ಹೊಸ ವರ್ಷಾಚರಣೆ: ಎಣ್ಣೆ ಹೊಡೆದು ದಾಖಲೆ ಬರೆದ ಕುಡುಕರು!

By Suvarna NewsFirst Published Jan 3, 2020, 1:28 PM IST
Highlights

ಹೊಸ ವರುಷದಲ್ಲಿ ಅಲ್ಕೋಹಾಲ್‌ ಹೊಳೆ| ಡಿ.31ರ ಒಂದೇ ರಾತ್ರಿಯಲ್ಲಿ 2.68 ಕೋಟಿ ಮೌಲ್ಯದ ಮದ್ಯ ಮಾರಾಟ|15239 ಕೇಸ್‌ ಮದ್ಯ ಮಾರಾಟ|ಕಲಬುರಗಿ ನಗರದಲ್ಲೇ ಹೆಚ್ಚಿನ ಮದ್ಯ ಮಾರಾಟ| ತಾಲೂಕು ಸ್ಥಳಗಳಲ್ಲಿಯೂ ಮದ್ಯ ಮಾರಾಟದಲ್ಲಿ ಗಣನೀಯ ಹೆಚ್ಚಳ|

ಶೇಷಮೂರ್ತಿ ಅವಧಾನಿ

ಕಲಬುರಗಿ[ಜ.03]:  ಹೊಸ ವರುಷ 2020 ಸ್ವಾಗತಕ್ಕಾಗಿ ಕಲಬುರಗಿ ಜನರು 2019ರ ಡಿ.31ರ ರಾತ್ರಿ ಹಿಂದೆಂದಿಗಿಂತಲೂ ಹೆಚ್ಚು ನಶೆಯಲ್ಲಿ ತೇಲಾಡಿದ್ದಾರೆ. ಇಲ್ಲಿನ ಅಬಕಾರಿ ಇಲಾಖೆಯಲ್ಲಿ ದಾಖಲಾಗಿರುವ ಡಿ.31ರ ರಾತ್ರಿಯ ಮದ್ಯ ಮಾರಾಟ ಸೂಕ್ಷ್ಮವಾಗಿ ಗಮನಿಸಿದರೆ 2020 ಸ್ವಾಗತಕ್ಕೆ ಕಲಬುರಗಿ ಮಂದಿ ಅತೀ ಹೆಚ್ಚು ಮದ್ಯದ ಮೊರೆ ಹೋಗಿದ್ದರು ಎಂಬ ಅಂಶ ಸ್ಪಷ್ಟವಾಗುತ್ತದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಅಬಕಾರಿ ದಾಖಲೆ ಆಧಾರದಲ್ಲಿ 2020 ನವ ವರುಷ ಸ್ವಾಗತಾಚರಣೆ ಸಂಭ್ರಮ ಬಿಸಿಲೂರಿನ ಜನರು ಹಿಂದೆಂದಿಗಿಂತಲೂ ಅಮಲೇರುವಂತೆ ಮಾಡಿದೆ ಎನ್ನಬಹುದು. ಈ ಬಾರಿ 2019ರ ಡಿ.31ರ ಒಂದೇ ರಾತ್ರಿ ಬಹುಕೋಟಿ ಮದ್ಯ (ಐಎಂಎಲ್‌, ಬಿಯರ್‌) ಮಾರಾಟವಾಗುವ ಮೂಲಕ ನಶೆಯಲ್ಲೇ ಕಲಬುರಗಿ ಜನ ಮದ್ಯಪಾನದಲ್ಲಿ ಹೊಸ ದಾಖಲೆ ಬರೆಯುತ್ತ ಹೊಸ ವರುಷ ಸ್ವಾಗತಿಸಿದ್ದಾರೆ.

2.68 ಕೋಟಿ ರು. ಮದ್ಯ ಮಾರಾಟ:

