18 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ| ಕೊರೋನಾ ಸೋಂಕಿತ ಮಹಿಳೆ ಸಾವು| 288ಕ್ಕೆ ಏರಿದ ಕೋವಿಡ್ ಸೋಂಕು| ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಣೆ|
ಹಾವೇರಿ(ಜು.12): ಉಪ ತಹಸೀಲ್ದಾರ್, ಇಬ್ಬರು ಗರ್ಭಿಣಿಯರು, ಓರ್ವ ಪೊಲೀಸ್, ನ್ಯಾಯಾಲಯದ ಸ್ಟೆನೋ ಸೇರಿದಂತೆ ಶನಿವಾರ ಜಿಲ್ಲೆಯ 13 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದ್ದು, ಓರ್ವ ಮಹಿಳೆ ಕೋವಿಡ್‌ನಿಂದ ಮೃತಪಟ್ಟಿದ್ದಾಳೆ. 18 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಈ ವರೆಗೆ 288 ಕೋವಿಡ್-19 ಪಾಸಿಟಿವ್ ಪ್ರಕರಣ ದೃಢಗೊಂಡಿವೆ. ಈ ಪೈಕಿ 134 ಜನರು ಸೋಂಕಿನಿಂದ ಈ ವರೆಗೆ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ನಾಲ್ಕು ಜನರು ಮೃತಪಟ್ಟಿದ್ದಾರೆ. 150 ಕೋವಿಡ್ ಪ್ರಕರಣಗಳು ಸಕ್ರಿಯವಾಗಿವೆ. ಶನಿವಾರ ದೃಢಪಟ್ಟಪ್ರಕರಣಗಳ ಪೈಕಿ ಹಾವೇರಿ ತಾಲೂಕಿನಲ್ಲಿ ನಾಲ್ಕು, ಬ್ಯಾಡಗಿ ತಾಲೂಕಿನಲ್ಲಿ ಆರು, ಹಾನಗಲ್ಲ ಎರಡು ಹಾಗೂ ಶಿಗ್ಗಾಂವಿ ಒಂದು ಪ್ರಕರಣಗಳು ಪಾಸಿಟಿವ್ ಬಂದಿದೆ.
ಸೋಂಕಿತರ ವಿವರ:
ಹಾನಗಲ್ ಸಿವಿಲ್ ನ್ಯಾಯಾಲಯದಲ್ಲಿ ಸ್ಟೇನೋಗ್ರಾಫರಾಗಿ ಕೆಲಸಮಾಡುತ್ತಿರುವ ಮೂಲತಃ ಬ್ಯಾಡಗಿ ತಾಲೂಕು ಕಳಕೊಂಡ ಗ್ರಾಮದ 28 ವರ್ಷದ ಪುರುಷ ಕಳೆದ ಐದು ದಿನಗಳ ಹಿಂದೆ ಬೆಂಗಳೂರಿಗೆ ಪ್ರಯಾಣಿಸಿದ ಮಾಹಿತಿ ಹೊಂದಿರುತ್ತಾರೆ. ಜ್ವರದಿಂದ ಬಳಲುತ್ತಿರುವ ಕಾರಣ ಜು. 7ರಂದು ಗಂಟಲು ಮಾದರಿ ಪರೀಕ್ಷೆ ನಡೆಸಲಾಗಿತ್ತು. ಜು. 10ರಂದು ರಾತ್ರಿ ಪಾಸಿಟಿವ್ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ರಾಣಿಬೆನ್ನೂರ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆಯಾಗಿ ಕಾರ್ಯನಿರ್ವಹಿಸುತ್ತಿರುವ 31 ವರ್ಷದ ಪುರುಷ ನಗರದ ಪೊಲೀಸ್ ಕ್ವಾರ್ಟರ್ಸ್ನಲ್ಲಿ ವಾಸವಾಗಿದ್ದು, ಪಿ-19943ರ ಪ್ರಾಥಮಿಕ ಸಂಪರ್ಕ ಹೊಂದಿದ ಕಾರಣ ಜು. 