ರೈತರ ಸಾಲಮನ್ನಾ ಇನ್ನೂ ಬಾಕಿ: ಸಂಕಷ್ಟದಲ್ಲಿ ಅನ್ನದಾತ

By Kannadaprabha NewsFirst Published Aug 28, 2021, 2:21 PM IST
Highlights

*  ಪೇಚಿಗೆ ಸಿಲುಕಿದ ಸಹಕಾರ ಸಂಘಗಳು
*  ತಾಂತ್ರಿಕ ತೊಂದರೆಯಿಂದ ಬಿಡುಗಡೆಯಾಗದ ಹಣ
*  ಹಲವು ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ
 

ಮಂಜುನಾಥ ಸಾಯಿಮನೆ

ಶಿರಸಿ(ಆ.28):  2018ರಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ರೈತರ 1 ಲಕ್ಷದವರೆಗಿನ ಹಣ ಬಹುತೇಕ ರೈತರಿಗೆ ಇನ್ನೂ ಬಂದಿಲ್ಲ. ಇನ್ನೂ 12.5 ಕೋಟಿ ಬರಬೇಕಾಗಿದ್ದು, ಸಹಕಾರ ಸಂಘಗಳು ಪೇಚಿಗೆ ಸಿಲುಕಿವೆ.

ಕಾಂಗ್ರೆಸ್‌- ಜೆಡಿಎಸ್‌ ಮೈತ್ರಿ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿತ್ತು. ಬೆಳೆಸಾಲ ಮನ್ನಾ ಯೋಜನೆಯ ಫಲ ಉತ್ತರ ಕನ್ನಡ ಜಿಲ್ಲೆಯ ಸುಮಾರು ಎರಡು ಸಾವಿರ ರೈತರಿಗೆ ಸಿಕ್ಕಿಲ್ಲ. ದಾಖಲೆಗಳ ಗೊಂದಲ, ತಾಂತ್ರಿಕ ಅಡಚಣೆ ಕಾರಣದಿಂದಾಗಿ ಹಣ ಇನ್ನೂ ಬಿಡುಗಡೆ ಆಗಬೇಕಿದೆ.

ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ ಅಧಿಕಾರಿಗಳು ನೀಡುವ ಮಾಹಿತಿ ಪ್ರಕಾರ ದಾಖಲೆಯ ಗೊಂದಲಗಳಿಂದ ದೊಡ್ಡ ಸಂಖ್ಯೆಯಲ್ಲಿ ರೈತರು ಸೌಲಭ್ಯ ವಂಚಿತರಾಗಿದ್ದಾರೆ. 900ರಷ್ಟು ರೈತರ ಪಡಿತರ ಚೀಟಿ ದೋಷವೂ ಇದರಲ್ಲಿ ಸೇರಿದೆ. ಪ್ರಾಥಮಿಕ ಸಹಕಾರ ಸಂಸ್ಥೆಗಳ ಸಿಬ್ಬಂದಿ ಮಾಡಿದ ಕಣ್ತಪ್ಪಿನಿಂದಲೂ ಹಲವು ರೈತರಿಗೆ ಸಾಲಮನ್ನಾ ಭಾಗ್ಯ ಸಿಕ್ಕಿಲ್ಲ.

ಬೆಳೆಸಾಲ ಪಡೆಯುವ ರೈತ ಆಯಾ ಸಹಕಾರ ಸಂಸ್ಥೆ ಅಥವಾ ಬ್ಯಾಂಕ್‌ಗಳಲ್ಲಿ ಪಹಣಿ ಪತ್ರಿಕೆ, ಪಡಿತರ ಚೀಟಿ, ಆಧಾರ್‌ ಕಾರ್ಡ್‌ ದಾಖಲೆ ನೀಡಬೇಕಿತ್ತು. ಹಲವು ರೈತರು ಸಾಲಕ್ಕೆ ಅರ್ಜಿ ಸಲ್ಲಿಸುವಾಗ ನೀಡಿದ ಪಡಿತರ ಚೀಟಿಯನ್ನು ಕೆಲ ತಿಂಗಳ ನಂತರ ಬದಲಿಸಿಕೊಂಡಿದ್ದರು. ಕೆಲವರ ಹೆಸರು ಪಹಣಿ ಪತ್ರಿಕೆಯಲ್ಲಿ ಒಂದಿದ್ದರೆ, ಉಳಿದ ದಾಖಲೆಯಲ್ಲಿ ಬೇರೆ ಇದೆ. ಆಧಾರ ಕಾರ್ಡ್‌ನಲ್ಲಿನ ದೋಷವೂ ಸಮಸ್ಯೆಯಾಗಿದೆ. ಸಾಲಮನ್ನಾಕ್ಕೆ ಅರ್ಜಿ ಪರಿಗಣಿಸುವಾಗ ಇವು ಪತ್ತೆಯಾದ ಪರಿಣಾಮ ಅರ್ಜಿಗಳು ತಿರಸ್ಕೃತಗೊಂಡಿವೆ.

