ಗದಗ ಜಿಲ್ಲೆಯಲ್ಲಿ ಮತ್ತೆ 12 ಹೊಸ ಪ್ರಕರಣದೊಂದಿಗೆ 116ಕ್ಕೇರಿದ ಸೋಂಕಿತರ ಸಂಖ್ಯೆ|ಎಚ್ಚೆತ್ತುಕೊಳ್ಳದ ಸಾರ್ವಜನಿಕರು, ಮಾಸ್ಕ್ ಇಲ್ಲದೇ ಓಡಾಟ| ಬಹುತೇಕ ಜನರು ಸೋಂಕನ್ನು ತೀವ್ರವಾಗಿ ಪರಿಗಣಿಸುತ್ತಿಲ್ಲ| ಲಾಕ್‌ಡೌನ್ ಸಡಿಲಗೊಳಿಸಿದಾಗಿನಿಂದಲೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಜನರ ನಿರ್ಲಕ್ಷ್ಯವೂ ಹೆಚ್ಚಾಗುತ್ತಿದೆ|
ಗದಗ(ಜೂ. 27): ಗದಗ- ಬೆಟಗೇರಿ ಅವಳಿ ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಮಹಾಮಾರಿ ಕೊರೋನಾ ಅಟ್ಟಹಾಸ ಮುಂದುವರಿದಿದ್ದು, ಶುಕ್ರವಾರವೂ ಜಿಲ್ಲೆಯಲ್ಲಿ ಒಟ್ಟು 12 ಜನರಲ್ಲಿ ಸೋಂಕು ದೃಢವಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 116ಕ್ಕೆ ಏರಿದೆ.
ನಗರಕ್ಕೆ ಮಾತ್ರ ಸೀಮಿತವಾಗಿದ್ದ ಮಹಾಮಾರಿ ಜಿಲ್ಲೆಯ ಗ್ರಾಮೀಣ ಭಾಗಕ್ಕೂ ತೀವ್ರ ಪ್ರಮಾಣದಲ್ಲಿ ವ್ಯಾಪಿಸುತ್ತಿದ್ದು, ಇದರಿಂದ ಜನತೆ ತೀವ್ರ ಆತಂಕ ಎದುರಿಸುತ್ತಿದ್ದಾರೆ. ಗದಗ ನಗರದ ಸೆಟ್ಲಮೆಂಟ್ ಪ್ರದೇಶ ನಿವಾಸಿಗಳಾದ ಪಿ-7387 ಮತ್ತು ಪಿ-7388 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 26 ವರ್ಷದ ಮಹಿಳೆ ಪಿ-10602, ಹರ್ತಿ ಗ್ರಾಮದ 40 ವರ್ಷದ ಪುರುಷ ಪಿ-7832 ಸಂಪರ್ಕದಿಂದಾಗಿ ಗದಗ ತಾಲೂಕಿನ ಯಲಿಶಿರುಂದ ಗ್ರಾಮದ 80 ವರ್ಷದ ಮಹಿಳೆ ಪಿ-10606 ಸೋಂಕು ದೃಢವಾಗಿದೆ. ಶಿರಹಟ್ಟಿಪಟ್ಟಣದ 30 ವರ್ಷದ ಪುರುಷ ಪಿ-8724 ಸಂಪರ್ಕದಿಂದಾಗಿ ಶಿರಹಟ್ಟಿಪಟ್ಟಣದ ಮ್ಯಾಗೇರಿ ಓಣಿಯ 26 ವರ್ಷದ ಪುರುಷ ಪಿ-10607 ಹಾಗೂ ಗದಗಿನ ಸಿದ್ಧರಾಮೇಶ್ವರ ನಗರದ 30 ವರ್ಷದ ಪುರುಷ ಪಿ-10148 ಸೋಂಕಿತರ ಸಂಪರ್ಕದಿಂದಾಗಿ ಅದೇ ಪ್ರದೇಶದ 35 ವರ್ಷದ ಪುರುಷ ಪಿ-10610 ಇವರಿಗೆ ಸೋಂಕು ದೃಢವಾಗಿದೆ.
