ಅಕ್ಕನಿಗೆ ಕೊರೋನಾ, ತಂಗಿ ಮದುವೆ ರದ್ದು| ಆರೋಗ್ಯ ಕೇಂದ್ರದ ಡಾಕ್ಟರ್‌ಗೂ ಪಾಸಿಟಿವ್| ಹಾವೇರಿ ಜಿಲ್ಲೆಯಲ್ಲಿ ಭಾನುವಾರ 12 ಜನರಿಗೆ ಕೋವಿಡ್ ದೃಢ| ಮಾಸೂರಿನ ಹುಬ್ಬಳ್ಳಿಯವರ ಓಣಿ ಹಾಗೂ ಸರ್ವಜ್ಞ ಪ್ಲಾಟ್ ಪ್ರದೇಶವನ್ನು ಸೀಲ್‌ಡೌನ್|
ಹಾವೇರಿ(ಜೂ.29): ಜಿಲ್ಲೆಯಲ್ಲಿ ಬರುಬರುತ್ತ ಕೊರೋನಾ ಆರ್ಭಟ ಹೆಚ್ಚುತ್ತಿದೆ. ಭಾನುವಾರ ಮೂವರು ಆಶಾ ಕಾರ್ಯಕರ್ತೆಯರು, ಓರ್ವ ಡಾಕ್ಟರ್ ಸೇರಿದಂತೆ 12 ಜನರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಅಕ್ಕನಿಗೆ ಕೋವಿಡ್ ಸೋಂಕು ತಗಲಿದ್ದರಿಂದ ಭಾನುವಾರ ನಡೆಯಬೇಕಿದ್ದ ತಂಗಿಯ ಮದುವೆಯೇ ರದ್ದಾಗಿದ್ದು, ವಧು ಕ್ವಾರಂಟೈನ್‌ಗೆ ಒಳಗಾಗುವಂತಾಗಿದೆ.
ಜಿಲ್ಲೆಯ ಎಲ್ಲ ತಾಲೂಕುಗಳಲ್ಲೂ ಇದುವರೆಗೆ ಕೊರೋನಾ ಸೋಂಕು ಪತ್ತೆಯಾಗಿದ್ದರೂ ಹಿರೇಕೆರೂರು ತಾಲೂಕಿನಲ್ಲಿ ಒಂದೂ ಪ್ರಕರಣ ದಾಖಲಾಗಿರಲಿಲ್ಲ. ಆದರೆ, ಭಾನುವಾರ ಹಿರೇಕೆರೂರ ತಾಲೂಕಿನ ಮಾಸೂರು ಸಮುದಾಯ ಆರೋಗ್ಯ ಕೇಂದ್ರದ ಡಾಕ್ಟರ್ ಸೇರಿ 6 ಜನರಿಗೆ, ಹಾನಗಲ್ಲ ತಾಲೂಕಿನ ಮೂವರು ಆಶಾ ಕಾರ್ಯಕರ್ತೆಯರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.
ಹಿರೇಕೆರೂರ ತಾಲೂಕಿನ ಮಾಸೂರು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದ 38 ವರ್ಷದ ವೈದ್ಯ, ಮಾಸೂರಿನ 50 ವರ್ಷದ ಪುರುಷ, 45 ವರ್ಷದ ಮಹಿಳೆ, 22 ವರ್ಷದ ಯುವಕ, 15 ವರ್ಷದ ಬಾಲಕ, 35 ವರ್ಷದ ಪುರುಷ, ಸವಣೂರಿನ 27 ವರ್ಷದ ಪುರುಷ, 40 ವರ್ಷದ ಮಹಿಳೆ, ಹಾನಗಲ್ಲ ತಾಲೂಕಿನ ಆಶಾ ಕಾರ್ಯಕರ್ತೆಯರಾದ 36, 41, 50 ವರ್ಷದ ಮಹಿಳೆಯರು, ರಾಣಿಬೆನ್ನೂರಿನ 5 ವರ್ಷದ ಬಾಲಕಿಗೆ ಕೊರೋನಾ ದೃಢಪಟ್ಟಿದೆ. ಜಿಲ್ಲೆಯಲ್ಲಿ ಈ ವರೆಗೆ 68 ಜನರಿಗೆ ಕೊರೋನಾ ದೃಢಪಟ್ಟಿದ್ದು, 25 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. 43 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಬ್ಬರಿಗೆ ಐಸಿಯುನಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.
