* 25 ಜನರ ಕುಟುಂಬ, 10 ತಿಂಗಳ ಕೂಸಿಗೂ ಸೋಂಕು
* ವೈದ್ಯರ ಸಲಹೆ ಮೇರೆಗೆ ಎಲ್ಲರಿಗೂ ಹೋಂ ಐಸೋಲೇಷನ್‌ನಲ್ಲೇ ಚಿಕಿತ್ಸೆ
* ಕೊರೋನಾ ಗೆದ್ದ ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ಶಿವಳ್ಳಿಮಠ ಕುಟುಂಬ
ಹುಬ್ಬಳ್ಳಿ(ಮೇ.22): 10 ತಿಂಗಳು ಕೂಸು ಸೇರಿದಂತೆ ಒಂದೇ ಕುಟುಂಬದ 16 ಜನ ಕೊರೋನಾ ಸೋಂಕಿನಿಂದ ಗುಣಮುಖರಾಗಿದ್ದಾರೆ. ಎಲ್ಲರೂ ಹೋಂ ಐಸೋಲೇಶನ್‌ನಲ್ಲೇ ಇದ್ದರು.
undefined
ಸುಳ್ಳ ಗ್ರಾಮದಲ್ಲಿ ಶಿವಳ್ಳಿಮಠ ಎಂಬ ಕುಟುಂಬದ ನಾಲ್ವರು ಅಣ್ಣ ತಮ್ಮಂದಿರು ಅಕ್ಕ ಪಕ್ಕದಲ್ಲಿ ನೆಲೆಸಿದ್ದಾರೆ. ಈ ನಾಲ್ಕು ಕುಟುಂಬದಲ್ಲಿ ಸೇರಿ ಬರೋಬ್ಬರಿ 30 ಸದಸ್ಯರಿದ್ದಾರೆ. ಅದರಲ್ಲಿ ಐವರು ಬೇರೆಡೆ ವಾಸಿಸುತ್ತಾರೆ. 25 ಜನರ ಪೈಕಿ ಈ ಕುಟುಂಬದ ಮೂವರಿಗೆ ಮೊದಲಿಗೆ ಕೊರೋನಾ ಪಾಸಿಟಿವ್ ದೃಢವಾಗಿತ್ತು. ಈ ಕಾರಣದಿಂದ ಎಲ್ಲರನ್ನೂ ಪರೀಕ್ಷೆಗೊಳಪಡಿಸಿದಾಗ 16 ಜನರಿಗೆ ಕೊರೋನಾ ದೃಢಪಟ್ಟಿತ್ತು. ಅದರಲ್ಲಿ 10 ತಿಂಗಳು ಕೂಸು ಇದ್ದರೆ, 1 ವರ್ಷದ ಒಂದು, 2 ವರ್ಷದ ಇಬ್ಬರು, 9 ವರ್ಷದ ಒಬ್ಬ ಹೀಗೆ ಐವರು ಮಕ್ಕಳಿದ್ದರು. ನಾಲ್ವರು 60 ವರ್ಷದ ಮೇಲ್ಪಟ್ಟವರಿದ್ದರು. ಇನ್ನುಳಿದ ಏಳು ಜನ ಮಧ್ಯಮ ವಯಸ್ಕರು. ಎಲ್ಲರೂ ಸರ್ಕಾರಿ ವೈದ್ಯರ ಸಲಹೆ ಮೇರೆಗೆ ಹೋಂ ಐಸೋಲೇಷನ್‌ನಲ್ಲೇ ಚಿಕಿತ್ಸೆ ಪಡೆದಿದ್ದಾರೆ.
ಮೊದಲ ಎರಡ್ಮೂರು ದಿನ ಜ್ವರ, ನೆಗಡಿಯೂ ಕಾಣಿಸಿಕೊಂಡಿತ್ತು. ಬಳಿಕ ಎಲ್ಲರೂ ಹುಷಾರಾಗಿದ್ದಾರೆ. ಬ್ಯಾಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರು ಎರಡ್ಮೂರು ದಿನಕ್ಕೊಮ್ಮೆ ಆಗಮಿಸಿ ಚಿಕಿತ್ಸೆ ನೀಡಿ ಧೈರ್ಯ ಹೇಳಿ ಹೋಗುತ್ತಿದ್ದಾರೆ. ಇದೀಗ ಎಲ್ಲರೂ ಆರೋಗ್ಯವಾಗಿದ್ದಾರೆ. ಇದೀಗ ನೆಗೆಟಿವ್ ವರದಿ ಬಂದಿದೆ.
ರಾಜ್ಯದಲ್ಲಿ 300ಕ್ಕೂ ಅಧಿಕ ಪಿಡಿಒಗಳಿಗೆ ಕೊರೋನಾ..!
ಹೌದು, ನಮ್ಮ ಮನೆಯಲ್ಲಿ 25 ಜನರಿದ್ದೇವೆ. ಅದರಲ್ಲಿ 16 ಜನರಿಗೆ ಕೊರೋನಾ ದೃಢವಾಗಿತ್ತು. ಇದೀಗ ಎಲ್ಲರೂ ಹುಷಾರಾಗಿದ್ದೇವೆ. ಕೊರೋನಾ ಬಂತೆಂದರೆ ಹೆದರಿಕೆ ಸಹಜ. ಆದರೆ ಹೆದರದೇ ಧೈರ್ಯವಾಗಿರಬೇಕು. ವೈದ್ಯರು ಹೇಳಿದಂತೆ ಸರಿಯಾಗಿ ಚಿಕಿತ್ಸೆ ಪಡೆಯಬೇಕು ಎಂದು ಮನೆಯ ಸದಸ್ಯ ಮಂಜುನಾಥ ಶಿವಳ್ಳಿಮಠ ತಿಳಿಸಿದ್ದಾರೆ.