ಹೊಸ ನಿಯಮ ಹಿನ್ನೆಲೆ ಡಿ ಎಲ್ ಮಾಡಿಸಲು ಮುಗಿಬೀಳುತ್ತಿದ್ದಾರೆ. ಈ ವೇಳೆ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದ 15 ಮಂದಿ ಅರೆಸ್ಟ್ ಮಾಡಲಾಗಿದೆ.
ದಾವಣಗೆರೆ [ಸೆ.18]: ನೂತನ ಐಎಂವಿ ಕಾಯ್ದೆ ಜಾರಿಗೊಂಡ ನಂತರ ಎಲ್‌ಎಲ್‌ಆರ್, ಡಿಎಲ್ ಮಾಡಿಸಲು ಜನ ಮುಗಿ ಬಿದ್ದು ಬರುತ್ತಿದ್ದಾರೆ. ಇದರಿಂದ ಮಿತಿ ಮೀರಿದ ಬ್ರೋಕರ್‌ಗಳ ಹಾವಳಿ ಹೆಚ್ಚಾದ ಹಿನ್ನೆಲೆ ಮಂಗಳವಾರ ಇಲ್ಲಿನ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿ ಮೇಲೆ ಎಸಿಬಿ ಅಧಿಕಾರಿಗಳ ತಂಡ ದಾಳಿ ನಡೆಸಿ, 15ಕ್ಕೂ ಹೆಚ್ಚು ಬ್ರೋಕರ್‌ಗಳನ್ನು ಹಾಗೂ 1,76,855 ರು.ಗಳನ್ನು ವಶಕ್ಕೆ ಪಡೆದಿದೆ.
ನಗರದ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಹೊಸದಾಗಿ ವಾಹನ ಚಾಲನಾ ಪರವಾನಿಗೆ ಪಡೆಯಲು, ಎಲ್‌ಎಲ್‌ಆರ್ ಪಡೆಯಲು ಬರುವವರ ಸಂಖ್ಯೆ ಹೆಚ್ಚಾಗಿದ್ದು, ನಿಗದಿತ ದರಕ್ಕಿಂತ ದುಪ್ಪಟ್ಟು ಹಣ ವಸೂಲು ಮಾಡುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಕೇಳಿ ಬಂದ ಹಿನ್ನೆಲೆ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವ ತಂಡ ದಾಳಿ ನಡೆಸಿತು.
ಆರ್‌ಟಿಓ ಕಚೇರಿಯಲ್ಲಿ ಬ್ರೋಕರ್‌ಗಳು ಎಲ್‌ಎಲ್‌ಆರ್, ಡಿಎಲ್ ಮಾಡಿಸಿ ಕೊಡುವುದಾಗಿ ಜನರಿಂದ ದುಪ್ಪಟ್ಟು ಹಣವನ್ನು ಪಡೆಯುತ್ತಿದ್ದ 15ಕ್ಕೂ ಹೆಚ್ಚು ಬ್ರೋಕರ್‌ಗಳನ್ನು ವಶಕ್ಕೆ ಪಡೆದ ಎಸಿಬಿ ಅಧಿಕಾರಿ, ಸಿಬ್ಬಂದಿಗಳ ತಂಡವು ಸಾರ್ವಜನಿಕರಿಂದ ಬ್ರೋಕರ್‌ಗಳು ಪಡೆದಿದ್ದ 1.76 ಲಕ್ಷ ರು.ಗೂ ಅಧಿಕ ಹಣವನ್ನು ಜಪ್ತು ಮಾಡಿದ್ದಾರೆ. ಡಿಎಲ್, ಎಲ್‌ಎಲ್‌ಆರ್ ಮಾಡಿಸಿಕೊಡುವುದಾಗಿ ಜನರಿಗೆ ವಂಚಿಸುತ್ತಿದ್ದವರನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆದಿದೆ ಎಂದು ಹೇಳಲಾಗಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ನೂತನ ಮೋಟಾರು ವಾಹನ ಕಾಯ್ದೆ ಜಾರಿಗೊಂಡ ನಂತರ ದ್ವಿಚಕ್ರ ವಾಹನ, ಲಘು ವಾಹನ, ಗೂಡ್ಸ್ ವಾಹನ, ಸಾರಿಗೆ ವಾಹನ ಸೇರಿದಂತೆ ಎಲ್ಲಾ ವಾಹನಗಳ ಎಲ್‌ಎಲ್‌ಆರ್, ಡಿಎಲ್ ಮಾಡಿಸಲು ಬರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಸಹಜವಾಗಿಯೇ ಮಧ್ಯವರ್ತಿಗಳಿಗೆ ಹೊಸ ಕಾಯ್ದೆಯು ಸುಗ್ಗಿಯಂತಾಗಿದೆ. ನಿತ್ಯವೂ ಅಪಾರ ಸಂಖ್ಯೆಯಲ್ಲಿ ಜನರು ಡಿಎಲ್, ಎಲ್‌ಎಲ್‌ಆರ್ ಮಾಡಿಸಲು ಬರುತ್ತಿರುವುದನ್ನೇ ಬ್ರೋಕರ್‌ಗಳು ತಮ್ಮ ದುಡಿಮೆ ಹಾದಿ ಮಾಡಿಕೊಂಡಿದ್ದಾರೆ.
ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯಲ್ಲಿ ಯಾರು ಬ್ರೋಕರ್‌ಗಳೆಂಬ ಸಂಗತಿ ಅಲ್ಲಿನ ಅಧಿಕಾರಿ, ಸಿಬ್ಬಂದಿಗೂ ಗೊತ್ತಿರುತ್ತದೆ. ಈ ಹಿನ್ನೆಲೆಯಲ್ಲಿ ಮಧ್ಯವರ್ತಿಗಳಿಲ್ಲದೇ ಜನರ ಕೆಲಸವೇ ಆಗುವುದಿಲ್ಲವೆಂಬಂತಹ ವಾತಾವರಣವನ್ನೂ ಕಚೇರಿ ಪ್ರಾಂಗಣದಲ್ಲಿ ಸೃಷ್ಟಿಸಲಾಗಿದೆ. ಭಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಪರಮೇಶ್ವರಪ್ಪ ನೇತೃತ್ವದ ತಂಡವು ದಾಳಿ ನಡೆಸಿ, ಕಚೇರಿ ಪ್ರವೇಶದ ಗೇಟ್, ಬಾಗಿಲುಗಳನ್ನೆಲ್ಲಾ ಬಂದ್ ಮಾಡಿಸಿ, 15ಕ್ಕೂ ಹೆಚ್ಚು ಬ್ರೋಕರ್‌ಗಳನ್ನು ಹಾಗೂ ಅಪಾರ ಪ್ರಮಾಣದ ಹಣವನ್ನು ವಶಕ್ಕೆ ಪಡೆದು, ವಿಚಾರಣೆಯನ್ನೂ ಕೈಗೊಂಡಿದೆ.
ಸಾರ್ವಜನಿಕರನ್ನು ಬ್ರೋಕರ್‌ಗಳು ಸುಲಿಗೆ ಮಾಡುತ್ತಿದ್ದ ಆರೋಪದಡಿ ದಿಢೀರನೇ ಕಚೇರಿ ಮೇಲೆ ದಾಳಿ ಮಾಡಿರುವ ಎಸಿಬಿ ಅಧಿಕಾರಿಗಳ ತಂಡದಿಂದಾಗಿ ಇಡೀ ಕಚೇರಿಯಲ್ಲಿ ಸುಮಾರು ಗಂಟೆಗಳ ಕಾಲ ಗರ ಬಡಿದಂತಹ ವಾತಾವರಣ ನಿರ್ಮಾಣವಾಗಿತ್ತು. ದಿನಕ್ಕೆ ಇಂತಿಷ್ಟೇ ಎಲ್‌ಎಲ್‌ಆರ್, ಡಿಎಲ್‌ಗಳನ್ನು ನೀಡುವ ಹಿನ್ನೆಲೆಯಲ್ಲಿ ಇದನ್ನೂ ಸಹ ಬ್ರೋಕರ್‌ಗಳು ತಮ್ಮ ದುಡಿಮೆಯ ಹಾದಿಯಾಗಿ ಮಾಡಿಕೊಂಡಿದ್ದರು. ಮಧ್ಯವರ್ತಿಗಳಿಲ್ಲದೇ ಹೋದರೆ ಆರ್‌ಟಿಓ ಕಚೇರಿಯಲ್ಲಿ ಕೆಲಸವಾಗುವುದಿಲ್ಲವೆಂಬಂತಹ ವಾತಾವರಣ ಇನ್ನಾದರೂ ತೊಲಗುವುದೇ ಕಾದು ನೋಡಬೇಕಿದೆ.