ಅಬಕಾರಿ ಇಲಾಖೆ ಅಂಕಿ- ಸಂಖ್ಯೆಗಳ ಪ್ರಕಾರ ಡಿ.31ರಂದು ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ನಡೆದ ಪಾರ್ಟಿ ಹಾಗೂ ಮೋಜು ಮಸ್ತಿಯಲ್ಲಿ ಬರೋಬ್ಬರಿ ಒಂದೇ ರಾತ್ರಿಗೆ ಇಂಡಿಯನ್‌ ಮೇಡ್‌ ಲಿಕ್ಕರ್‌ ಹಾಗೂ ಬಿಯರ್‌ ಸೇರಿದಂತೆ 2.68 ಕೋಟಿ ರು ಮೊತ್ತದ ಮದ್ಯ ಮಾರಾಟವಾಗಿದೆ. ಪ್ರತಿ ದಿನದ ಮದ್ಯ ಮಾರಾಟ, ಬಳಕೆಗೆ ಹೋಲಿಕೆ ಮಾಡಿದಲ್ಲಿ ಡಿ. 31ರ ಒಂದೇ ರಾತ್ರಿ ಸರ್ರನೆ ಏರುಗತಿಯಲ್ಲಿ ಸಾಗಿದ್ದು, ಬೇರೆ ದಿನಗಳಿಗೆ ಹೋಲಿಸಿದರೆ ಇದು ದುಪ್ಪಟ್ಟಾಗಿದೆ.

ಹೊಸ ವರ್ಷ 2020ನ್ನು ಅದ್ಧೂರಿಯಾಗಿ ಸ್ವಾಗತಿಸುವ ಭರದಲ್ಲಿ ಬಿಸಿಲ ನಗರ ಕಲಬುರಗಿ ಜನತೆ ಪಾರ್ಟಿ, ಮೋಜು-ಮಸ್ತಿಯೊಂದಿಗೆ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ತಮ್ಮದೇ ಆದಂತಹ ಭಾರೀ ಕೊಡುಗೆ ನೀಡುವ ಮೂಲಕ ಇತ್ತ ತಮ್ಮ ಜೇಬು ಖಾಲಿ ಮಾಡಿಕೊಂಡು ಅತ್ತ ಆಡಳಿತದ ಖಜಾನೆ ತುಂಬಿಸಿದ್ದಾರೆ. ಇದರ ಪರಿಣಾಮವಾಗಿ ಜಿಲ್ಲೆಯ ಅಬಕಾರಿ ಇಲಾಖೆ ಸಂಗ್ರಹ ಈ ವರ್ಷ ಶೇ.50 ರಷ್ಟುಏರಿಕೆ ಕಂಡಿದೆ.

15239 ಕೇಸ್‌ ಮದ್ಯ ಮಾರಾಟ:

ಕಲಬುರಗಿ ಜಿಲ್ಲಾದ್ಯಂತ ಸಾಮಾನ್ಯವಾಗಿ ಇತರ ದಿನಗಳಲ್ಲಿ 7,500 ಕೇಸ್‌ ಬಿಯರ್‌ ಹಾಗೂ ಐಎಂಎಲ್‌ ಮದ್ಯ ಮಾರಾಟವಾಗುತ್ತದೆ. ಆದರೆ ಡಿ.31ರಂದು 12288 ಇಂಡಿನ್‌ ಮೇಡ್‌ ಲಿಕ್ಕರ್‌, 2951 ಬಿಯರ್‌ ಕೇಸ್‌ ಸೇರಿದಂತೆ ಒಟ್ಟು 15239 ಕೇಸ್‌ ಮಾರಾಟವಾಗಿದೆ. ಇದರ ಬೆಲೆ 2.68 ಕೋಟಿ. ಹೀಗೆ ಮಾರಾಟವಾಗುವುದರಿಂದ ಸರಿ ಸುಮಾರು 1.30 ಕೋಟಿ ರುಪಾಯಿ ಸಂಗ್ರಹವಾಗುತ್ತಿತ್ತು. ಆದರೆ ಹೊಸ ವರ್ಷ ಸ್ವಾಗತದ ನೆಪದಲ್ಲಿ ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಮದ್ಯದ ಮೊರೆ ಹೋಗಿದ್ದರಿಂದಲೇ ಹಿಂದಿನ ಅನೇಕ ವರುಷಗಳ ದಾಖಲೆ ಮುರಿದು 2020 ಸ್ವಾಗತಾಚರಣೆ ಮದ್ಯ ಮಾರಾಟದ ಹೊಸ ದಾಖಲೆಯನ್ನೇ ಬರೆದಂತಾಗಿದೆ.

