ ಸಂಬಂಧ ಬೆಳ್ಳೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಮುಂದಿನ ತನಿಖೆ ಕೈಗೆತ್ತಿಕೊಂಡಿದ್ದಾರೆ.

click me!