ಕೊರೋನಾದಿಂದ ಮೃತಪಟ್ಟ ರೈತರ ನೆರವಿಗೆ ಸರ್ಕಾರ, ಸಹಕಾರಿ ಸಾಲ ಮನ್ನಾ!

ದಾಖಲೆಯ ಗೊಂದಲಕ್ಕೆ ಅರ್ಜಿ ಬಾಕಿ ಉಳಿದುಕೊಂಡಿದ್ದು, ತಹಸೀಲ್ದಾರ್‌ ನೇತೃತ್ವದ ತಾಲೂಕು ಮಟ್ಟದ ಸಮಿತಿಗೆ(ಟಿಎಲ್‌ಸಿ) ಪರಿಶೀಲಿಸಿ ವರದಿ ಸಲ್ಲಿಸಲು ತಿಳಿಸಿದ್ದೇವೆ. ಅವರು ನೀಡುವ ವರದಿ ಫಲಾನುಭವಿಯ ವಾಸ್ತವ ಮಾಹಿತಿ ದೃಢೀಕರಿಸಿದರೆ ಸೌಲಭ್ಯಕ್ಕೆ ಪರಿಗಣಿಸುವ ಕುರಿತು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಕೆಯಾಗುತ್ತದೆ ಎನ್ನುತ್ತಾರೆ ಕೆಡಿಸಿಸಿ ಬ್ಯಾಂಕ್‌ ವ್ಯವಸ್ಥಾಪಕ ನಿರ್ದೇಶಕ ಆರ್‌.ಜಿ. ಭಾಗವತ.

ಸಾಲ ನೀಡುವಾಗ ಪರಿಗಣಿಸಿದ ದಾಖಲೆಯನ್ನು ಸಾಲಮನ್ನಾಕ್ಕೆ ಪರಿಗಣಿಸಲು ಒಪ್ಪದಿರುವುದು ಸರಿಯಲ್ಲ. ದಾಖಲೆ ತಿದ್ದುಪಡಿ ವೇಳೆ ಸಿಬ್ಬಂದಿ ಮಾಡಿರುವ ತಪ್ಪಿಗೆ ನಾವು ಶಿಕ್ಷೆ ಅನುಭವಿಸಬೇಕಾಗುತ್ತಿದೆ ಎಂದು ಸೌಲಭ್ಯ ಪಡೆಯಲಾಗದ ರೈತರು ಅಸಹನೆ ತೋಡಿಕೊಳ್ಳುತ್ತಿದ್ದಾರೆ.

ಬಾಕಿ ಇರುವ ಸಾಲಮನ್ನಾ ಹಣ ಬಿಡುಗಡೆಗೊಳಿಸಲು ಸರ್ಕಾರದ ಮಟ್ಟದಲ್ಲಿ ನಿರಂತರ ಪ್ರಯತ್ನ ಮಾಡಲಾಗುತ್ತಿದೆ. ರೈತರಿಗೆ ಸೌಲಭ್ಯ ಸಿಗುವಂತೆ ಮಾಡಲಾಗುವುದು ಎಂದು ಶಿರಸಿ ಕೆಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಶಿವರಾಮ ಹೆಬ್ಬಾರ ತಿಳಿಸಿದ್ದಾರೆ. 
 

click me!