ಕೊರೋನಾ ಅಟ್ಟಹಾಸದ ವೇಳೆ ಶಿಕ್ಷಕರಿಗೆ ಕಾರ್ಯಾಗಾರ ಬೇಕಾ?

By Kannadaprabha News  |  First Published Jul 12, 2020, 8:15 AM IST

ಆನ್‌ಲೈನ್‌ ತರಬೇತಿ ನೀಡಿ; ಇಲ್ಲವೇ ಕೊರೋನಾ ಹಾವಳಿ ಮುಗಿದ ಬಳಿಕ ತರಬೇತಿ ನೀಡಿ| ಆದರೆ ಈಗ ಕಾರ್ಯಾಗಾರ ಬೇಡವೇ ಬೇಡ| ಪ್ರಾಥಮಿಕ ಶಾಲಾ ಶಿಕ್ಷಕರಿಗೆ ತರಬೇತಿ ಕೊಡಲು ನಿರ್ಧರಿಸಿರುವುದಕ್ಕೆ ಶಿಕ್ಷಕರ ಆಕ್ಷೇಪ|


ಶಿವಾನಂದ ಗೊಂಬಿ

ಹುಬ್ಬಳ್ಳಿ(ಜು.12): ಗುಣಮಟ್ಟದ ಶಿಕ್ಷಣದ ಉದ್ದೇಶವಿಟ್ಟುಕೊಂಡು ಪ್ರಾಥಮಿಕ ಶಾಲಾ ಶಿಕ್ಷಕರಿಗೆ ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆಯು 10 ದಿನಗಳ ಕಾರ್ಯಾಗಾರ ನಡೆಸಲು ಮುಂದಾಗಿದೆ. ಆದರೆ ಕೊರೋನಾ ವೇಳೆ ತರಬೇತಿ ಕಾರ್ಯಾಗಾರವೆಲ್ಲ ಬೇಡವೇ ಬೇಡ. ತರಬೇತಿ ಕೊಡಲೇಬೇಕೆಂದರೆ ಆನ್‌ಲೈನ್‌ನಲ್ಲಿ ನೀಡಿ ಅಥವಾ ಕೊರೋನಾ ಹಾವಳಿ ಕಡಿಮೆಯಾದ ಬಳಿಕ ಕೊಡಿ ಎಂದು ಇದೀಗ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ವ್ಯಾಟ್ಸ್‌ಆ್ಯಪ್‌ ಹಾಗೂ ಈ ಮೇಲ್‌ ಮೂಲಕ ಆಂದೋಲನ ಶುರು ಮಾಡಿದ್ದಾರೆ.

Tap to resize

Latest Videos

ಪ್ರಾಥಮಿಕ ಶಾಲಾ ಹಂತದಲ್ಲೇ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಇದರಿಂದ ಭವಿಷ್ಯದಲ್ಲಿ ಮಕ್ಕಳಿಗೆ ವಿದ್ಯಾಭ್ಯಾಸದ ಸಮಸ್ಯೆಯಾಗಲ್ಲ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತದಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕೆಂದರೆ ಶಿಕ್ಷಕರನ್ನು ಅದಕ್ಕೆ ತಕ್ಕಂತೆ ತಯಾರು ಮಾಡಬೇಕು. ಅದಕ್ಕಾಗಿ ಶಿಕ್ಷಕರಿಗೆ ತರಬೇತಿ ನೀಡಲು ಯೋಚಿಸಿ ಸರ್ಕಾರ ನಿರ್ಧಾರ ಕೈಗೊಂಡಿತ್ತು. ಅದಕ್ಕೆ ತಕ್ಕಂತೆ ಕಳೆದ ಒಂದೂವರೆ ವರ್ಷದಲ್ಲಿ ಎರಡು ಬಾರಿ ಶಿಕ್ಷಕರಿಗೆ ಬಿಆರ್‌ಸಿ ಮಟ್ಟದಲ್ಲಿ ಅಂದರೆ ತಾಲೂಕು ಮಟ್ಟದಲ್ಲಿ ತರಬೇತಿಯನ್ನೂ ನೀಡಿದ್ದಿದೆ.