6ರಂದು ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಜು. 10ರ ರಾತ್ರಿ ಪಾಸಿಟಿವ್ ಬಂದಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹಾವೇರಿ: ಮತ್ತೆ 45 ಕೊರೋನಾ ಸೋಂಕು ದೃಢ, ಆತಂಕದಲ್ಲಿ ಜನತೆ
ಹಾನಗಲ್ಲ ಉಪತಹಸೀಲ್ದಾರರಾಗಿ ಕಾರ್ಯನಿರ್ವಹಿಸುತ್ತಿರುವ 38 ವರ್ಷದ ಪುರುಷ ಹಾವೇರಿ ನಗರದ ಉರ್ದು ಶಾಲಾ ಹಿಂಭಾಗದಲ್ಲಿ ವಾಸವಾಗಿದ್ದು, ಪಿ-31795ರ ಪ್ರಾಥಮಿಕ ಸಂಪರ್ಕ ಹೊಂದಿದ್ದರಿಂದ ಜು. 6ರಂದು ಗಂಟಲು ದ್ರವ ಪರೀಕ್ಷೆ ಮಾಡಲಾಗಿತ್ತು. ಜು. 10ರಂದು ಪಾಸಿಟಿವ್ ಬಂದಿದೆ. ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬ್ಯಾಡಗಿ ತಾಲೂಕಿನ ಮೊಟೇಬೆನ್ನೂರಿನ 35 ವರ್ಷದ ಪುರುಷ ಕಾಗಿನೆಲೆ ಗ್ರಾಮದವರಾದ 27 ವರ್ಷದ ಮಹಿಳೆ, 37 ವರ್ಷದ ಪುರುಷ, 32 ವರ್ಷದ ಪುರುಷ, ಆರು ವರ್ಷದ ಬಾಲಕಿ, 28 ವರ್ಷದ ಪುರುಷ, ಹಾವೇರಿ ನಗರದ 31 ವರ್ಷದ ಪುರುಷ, 38 ವರ್ಷದ ಪುರುಷ, ಗುತ್ತಲದ 40 ವರ್ಷದ ಪುರುಷ ಹಾಗೂ ಕನವಳ್ಳಿಯ 45 ವರ್ಷದ ಮಹಿಳೆ, ಹಾನಗಲ್ ತಾಲೂಕು ಅಕ್ಕಿ ಆಲೂರಿನ 21 ವರ್ಷದ ಗರ್ಭಿಣಿ, ಹಾನಗಲ್ಲ ನಗರದ 30 ವರ್ಷದ ಗರ್ಭಿಣಿ ಹಾಗೂ ಶಿಗ್ಗಾಂವಿಯ 74 ವರ್ಷದ ಪುರುಷ ಸೇರಿ 13 ಜನರಿಗೆ ಶನಿವಾರ ಸೋಂಕು ದೃಢಪಟ್ಟಿದೆ.
ನಿಯಮಾನುಸಾರ ಸೋಂಕಿತರ ನಿವಾಸ ಇರುವ ಪ್ರದೇಶದ 100 ಮೀಟರ್ ಪ್ರದೇಶವನ್ನು ಕಂಟೈನ್‌ಮೆಂಟ್ ಜೋನ್ ಎಂದು ಘೋಷಿಸಲಾಗಿದೆ ಹಾಗೂ ಸೋಂಕಿತರ ನಗರ ಪ್ರದೇಶದ ನಿವಾಸದ 200 ಪ್ರದೇಶವನ್ನು ಹಾಗೂ ಸೋಂಕಿತರ ಗ್ರಾಮವಾದ ಛತ್ರ, ಕನವಳ್ಳಿ, ತಡಸ, ಕಾಗಿನೆಲೆ, ಕಳಲಕೊಂಡ, ಅಕ್ಕಿಆಲೂರು ಗ್ರಾಮಗಳನ್ನು ಸಂಪೂರ್ಣವಾಗಿ ಬಫರ್ ಜೋನ್ ಆಗಿ ಘೋಷಿಸಲಾಗಿದೆ.