* 20ಕ್ಕೂ ಅಧಿಕ ಕುಟುಂಬಗಳಿಂದ ಹೊಲದಲ್ಲೇ ವಾಸ
* ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳ ಗ್ರಾಮ
* ಆಡಳಿತ ವ್ಯವಸ್ಥೆಯ ವಿರುದ್ಧ ಗ್ರಾಮಸ್ಥರ ಆಕ್ರೋಶ
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.22): ಕೊರೋನಾ ಮಹಾಮಾರಿ ಹಳ್ಳಿ ಹಳ್ಳಿಗೂ ಲಗ್ಗೆ ಇಟ್ಟಿದ್ದು, ಗ್ರಾಮಸ್ಥರು ಆಂತಕಗೊಂಡಿದ್ದಾರೆ. ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳ ಗ್ರಾಮದಲ್ಲಿ ಸೋಂಕು ಅಂಕೆ ತಪ್ಪಿದ್ದರಿಂದ ಕೆಲ ಕುಟುಂಬ ಊರನ್ನೇ ತೊರೆದು ತೊಟದ ಮನೆಯಲ್ಲಿ ವಾಸಿಸುತ್ತಿದ್ದಾರೆ.
undefined
ದಿನೇ ದಿನೆ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದೆ. ನೂರರ ಗಡಿಯನ್ನೂ ದಾಟಿದೆ. ಬೆಡ್ ಸಿಗದೆ ಗ್ರಾಮದ ನಾಲ್ಕಾರು ಜನ ಪ್ರಾಣ ತೆತ್ತಿದ್ದಾರೆ. ಇದರಿಂದ ಇಡೀ ಗ್ರಾಮದಲ್ಲಿ ಆತಂಕ ಮನೆ ಮಾಡಿದೆ. ಆಡಳಿತ ವ್ಯವಸ್ಥೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಗ್ರಾಮಸ್ಥರು ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತಾಗಿದೆ. ಸೋಂಕಿತರ ನೆರವಿಗೆ ಅವು ಬರುತ್ತಿಲ್ಲ ಎಂಬ ಆರೋಪವೂ ಕೇಳಿ ಬರುತ್ತಿವೆ. ಸೋಂಕಿತರಿಗೆ ಆಸ್ಪತ್ರೆಯಲ್ಲಿ ಬೆಡ್ ಸಹ ಸಿಗುತ್ತಿಲ್ಲ. ಪರಿಸ್ಥಿತಿ ಕೈಮೀರಿದ ಮೇಲೆ ಮಾಡುವುದೇನು? ಎನ್ನುತ್ತಾರೆ.
ಸೋಂಕು ಮಿತಿ ಮೀರುತ್ತಿರುವುದರಿಂದ ಹಲವಾರು ಕುಟುಂಬಗಳು ಗ್ರಾಮದಲ್ಲಿನ ತಮ್ಮ ಮನೆಯನ್ನು ತೆರವು ಮಾಡಿ ತೋಟದ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ರೀತಿ ಪ್ರತ್ಯೇಕವಾಗಿದ್ದರಿಂದ ತಮಗೆ ಸೋಂಕಿನ ಭಯವಿಲ್ಲ. ನಾವು ಗ್ರಾಮಗಳತ್ತ ಹೋಗುತ್ತಿಲ್ಲ. ತೋಟದ ಮನೆಯಲ್ಲಿಯೇ ಎಲ್ಲ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಅವರು.
ಕೊಪ್ಪಳ: ಸೋಂಕಿತೆಯ ಶವ ಹೊತ್ತೊಯ್ದ ಕುಟುಂಬಸ್ಥರು
ತೋಟದಲ್ಲಿರುವ ಮನೆ, ಗುಡಿಸಲು, ಅತಿಥಿ ಗೃಹ ಹೀಗೆ ಇರುವ ವ್ಯವಸ್ಥೆಯಲ್ಲೇ ಅಲ್ಲಿ ವಾಸಿಸುತ್ತಿದ್ದು ಗ್ರಾಮದ ಸಹವಾಸವೇ ಸದ್ಯ ಬೇಡ ಎನ್ನುತ್ತಿದ್ದಾರೆ. ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಸೋಂಕಿತರಿದ್ದಾರೆ. ಯಾರೊಬ್ಬರೂ ಕ್ವಾರಂಟೈನ್, ಐಸೋಲೇಶನ್ ಆಗುತ್ತಿಲ್ಲ. ಸ್ವ್ಯಾಬ್ ಟೆಸ್ಟ್ ಮಾಡಿಸದ ಹಲವಾರು ಜನರಿದ್ದಾರೆ. ಯಾರಲ್ಲಿ ಸೋಂಕಿದೆ. ಯಾರಲ್ಲಿ ಇಲ್ಲ ಎಂಬುದೂ ತಿಳಿಯದು. ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿದರೂ ಕೊರೋನಾ ಭಯ ಇಲ್ಲದಿಲ್ಲ ಎನ್ನುತ್ತಾರೆ.