ಕೋವಿಡ್‌ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು ಹಿಂಜರಿದರೆ ಕ್ರಮ: ಸಚಿವ ಶೆಟ್ಟರ್‌

ಯಾವ ರೀತಿ ತರಬೇತಿ:

1-3ನೆಯ ತರಗತಿಯ ಕಲಿ-ನಲಿ, 4-5 ತರಗತಿ ಹಾಗೂ 6ರಿಂದ 8ನೆಯ ತರಗತಿಯ ಶಿಕ್ಷಕರಿಗೆ ವಿಷಯವಾರು ತರಬೇತಿ ನೀಡಲಾಗುತ್ತದೆ. ಯಾವ ಶಿಕ್ಷಕರಿಗೆ ಯಾವ ವಿಷಯದಲ್ಲಿ ಬೋಧನೆ ಮಾಡಲು ಯಾವ ರೀತಿ ಸಮಸ್ಯೆಯಾಗುತ್ತಿದೆ ಎಂಬುದನ್ನು ಅರಿತುಕೊಂಡು ತರಬೇತಿ ನೀಡುವುದೇ ಕಾರ್ಯಾಗಾರದ ಉದ್ದೇಶ. ಇನ್ನೂ ಶಿಕ್ಷಕರಿಗೆ ತರಬೇತಿ ನೀಡಲು 2 ವರ್ಷದ ಹಿಂದೆ ಡಯಟ್‌ ಪರೀಕ್ಷೆ ನಡೆಸಿತ್ತು. ಅದರಲ್ಲಿ ವಿಷಯವಾರು ಮೆರಿಟ್‌ ಪಡೆದ ಶಿಕ್ಷಕರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿ ಗುರುತಿಸಲಾಗಿದೆ. ಧಾರವಾಡ ಜಿಲ್ಲೆಯಲ್ಲಿ ಈ ರೀತಿ ಸಂಪನ್ಮೂಲ ವ್ಯಕ್ತಿಗಳಾಗಿ 100ಕ್ಕೂ ಹೆಚ್ಚು ಶಿಕ್ಷಕರೇ ಇದ್ದಾರೆ. ಇವರಿಂದಲೇ ಶಿಕ್ಷಕರಿಗೆ ತರಬೇತಿ ನೀಡಲಾಗುತ್ತಿದೆ.

ಎಷ್ಟು ದಿನದ ತರಬೇತಿ?:

ರಾಜ್ಯದಲ್ಲಿ ಬರೋಬ್ಬರಿ 1.68 ಜನ ಶಿಕ್ಷಕರಿದ್ದರೆ, ಜಿಲ್ಲೆಯಲ್ಲಿ 5 ಸಾವಿರಕ್ಕೂ ಅಧಿಕ ಶಿಕ್ಷಕರಿದ್ದಾರೆ. ಇವರೆಲ್ಲರೂ ಕಾರ್ಯಾಗಾರದಲ್ಲಿ ಪಾಲ್ಗೊಳ್ಳಬೇಕು. ಇಡೀ ರಾಜ್ಯದಲ್ಲಿ ಈ ರೀತಿಯ ತರಬೇತಿ ನಡೆಯುತ್ತದೆ. ಕಳೆದ ಎರಡು ವರ್ಷದಿಂದ 10 ದಿನಗಳ ಕಾಲ ಈ ತರಬೇತಿ ನಡೆಯುತ್ತಿದೆ. ಇದರಲ್ಲಿ 30 ಶಿಕ್ಷಕರ ಗುಂಪುಗಳನ್ನು ಮಾಡಿ ದಿನಾಂಕಗಳನ್ನು ನಿಗದಿಪಡಿಸಿ, ಆಯಾ ಬಿಆರ್‌ಸಿ ಮಟ್ಟದಲ್ಲಿ ತರಬೇತಿ ನೀಡಲಾಗುತ್ತದೆ. ಧಾರವಾಡ ಜಿಲ್ಲೆಯಲ್ಲಿ ಜು. 15ರಿಂದ ತರಬೇತಿ ನಡೆಯಲಿದೆ. ಅದಕ್ಕಾಗಿ ಎಲ್ಲ ಬಿಆರ್‌ಸಿಗಳು ಸಭೆ ನಡೆಸಿ ತರಬೇತಿ ಕಾರ್ಯಾಗಾರಗಳ ದಿನಾಂಕವನ್ನು ನಿಗದಿಪಡಿಸಿ ತಿಳಿಸಬೇಕೆಂದು ಡಯಟ್‌ ಈಗಾಗಲೇ ಸೂಚನೆ ನೀಡಿದೆ. ಅದರಂತೆ ಬಿಆರ್‌ಸಿಗಳು ಈಗಾಗಲೇ ಒಂದು ಸಲ ಸಭೆ ನಡೆಸಿದ್ದು, ಕಾರ್ಯಾಗಾರದ ಶೆಡ್ಯೂಲ್‌ ನಿಗದಿಪಡಿಸಲು ನಿರತವಾಗಿವೆ.

ಆಕ್ಷೇಪವೇಕೆ?