ಮದುವೆ ನಿಲ್ಲಿಸಿದ ಕೊರೋನಾ ವೈರಸ್ , ಮಧಮಗಳೂ ಸೇರಿದಂತೆ 20 ಜನ ಕ್ವಾರಂಟೈನ್!
ಅಕ್ಕನಿಗೆ ಕೊರೋನಾ, ತಂಗಿ ಮದುವೆ ರದ್ದು
ಹಾವೇರಿಯ ನಾಗೇಂದ್ರನಮಟ್ಟಿಮದುವೆ ಮನೆಗೂ ಕೊರೋನಾ ಲಗ್ಗೆ ಇಟ್ಟಿದ್ದು, ವಧು ಕ್ವಾರಂಟೈನ್‌ಗೆ ಒಳಗಾಗಿರುವುದರಿಂದ ಮದುವೆ ಮುಂದೂಡಲ್ಪಟ್ಟಿದೆ. ಕ್ಯಾನ್ಸರ್‌ನಿಂದ ಬಳಲುತ್ತಿದ್ದ ನಾಗೇಂದ್ರನಮಟ್ಟಿಯ ಮಹಿಳೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ದೃಢಪಟ್ಟಿರುವ ಹಿನ್ನೆಲೆಯಲ್ಲಿ ಭಾನುವಾರ ನಿಗದಿಯಾಗಿದ್ದ ಅವಳ ತಂಗಿಯ ಮದುವೆಯನ್ನು ರದ್ದುಪಡಿಸಲಾಗಿದೆ. ನಾಗೇಂದ್ರನಮಟ್ಟಿಯ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದ್ದು, ವಧು ಸೇರಿದಂತೆ ಅವರ ಸಂಪರ್ಕದಲ್ಲಿದ್ದ 20 ಜನರನ್ನು ಕ್ವಾರಂಟೈನ್ ಮಾಡಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಯೋಗೇಶ್ವರ ಮಾಹಿತಿ ನೀಡಿದ್ದಾರೆ.
ಆಶಾ ಕಾರ್ಯಕರ್ತೆಯರಿಗೆ ಸೋಂಕು
ಹಾನಗಲ್ಲ ಪಟ್ಟಣದ ಇಂದಿರಾ ನಗರ ನಿವಾಸಿ 50 ವರ್ಷದ ಮಹಿಳೆ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಶಾ ಕಾರ್ಯಕರ್ತೆಯರ ನಿಯಮಿತ ತಪಾಸಣೆಯಲ್ಲಿ ಇವರ ಗಂಟಲು ದ್ರವ ಮತ್ತು ರಕ್ತದ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಹಾನಗಲ್ಲಿನ ಕಮತಗೇರಿ ನಿವಾಸಿ 36 ವರ್ಷದ ಮಹಿಳೆ ಆಶಾ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು, ನಿಯಮಿತ ಆರೋಗ್ಯ ತಪಾಸಣೆ ವೇಳೆ ಕೊರೋನಾ ಇರುವುದು ಪತ್ತೆಯಾಗಿದೆ. ಹಾನಗಲ್ಲಿನ ಕಲ್ಲಹಕ್ಕಲ ಓಣಿಯ 41 ವರ್ಷದ ಆಶಾ ಕಾರ್ಯಕರ್ತೆಗೂ ನಿಯಮಿತ ಆರೋಗ್ಯ ತಪಾಸಣೆ ವೇಳೆ ಸೋಂಕು ಇರುವುದು ದೃಢಪಟ್ಟಿದೆ. ಮೂವರನ್ನೂ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ನಿವಾಸವಿರುವ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ.