ಗ್ರಾಮದ ಸುಮಾರು 20 ಕ್ಕೂ ಹೆಚ್ಚು ಕುಟುಂಬಗಳ 80 ಕ್ಕೂ ಹೆಚ್ಚು ಸದಸ್ಯರು ಈ ರೀತಿ ತೋಟ, ಹೊಲ, ಗದ್ದೆಗಳಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅದರಲ್ಲಿಯೂ ಸೋಂಕಿತರಿದ್ದ ಮನೆಯವರು ಕಡ್ಡಾಯವಾಗಿ ಪ್ರತ್ಯೇಕವಾಗಿಯೇ ವಾಸಿಸುತ್ತಿದ್ದಾರೆ. ದುಡಿಯಲು ಹೊರ ಹೋದವರು ಬಂದಿದ್ದರಿಂದಲೇ ಸೋಂಕು ಗ್ರಾಮದಲ್ಲಿ ವಿಪರೀತ ಹೆಚ್ಚಳವಾಗಿದೆ. ಗ್ರಾಮದಲ್ಲಿ ಇರುವುದರಿಂದ ಅಪಾಯ ಕಟ್ಟಿಟ್ಟಬುತ್ತಿ. ಈ ಹಿನ್ನೆಲೆಯಲ್ಲಿ ಕೆಲವರು ದನಕರುಗಳ ಸಮೇತ ಹೊಲಕ್ಕೆ ತೆರಳಿದ್ದಾರೆ. ಅಗತ್ಯ ವಸ್ತುಗಳನ್ನು ಸಹ ಖರೀದಿಸಿಯೇ ತೋಟ, ಹೊಲದಲ್ಲಿ ವಾಸ್ತವ್ಯ ಹೂಡಿದ್ದಾರೆ. ಅಲ್ಲಿದ್ದರೇ ನಾವು ಸುರಕ್ಷಿತ ಎಂಬ ಭಾವನೆಯೂ ಅವರಲ್ಲಿದೆ.
ಊರಲ್ಲಿ ಇದ್ದರೆ ಸೋಂಕು ತಪ್ಪಿದ್ದಲ್ಲ. ಬಹುತೇಕರಿಗೆ ಬರುತ್ತಿರುವುದರಿಂದ ವಿಧಿಯಿಲ್ಲದೇ ಗ್ರಾಮವನ್ನು ತೊರೆದು, ಹೊಲದಲ್ಲಿ ಇದ್ದೇವೆ. ಕುಟುಂಬ ಸಮೇತ ಬಂದಿದ್ದೇವೆ ಎಂದು ಹೊಲದಲ್ಲಿ ತಂಗಿರುವ ಹಿರೇಬೊಮ್ಮನಾಳ ಗ್ರಾಮಸ್ಥ ಬಸವರಾಜ ತಿಳಿಸಿದ್ದಾರೆ.
ನಮ್ಮೂರು ಪರಿಸ್ಥಿತಿ ಯಾರಿಗೂ ಹೇಳಬೇಡಿ ಬಿಡಿ. ಬೆಡ್ ಸಿಗದೇ ಕೆಲವರು ಪ್ರಾಣ ತೆತ್ತಿದ್ದಾರೆ. ನೂರುಕ್ಕೂ ಹೆಚ್ಚು ಕೇಸ್‌ಗಳಿವೆ. ಇಷ್ಟಾದರೂ ನಮ್ಮನ್ನು ರಕ್ಷಣೆ ಮಾಡಲು ಯಾರೂ ಬರುತ್ತಿಲ್ಲ ಎಂದು ಗ್ರಾಪಂ ಸದಸ್ಯ ಹನುಮಂತಪ್ಪ ಉದ್ದಾರ ಹೇಳಿದ್ದಾರೆ.
ಹಿರೇಬೊಮ್ಮನಾಳ ಮತ್ತು ಸುತ್ತಮುತ್ತಲ ಪ್ರದೇಶ ವ್ಯಾಪ್ತಿಯಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ಆಸ್ಪತ್ರೆಯಲ್ಲಿ ಬೆಡ್ ಇಲ್ಲವೆಂದು ಅಮಾನವೀಯವಾಗಿ ವರ್ತಿಸುತ್ತಾರೆ. ಈಗಾಗಲೇ ನಾಲ್ಕಾರು ಜನರು ಬೆಡ್ ಸಿಗದೆ ಸತ್ತಿದ್ದಾರೆ. ಸರ್ಕಾರ ಬೇಜವಾಬ್ದಾರಿಗೆ ಜನರು ಪ್ರಾಣಕ್ಕೆ ಬೆಲೆ ಇಲ್ಲದಂತೆ ಆಗಿದೆ ಎಂದು ವಿಪ ಸದಸ್ಯರು ಕರಿಯಣ್ಣ ಸಂಗಟಿ ತಿಳಿಸಿದ್ದಾರೆ.