ಸರ್ಕಾರವೇ ಗುಂಪುಗೂಡಬಾರದೆಂದು ಹೇಳುತ್ತಿದೆ. ಆದರೆ ಈಗ ನೋಡಿದರೆ ಶಿಕ್ಷಕರನ್ನು ಗುಂಪುಗೂಡಿಸಿಕೊಂಡು ತರಬೇತಿ ನೀಡಲು ಮುಂದಾಗಿದೆ. ಬೇರೆ ಬೇರೆ ಪ್ರದೇಶಗಳಿಂದ ಶಿಕ್ಷಕರು ಬಂದಿರುತ್ತಾರೆ. ಕೊಠಡಿಗಳನ್ನು ಸ್ಯಾನಿಟೈಸ್‌ ಮಾಡಿದ್ದರೂ ಒಂದೆಡೆ ಗುಂಪುಗೂಡಿಸುವುದು ಅಪಾಯಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ. ಇನ್ನೂ ಶಿಕ್ಷಕರಿಗೆ ತರಬೇತಿ ಕೊಡುವುದು ಒಳ್ಳೆಯ ನಿರ್ಧಾರವೇ. ಆದರೆ ಕೊರೋನಾ ಹೆಚ್ಚುತ್ತಿರುವ ಸಂದರ್ಭದಲ್ಲಿ ಕಾರ್ಯಾಗಾರ ನಡೆಸುವುದು ಎಷ್ಟು ಸೂಕ್ತ? ತರಬೇತಿ ನೀಡಲು ನಮ್ಮ ಅಭ್ಯಂತರವಿಲ್ಲ. ಕೊರೋನಾ ಹಾವಳಿ ತಗ್ಗಿದ ಬಳಿಕ ತರಬೇತಿ ನೀಡಿ. ಇಲ್ಲವೇ ಧಾರವಾಡ ಅಪರ ಆಯುಕ್ತರು ನೀಡಿದಂತೆ ಆನ್‌ಲೈನ್‌ನಲ್ಲಿ ತರಬೇತಿ ನೀಡಿ, ನಾವು ಆನ್‌ಲೈನ್‌ನಲ್ಲೇ ತರಬೇತಿ ಪಡೆಯಲು ಸಿದ್ಧ ಎಂದು ಆಗ್ರಹಿಸುತ್ತಾರೆ. ಈ ಸಂಬಂಧ ಗೂಗಲ್‌ ಮಿಟ್‌ನಲ್ಲಿ ಸಭೆ ನಡೆಸಿ ಶಿಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಸಂಬಂಧಪಟ್ಟಂತೆ ವ್ಯಾಟ್ಸ್‌ಆ್ಯಪ್‌, ಮೇಲ್‌ ಮೂಲಕ ಶಿಕ್ಷಣ ಇಲಾಖೆ ನಿರ್ದೇಶಕರಿಗೆ ಮನವಿ ಸಲ್ಲಿಸಿದ್ದಾರೆ.
ಒಟ್ಟಿನಲ್ಲಿ ಶಿಕ್ಷಕರಿಗೆ ಈಗ ತರಬೇತಿ ಕಾರ್ಯಾಗಾರ ಆಯೋಜಿಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿರುವುದಂತೂ ಸತ್ಯ. ಆದರೆ ಇದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತದೆ ಎಂಬುದನ್ನು ಕಾಯ್ದು ನೋಡಬೇಕಷ್ಟೇ!

ತರಬೇತಿಗೆ ನಮ್ಮ ಅಭ್ಯಂತರವಿಲ್ಲ. ಆದರೆ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂಥ ಸಮಯದಲ್ಲಿ ಶಿಕ್ಷಕರನ್ನು ಒಂದೆಡೆ ಸೇರಿಸಿ ತರಬೇತಿ ನೀಡುವುದು ಎಷ್ಟುಸಮಂಜಸ? ಆದಕಾರಣ ಕೊರೋನಾ ಹಾವಳಿ ತಗ್ಗಿದ ನಮಗೆ ತರಬೇತಿ ನೀಡಲಿ. ಇಲ್ಲವೇ ಧಾರವಾಡ ಅಪರ ಆಯುಕ್ತರು 9 ಜಿಲ್ಲೆಗಳ ವ್ಯಾಪ್ತಿಯಲ್ಲಿ ಇದೇ ರೀತಿ ತರಬೇತಿ ಆನ್‌ಲೈನ್‌ನಲ್ಲೇ ನೀಡಿ ಯಶಸ್ವಿಯಾಗಿದ್ದುಂಟು. ಅದೇ ಮಾದರಿಯನ್ನು ಇಲ್ಲೂ ಅನುಸರಿಸಲಿ ಎಂದು ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಶೋಕ ಸಜ್ಜನ ಅವರು ಹೇಳಿದ್ದಾರೆ. 
 

click me!