ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಕೊರೋನಾ ಸೋಂಕಿಗೆ 16 ದಿನದ ಹೆಣ್ಣು ಮಗು ಸೇರಿದಂತೆ 45 ಮಂದಿ ಬಲಿಯಾಗಿದ್ದಾರೆ. ಇದು ಬೆಂಗಳೂರಿನ ಪಾಲಿಗೆ ದಾಖಲೆಯ ಸಂಖ್ಯೆಯಾಗಿದ್ದು, ಜು.10ರಂದು 29 ಮಂದಿ ಮೃತಪಟ್ಟಿದ್ದು ಅತಿ ಹೆಚ್ಚಿನ ಸಂಖ್ಯೆಯಾಗಿತ್ತು.
ಬೆಂಗಳೂರು(ಜು.13): ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ಕೊರೋನಾ ಸೋಂಕಿಗೆ 16 ದಿನದ ಹೆಣ್ಣು ಮಗು ಸೇರಿದಂತೆ 45 ಮಂದಿ ಬಲಿಯಾಗಿದ್ದಾರೆ. ಇದು ಬೆಂಗಳೂರಿನ ಪಾಲಿಗೆ ದಾಖಲೆಯ ಸಂಖ್ಯೆಯಾಗಿದ್ದು, ಜು.10ರಂದು 29 ಮಂದಿ ಮೃತಪಟ್ಟಿದ್ದು ಅತಿ ಹೆಚ್ಚಿನ ಸಂಖ್ಯೆಯಾಗಿತ್ತು. ಇದರೊಂದಿಗೆ ನಗರದಲ್ಲಿ ಒಟ್ಟು ಮೃತರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.
16 ದಿನದ ಕಂದಮ್ಮ ಬಲಿ:
ಜೂ.16ರಂದು ಜನಿಸಿದ ನವಜಾತ ಶಿಶು ಕೊರೋನಾ ಸೋಂಕಿನಿಂದ ಜು.1ರಂದು ನಿವಾಸದಲ್ಲಿಯೇ ಮೃತಪಟ್ಟಿತ್ತು. 16 ದಿನ ಈ ಹೆಣ್ಣು ಮಗು ಕೆಮ್ಮು, ಶೀತ, ಜ್ವರ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿತ್ತು. ಮಗು ಮೃತಪಟ್ಟಬಳಿಕ ಅದರ ಸ್ವಾಬ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ಅಂದರೆ 11 ದಿನಗಳ ಬಳಿಕ ಮಗು ಕೊರೋನಾದಿಂದಲೇ ಮೃತಪಟ್ಟಿದೆ ಎಂದು ಅಧಿಕೃತಗೊಳಿಸಲಾಗಿದೆ.
ಇದೇ ರೀತಿ ಕೆಮ್ಮು, ಶೀತ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 17ರ ಯುವತಿಗೆ ಸೋಂಕಿರುವುದು ದೃಢಪಟ್ಟು ಜೂ.25ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಜು.3ರಂದು ಮೃತಪಟ್ಟಿದ್ದಳು.
ಹಾಸಿಗೆ ಇಲ್ಲದೆ ವಿಕ್ಟೋರಿಯಾ ಮುಂದೆ ಜೀವ ಬಿಟ್ಟವೃದ್ಧೆ, ಸತ್ತ ನಂತ್ರ ಕೊರೋನಾ ಟೆಸ್ಟ್ ಮಾಡಿದ ವೈದ್ಯರು
ಇನ್ನುಳಿದ 43 ಮಂದಿಯ ಪೈಕಿ 25 ಮಂದಿ ಪುರುಷರು, 18 ಮಂದಿ ಮಹಿಳೆಯರಿದ್ದಾರೆ. ಇದರಲ್ಲಿ 9 ಮಂದಿ, 50 ವರ್ಷ ಒಳಗಿನವರಾಗಿದ್ದಾರೆ ಎಂದು ಆರೋಗ್ಯ ಇಲಾಖೆ ಭಾನುವಾರ ಮಾಹಿತಿ ನೀಡಿದೆ.
1,525 ಹೊಸ ಕೇಸ್:
ಇನ್ನು ಭಾನುವಾರ ರಾಜಧಾನಿಯಲ್ಲಿ 1,525 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಈ ಪೈಕಿ 945 ಮಂದಿ ಪುರುಷರು, 480 ಮಂದಿ ಮಹಿಳೆಯರಾಗಿದ್ದಾರೆ. ಈ ಮೂಲಕ ಬೆಂಗಳೂರಿನ ಸೋಂಕಿತರ ಸಂಖ್ಯೆ 18,387ಕ್ಕೆ ಏರಿಕೆಯಾಗಿದೆ. ಭಾನುವಾರ 206 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಒಟ್ಟು ಗುಣಮುಖರಾದವರ ಸಂಖ್ಯೆ 4045ಕ್ಕೆ ಏರಿಕೆಯಾಗಿದೆ.14,067 ಸಕ್ರಿಯ ಪ್ರಕರಣಗಳು ಇವೆ. ಇನ್ನೂ 314 ಮಂದಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.