ಗದಗ ಜಿಲ್ಲೆಯಲ್ಲಿ ಕೊರೋನಾ ಅಟ್ಟಹಾಸ: 4 ನಿಯಂತ್ರಿತ ಪ್ರದೇಶ
ರೋಣ ತಾಲೂಕಿನ ಇಟಗಿ ಗ್ರಾಮದ 38 ವರ್ಷದ ಪುರುಷ ಪಿ-9407 ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಿಂದಾಗಿ 4 ಜನಕ್ಕೆ ಸೋಂಕು ದೃಢ ಪಟ್ಟಿದೆ. ಮುಂಡರಗಿ ಪಟ್ಟಣದ ಹುಡ್ಕೊ ಕಾಲೋನಿಯ 13 ವರ್ಷದ ಹುಡುಗ ಪಿ-10601, 25 ವರ್ಷದ ಪುರುಷ ಪಿ-10600, ಡಂಬಳ ಗ್ರಾಮದ ಇಬ್ಬರಿಗೆ 26 ವರ್ಷದ ಪುರುಷ ಪಿ-10608 ಹಾಗೂ 27 ವರ್ಷದ ಪುರುಷ ಪಿ-10609 ಇವರಿಗೆ ಸೋಂಕು ದೃಢವಾಗಿದೆ. ಶಿರಹಟ್ಟಿತಾಲೂಕಿನ ಮಜ್ಜೂರುತಾಂಡ ನಿವಾಸಿ 29 ವರ್ಷದ ಮಹಿಳೆ ಪಿ-8723 ಸೋಂಕಿತರ ಸಂಪರ್ಕದಿಂದಾಗಿ ಇಬ್ಬರಿಗೆ ಸೋಂಕು ದೃಢ ಪಟ್ಟಿದ್ದು, ಶಿರಹಟ್ಟಿಪಟ್ಟಣದ 23 ವರ್ಷದ ಮಹಿಳೆ ಪಿ-10603 ಮತ್ತು 25 ವರ್ಷದ ಮಹಿಳೆ ಪಿ-10605 ಸೋಂಕಿತರಾಗಿದ್ದಾರೆ. ಗುಜರಾತ್ ರಾಜ್ಯದ ಅಹಮದಾಬಾದ್‌ದಿಂದ ಆಗಮಿಸಿದ್ದ ಶಿರಹಟ್ಟಿ ಪಟ್ಟಣದ 22 ವರ್ಷದ ಮಹಿಳೆ ಪಿ-10604 ಹಾಗೂ ಗದಗ ತಾಲ್ಲೂಕಿನ ಮಲ್ಲಸಮುದ್ರ ಗ್ರಾಮದ 19 ವರ್ಷದ ಯುವಕ ಪಿ-10611 ಇವರಿಗೆ ಇನ್‌ಪ್ಲೂಯೆಂಜಾ ರೋಗ ಲಕ್ಷಣದಿಂದಾಗಿ ಸೋಂಕು ಇರುವುದು ದೃಢವಾಗಿದೆ. ಎಲ್ಲ ಸೋಂಕಿತರನ್ನು ನಿಗದಿತ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಗದಗ ಜಿಲ್ಲೆಯ ಸ್ಥಿತಿಗತಿ:
ಜೂ. 26ರಂದು ಕೋವಿಡ್-19 ಸೋಂಕು ಪ್ರಕರಣಗಳ ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಬಿಡುಗಡೆ ಮಾಡಿದ್ದಾರೆ. ಇದುವರೆಗೆ ಗದಗ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ 9001, ಸೌಲಭ್ಯದೊಂದಿಗೆ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿ ನಿಗಾದಲ್ಲಿರುವವರ ಸಂಖ್ಯೆ 90, ಸೋಂಕಿನ ಪರೀಕ್ಷೆಗಾಗಿ ಸಂಗ್ರಹಿಸಿದ ಒಟ್ಟು ಮಾದರಿ 9572, ನಕಾರಾತ್ಮಕವಾಗಿವೆ (ನೆಗೆಟಿವ್) ಎಂದು ವರದಿಯಾದ ಸಂಖ್ಯೆ 9106, ವರದಿ ಬರಲು ಬಾಕಿ ಇರುವ ಸಂಖ್ಯೆ 350, ಒಟ್ಟು ಕೋವಿಡ್-19 ಪಾಸಿಟಿವ್ ದೃಢಪಟ್ಟಪ್ರಕರಣಗಳು 116 (ಶುಕ್ರವಾರ ದೃಢಪಟ್ಟ 12 ಸೇರಿ), ಈ ಪೈಕಿ ಪಿ-166 ಹಾಗೂ ಪಿ-4082 ಮೃತಪಟ್ಟಿದ್ದಾರೆ. ಸೋಂಕಿನಿಂದ ಗುಣಮುಖರಾದವರು ಒಟ್ಟು 51 ಜನ (ಶುಕ್ರವಾರದ 4 ಸೇರಿ), ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರು 63 ಜನ, ಕೋವಿಡ್ ಪಾಸಿಟಿವ್ ಆಗಿರುವವರ ಒಟ್ಟು ಪಾ ್ರಥಮಿಕ ಸಂಪರ್ಕಿತರು 951, ದ್ವಿತೀಯ ಸಂಪರ್ಕಿತರ ಸಂಖ್ಯೆ 2093.
