ತಾಲೂಕಿನ ಭುವನಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉತ್ತಮೇಶ್ವರದ ಕೋಣೆಕೊಪ್ಪ ಎಂಬಲ್ಲಿ 14ನೆ ಶತಮಾನಕ್ಕೆ ಸೇರಿದ ಶಾಸನನೋಕ್ತ ವೀರಗಲ್ಲನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅಧ್ಯಯನ ಮಾಡಿದ್ದಾರೆ.
ಕೊಪ್ಪ (ಮಾ.14): ತಾಲೂಕಿನ ಭುವನಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಉತ್ತಮೇಶ್ವರ(Uttameshwar)ದ ಕೋಣೆಕೊಪ್ಪ ಎಂಬಲ್ಲಿ 14ನೆ ಶತಮಾನಕ್ಕೆ ಸೇರಿದ ಶಾಸನನೋಕ್ತ ವೀರಗಲ್ಲನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧನಾರ್ಥಿ ನ.ಸುರೇಶ ಕಲ್ಕೆರೆ ಅಧ್ಯಯನ ಮಾಡಿದ್ದಾರೆ.
ಸುಮಾರು 5 ಅಡಿ ಎತ್ತರ ಮತ್ತು 2 ಅಡಿ ಅಗಲವಿರುವ ಈ ವೀರಗಲ್ಲು(Veeragallu) ಮೂರು ಪಟ್ಟಿಕೆಯನ್ನು ಹೊಂದಿದ್ದು, ಕೆಳಗಿನ ಪಟ್ಟಿಕೆಯಲ್ಲಿ 2 ಸಾಲಿನ ಕನ್ನಡ ಲಿಪಿ ಮತ್ತು ಭಾಷೆಯಲ್ಲಿರುವ ಶಾಸನವನ್ನು ಕಾಣಬಹುದು. ಈ ವೀರಗಲ್ಲಿನ ಹೆಚ್ಚಿನ ಅಕ್ಷರಗಳು ತೃಟಿತಗೊಂಡಿದ್ದು, ಉಳಿದಿರುವ ಅಕ್ಷರದ ಆಧಾರದ ಮೇಲೆ ’ಭಾವ ಸಂವತ್ಸರದಲ್ಲಿ ತಿಂಮಣ ನಾಯಕನ’ ಸ್ಮರಣಾರ್ಥವಾಗಿ ವೀರಗಲ್ಲನ್ನು ಹಾಕಲಾಗಿದೆ ಹಾಗೂ ಈ ಲಿಪಿಯು 14ನೆ ಶತಮಾನದ ಲಿಪಿಯನ್ನು ಹೋಲುತ್ತದೆ ಎಂದು ಸಂಶೋಧನಾರ್ಥಿ ತಿಳಿಸಿದ್ದಾರೆ.
undefined
ಉಡುಪಿ: ಬಸ್ರೂರು ಅಶೋಕ್ ಪಾರ್ಕ್‌ನಲ್ಲಿ 400 ವರ್ಷಗಳಷ್ಟು ಹಳೆಯ ಲಿಂಗಮುದ್ರೆ ಕಲ್ಲು ಪತ್ತೆ!
ವೀರಗಲ್ಲಿನ ಕೆಳಗಿನ ಪಟ್ಟಿಕೆಯಲ್ಲಿ ಕೈಯಲ್ಲಿ ಖಡ್ಗ (ಕತ್ತಿ)ಯನ್ನು ಹಿಡಿದುಕೊಂಡು ಅಶ್ವದ ಮೇಲೆ ಕುಳಿತು ಯುದ್ಧ ಮಾಡುತ್ತಿರುವ ವೀರ ಹಾಗೂ ಬಿಲ್ಲು-ಬಾಣಗಳನ್ನು ಹಿಡಿದುಕೊಂಡು ಇತನ ವಿರುದ್ಧ ಹೋರಾಡುತ್ತಿರುವ ಸೈನಿಕರ ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ. ಎರಡನೆ ಪಟ್ಟಿಕೆಯಲ್ಲಿ ಯುದ್ಧದಲ್ಲಿ ಮರಣ ಹೊಂದಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದುಕೊಂಡು ಹೋಗುವಂತೆ ಉಬ್ಬು ಕೆತ್ತನೆಯನ್ನು ಮಾಡಲಾಗಿದೆ. ಕೊನೆಯ ಪಟ್ಟಿಕೆಯಲ್ಲಿ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ಗಜಗಳ ಶಿಲ್ಪಗಳನ್ನು ಕೆತ್ತಲಾಗಿದೆ.
ಈ ವೀರಗಲ್ಲನ್ನು ಸ್ಥಳೀಯರು ಇಂದಿಗೂ ಪೂಜಿಸಿ ಸಂರಕ್ಷಣೆ ಮಾಡಿಕೊಂಡು ಬರುತ್ತಿದ್ದು, ಸ್ಥಳೀಯ ಇತಿಹಾಸವನ್ನು ರಕ್ಷಿಸುವಲ್ಲಿ ಇವರ ಪಾತ್ರವು ಪ್ರಮುಖವಾಗಿದೆ ಎಂದು ಸಂಶೋಧನಾರ್ಥಿಯು ತಿಳಿಸಿದ್ದಾರೆ.