* ಸುರಕ್ಷಿತ ಸ್ಥಳಗಳಿಗೆ ತೆರಳಲು ತುಂಗಭದ್ರಾ ಮಂಡಳಿ ಸೂಚನೆ
* ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ
* ಜಲಾಶಯದ ಒಳ ಹರಿವು ಸದ್ಯ 30,861 ಕ್ಯುಸೆಕ್
ಹೊಸಪೇಟೆ(ಸೆ.15): ಕರ್ನಾಟಕ, ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳ ಲಕ್ಷಾಂತರ ರೈತರ ಜೀವನಾಡಿ ತುಂಗಭದ್ರಾ ಜಲಾಶಯ ಮತ್ತೊಮ್ಮೆ ಸಂಪೂರ್ಣ ಭರ್ತಿಯಾಗಿದ್ದು, ನದಿಪಾತ್ರದ ಜನ, ಜಾನುವಾರುಗಳು ಸುರಕ್ಷಿತ ಸ್ಥಳಗಳಿಗೆ ತೆರಳಲು ತುಂಗಭದ್ರಾ ಮಂಡಳಿ ಸೂಚಿಸಿದೆ. ಈ ಮಧ್ಯೆ 10 ಗೇಟ್‌ಗಳನ್ನು ತೆರೆದು ನದಿಗೆ 19 ಸಾವಿರ ಕ್ಯುಸೆಕ್ ನೀರು ಹರಿಸಲಾಗಿದೆ.
ತುಂಗಭದ್ರಾ ಜಲಾನಯನ ಪ್ರದೇಶದಲ್ಲಿ ಬೀಳುತ್ತಿರುವ ಮಳೆಯಿಂದಾಗಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದೆ. ಜಲಾಶಯದ ಒಳ ಹರಿವು ಸದ್ಯ 30,861 ಕ್ಯುಸೆಕ್‌ನಷ್ಟಿದ್ದು, ಇನ್ನೂ ಏರಿಕೆಯಾಗುವ ಸಾಧ್ಯತೆ ಇದೆ. ನೀರು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಾಧ್ಯತೆ ಇದೆ. ನದಿಪಾತ್ರದ ಜನರು, ಸುರಕ್ಷಿತ ಸ್ಥಳಗಳಿಗೆ ತೆರಳಬೇಕು ಎಂದು ತುಂಗಭದ್ರಾ ಮಂಡಳಿ ಸೂಚಿಸಿದೆ.
ಹಸಿರು ಬಣ್ಣಕ್ಕೆ ತಿರುಗಿದ ತುಂಗಭದ್ರಾ ಜಲಾಶಯದ ನೀರು..!
ಶಿವಮೊಗ್ಗ ಭಾಗದಿಂದ 28,958 ಕ್ಯುಸೆಕ್, ಹೊನ್ನಾಳಿಯಿಂದ 37,434 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿದೆ. ಹಾಗಾಗಿ ಜಲಾಶಯದ 10 ಗೇಟ್‌ಗಳನ್ನು ಒಂದು ಅಡಿ ವರೆಗೆ ಎತ್ತರಿಸಿ ಜಲಾಶಯದಿಂದ 19 ಸಾವಿರ ಕ್ಯುಸೆಕ್ ನೀರು ನದಿಗೆ ಹರಿಸಲಾಗಿದೆ. ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹೊರಬಿಡುವ ಸಾಧ್ಯತೆ ಇದೆ. ಹಾಗಾಗಿ, ಬಳ್ಳಾರಿ, ವಿಜಯನಗರ, ಕೊಪ್ಪಳ ಹಾಗೂ ರಾಯಚೂರು, ಕರ್ನೂಲ್, ಕಡಪ, ಅನಂತಪುರ ಜಿಲ್ಲಾಡಳಿತಗಳು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಲಾಶಯ ಆಡಳಿತ ಮಂಡಳಿ ಅಧಿಕಾರಿಗಳು ಸೂಚಿಸಿದ್ದಾರೆ.