ದೇಶಾದ್ಯಂತ ನೂತನ ಐಎಂವಿ ಕಾಯ್ದೆ ಜಾರಿಗೊಂಡ ನಂತರವಂತೂ ಡಿಎಲ್, ವಾಹನ ವಿಮೆ, ಎಮಿಷನ್ ಟೆಸ್ಟ್ ಸರ್ಟಿಫಿಕೇಟ್ ಹೀಗೆ ನಾನಾ ದಾಖಲೆಗಳನ್ನು ವಾಹನ ಚಾಲಕರು, ಮಾಲೀಕರು ಪೊಲೀಸರಿಗೆ ತೋರಿಸಬೇಕಾಗಿದೆ. ಆಕಸ್ಮಾತ್ ಒಂದು ದಾಖಲೆ ಇಲ್ಲದಿದ್ದರೂ, ಸಂಚಾರ ನಿಯಮ ಉಲ್ಲಂಘನೆ ಮಾಡಿದರೂ ದುಬಾರಿ ದಂಡವನ್ನು ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನೆಲೆಯಲ್ಲಿ ಜನರೂ ಸಹ ಈಗ ಎಮಿಷನ್ ಟೆಸ್ಟ್‌ಗೆ, ವಾಹನ ವಿಮೆ ಮಾಡಿಸಲು ಸಾಲು ಸಾಲಾಗಿ ನಿಲ್ಲುತ್ತಿರುವುದು ಜಿಲ್ಲಾ ಕೇಂದ್ರ ಸೇರಿದಂತೆ ಎಲ್ಲೆಡೆ ಸಾಮಾನ್ಯವಾಗಿದೆ.
ಎಮಿಷನ್ ಟೆಸ್ಟ್ ಸರ್ಟಿಫಿಕೇಟ್, ವಾಹನ ವಿಮೆ ಮಾಡಿಸುವ ಜೊತೆಗೆ ಡಿಎಲ್ ಸಹ ಕಡ್ಡಾಯವಾಗಿ ತೋರಿಸಬೇಕಿದೆ. ದುಬಾರಿ ದಂಡಕ್ಕೆ ಹೆದರುತ್ತಿರುವ ಜನರೂ ಸಹ ಇದೀಗ ಅನಿವಾರ್ಯವಾಗಿ ಡಿಎಲ್, ಎಲ್‌ಎಲ್‌ಆರ್ ಮಾಡಿಸಿಕೊಂಡು, ಹೆಲ್ಮೆಟ್ ಧರಿಸಿಕೊಂಡೇ ತಮ್ಮ ದ್ವಿಚಕ್ರ ವಾಹನ ಚಾಲನೆ ಮಾಡುತ್ತಿದ್ದಾರೆ. ಕಾರು ಇತರೆ ವಾಹನಗಳ ಚಾಲಕರು ದುಬಾರಿ ದಂಡದ ಭಯಕ್ಕೆ ಸೀಟ್ ಬೆಲ್ಟ್ ಸಹ ಧರಿಸಿಕೊಂಡು ಸಂಚರಿಸುತ್ತಿದ್ದಾರೆ. ಒಟ್ಟಾರೆ ನೂತನ ಐಎಂವಿ ಕಾಯ್ದೆಯ ದುಬಾರಿ ದಂಡದ ಭಯಕ್ಕೆ ಜನರು ತುತ್ತಾಗಿ ಆರ್‌ಟಿಓ ಕಚೇರಿಗೆ ಎಲ್‌ಎಲ್‌ಆರ್, ಡಿಎಲ್ ಮಾಡಿಸಲು ಬಂದರೆ ಇಲ್ಲಿ ಮಧ್ಯವರ್ತಿಗಳು ಸುಲಿಗೆ ಮಾಡುತ್ತಾರೆ. ಇನ್ನಾದರೂ ಆರ್‌ಟಿಓ ಕಚೇರಿಯಲ್ಲಿ ಬ್ರೋಕರ್ ಮುಕ್ತವಾಗುತ್ತದೆಯೇ ಕಾದು ನೋಡಬೇಕಷ್ಟೆ.