ಮುಂಬೈನಿಂದ ಬಂದವರ ವಿವರ:
ಜೂ. 26ರ ವರೆಗೆ ರೈಲು ಮೂಲಕ ಮಹಾರಾಷ್ಟ್ರದಿಂದ ಗದಗ ರೈಲು ನಿಲ್ದಾಣಕ್ಕೆ 1060 ಪ್ರಯಾಣಿಕರು ಆಗಮಿಸಿದ್ದು, 386 ಜನ ಗದಗ ಜಿಲ್ಲೆಗೆ ಸೇರಿದ್ದು, ಇದರಲ್ಲಿ 335 ಜನರನ್ನು ಸಾಂಸ್ಥಿಕ ಕ್ವಾರಂಟೈನ್‌ನಲ್ಲಿ ಹಾಗೂ 51 ಜನರನ್ನು ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. 334 ಜನರ ಪೈಕಿ 15 ಜನರಲ್ಲಿ ಕೋವಿಡ್-19 ಸೋಂಕು ದೃಢಪಟ್ಟಿದೆ. 674 ಜನರು ಬೇರೆ ಜಿಲ್ಲೆಯವರಾಗಿದ್ದು ಸಂಬಂಧಪಟ್ಟಜಿಲ್ಲೆಗಳಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ತೀವ್ರ ನಿರ್ಲಕ್ಷ್ಯ
ಜಗತ್ತನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಸೋಂಕು ಜಿಲ್ಲೆಯಲ್ಲಿಯೂ ತನ್ನ ಪ್ರಭಾವವನ್ನು ತೋರುತ್ತಿದೆ. ಕೇವಲ 20 ದಿನಗಳಲ್ಲಿ ದ್ವಿಗುಣವಾಗುವ ಮೂಲಕ ವ್ಯಾಪಕವಾಗಿ ಹರಡುತ್ತಿದೆ. ಇಷ್ಟಾದರೂ ಜಿಲ್ಲೆಯ ಬಹುತೇಕ ಜನರು ಸೋಂಕನ್ನು ತೀವ್ರವಾಗಿ ಪರಿಗಣಿಸುತ್ತಿಲ್ಲ. ಲಾಕ್‌ಡೌನ್ ಸಡಿಲಗೊಳಿಸಿದಾಗಿನಿಂದಲೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವಂತೆ ಜನರ ನಿರ್ಲಕ್ಷ್ಯವೂ ಹೆಚ್ಚಾಗುತ್ತಿದೆ. ನಗರ ಪ್ರದೇಶದಲ್ಲಿ ಗುಂಪು ಗುಂಪಾಗಿ ಸೇರುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಸೇರಿದಂತೆ ಸರ್ಕಾರ ತಿಳಿಸಿರುವ ಮಾರ್ಗಸೂಚಿಗಳನ್ನು ಜನ ಪರಿಣಾಮಕಾರಿಯಾಗಿ ಪಾಲಿಸದೇ ಇರುವುದು ವಿಪರ್ಯಾಸದ ಸಂಗತಿಯಾಗಿದೆ.