
ಬೆಂಗಳೂರು(ಮೇ.21): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಾಹನಗಳ ದೀರ್ಘ ಕಾಯುವಿಕೆಯಿಂದಾಗುವ ವಾಹನ ದಟ್ಟಣೆ ಸಮಸ್ಯೆ ತಪ್ಪಿಸಲು ವಾಣಿಜ್ಯ ವಾಹನಗಳು ವಿಮಾನ ನಿಲ್ದಾಣದ ಎರಡೂ ಟರ್ಮಿನಲ್‌ನಲ್ಲಿನ ಪ್ರಯಾಣಿಕರ ಪಿಕ್‌ಅಪ್ ಲೇನ್ ಪ್ರವೇಶಿಸಲು ₹150 ಶುಲ್ಕ ನಿಗದಿ ಮಾಡಲಾಗಿದೆ.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟಮಿನಲ್ 1 ಮತ್ತು 2ರಲ್ಲಿನ ಪಿಕ್‌ಅಪ್ ಲೇನ್‌ನಲ್ಲಿ ಖಾಸಗಿ ಮತ್ತು ವಾಣಿಜ್ಯ ವಾಹನಗಳು ಪ್ರಯಾಣಿಕರನ್ನು ಹತ್ತಿಸಿ ಮತ್ತು ಇಳಿಸಿಕೊಳ್ಳುವ ಪ್ರಕ್ರಿಯೆ ಸಾಕಷ್ಟು ಸಮಯ ತೆಗೆದುಕೊಳ್ಳಲಾಗುತ್ತಿದ್ದು, ಅದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿ ಕಿರಿಕಿರಿ ಉಂಟಾಗುತ್ತಿದೆ. ಅದನ್ನು ತಪ್ಪಿಸುವ ಸಲುವಾಗಿ ಪಿಕ್‌ಅಪ್ ಲೇನ್‌ಗೆ ಪ್ರವೇಶಿಸುವ ವಾಣಿಜ್ಯ ವಾಹನಗಳು ಮೊದಲ 7 ನಿಮಿಷಗಳಿಗೆ ₹150 ಹಾಗೂ ನಂತರದ 7 ನಿಮಿಷಕ್ಕೆ ₹150 ಶುಲ್ಕ ನಿಗದಿ ಮಾಡಲಾಗಿದೆ. ಬಸ್‌ಗಳಿಗೆ ₹600 ಶುಲ್ಕ ನಿಗದಿ ಪಡಿಸಲಾಗಿದೆ.
Air India express ವಿಮಾನದ ಎಂಜಿನ್‌ನಲ್ಲಿ ಬೆಂಕಿ, ತುರ್ತು ಭೂ ಸ್ಪರ್ಶ!
ಖಾಸಗಿ ವಾಹನಗಳಿಗೆ ಮೊದಲ 7 ನಿಮಿಷ ಉಚಿತ ನಿಲುಗಡೆಗೆ ಅವಕಾಶ ನೀಡಲಾಗಿದ್ದು, ಅನಂತರವೂ ನಿಲುಗಡೆ ಮಾಡಿದರೆ ₹150 ಪ್ರವೇಶ ಶುಲ್ಕ ನಿಗದಿ ಮಾಡಲಾಗಿದೆ. ಒಂದು ವೇಳೆ ಯಾವುದೇ ವಾಹನ 15 ನಿಮಿಷಕ್ಕಿಂತ ಹೆಚ್ಚಿನ ಅವಧಿ ನಿಲುಗಡೆ ಮಾಡಿದರೆ ಅದನ್ನು ಟೋಯಿಂಗ್ ಮೂಲಕ ಸ್ಥಳೀಯ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗುವುದು. ಅದಕ್ಕೆ ತಗಲುವ ವೆಚ್ಚವನ್ನು ವಾಹನ ಮಾಲೀಕರೇ ಭರಿಸಬೇಕು ಎಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ವಿಮಾನ ನಿಲ್ದಾಣದಲ್ಲಿ ಫಲಕ ಹಾಕಿದೆ.