ಶಂಕಿತ ಉಗ್ರರಿಗೆ 14 ದಿನ ನ್ಯಾಯಾಂಗ ಬಂಧನ

By Kannadaprabha NewsFirst Published Oct 1, 2022, 8:54 AM IST
Highlights

ವಿಧ್ವಂಸಕ ಕೃತ್ಯದ ಸಂಚು ಹೂಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಶಂಕಿತ ಉಗ್ರರಿಗೆ ಇಲ್ಲಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಶಿವಮೊಗ್ಗ (ಅ.1) : ವಿಧ್ವಂಸಕ ಕೃತ್ಯದ ಸಂಚು ಹೂಡಿ ಪೊಲೀಸರಿಂದ ಬಂಧನಕ್ಕೆ ಒಳಗಾಗಿದ್ದ ಶಂಕಿತ ಉಗ್ರರಿಗೆ ಇಲ್ಲಿನ ಮೂರನೇ ಜೆಎಂಎಫ್‌ಸಿ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.

ಸೆ.20ರಂದು ಶಿವಮೊಗ್ಗ ಪೊಲೀಸರು ಯಾಸಿನ್‌ ಮತ್ತು ಮಾಜ್‌ ಎಂಬಿಬ್ಬ ಇಬ್ಬರು ಶಂಕಿತ ಉಗ್ರರನ್ನು ಬಂಧಿಸಿದ್ದರು. ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಬಳಿಕ ನ್ಯಾಯಾಲಯವು 9 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿತ್ತು. ಪೊಲೀಸ್‌ ಕಸ್ಟಡಿಯ ಅವಧಿ ಶುಕ್ರವಾರಕ್ಕೆ ಮುಕ್ತಾಯಗೊಂಡ ಕಾರಣ ಪೊಲೀಸರು ಆರೋಪಿಗಳನ್ನು ಪುನಃ ನ್ಯಾಯಾಲಯದ ಮುಂದೆ ಹಾಜರುಪಡಿಸಿದರು. ಈ ವೇಳೆಯಲ್ಲಿ ನ್ಯಾಯಾಲಯ ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿತು.

ಏನಾಗಿತ್ತು?

ಸ್ವಾತಂತ್ರ್ಯ ಸುವರ್ಣ ಸಂಭ್ರಮದ ದಿನ ಎ.ಎ. ವೃತ್ತದಲ್ಲಿ ಫ್ಲೆಕ್ಸ್‌ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಕೋಮಿನ ನಡುವೆ ನಡೆದ ಗಲಾಟೆ ಬಳಿಕ ಬಟ್ಟೆಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರೇಮ್‌ ಸಿಂಗ್‌ ಎಂಬಾತನಿಗೆ ಜಬೀವುಲ್ಲಾ ಎಂಬಾತ ಚಾಕುವಿನಿಂದ ಇರಿದಿದ್ದ. ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ವೇಳೆ ಈತನಿಗೆ ನಿಷೇಧಿತ ಕೆಲವು ಸಂಘಟನೆಗಳ ಜೊತೆ ಸಂಪರ್ಕ ಇರುವ ಕುರಿತಾದ ಮಾಹಿತಿಯ ಜೊತೆಗೆ ಶಿವಮೊಗ್ಗದ ಸಯ್ಯದ್‌ ಯಾಸಿನ್‌ (21), ಮಂಗಳೂರಿನ ಮಾಜ್‌ ಮುನೀರ್‌ ಎಂಬಿಬ್ಬರ ಸಂಪರ್ಕ ಇರುವುದು ಗೊತ್ತಾಯಿತು. ಇವರ ಬೆನ್ನು ಬಿದ್ದ ಪೊಲೀಸರಿಗೆ ಅಘಾತವೇ ಕಾದಿತ್ತು. ಈ ಇಬ್ಬರು ಉಗ್ರ ಚಟುವಟಿಕೆಗೆ ಸಂಬಂಧಿಸಿದಂತೆ ಕಾರ್ಯಾಚರಿಸುತ್ತಿದ್ದು, ನಿಷೇಧಿತ ಉಗ್ರ ಸಂಘಟನೆಯ ಐಸಿಸ್‌ ಪರವಾಗಿ ಕೆಲಸ ಮಾಡುವುದು ಪತ್ತೆಯಾಗಿತ್ತು. ಜೊತೆಗೆ ಬಾಂಬ್‌ ತಯಾರಿ, ಪ್ರಾಯೋಗಿಕ ಸ್ಫೋಟ ನಡೆಸಿದ್ದಲ್ಲದೆ, ಕೆಲವೆಡೆ ವಿಧ್ವಂಸಕ ಕೃತ್ಯ ನಡೆಸಲು ಕೂಡ ಸಂಚು ರೂಪಿಸಿದ್ದು ಪತ್ತೆಯಾಗಿತ್ತು. ಈ ಇಬ್ಬರನ್ನು ಪೊಲೀಸರು ಬಂಧಿಸಿದ್ದು, ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕೇಸು ದಾಖಲಿಸಿದ್ದರು.

ಆರೋಪಿಗಳ ವಿರುದ್ಧ ಗ್ರಾಮಾಂತರ ಪೋಲಿಸ್‌ ಠಾಣೆಯಲ್ಲಿ ಯುಎಪಿಎ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಈ ಇಬ್ಬರ ಜೊತೆ ಶಾಕೀರ್‌ ಎಂಬಾತ ತಪ್ಪಿಸಿಕೊಂಡಿದ್ದು, ಈತನ ಪತ್ತೆಗೆ ಕೂಡ ಪೊಲೀಸರು ಬಲೆ ಬೀಸಿದ್ದಾರೆ. ಆರೋಪಿಗಳನ್ನು ಶುಕ್ರವಾರ ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮೆಗ್ಗಾನ್‌ ಆಸ್ಪತ್ರೆಗೆ ಕರೆದೊಯ್ದು ವೈದ್ಯಕೀಯ ಪರೀಕ್ಷೆ ನಡೆಸಲಾಯಿತು.

ಪಿಎಫ್‌ಐ ಮೇಲೆ ದಾಳಿ ಭಾಗ-2: ರಾಜ್ಯದಲ್ಲಿ 50ಕ್ಕೂ ಅಧಿಕ ಮಂದಿ ಬಂಧನ, 8 ರಾಜ್ಯಗಳಲ್ಲಿ ರೈಡ್‌!

click me!