ಶಿಕಾರಿಪುರ ಸಂಪರ್ಕ
ಶಿವಮೊಗ್ಗ ಜಿಲ್ಲೆ ಶಿಕಾರಿಪುರದ ಪಿ-9546 ಪ್ರಾಥಮಿಕ ಸಂಪರ್ಕದಿಂದ ಹಿರೇಕೆರೂರ ತಾಲೂಕು ಮಾಸೂರಿನ ಐವರಿಗೆ ಸೋಂಕು ತಗುಲಿದೆ. ಮಾಸೂರಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ವಜ್ಞ ಪ್ಲಾಟ್‌ನಲ್ಲಿ ನಿವಾಸಿ 38 ವರ್ಷದ ವೈದ್ಯರಿಗೆ, 15 ವರ್ಷದ ಬಾಲಕನಿಗೆ ಕೊರೋನಾ ದೃಢಪಟ್ಟಿದೆ. ಮಾಸೂರಿನ ಹುಬ್ಬಳ್ಳಿಯವರ ಓಣಿಯ 50 ವರ್ಷದ ಪುರುಷ, 22 ವರ್ಷದ ಯುವಕ, 45 ವರ್ಷದ ಮಹಿಳೆಗೂ ಪಿ-9546 ಸಂಪರ್ಕದಿಂದ ಕೊರೋನಾ ದೃಢಪಟ್ಟಿದೆ. ಇವರೆಲ್ಲರನ್ನೂ ದೂದಿಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಇರಿಸಿ, ಜೂ. 24ರಂದು ಸ್ವಾ್ಯಬ್ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಜೂ. 27ರಂದು ಇವರೆಲ್ಲರ ವರದಿ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಮಾಸೂರಿನ ಹುಬ್ಬಳ್ಳಿಯವರ ಓಣಿ ಹಾಗೂ ಸರ್ವಜ್ಞ ಪ್ಲಾಟ್ ಪ್ರದೇಶವನ್ನು ಸೀಲ್‌ಡೌನ್ ಮಾಡಲಾಗಿದೆ. ಪಿ-9546ರ ಪ್ರಾಥಮಿಕ ಸಂಪರ್ಕ ಹೊಂದಿದ್ದ ಶಿಕಾರಿಪುರ ತಾಲೂಕು ಈಸೂರಿನ 35 ವರ್ಷದ ಪುರುಷನಿಗೂ ಸೋಂಕು ದೃಢಪಟ್ಟಿದೆ. ಅವರನ್ನು ದೂದಿಹಳ್ಳಿ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಇರಿಸಲಾಗಿತ್ತು. ಸೋಂಕು ದೃಢಪಟ್ಟಿರುವುದರಿಂದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸವಣೂರಿನ ಕೊರೋನಾ ಸೋಂಕಿತ ಗರ್ಭಿಣಿ ಪಿ-8699ರ ಖಾದರಬಾಗ್ ಓಣಿ ಕಂಟೈನ್ಮೆಂಟ್ ಸಂಪರ್ಕದಿಂದ 40 ವರ್ಷದ ಮಹಿಳೆಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. ಇದೇ ಕಂಟೈನ್ಮೆಂಟ್ ಜೋನ್‌ನ ಸಂಪರ್ಕದಿಂದ 27 ವರ್ಷದ ಪುರುಷನಿಗೂ ಕೋರೋನಾ ವೈರಸ್ ಬಂದಿದೆ. ರಾಣಿಬೆನ್ನೂರಿನ ಕಂಟೈನ್ಮೆಂಟ್ ಜೋನ್‌ನಲ್ಲಿರುವ ಮಾರುತಿ ನಗರದ 5 ವರ್ಷದ ಬಾಲಕಿಗೆ ಪಿ-9411ರ ಸಂಪರ್ಕದಿಂದ ಸೋಂಕು ದೃಢಪಟ್ಟಿದೆ.