ಈ ಬಗ್ಗೆ ಮಾಹಿತಿ ನೀಡಿದ ಕಲಬುರಗಿ ಜಿಲ್ಲೆಅಬಕಾರಿ ಉಪ ಆಯುಕ್ತ ಎಫ್‌.ಎಚ್‌.ಚಲವಾದಿ ಅವರು, ಕಲಬುರಗಿ ನಗರದಲ್ಲೇ ಹೆಚ್ಚಿನ ಮದ್ಯ ಮಾರಾಟ ದಾಖಲಾಗಿದೆ. ಇನ್ನುಳಿದಂತೆ ತಾಲೂಕು ಸ್ಥಳಗಳಲ್ಲಿಯೂ ಮದ್ಯ ಮಾರಾಟದಲ್ಲಿ ಗಣನೀಯ ಹೆಚ್ಚಳ ಕಂಡಿದೆ. ಜಿಲ್ಲೆಯಲ್ಲಷ್ಟೆಅಲ್ಲ, ಇಡೀ ರಾಜ್ಯದಲ್ಲೇ ಹೊಸ ವರುಷದ ಹೊಸ್ತಿಲಲ್ಲಿ ಮದ್ಯದ ಮಾರಾಟದಲ್ಲಿ ಹೆಚ್ಚಳ ಸಾಮಾನ್ಯ. ರಾಜ್ಯದಲ್ಲಿ ಒಟ್ಟು 590 ಕೋಟಿಗಿಂತ ಹೆಚ್ಚು ಆದಾಯ ಡಿ.31ರ ಒಂದೇ ದಿನದಲ್ಲಿ ಅಬಕಾರಿ ಇಲಾಖೆಗೆ ಸಂಗ್ರಹವಾಗಿದೆ. ಹೊಸ ವರ್ಷದ ಸಂಭ್ರಮದಲ್ಲಿ ರಾಜ್ಯದಲ್ಲಿ ಒಟ್ಟು 5.88 ಲಕ್ಷ ಕ್ಕಿಂತ ಹೆಚ್ಚು ಕೇಸ್‌ ಮದ್ಯ, ಬಿಯರ್‌ ಮಾರಾಟವಾಗಿದೆ ಎಂದು ತಿಳಿಸಿದ್ದಾರೆ. 

ಕಲಬುರಗಿ ನಗರ-ಜಿಲ್ಲೆಯಾದ್ಯಂತ ಡಿ.31 ಒಂದೇ ರಾತ್ರಿ ಮಾರಾಟವಾದ ಮದ್ಯ

ಆಳಂದ- ಐಎಂಎಲ್‌ 1014, ಬಿಯರ್‌ 270

ಕಲಬುರಗಿ ರೇಂಜ್‌ 2- ಐಎಂಎಲ್‌ 1413, ಬಿಯರ್‌ 747

ಕಲಬುರಗಿ ರೇಂಜ್‌ 2- ಐಎಂಎಲ್‌ 1372, ಬಿಯರ್‌ 579

ಜೇವರ್ಗಿ- ಐಎಂಎಲ್‌ 1651, ಬಿಯರ್‌ 300

ಚಿಂಚೋಳಿ- ಐಎಂಎಲ್‌ 1953, ಬಿಯರ್‌ 227

ಚಿತ್ತಾಪುರ- ಐಎಂಎಲ್‌ 3509, ಬಿಯರ್‌ 310

ಸೇಡಂ- ಐಎಂಎಲ್‌ 1376, ಬಿಯರ್‌ 518

ಅಬಕಾರಿ ಇಲಖೆ ದಾಖಲೆಗಳ ಪ್ರಕಾರ 2019ರಲ್ಲಿ ಇಡೀ ವರ್ಷದಲ್ಲಿ 2,19,178 ಪೆಟ್ಟಿಗೆ ಐಎಂಎಲ್‌ ಹಾಗೂ ಬಿಯರ್‌ ಮಾರಾಟವಾಗಿತ್ತು. ಆದರೆ ಈ ಬಾರಿ ಹೊಸ ವರ್ಷದ ಹೊಸ್ತಿಲಲ್ಲೇ ಡಿ.3 ರ ಒಂದೇ ರಾತ್ರಿ 15,239 ಪೆಟ್ಟಿಗೆ ಮದ್ಯ ಮಾರಾಟವಾಗುವ ಮೂಲಕ ಇಲ್ಲಿನ ಅಬಕಾರಿ ಇಲಾಖೆಯ ವಾರ್ಷಿಕ ಮಾರಾಟ, ಸೇವನೆಯ ಪ್ರತಿಶತ 20ರಷ್ಟುಮದ್ಯ ಒಂದೇ ದಿನದಲ್ಲಿ ಖರ್ಚಾಗಿದೆ.

click me!